ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಲ್-ಫಲಾಹ್ ವಿಶ್ವವಿದ್ಯಾಲಯದ ಸಂಸ್ಥಾಪಕ ಅರೆಸ್ಟ್‌; ಜವಾದ್ ಅಹ್ಮದ್ ಸಿದ್ದಿಕಿ ಯಾರು?

Illegal money transfer case: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯದ ಸಂಸ್ಥಾಪಕನ ಬಂಧನ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಹೆಸರು ಕೇಳಿಬರುತ್ತಿರುವ ಜವಾದ್ ಅಹ್ಮದ್ ಸಿದ್ದಿಕಿ ಯಾರು, ಅವರ ಪಾತ್ರ ಏನು ಎನ್ನುವ ವಿಷಯ ಈಗ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.

ಅಲ್-ಫಲಾಹ್ ವಿವಿ ಸಂಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿ ಯಾರು?

ಅಲ್-ಫಲಾಹ್ ವಿಶ್ವವಿದ್ಯಾಲಯದ ಸಂಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿ (ಸಂಗ್ರಹ ಚಿತ್ರ) -

Priyanka P
Priyanka P Nov 19, 2025 11:58 AM

ದೆಹಲಿ: ಅಲ್-ಫಲಾಹ್ ವಿಶ್ವವಿದ್ಯಾಲಯದ (Al-Falah University) ಸ್ಥಾಪಕ ಮತ್ತು ಕುಲಪತಿ ಜವಾದ್ ಅಹ್ಮದ್ ಸಿದ್ದಿಕಿಯನ್ನು (Jawad Ahmad Siddiqui) ಮಂಗಳವಾರ ಜಾರಿ ನಿರ್ದೇಶನಾಲಯ (ED) ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಬಂಧಿಸಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಅವರ ನಿವಾಸದಲ್ಲಿ ಶೋಧ ನಡೆಸಿ, ವಿಚಾರಣೆ ನಡೆಸಿದ ಕೆಲವೇ ಗಂಟೆಗಳ ನಂತರ ಬಂಧನವಾಯಿತು.

ವರದಿಗಳ ಪ್ರಕಾರ, ಸಿದ್ದಿಕಿ ಅವರಿಗೆ ಸಂಬಂಧಿಸಿದ ಹಲವಾರು ಸಂಸ್ಥೆಗಳಲ್ಲಿ ಅಕ್ರಮ ಹಣಕಾಸು ವಹಿವಾಟುಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇತ್ತೀಚಿನ ಕೆಂಪು ಕೋಟೆ ಸ್ಫೋಟ ತನಿಖೆಗೆ ಸಂಬಂಧಿಸಿದಂತೆ ಶಂಕಿತರೊಂದಿಗೆ ಯಾವುದೇ ರೀತಿಯ ಸಂಬಂಧ ಸೇರಿದಂತೆ, ಆಪಾದಿತ ಅಕ್ರಮ ವರ್ಗಾವಣೆಯ ಮೂಲಕ ಸಂಗ್ರಹವಾದ ಹಣವನ್ನು ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಬಳಸಲಾಗಿದೆಯೇ ಎಂದು ಸಂಸ್ಥೆ ತನಿಖೆ ನಡೆಸುತ್ತಿದೆ.

Dr Umar Mohammad: ದೆಹಲಿ ಸ್ಫೋಟಕ್ಕೆ ಮುನ್ನ ಮೊಬೈಲ್‌ ಫೋನ್‌ ನೀರಿಗೆ ಎಸೆಯುವಂತೆ ಸೂಚಿಸಿದ್ದ ಬಾಂಬರ್‌ ಉಮರ್‌ ಮೊಹಮ್ಮದ್‌

ದೆಹಲಿ ಕಾರು ಸ್ಫೋಟ ಪ್ರಕರಣದ ತನಿಖೆಯು ವಿಶ್ವವಿದ್ಯಾನಿಲಯದೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಮೇಲೆ ಬೊಟ್ಟು ಮಾಡಿದಾಗಿನಿಂದ ಅಲ್-ಫಲಾಹ್ ವಿಶ್ವವಿದ್ಯಾಲಯವು ತೀವ್ರ ನಿಗಾ ವಹಿಸಿದೆ. ಸಿದ್ದಿಕಿ ಅವರ ಜೊತೆಗೆ ಕಿರಿಯ ಸಹೋದರನನ್ನು ಕೂಡ ಬಂಧಿಸಲಾಗಿದೆ. ಸಿದ್ದಿಕಿ ಅವರ ಕಿರಿಯ ಸಹೋದರ ಹಮುದ್ ಅಹ್ಮದ್ ಸಿದ್ದಿಕಿಯನ್ನು ಮಧ್ಯಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿತ್ತು. ಆತನ ಬಂಧನ ಬಳಿಕ ಇಡಿ ಈ ಕ್ರಮ ಕೈಗೊಂಡಿದೆ.

2000 ದಲ್ಲಿ ಮಹೌದಲ್ಲಿ ದಾಖಲಾಗಿದ್ದ ಬಹು ಹೂಡಿಕೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಮುದ್ ಸುಮಾರು 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ. 1988ರ ಗಲಭೆ ಮತ್ತು ಕೊಲೆ ಯತ್ನ ಪ್ರಕರಣ ಸೇರಿದಂತೆ ಕನಿಷ್ಠ ನಾಲ್ಕು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ 50 ವರ್ಷದ ಆರೋಪಿಯನ್ನು ಹೈದರಾಬಾದ್‌ನ ಗಚಿಬೌಲಿ ಪ್ರದೇಶದಲ್ಲಿ ಬಂಧಿಸಲಾಯಿತು.

ಹಮುದ್‍ನು ಷೇರು ಮಾರುಕಟ್ಟೆ ಹೂಡಿಕೆ ಸಂಸ್ಥೆಯನ್ನು ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 1990ರ ದಶಕದಲ್ಲಿ, ಹಮುದ್ ಮಹೌದಲ್ಲಿ ಮತ್ತೊಂದು ಹೂಡಿಕೆ ಉದ್ಯಮವನ್ನು ನಡೆಸುತ್ತಿದ್ದರು. ಹೂಡಿಕೆದಾರರಿಗೆ ಶೇ. 20 ಲಾಭದ ಭರವಸೆ ನೀಡಿದ್ದರು ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. 40 ಲಕ್ಷಕ್ಕೂ ರೂ.ಗು ಹೆಚ್ಚು ಹಣ ಸಂಗ್ರಹಿಸಿದ ನಂತರ ಅವರು ನಾಪತ್ತೆಯಾದರು ಎಂದು ಆರೋಪಿಸಲಾಗಿದೆ. ಇದರ ಪರಿಣಾಮವಾಗಿ ಐಪಿಸಿ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

ಜವಾದ್ ಅಹ್ಮದ್ ಸಿದ್ದಿಕಿ ಯಾರು?

ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದರು ಮತ್ತು ರಾಷ್ಟ್ರವ್ಯಾಪಿ ಭಯೋತ್ಪಾದನಾ ತನಿಖೆಗೆ ಕಾರಣವಾದ ನಂತರ ಸಿದ್ದಿಕಿ ಅವರ ಹೆಸರು ವ್ಯಾಪಕ ಪರಿಶೀಲನೆಗೆ ಒಳಗಾಯಿತು.

ಸ್ಫೋಟದ ಸ್ವಲ್ಪ ಸಮಯದ ನಂತರ, ಆರೋಪಿ ಭಯೋತ್ಪಾದಕ ಮತ್ತು ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಮೂವರು ವೈದ್ಯಕೀಯ ವೈದ್ಯರ ನಡುವಿನ ಸಂಪರ್ಕದ ಬಗ್ಗೆ ಹಲವು ವಿಚಾರಗಳು ತಿಳಿದುಬಂತು. ಹರಿಯಾಣ ಪೊಲೀಸರು ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವೈದ್ಯರನ್ನು ಬಂಧಿಸಲಾಯಿತು. ಬಂಧಿತರಿಂದ ಸುಮಾರು 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಸಿದ್ದಿಕಿ ಯಾವುದೇ ಸಾಮಾಜಿಕ ಮಾಧ್ಯಮ ಖಾತೆಯನ್ನು ಹೊಂದಿಲ್ಲ. ಆದರೆ, ಲಿಂಕ್ಡ್‌ಇನ್‍ನಲ್ಲಿ ತಮ್ಮ ಪ್ರೊಫೈಲ್‍ ಅನ್ನು ಸರಳವಾಗಿ ನಮೂದಿಸಿದ್ದಾರೆ:

  • ವ್ಯವಸ್ಥಾಪಕ ಟ್ರಸ್ಟಿ, ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್ (1995 ರಿಂದ)
  • ಕುಲಪತಿ, ಅಲ್-ಫಲಾಹ್ ವಿಶ್ವವಿದ್ಯಾಲಯ (2014 ರಿಂದ)
  • ವ್ಯವಸ್ಥಾಪಕ ನಿರ್ದೇಶಕರು, ಅಲ್-ಫಲಾಹ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್ (1996 ರಿಂದ)

ಜೈಲಿನಲ್ಲಿದ್ದ ಉಗ್ರರ ನಡುವೆ ಮಾರಾಮಾರಿ; ಓರ್ವ ಭಯೋತ್ಪಾದಕನಿಗೆ ಗಂಭೀರ ಗಾಯ

ಇನ್ನು ಜವಾದ್ ಅಹ್ಮದ್ ಸಿದ್ದಿಕಿ ಮತ್ತು ಅವರ ಕುಟುಂಬವು ಈ ಹಿಂದೆ ಮಹೌನ ಕಾಯಸ್ತ್ ಮೊಹಲ್ಲಾದಲ್ಲಿ ವಾಸಿಸುತ್ತಿದ್ದರು. ಅವರ ತಂದೆ ಮೊಹಮ್ಮದ್ ಹಮೀದ್ ಸಿದ್ದಿಕಿ ಸೆಹರ್ ಖಾಜಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಇಂದೋರ್‌ನ ಹೆಚ್ಚುವರಿ ಎಸ್‌ಪಿ ರೂಪೇಶ್ ದ್ವಿವೇದಿ ಹೇಳಿದ್ದಾರೆ.

ಸಿದ್ದಿಕಿ ಸೆಪ್ಟೆಂಬರ್ 18, 1992 ರಂದು ಅಲ್-ಫಲಾಹ್ ಇನ್ವೆಸ್ಟ್‌ಮೆಂಟ್ಸ್‌ನಲ್ಲಿ ನಿರ್ದೇಶಕರಾದರು. ನಂತರ ಅವರು 1995ರಲ್ಲಿ ಸ್ಥಾಪನೆಯಾದ ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್‌ನ ಹಿಂದಿನ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದರು. ಇದು ಈಗ ಅಲ್-ಫಲಾಹ್ ವಿಶ್ವವಿದ್ಯಾಲಯ ಮತ್ತು ಹಲವಾರು ಅಂಗಸಂಸ್ಥೆಗಳನ್ನು ನೋಡಿಕೊಳ್ಳುತ್ತದೆ. ಫರಿದಾಬಾದ್‌ನ ಧೌಜ್ ಗ್ರಾಮದಲ್ಲಿರುವ ವಿಶ್ವವಿದ್ಯಾಲಯದ ಕ್ಯಾಂಪಸ್ 78 ಎಕರೆಗಳನ್ನು ವ್ಯಾಪಿಸಿದೆ.