ನೀಟ್ ಯುಜಿ ಮರು ಪರೀಕ್ಷೆ 2026; ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಉತ್ತರ ಪತ್ರಿಕೆಯ ಫೋಟೊ ಅಸಲಿಯೆ? ಎನ್‌ಟಿಎ ಹೇಳಿದ್ದೇನು?
NEET UG Retest 2026: ನೀಟ್ ಮರು ಪರೀಕ್ಷೆ ಬಗ್ಗೆ ಕೇಳಿ ಬಂದಿರುವ ದೂರುಗಳನ್ನೆಲ್ಲ ಎನ್‌ಟಿಎ ಎಲ್ಲ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದೆ. ಪರಿಶೀಲನೆಗೆ ಸಲ್ಲಿಸಲಾದ ಅನೇಕ ಒಎಂಆರ್ ಹಾಳೆಗಳು ನಕಲಿ ಎಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಮತ್ತು ಪೋಷಕರು ಪರಿಶೀಲನೆಗಾಗಿ ಮೂಲ ಒಎಂಆರ್ ಉತ್ತರ ಪತ್ರಿಕೆಗಳನ್ನು ಮಾತ್ರ ಸಲ್ಲಿಸಬೇಕು ಎಂದು ಹೇಳಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಜು. 19: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜುಲೈ 16ರಂದು ನೀಟ್ ಯುಜಿ ಮರುಪರೀಕ್ಷೆ 2026ರ (NEET UG Retest 2026) ಫಲಿತಾಂಶ ಪ್ರಕಟಿಸಿದೆ. ದೇಶಾದ್ಯಂತ ಒಟ್ಟು 11.21 ಲಕ್ಷ ಅಭ್ಯರ್ಥಿಗಳು ಪದವಿ ಪೂರ್ವ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಮತ್ತು ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ. ವೈದ್ಯಕೀಯ ಪ್ರವೇಶ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಯು ನಿಗದಿತ ವೇಳಾಪಟ್ಟಿಯಂತೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಫಲಿತಾಂಶಗಳನ್ನು ಸಮಯಕ್ಕೆ ಸರಿಯಾಗಿ ಘೋಷಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಫಲಿತಾಂಶಗಳ ಘೋಷಣೆಯ ನಂತರ, ಪರಿಶೀಲನೆಗಾಗಿ ಸಲ್ಲಿಸಲಾದ ಒಎಂಆರ್ ಹಾಳೆಗಳ ಕುರಿತಾದ ದೂರುಗಳನ್ನು ಸ್ವೀಕರಿಸಲು ಎನ್‌ಟಿಎ ಪ್ರಾರಂಭಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಉತ್ತರ ಪತ್ರಿಕೆಯು ನಕಲಿ ಅಥವಾ ಎಐ ರಚಿತ ಎನ್ನುವುದು ದೃಢಪಟ್ಟಿದೆ. ಸಂಸ್ಥೆಯು ಅಂತಹ ಎಲ್ಲ ದೂರುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ ಎಂದು ಎನ್‌ಟಿಎ ಹೇಳಿದೆ.
ಎಲ್ಲ ದೂರುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಎನ್‌ಟಿಎ ತಿಳಿಸಿದೆ. ಪರಿಶೀಲನೆಗೆ ಸಲ್ಲಿಸಲಾದ ಅನೇಕ ಒಎಂಆರ್ ಹಾಳೆಗಳು ನಕಲಿ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಪರಿಶೀಲನೆಗಾಗಿ ಮೂಲ ಒಎಂಆರ್ ಉತ್ತರ ಪತ್ರಿಕೆಗಳನ್ನು ಮಾತ್ರ ಸಲ್ಲಿಸಬೇಕು. ನಕಲಿ ಅಥವಾ ಎಐ ರಚಿತ ಒಎಂಆರ್ ಸಲ್ಲಿಸಿದರೆ ದೂರುದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ತಿಳಿಸಲಾಗಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹೆಸರಿನಲ್ಲಿ ಟೆಲಿಗ್ರಾಂನಲ್ಲಿ ಕೋಟಿ ಕೋಟಿ ವಂಚನೆ!
ವೈರಲ್ ಫೋಟೊದ ಅಸಲಿಯತ್ತೇನು?
2026ರ ಜೂನ್ 21ರಂದು ನಡೆದ ನೀಟ್-ಯುಜಿ ಮರುಪರೀಕ್ಷೆಗೆ ಹಾಜರಾದ ಅಭ್ಯರ್ಥಿಯ ಉತ್ತರ ಪತ್ರಿಕೆ ಎನ್ನುವ ಹೆಸರಿನಲ್ಲಿ ಎಡಿಟ್ ಮಾಡಲಾದ ಒಎಂಆರ್ ಶೀಟ್‌ನ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇಬ್ಬರು ಅಭ್ಯರ್ಥಿಗಳ ಒಎಂಆರ್ ಉತ್ತರ ಪತ್ರಿಕೆ ಅದಲು-ಬದಲಾಗಿದೆ. ಜತೆಗೆ ತಪ್ಪಾಗಿ ಮೌಲ್ಯಮಾಪನ ಮಾಡಲಾಗಿದೆ ಎಂದು ಹೇಳಲಾಗಿತ್ತು. ಈ ಆರೋಪದ ಸತ್ಯಾಸತ್ಯತೆಯನ್ನು ಸರಿಯಾಗಿ ಪರಿಶೀಲಿಸದೆ ರಾಜಕೀಯ ಪಕ್ಷವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದೆ ಎಂದು ಎನ್‌ಟಿಎ ತಿಳಿಸಿದೆ.
ವೈರಲ್ ಫೋಟೊದ ತಾಂತ್ರಿಕ ಪರೀಕ್ಷೆಯನ್ನು ನಡೆಸಲಾಗಿದ್ದು, ಅದನ್ನು ಎನ್‌ಟಿಎಯೊಂದಿಗೆ ಲಭ್ಯವಿರುವ ದಾಖಲೆಗಳೊಂದಿಗೆ ಹೋಲಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಪ್ರಸ್ತಾಪಿತ ರೋಲ್ ನಂಬರ್‌ಗೆ ಸಂಬಂಧಿಸಿದಂತೆ ನಿಜವಾದ ಉತ್ತರ ಪತ್ರಿಕೆ ತನ್ನ ಬಳಿ ಇದೆ. ಅದರಲ್ಲಿ ಅಭ್ಯರ್ಥಿಯ ಸರಿಯಾದ ಹೆಸರು, ಪೋಷಕರ ಹೆಸರು, ಸಹಿ ಹಾಗೂ ಹೆಬ್ಬೆರಳಿನ ಗುರುತು ಇದ್ದು, ನಿಗದಿತ ವಿಧಾನಗಳ ಪ್ರಕಾರವೇ ಮೌಲ್ಯಮಾಪನ ಮಾಡಲಾಗಿದೆ. 2026ರ ಜುಲೈ 16ರಂದು ಪ್ರಕಟಿಸಲಾದ ಫಲಿತಾಂಶವೂ ಇದೇ ಮೌಲ್ಯಮಾಪನದ ಆಧಾರದಲ್ಲಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.
ಬಿಗಿ ಭದ್ರತೆಯ ನಡುವೆ ನೀಟ್ ಪರೀಕ್ಷೆ ಬರೆದ 20 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊ ತನ್ನ ದಾಖಲೆಗಳಲ್ಲಿರುವ ಮೂಲ ಒಎಂಆರ್ ಉತ್ತರ ಪತ್ರಿಕೆಯಲ್ಲ. ಬದಲಾಗಿ, ಅದೇ ಮೂಲ ಉತ್ತರ ಪತ್ರಿಕೆಯನ್ನು ಡಿಜಿಟಲ್ ಆಗಿ ತಿರುಚಿದ ಫೋಟೊ. ಅಭ್ಯರ್ಥಿಯ ಗುರುತು ವಿವರಗಳಾದ ಹೆಸರು, ಪೋಷಕರ ಹೆಸರು ಮುಂತಾದ ಮಾಹಿತಿಯನ್ನು ಮಾತ್ರ ಬದಲಾಯಿಸಿರುವ ನಕಲಿ ಆವೃತ್ತಿ ಎಂದು ಎನ್‌ಟಿಎ ತಿಳಿಸಿದೆ.
ನಿಜವಾದ ಒಎಂಆರ್ ಶೀಟ್ ಕಡಿಮೆ ರೆಸಲ್ಯೂಶನ್ ಹೊಂದಿರುವ ಸ್ಕ್ಯಾನ್ ಪ್ರತಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರವು ಅದಕ್ಕಿತ ಸುಮಾರು ಆರು ಪಟ್ಟು ಹೆಚ್ಚಿನ ರೆಸಲ್ಯೂಶನ್ ಹೊಂದಿದೆ. ಉತ್ತರ ಗುರುತುಗಳ ಬಣ್ಣ ಕಪ್ಪು ಬಣ್ಣದಿಂದ ನೀಲಿ-ನೇರಳೆ ಬಣ್ಣಕ್ಕೆ ಬದಲಾಗಿದೆ. ಹೆಬ್ಬೆರಳಿನ ಗುರುತು ಸಹಜವಾದ ರೇಖೆಗಳ ಬದಲಿಗೆ, ಸಂಪೂರ್ಣ ಬಣ್ಣ ತುಂಬಿದ ಗಾಢ ಬ್ಲಾಕ್‌ನಂತೆ ಕಾಣುತ್ತಿದೆ ಎಂದು ಎನ್‌ಟಿಎ ಗೊಂದಲಗಳಿಗೆ ತೆರೆ ಎಳೆದಿದೆ.