New UGC Equity Rules: ಯುಜಿಸಿಯ ಹೊಸ ನಿಯಮಾವಳಿಗೆ ಸುಪ್ರೀಂ ಕೋರ್ಟ್ ತಡೆ
ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯುವುದಕ್ಕಾಗಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಹೊರಡಿಸಿರುವ ನಿಯಮಾವಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ನಿಯಮಾವಳಿ ವಿರುದ್ಧ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಕ್ರಮ ಕೈಗೊಂಡಿದೆ.
ಯುಜಿಸಿಯ ಹೊಸ ನಿಯಮದ ವಿರುದ್ಧ ಪ್ರತಿಭಟನೆ (ಸಂಗ್ರಹ ಚಿತ್ರ) -
ದೆಹಲಿ, ಜ. 29: ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯುವುದಕ್ಕಾಗಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಹೊರಡಿಸಿರುವ ನಿಯಮಾವಳಿಯನ್ನು ಸುಪ್ರೀಂ ಕೋರ್ಟ್ (Supreme Court ) ತಡೆ ಹಿಡಿದಿದೆ (New UGC Equity Rules). ನಿಯಮಾವಳಿ ವಿರುದ್ಧ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ವ್ಯಾಪಕ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಕ್ರಮ ಕೈಗೊಂಡಿದೆ. ಹೊಸ ನಿಯಮಾವಳಿಯನ್ನು ತೀವ್ರವಾಗಿ ಟೀಕಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠವು, ಇದು ಸಂಪೂರ್ಣ ಅಸ್ಪಷ್ಟತೆಯಿಂದ ಕೂಡಿದೆ ಎಂದು ಹೇಳಿದೆ.
ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯುವುದಕ್ಕಾಗಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಹೊರಡಿಸಿರುವ ನಿಯಮಾವಳಿಯಲ್ಲಿ ದೂರು ನೀಡಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ಇರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಭಾರತದ ಏಕತೆ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಫಲಿಸಬೇಕು ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು. ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಿ ಕೇಂದ್ರ ಮತ್ತು ಯುಜಿಸಿಗೆ ನೋಟಿಸ್ ಸಹ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 19ಕ್ಕೆ ನಿಗದಿಪಡಿಸಿದೆ.
ಯುಜಿಸಿ ನಿಯಮಾವಳಿಗೆ ಸುಪ್ರೀಂ ಕೋರ್ಟ್‌ನಿಂದ ತಡೆ:
#BREAKING #SupremeCourt stays UGC Promotion of Equity Regulations 2026.
— Live Law (@LiveLawIndia) January 29, 2026
SC says the provisions are prima facie vague and capalbe of misuse.
SC asks Union to redraft the regulations, till then its operation kept in abeyance.#UGCRegulations pic.twitter.com/Q8hqbUkE4m
ಹೊಸ ನಿಯಮಾವಳಿಯಲ್ಲಿ ದೂರು ಪರಿಹಾರ ವ್ಯವಸ್ಥೆಯಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಹೊರಗಿಟ್ಟಿರುವುದು ತಾರತಮ್ಯ ಉಂಟು ಮಾಡುವಂತಿದೆ. ನಿಯಮಾವಳಿಗಳು ಮುಖ್ಯವಾಗಿ ಎಸ್‌ಸಿ/ಎಸ್‌ಟಿ, ಒಬಿಸಿ, ಆರ್ಥಿಕವಾಗಿ ಹಿಂದುಳಿದವರು ಮತ್ತು ವಿಶೇಷ ಚೇತನರ ರಕ್ಷಣೆಗೆ ನಿಂತಿದ್ದು ಉಳಿದ ವರ್ಗಗಳಿಗೆ ಸಾಂಸ್ಥಿಕ ರಕ್ಷಣೆ ನೀಡುತ್ತಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಣೆ ವ್ಯಕ್ತಪಡಿಸಲಾಗಿತ್ತು.
ಈ ನಿಯಮಾವಳಿಗಳ ವಿರುದ್ಧ ಸಾರ್ವಜನಿಕವಾಗಿಯೂ ಪ್ರತಿಭಟನೆಗಳು ನಡೆಯುತ್ತಿದ್ದು, ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಇವು ಏಕಪಕ್ಷೀಯವಾಗಿವೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ವಿರುದ್ಧ ದುರುಪಯೋಗ ಪಡಿಸುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ. ಈ ನಿಯಮಾವಳಿಗಳನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಮುಂದೆ ಅನೇಕ ಅರ್ಜಿಗಳು ಮತ್ತು ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿವೆ.
ಜನವರಿ 13ರಿಂದ ಜಾರಿಗೆ ಬಂದಿರುವ ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮತೆಯ ಉತ್ತೇಜನ) ನಿಯಮಾವಳಿ- 2026 ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ.
ಬೀದಿ ನಾಯಿ ಕಡಿತದಿಂದ ಸಾವಾದರೆ, ಗಾಯವಾದರೆ ಭಾರಿ ದಂಡ: ಸುಪ್ರೀಂ ಕೋರ್ಟ್ ಎಚ್ಚರಿಕೆ
ನಿಯಮಾವಳಿ ಏನು ಹೇಳುತ್ತದೆ?
“ಧರ್ಮ, ಜಾತಿ, ಲಿಂಗ, ಜನ್ಮಸ್ಥಳ, ಅಂಗವೈಕಲ್ಯತೆ ಅಥವಾ ಇವುಗಳ ಆಧಾರದ ಮೇಲೆ ನಡೆಯುವ ಭೇದಭಾವವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಅಂಗವೈಕಲ್ಯ ಹೊಂದಿರುವವರು ಅಥವಾ ಇವರಲ್ಲಿ ಯಾರ ಮೇಲಾದರೂ ನಡೆಯುವ ಭೇದಭಾವವನ್ನು ತೊಡೆದುಹಾಕಿ, ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲರ ನಡುವೆ ಸಂಪೂರ್ಣ ಸಮಾನತೆಯನ್ನು ಜಾರಿಗೆ ತರುವ ಗುರಿ ಹೊಂದಲಾಗಿದೆʼʼ ಎಂದು ನಿಯಮಾವಳಿಯಲ್ಲಿ ತಿಳಿಸಲಾಗಿದೆ.
ನಿಯಮಾವಳಿಗಳ ಪ್ರಕಾರ, ಹಿಂದುಳಿದ ವರ್ಗಗಳಿಗಾಗಿ ರೂಪಿಸಲಾದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ, ಉನ್ನತ ಶಿಕ್ಷಣ ಸಂಸ್ಥೆಗಳು ಸಮಾನ ಅವಕಾಶ ಕೇಂದ್ರಗಳು ಹಾಗೂ ಸಮಾನತಾ ಸಮಿತಿಗಳನ್ನು ಸ್ಥಾಪಿಸಬೇಕು ಮತ್ತು ಭೇದಭಾವ ಸಂಬಂಧಿತ ದೂರುಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ. ಆದರೆ ಅರ್ಜಿದಾರರು ಆಕ್ಷೇಪಿಸಿರುವ ಪ್ರಕಾರ ಈ ನಿಯಮಾವಳಿಗಳ ದೂರು ಪರಿಹಾರ ವ್ಯವಸ್ಥೆಯಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಹೊರಗಿಟ್ಟಿರುವುದು ತಾರತಮ್ಯ ಉಂಟು ಮಾಡುವಂತಿದೆ.