ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ANTF: ಹೆರಾಯಿನ್‌ ಸಮೇತ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಂಡಿಗೋ ಎಂಜಿನಿಯರ್‌

IndiGo Aircraft Engineer Arrested: ಇಂಡಿಗೋ ವಿಮಾನ ನಿರ್ವಹಣಾ ಎಂಜಿನಿಯರ್ ಒಬ್ಬನನ್ನು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಬಂಧಿಸಿದೆ. ಲೇಹ್‌ ನಗರದಲ್ಲಿ ಗಸ್ತು ತಿರುಗುತ್ತಿದ್ದಾಗ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯ ತಂಡವು ವಾಹನವನ್ನು ತಡೆದು ಅಜಯ್ ಠಾಕೂರ್ ಬಳಿಯಿಂದ 2.27 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.

ಹೆರಾಯಿನ್ ಸಹಿತ ಇಂಡಿಗೋ ವಿಮಾನ ಎಂಜಿನಿಯರ್ ಬಂಧನ

ಸಾಂದರ್ಭಿಕ ಚಿತ್ರ -

Priyanka P
Priyanka P Jul 13, 2026 7:23 PM

ಲೇಹ್, ಜು. 13: ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಲೇಹ್ (Leh) ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ನಿರ್ವಹಣಾ ಎಂಜಿನಿಯರ್ ಒಬ್ಬನನ್ನು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (Anti-Narcotics Task Force) ಬಂಧಿಸಿದೆ. ಆತನ ಬಳಿಯಿದ್ದ ಹೆರಾಯಿನ್ (Heroin) ವಶಪಡಿಸಿಕೊಳ್ಳಲಾಗಿದೆ. ಹಿಮಾಚಲ ಪ್ರದೇಶದ (Himachal Pradesh) ಮಂಡಿ ಜಿಲ್ಲೆಯ ನಿವಾಸಿ, 22 ವರ್ಷದ ಅಜಯ್ ಠಾಕೂರ್ ಬಂಧಿತ. ಈತ ಪ್ರಸ್ತುತ ಲೇಹ್ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯ ಉದ್ಯೋಗಿ.

ನಗರದಲ್ಲಿ ಗಸ್ತು ತಿರುಗುತ್ತಿದ್ದಾಗ, ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯ ತಂಡವು ವಾಹನವನ್ನು ತಡೆದು ಠಾಕೂರ್ ಬಳಿಯಿಂದ 2.27 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. ನಂತರ, ಆತನ ವಿರುದ್ಧ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (NDPS) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಇತ್ತೀಚಿನ ವಾರಗಳಲ್ಲಿ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಎಎನ್‌ಟಿಎಫ್ ನಡೆಸಿದ ಹಲವು ಯಶಸ್ವಿ ಕಾರ್ಯಾಚರಣೆಯಲ್ಲಿ ಈ ಬೆಳವಣಿಗೆ ನಡೆದಿದೆ. ಈ ಕಾರ್ಯಾಚರಣೆಗಳು ಲಡಾಖ್‌ನ ಯುವಕರನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆ ಜಾಲದ ವಿಸ್ತಾರವನ್ನು ಬಯಲಿಗೆಳೆದಿವೆ.

2.5 ಕೋಟಿ ಮೌಲ್ಯದ ಹೆರಾಯಿನ್ ಕಳ್ಳಸಾಗಣೆ ಪತ್ತೆ- ಇಬ್ಬರು ಅರೆಸ್ಟ್‌

ತನಿಖೆಯು ಈಗ ವಿಮಾನ ನಿಲ್ದಾಣದ ನೌಕರರು, ಅಂತಾರಾಜ್ಯ ಪೂರೈಕೆದಾರರು ಮತ್ತು ಸ್ಥಳೀಯ ಮಾದಕವಸ್ತು ಮಾರಾಟಗಾರರ ನಡುವಿನ ಸಂಭಾವ್ಯ ಸಂಪರ್ಕಗಳನ್ನು ಗುರುತಿಸುವುದರ ಮೇಲೆ ಕೇಂದ್ರೀಕರಿಸಿದೆ. ಬಂಧಿತ ಠಾಕೂರ್‌ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದನೇ ಅಥವಾ ಲಡಾಖ್‌ಗೆ ಮಾದಕ ವಸ್ತುಗಳ ಸಾಗಿಸುವ ದೊಡ್ಡ ಜಾಲದ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದನೇ ಎಂಬುದನ್ನು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ.

2026ರ ಆರಂಭದಿಂದಲೂ, ಕೇಂದ್ರಾಡಳಿತ ಪ್ರದೇಶದಾದ್ಯಂತ ಕಾನೂನು ಜಾರಿ ಸಂಸ್ಥೆಗಳು 33 ಎನ್‌ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿದ್ದು, 27 ಆರೋಪಿಗಳನ್ನು ಬಂಧಿಸಿವೆ. ಜತೆಗೆ ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳನ್ನು ವಶಪಡಿಸಿಕೊಂಡಿವೆ.

ಕೇಂದ್ರಾಡಳಿತ ಪ್ರದೇಶದಾದ್ಯಂತ ನಡೆಸಿದ ವಿವಿಧ ಕಾರ್ಯಾಚರಣೆಗಳಲ್ಲಿ ಭದ್ರತಾ ಮತ್ತು ಜಾರಿ ಸಂಸ್ಥೆಗಳು 3.523 ಕೆಜಿ ಚರಸ್, 4.9 ಕೆಜಿ ಗಾಂಜಾ, 40.39 ಗ್ರಾಂ ಹೆರಾಯಿನ್, 1.709 ಕೆಜಿ ಬ್ರೌನ್ ಶುಗರ್, 289 ಮಿಗ್ರಾಂ ಕೊಕೇನ್ ಮತ್ತು ಇತರ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿವೆ.

ಪಾಕಿಸ್ತಾನ ಕೈವಾಡ ಶಂಕೆ: ಗಡಿ ನಿಯಂತ್ರಣ ರೇಖೆ ಬಳಿ ಮಾದಕ ದ್ರವ್ಯ, ಪಿಸ್ತೂಲ್ ವಶ

ಜಿಲ್ಲೆಗಳ ಪೈಕಿ ಲೇಹ್‌ನಲ್ಲಿ 13 ಎನ್‌ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿದ್ದು, 17 ಬಂಧನಗಳಾಗಿವೆ. ಕಾರ್ಗಿಲ್ (5 ಪ್ರಕರಣಗಳು, 2 ಬಂಧನಗಳು), ಚಾಂಗ್‌ಥಾಂಗ್ (5 ಪ್ರಕರಣಗಳು, 5 ಬಂಧನಗಳು), ನುಬ್ರಾ (3 ಪ್ರಕರಣಗಳು, 1 ಬಂಧನ), ಝನ್ಸ್ಕರ್ (2 ಪ್ರಕರಣಗಳು, ಯಾವುದೇ ಬಂಧನವಿಲ್ಲ), ಡ್ರಾಸ್ (2 ಪ್ರಕರಣಗಳು, ಯಾವುದೇ ಬಂಧನವಿಲ್ಲ) ಮತ್ತು ಎಎನ್‌ಟಿಎಫ್-7 ಪ್ರಕರಣಗಳನ್ನು ದಾಖಲಿಸಿ 2 ಬಂಧನಗಳಾಗಿವೆ.

ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಗುಪ್ತಚರ ನೇತೃತ್ವದ ಕಾರ್ಯಾಚರಣೆಗಳನ್ನು ತೀವ್ರಗೊಳಿಸುವುದು, ಅಂತಾರಾಜ್ಯ ಪೂರೈಕೆ ಸರಪಳಿಗಳನ್ನು ಬ್ರೇಕ್‌ ಮಾಡುವುದು ಮತ್ತು ಅಕ್ರಮ ಮಾದಕವಸ್ತು ವ್ಯಾಪಾರದಲ್ಲಿ ತೊಡಗಿರುವ ಪ್ರತಿಯೊಬ್ಬನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಕಾನೂನು ಜಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ.