Pahalgam Terror Attack: ಮುಸ್ಲಿಮರ ಮೇಲೆ ದ್ವೇಷ ಸಾಧಿಸಬೇಡಿ ಎಂದ ಹಿಮಾಂಶಿಗೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ಬೆಂಬಲ
Vinay Narwals wife Himanshi: ಪಹಲ್ಗಾಮ್ ಬಳಿಯ ಬೈಸರನ್‌ನಲ್ಲಿ ಏಪ್ರಿಲ್ 22ರಂದು 26 ಜನರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮಾತನಾಡಿರುವ ಹಿಮಾಂಶಿ ಹೇಳಿಕೆಗಳ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗಿದೆ. ಇದನ್ನು ಗಮನಿಸಿದ ರಾಷ್ಟ್ರೀಯ ಮಹಿಳಾ ಆಯೋಗವು ಈ ಕೃತ್ಯವನ್ನು ಖಂಡಿಸಿದೆ.


ನವದೆಹಲಿ: ಕಾಶ್ಮೀರದ ಪಹಲ್ಗಾಮ್ ( Pahalgam) ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22 ರಂದು ಭಯೋತ್ಪಾದಕರು ( terror attack ) ಪ್ರವಾಸಿಗರ ಮೇಲೆ ದಾಳಿ ನಡೆಸಿದ ಬಳಿಕ ಘಟನೆಗೆ ಸಾಕ್ಷಿಯಾದ ಮಹಿಳೆಯರನ್ನು ಸಾಮಾಜಿಕ ಜಾಲತಾಣದ ಮೂಲಕ ಟ್ರೋಲ್ ಮಾಡಲಾಗುತ್ತಿದೆ. ಇದರಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿ ( Indian Navy officer) ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ( Vinay Narwal's wife, Himanshi) ಕೂಡ ಸೇರಿದ್ದಾರೆ. ಇದೀಗ ಅವರನ್ನು ಬೆಂಬಲಿಸಿ ರಾಷ್ಟ್ರೀಯ ಮಹಿಳಾ ಆಯೋಗವು ಟ್ವಿಟ್ ಮಾಡಿದ್ದು, ಸೈದ್ಧಾಂತಿಕ ಅಭಿವ್ಯಕ್ತಿಗಾಗಿ ಮಹಿಳೆಯರನ್ನು ಟ್ರೋಲ್ ಮಾಡುವುದುಯಾವುದೇ ರೀತಿಯಲ್ಲಿ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.
ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ಅನಂತರ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಿರುವ ಹಿಮಾಂಶಿ, ಮುಸ್ಲಿಮರು ಅಥವಾ ಕಾಶ್ಮೀರಿಗಳ ಬಗ್ಗೆ ದ್ವೇಷ ಸಾಧಿಸಬೇಡಿ ಎಂದು ಜನಸಾಮಾನ್ಯರಿಗೆ ಮನವಿ ಮಾಡಿದರು. ಪಹಲ್ಗಾಮ್ ಬಳಿಯ ಬೈಸರನ್‌ನಲ್ಲಿ ಏಪ್ರಿಲ್ 22ರಂದು 26 ಜನರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ಕೇವಲ ಒಂದು ವಾರದ ಮೊದಲು ವಿನಯ್ ನರ್ವಾಲ್ ಮತ್ತು ಹಿಮಾಂಶಿ ವಿವಾಹವಾಗಿದ್ದರು. ಹನಿಮೂನ್ ಗಾಗಿ ಹಿಮಾಂಶಿ ಜೊತೆ ತೆರೆಳಿದ್ದ ನೌಕಾ ಪಡೆಯ ಅಧಿಕಾರಿ ಮೇಲೆ ಭಯೋತ್ಪಾದಕರು ನೇರವಾಗಿ ಗುಂಡು ಹಾರಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಾಂಶಿ, ವಿನಯ್ ಎಲ್ಲೇ ಇದ್ದರೂ ಅವರು ಶಾಂತಿಯಿಂದ ಇರಬೇಕೆಂದು ಇಡೀ ರಾಷ್ಟ್ರವು ಅವರಿಗಾಗಿ ಪ್ರಾರ್ಥಿಸಬೇಕೆಂದು ನಾನು ಬಯಸುತ್ತೇನೆ. ನಾನು ಬಯಸುವುದು ಅದೊಂದೇ. ಇನ್ನೊಂದು ಎಂದರೆ ಯಾರ ಮೇಲೂ ದ್ವೇಷ ಇರಬಾರದು. ಜನರು ಮುಸ್ಲಿಮರು ಅಥವಾ ಕಾಶ್ಮೀರಿಗಳ ಮೇಲೆ ದ್ವೇಷವನ್ನು ಹೊರಹಾಕುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಮಗೆ ಇದು ಬೇಡ. ನಮಗೆ ಶಾಂತಿ ಮತ್ತು ಶಾಂತಿ ಮಾತ್ರ ಬೇಕು ಎಂದು ಹೇಳಿದರು.
ಆದರೆ ಹಿಮಾಂಶಿ ಅವರ ಈ ಹೇಳಿಕೆಗಳ ಬಳಿಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗಿದೆ. ಇದನ್ನು ಗಮನಿಸಿದ ರಾಷ್ಟ್ರೀಯ ಮಹಿಳಾ ಆಯೋಗವು ಈ ಕೃತ್ಯವನ್ನು ಖಂಡಿಸಿದೆ. ಇದಕ್ಕೆ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಆಯೋಗವು ಲೆಫ್ಟಿನೆಂಟ್ ವಿನಯ್ ನರ್ವಾಲ್ ಜಿ ಅವರ ಮರಣದ ಅನಂತರ ಅವರ ಪತ್ನಿ ಹಿಮಾಂಶಿ ನರ್ವಾಲ್ ಜಿ ಅವರನ್ನು ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಗುರಿಯಾಗಿಸಲಾಗುತ್ತಿರುವ ರೀತಿ ಅತ್ಯಂತ ಖಂಡನೀಯ ಮತ್ತು ದುರದೃಷ್ಟಕರ ಎಂದು ಹೇಳಿದೆ.
ಇದನ್ನೂ ಓದಿ: Death by Heart Attack: ಆಟ ಆಡುತ್ತಿರುವಾಗ ಎದೆನೋವಿನಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು
ಒಬ್ಬ ಮಹಿಳೆಯನ್ನು ಅವರ ಸೈದ್ಧಾಂತಿಕ ಅಭಿವ್ಯಕ್ತಿ ಅಥವಾ ವೈಯಕ್ತಿಕ ಜೀವನದ ಆಧಾರದ ಮೇಲೆ ಟ್ರೋಲ್ ಮಾಡುವುದು ಯಾವುದೇ ರೂಪದಲ್ಲಿ ಸ್ವೀಕಾರಾರ್ಹವಲ್ಲ. ಇದಲ್ಲದೆ, ಯಾವುದೇ ಒಪ್ಪಂದ ಅಥವಾ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದು ಯಾವಾಗಲೂ "ಸಭ್ಯತೆ ಮತ್ತು ಸಾಂವಿಧಾನಿಕ ಹಕ್ಕಿನೊಳಗೆ ಆಗಬೇಕು ಎಂದು ಆಯೋಗ ಸೂಚಿಸಿದೆ. ಪ್ರತಿಯೊಬ್ಬ ಮಹಿಳೆಯ ಘನತೆ ಮತ್ತು ಗೌರವವನ್ನು ರಕ್ಷಿಸಲು ರಾಷ್ಟ್ರೀಯ ಮಹಿಳಾ ಆಯೋಗ ಬದ್ಧವಾಗಿದೆ ಎಂದು ಆಯೋಗ ಹೇಳಿದೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಲವಾರು ನಾಗರಿಕರ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಆಯೋಗವು ವಿನಯ್ ನರ್ವಾಲ್ ಅವರನ್ನು ಅವರ ಧರ್ಮದ ಬಗ್ಗೆ ಕೇಳಿದ ಅನಂತರ ಇತರರೊಂದಿಗೆ ಗುಂಡು ಹಾರಿಸಿ ಕೊಲ್ಲಲಾಗಿದೆ ಎಂಬುದು ತಿಳಿದಿದೆ. ಈ ಭಯೋತ್ಪಾದಕ ದಾಳಿಯಿಂದ ಇಡೀ ದೇಶಕ್ಕೆ ನೋವಾಗಿದೆ ಮತ್ತು ಕೋಪ ಬಂದಿದೆ ಎಂದು ಹೇಳಿದೆ.