ವಿಶ್ವಸಂಸ್ಥೆ ಮುಖ್ಯಸ್ಥರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್; ಭದ್ರತಾ ಮಂಡಳಿ ಶಾಶ್ವತವಲ್ಲದ ಸ್ಥಾನಕ್ಕಾಗಿ ಔಪಚಾರಿಕ ಅಭಿಯಾನಕ್ಕೂ ಮುನ್ನ ಮಹತ್ವದ ಸಭೆ
2028-29ರ ಶಾಶ್ವತವಲ್ಲದ ಭದ್ರತಾ ಮಂಡಳಿಯ ಸ್ಥಾನಕ್ಕಾಗಿ ಭಾರತ ಔಪಚಾರಿಕವಾಗಿ ಅಭಿಯಾನ ಪ್ರಾರಂಭಿಸಿದ ಬೆನ್ನಲ್ಲೇ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರನ್ನು ಜೈಶಂಕರ್ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಮಧ್ಯಪ್ರಾಚ್ಯ, ಉಕ್ರೇನ್ ಬಿಕ್ಕಟ್ಟುಗಳ ಬಗ್ಗೆ ಚರ್ಚೆ ನಡೆಸಿದರು.
ಸಂಗ್ರಹ ಚಿತ್ರ -
ನ್ಯೂಯಾರ್ಕ್: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (External Affairs Minister S. Jaishankar) ಅವರು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ (United Nations Secretary-General Antonio Guterres) ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರಿಬ್ಬರೂ ಪಶ್ಚಿಮ ಏಷ್ಯಾ, ಉಕ್ರೇನ್ ಮತ್ತು ಸುಡಾನ್‌ನಲ್ಲಿನ ಸಂಘರ್ಷಗಳು ಸೇರಿದಂತೆ ಪ್ರಮುಖ ಜಾಗತಿಕ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. 2028-2029ರ ಅವಧಿಗೆ ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ (United Nations Security Council) ಶಾಶ್ವತವಲ್ಲದ ಸ್ಥಾನಕ್ಕಾಗಿ ಔಪಚಾರಿಕವಾಗಿ ತನ್ನ ಅಭಿಯಾನವನ್ನು ಪ್ರಾರಂಭಿಸಿದ್ದು, ಈ ನಡುವೆ ಇವರಿಬ್ಬರ ಭೇಟಿಯಾಗಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸ್ಥಾನಕ್ಕಾಗಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೂ ಮುಂಚಿತವಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಬೆಂಬಲ ಪಡೆಯಲು ನವದೆಹಲಿಯ ಅಭಿಯಾನವನ್ನು ಪ್ರಾರಂಭಿಸಿದೆ. ಇದಕ್ಕಾಗಿ ಮೊದಲು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಮೊದಲು ಭಾರತದ ಪರವಾಗಿ ಎಸ್. ಜೈಶಂಕರ್ ಪಾಲ್ಗೊಂಡರು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಜೈಶಂಕರ್, ನ್ಯೂಯಾರ್ಕ್‌ನಲ್ಲಿ ಯುಎನ್ ನ ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಸಂತೋಷವಾಗಿದೆ. ಈ ಸಂದರ್ಭದಲ್ಲಿ ಅವರೊಂದಿಗೆ ಪಶ್ಚಿಮ ಏಷ್ಯಾ, ಉಕ್ರೇನ್ ಮತ್ತು ಸುಡಾನ್ ಸೇರಿದಂತೆ ಜಾಗತಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು. ಭಾರತ ಮತ್ತು ಯುಎನ್ ಸಹಕಾರದ ಬಗ್ಗೆಯೂ ಮಾತುಕತೆ ನಡೆಸಲಾಯಿತು ಎಂದು ಹೇಳಿದರು.
ಇದಕ್ಕೂ ಮೊದಲು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಜೈಶಂಕರ್ ಅವರು ಶಾಂತಿ - ಮಾನದಂಡಗಳು, ನಂಬಿಕೆ ಮತ್ತು ಸಮಗ್ರತೆಯ ಮೂಲಕ ಸಮಗ್ರ ಪ್ರಗತಿಯನ್ನು ಭದ್ರಪಡಿಸಿಕೊಳ್ಳುವ ಆರು ಅಂಶಗಳ ದೃಷ್ಟಿಕೋನದೊಂದಿಗೆ ಭದ್ರತಾ ಮಂಡಳಿಗೆ ಭಾರತದ ಉಮೇದುವಾರಿಕೆಯನ್ನು ಔಪಚಾರಿಕವಾಗಿ ಸಲ್ಲಿಸಿದರು.
ಭಾರತವು ಭದ್ರತಾ ಮಂಡಳಿಯಲ್ಲಿ ಜಾಗತಿಕ ದಕ್ಷಿಣದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ ಅವರು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಬೆಂಬಲಿಸುವ, ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಕೊಡುಗೆ ನೀಡುವ ಮತ್ತು ಬಹುಪಕ್ಷೀಯ ಸಂಸ್ಥೆಗಳನ್ನು ಬಲಪಡಿಸಲು ಕೆಲಸ ಮಾಡುವ ದೇಶದ ದಾಖಲೆಯನ್ನು ಈ ಸಂದರ್ಭದಲ್ಲಿ ಅವರು ಉಲ್ಲೇಖಿಸಿದರು.
ಪ್ರಜಾಪ್ರಭುತ್ವದ ಪ್ರತಿನಿಧಿಯಾಗಿ ಭಾರತ ಆಧುನಿಕ ತಂತ್ರಜ್ಞಾನದಿಂದ ಸುಸಜ್ಜಿತವಾದ ಶಾಂತಿಪಾಲನಾ ನಿಯಮವನ್ನು ರಚಿಸುವ, ಕೃತಕ ಬುದ್ಧಿಮತ್ತೆಗೆ ಮಾನವ ಕೇಂದ್ರಿತ ವಿಧಾನವನ್ನು ಉತ್ತೇಜಿಸುವ, ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಮುಕ್ತ ಮತ್ತು ನಿಯಮ ಆಧಾರಿತ ಕಡಲ ಕ್ರಮವನ್ನು ಬೆಂಬಲಿಸವ ಹಾಗೂ ಭಯೋತ್ಪಾದನೆಯನ್ನು ಎದುರಿಸಲು ಜಾಗತಿಕ ಪ್ರಯತ್ನಗಳನ್ನು ತೀವ್ರಗೊಳಿಸುವ ಅಂಶಗಳು ಕೂಡ ಇದರಲ್ಲಿ ಸೇರಿವೆ ಎಂದರು.
ANTF: ಹೆರಾಯಿನ್ ಸಮೇತ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಂಡಿಗೋ ಎಂಜಿನಿಯರ್
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ದೀರ್ಘಕಾಲದಿಂದ ಬೇಡಿಕೆ ಸಲ್ಲಿಸುತ್ತಿರುವ ಭಾರತ 2028-2029 ಅವಧಿಗೆ ಏಷ್ಯಾ-ಪೆಸಿಫಿಕ್ ಶಾಶ್ವತವಲ್ಲದ ಸ್ಥಾನಕ್ಕಾಗಿ ಮುಂದಿನ ವರ್ಷದ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಸ್ಪರ್ಧಿಸಲಿದೆ. ಆಯ್ಕೆಯಾದರೆ 15 ಸದಸ್ಯರ ಮಂಡಳಿಯ ಚುನಾಯಿತ ಸದಸ್ಯರಾಗಿ ದೇಶವು ಒಂಬತ್ತನೇ ಅವಧಿಗೆ ಸ್ಥಾನ ಪಡೆಯಲಿದೆ.