"ಉತ್ತರ ಭಾರತದ ಮಹಿಳೆಯರಿಗೆ ಮನೆಯಲ್ಲಿದ್ದು ಮಕ್ಕಳನ್ನು ಹೆರುವುದೊಂದೇ ಕೆಲಸ" ; ನಾಲಿಗೆ ಹರಿಬಿಟ್ಟ ಡಿಎಂಕೆ ಸಂಸದ
Dayanidhi Maran controversy: ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಉತ್ತರ ಭಾರತದ ಮಹಿಳೆಯರನ್ನು ತಮಿಳುನಾಡು ಮಹಿಳೆಯರೊಂದಿಗೆ ಹೋಲಿಸಿರುವುದು ಭಾರಿ ರಾಜಕೀಯ ವಿವಾದವನ್ನು ಹುಟ್ಟಿಸಿದೆ. ಉತ್ತರದಲ್ಲಿ ಮಹಿಳೆಯರು, ಮನೆಯಲ್ಲಿ ಇರಬೇಕು, ಮಕ್ಕಳನ್ನು ಹುಟ್ಟಿಸಬೇಕು ಎಂಬಂತಹ ವಾತಾವರಣವಿದೆ ಎಂದು ಹೇಳಿದ್ದಾರೆ.
ಡಿಎಂಕೆ ಸಂಸದ ದಯಾನಿಧಿ ಮಾರನ್ (ಸಂಗ್ರಹ ಚಿತ್ರ) -
ಚೆನ್ನೈ: ಡಿಎಂಕೆ ಸಂಸದ ದಯಾನಿಧಿ ಮಾರನ್ (DMK MP Dayanidhi Maran) ಅವರು ಉತ್ತರ ಭಾರತದ ಮಹಿಳೆಯರನ್ನು ಮತ್ತು ತಮಿಳುನಾಡಿನ (Tamil Nadu) ಮಹಿಳೆಯರನ್ನು ಹೋಲಿಸುವ ಹೇಳಿಕೆಯೊಂದಿಗೆ ಭಾರಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದಾರೆ. ಚೆನ್ನೈ ಸೆಂಟ್ರಲ್‌ನಿಂದ ನಾಲ್ಕು ಬಾರಿ ಸಂಸದರಾಗಿರುವ ಮಾರನ್, ತಮಿಳುನಾಡಿನಲ್ಲಿ ಮಹಿಳೆಯರಿಗೆ ಅಧ್ಯಯನ ಮಾಡಲು ಹೇಳಿದರೆ, ಉತ್ತರ ಭಾರತದಲ್ಲಿ ಮಹಿಳೆಯರಿಗೆ ಅಡುಗೆಮನೆಯಲ್ಲಿ ಕೆಲಸ ಮಾಡಲು ಮತ್ತು ಮಕ್ಕಳನ್ನು ಹೆರಲು ಕೇಳಲಾಗುತ್ತದೆ ಎಂದು ಹೇಳಿದ್ದಾರೆ.
ಕ್ವಾಯ್ದ್-ಇ-ಮಿಲ್ಲತ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮಾರನ್, ನಮ್ಮ ಹುಡುಗಿಯರು ಲ್ಯಾಪ್‌ಟಾಪ್ ಜೊತೆ ಕೆಲಸ ಮಾಡುತ್ತಾ ಆತ್ಮವಿಶ್ವಾಸ ಮತ್ತು ಹೆಮ್ಮೆ ಪಡುವಂತೆ ಇರಬೇಕು. ನೀವು ಸಂದರ್ಶನಕ್ಕೆ ಹೋಗುವುದಾಗಲಿ ಅಥವಾ ಸ್ನಾತಕೋತ್ತರ ಪದವಿ ಪಡೆಯುವುದಾಗಲಿ, ತಮಿಳುನಾಡಿನಲ್ಲಿ ನಾವು ಹುಡುಗಿಯರಿಗೆ ಓದಿಕೊಳ್ಳಲು, ಅಧ್ಯಯನ ಮಾಡಲು ಹೇಳುತ್ತೇವೆ. ಆದರೆ, ಉತ್ತರ ಭಾರತದಲ್ಲಿ ಹುಡುಗಿಯರನ್ನು ಕೆಲಸಕ್ಕೆ ಹೋಗಲು ಬಿಡುವುದಿಲ್ಲ. ಮನೆಯಲ್ಲಿ ಇರಬೇಕು, ಅಡುಗೆಮನೆಯಲ್ಲಿ ಇರಬೇಕು, ಮಗುವನ್ನು ಹೆರಬೇಕು. ಅದೇ ಅಲ್ಲಿನ ಮಹಿಳೆಯರಿಗೆ ಇರುವ ಕೆಲಸ.
ಇದು ತಮಿಳುನಾಡು, ದ್ರಾವಿಡ ರಾಜ್ಯ. ಕಲೈನಾರ್ (ಮಾಜಿ ಮುಖ್ಯಮಂತ್ರಿ ದಿವಂಗತ ಎಂ ಕರುಣಾನಿಧಿ), ಅಣ್ಣಾ (ಮಾಜಿ ಮುಖ್ಯಮಂತ್ರಿ ಸಿ ಎನ್ ಅಣ್ಣಾದೊರೈ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಾಡು. ಅದಕ್ಕಾಗಿಯೇ ಜಾಗತಿಕ ಕಂಪನಿಗಳು ಚೆನ್ನೈಗೆ ಬರುತ್ತವೆ. ಏಕೆಂದರೆ ಇಲ್ಲಿರುವ ಎಲ್ಲರೂ ತಮಿಳಿನಲ್ಲಿ ಮಾತ್ರವಲ್ಲ, ಇಂಗ್ಲಿಷ್‌ನಲ್ಲೂ ಶಿಕ್ಷಣ ಪಡೆದಿದ್ದಾರೆ. ಸರ್ಕಾರವು ಮಹಿಳೆಯರ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಯಾವಾಗಲೂ ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೇವೆ ಎಂದು ಬಿಲಿಯನೇರ್ ಕಲಾನಿಧಿ ಮಾರನ್ ಅವರ ಸಹೋದರ ಮಾರನ್ ಹೇಳಿದರು. ತಮಿಳುನಾಡು ಭಾರತದ ಅತ್ಯುತ್ತಮ ರಾಜ್ಯ ಮತ್ತು ಎಂ.ಕೆ. ಸ್ಟಾಲಿನ್ ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎಂದು ಡಿಎಂಕೆ ಸಂಸದ ಹೇಳಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಮತ್ತು ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಇಂದು ಉಲಗಂ ಉಂಗಲ್ ಕೈಯಿಲ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು.
ಇಂದು, ನಿಮ್ಮೆಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲು ನನಗೆ ಸಂತೋಷವಾಗಿದೆ. ನಿಮಗೆ ಹೊಸ ವರ್ಷದ ಶುಭಾಶಯಗಳು ಮತ್ತು ಪೊಂಗಲ್ ಶುಭಾಶಯಗಳು. ಹುಡುಗಿಯರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಸಮಾಜಕ್ಕೆ ಗಣನೀಯ ಕೊಡುಗೆ ನೀಡುತ್ತಾರೆ. ನಮ್ಮ ಎಲ್ಲಾ ವಿದ್ಯಾರ್ಥಿನಿಯರ ಬಗ್ಗೆ ನಮಗೆ ಹೆಮ್ಮೆ ಇದೆ. ಈ ಶಿಕ್ಷಣ ಸಂಸ್ಥೆಯು ಶ್ರೀಮಂತ ಇತಿಹಾಸವನ್ನು ಹೊಂದಿದೆ. 1974 ರಲ್ಲಿ, ಕರುಣಾನಿಧಿ ಈ ಕಾಲೇಜಿಗೆ ಕ್ವಾಯ್ಡ್-ಇ-ಮಿಲ್ಲತ್ ಸರ್ಕಾರಿ ಮಹಿಳಾ ಕಾಲೇಜು ಎಂದು ಹೆಸರಿಟ್ಟರು. ಹೊಸ ಕಟ್ಟಡಗಳನ್ನು ತೆರೆದರು, ಮೂಲಸೌಕರ್ಯಗಳನ್ನು ಒದಗಿಸಿದರು ಎಂದು ಅವರು ಹೇಳಿದರು.
ಈ ಹೇಳಿಕೆಗೆ ಬಿಜೆಪಿಯಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳುನಾಡಿನ ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ, ದಯಾನಿಧಿ ಮಾರನ್ ಮತ್ತೊಮ್ಮೆ ಉತ್ತರ ಭಾರತೀಯರನ್ನು ನಿಂದಿಸಿದ್ದಾರೆ. ದಯಾನಿಧಿ ಮಾರನ್ ಅವರಿಗೆ ಸಾಮಾನ್ಯ ಜ್ಞಾನವಿಲ್ಲ ಎಂದು ಟೀಕಿಸಿದರು.