ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗೃಹ ಕಾರ್ಮಿಕರ ಕನಿಷ್ಠ ವೇತನ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

Supreme Court: ಗೃಹ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸುವಂತೆ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಇದು ಉದ್ಯೋಗದಾತರ ಮೇಲೆ ಒತ್ತಡ ಬೀಳುವ ಸಾಧ್ಯತೆ ಹೊಂದಿದೆ ಮತ್ತು ದುರುಪಯೋಗದ ಸಾಧ್ಯತೆಗಳಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ನಿರ್ಧಾರವನ್ನು ರಾಜ್ಯ ಸರ್ಕಾರಗಳ ಕೈಗೆ ಒಪ್ಪಿಸುವುದು ಸೂಕ್ತ ಎಂದು ಹೇಳಿದೆ. ಈಗಿರುವ ಕಾನೂನುಗಳಲ್ಲಿ ಬದಲಾವಣೆ ಮಾಡಲು ನ್ಯಾಯಾಲಯದ ವ್ಯಾಪ್ತಿ ಸೀಮಿತವಾಗಿರುವುದರಿಂದ, ಅರ್ಜಿದಾರರು ಸಂಬಂಧಪಟ್ಟ ರಾಜ್ಯ ಅಧಿಕಾರಿಗಳ ಮೂಲಕ ಪರಿಹಾರ ಹುಡುಕಿಕೊಳ್ಳಬೇಕು ಎಂದು ಸೂಚಿಸಿದೆ.

ಗೃಹ ಕಾರ್ಮಿಕರ ಕನಿಷ್ಠ ವೇತನ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ) -

Profile
Sushmitha Jain Jan 29, 2026 4:01 PM

ನವದೆಹಲಿ, ಜ. 29: ಗೃಹ ಕಾರ್ಮಿಕರಿಗೆ (Domestic Workers) ಸಮಗ್ರ ಕಾನೂನು ಚೌಕಟ್ಟು ರೂಪಿಸುವುದು ಹಾಗೂ ಕನಿಷ್ಠ ವೇತನವನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ( Supreme Court) ನಿರಾಕರಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗ ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ತಿದ್ದುಪಡಿ ಮಾಡಬೇಕೆಂದು ಆದೇಶ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಗೃಹ ಕಾರ್ಮಿಕರ ಕನಿಷ್ಠ ವೇತನ ಹಾಗೂ ಅವರ ಹಕ್ಕುಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಗಳೇ ತೆಗೆದುಕೊಳ್ಳುವುದು ಹೆಚ್ಚು ಸೂಕ್ತ ಮತ್ತು ಸಂವಿಧಾನಾತ್ಮಕವಾಗಿ ಸರಿಯಾದ ಕ್ರಮವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಕಡ್ಡಾಯ ಕನಿಷ್ಠ ವೇತನ ನಿಗದಿಪಡಿಸುವುದರಿಂದ ಮನೆ ಮಾಲಕರು ಕಾನೂನಾತ್ಮಕ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ ಇದೆ ಎಂಬ ಆತಂಕವನ್ನು ವ್ಯಕ್ತಪಡಿಸಿತು. ಕಾರ್ಮಿಕ ಸಂಘಟನೆಗಳು ಪ್ರತಿಯೊಂದು ಮನೆಯ ಮೇಲೂ ಮೊಕದ್ದಮೆ ಹೂಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದರಿಂದ ಗೃಹ ಕಾರ್ಮಿಕರನ್ನು ನೇಮಿಸಿಕೊಳ್ಳಲು ಸಾಮಾನ್ಯ ಜನರು ಹಿಂಜರಿಯುವಂತಹ ಸ್ಥಿತಿ ಉಂಟಾಗಬಹುದು ಎಂಬ ಕಳವಳವನ್ನು ನ್ಯಾಯಾಲಯ ಮುಂದಿಟ್ಟಿದೆ.

ಕಾನೂನು ತಿದ್ದುಪಡಿ ಅಥವಾ ಹೊಸ ಕಾನೂನು ರೂಪಿಸುವಂತಹ ವಿಷಯಗಳಲ್ಲಿ ನ್ಯಾಯಾಲಯದ ಹಸ್ತಕ್ಷೇಪಕ್ಕೆ ಮಿತಿ ಇರುವುದರಿಂದ, ಈ ರೀತಿಯ ಬೇಡಿಕೆಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಗಳು ಮತ್ತು ಶಾಸನ ಸಭೆಗಳೇ ಸೂಕ್ತ ವೇದಿಕೆಯಾಗಿವೆ ಎಂದು ಪೀಠ ತಿಳಿಸಿದೆ. ಆದ್ದರಿಂದ ಅರ್ಜಿದಾರರು ತಮ್ಮ ಬೇಡಿಕೆಗಳಿಗಾಗಿ ಸಂಬಂಧಪಟ್ಟ ರಾಜ್ಯ ಅಧಿಕಾರಿಗಳನ್ನು ಸಂಪರ್ಕಿಸುವುದು ಉತ್ತಮ ಮಾರ್ಗವೆಂದು ನ್ಯಾಯಾಲಯ ಸಲಹೆ ನೀಡಿದೆ.

ಆರ್ಥಿಕ ಸಮೀಕ್ಷೆ ಉದ್ದೇಶ, ಮಹತ್ವ ಗೊತ್ತಾ? ಇದನ್ನು ತಯಾರಿಸುವವರು ಯಾರು?

ಅರ್ಜಿಯಲ್ಲಿ ಗೃಹ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಸಂವಿಧಾನದ ವಿಧಿ 21 (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಹಾಗೂ ವಿಧಿ 23 (ಬಲವಂತದ ಶ್ರಮ ವಿರೋಧ)ಗಳ ಅಡಿಯಲ್ಲಿ ಮೂಲಭೂತ ಹಕ್ಕಾಗಿಯಾಗಿ ಘೋಷಿಸಬೇಕೆಂದು ಮನವಿ ಮಾಡಲಾಗಿತ್ತು. ಜತೆಗೆ ಏಷ್ಯಾದ ಕೆಲವು ದೇಶಗಳಲ್ಲಿ ವಿಶೇಷವಾಗಿ ಸಿಂಗಾಪುರದಲ್ಲಿ, ಗೃಹ ಕಾರ್ಮಿಕರಿಗೆ ರಜೆ, ಕೆಲಸದ ಸಮಯ ಮತ್ತು ಇತರೆ ಸೌಲಭ್ಯಗಳನ್ನು ಕಾನೂನಿನ ಮೂಲಕ ಖಾತರಿಪಡಿಸದೆ ಅವರನ್ನು ನೇಮಿಸಲು ಸಾಧ್ಯವಿಲ್ಲ ಎಂಬುದನ್ನು ಉದಾಹರಣೆಯಾಗಿ ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಕನಿಷ್ಠ ವೇತನ ಜಾರಿಗೊಳಿಸದ ರಾಜ್ಯಗಳಿಗೆ ನೋಟಿಸ್ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟರೂ, ಕೆಲವು ರಾಜ್ಯಗಳು ಈಗಾಗಲೇ ಈ ಕುರಿತು ನಿಯಮಗಳನ್ನು ಜಾರಿಗೊಳಿಸಿರುವುದಾಗಿ ಹಿರಿಯ ವಕೀಲ ರಾಮಚಂದ್ರನ್ ವಾದಿಸಿದರು. ದೇಶೀಯ ಉದ್ಯೋಗದ ಸ್ವರೂಪವು ರಾಜ್ಯದಿಂದ ರಾಜ್ಯಕ್ಕೆ ಬಹುತೇಕ ಒಂದೇ ಇದ್ದರೂ, ಈ ವಿಷಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೇ ಸೇರಿದೆ ಎಂದು ಒಕ್ಕೂಟ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ.