Andhra Stampede: ಅಯ್ಯೋ ಉಸಿರಾಡಲು ಆಗ್ತಾ ಇಲ್ಲ.. ಕಾಪಾಡಿ; ಮನ ಕಲಕುವಂತೆ ಕಾಲ್ತುಳಿತದ ಈ ವಿಡಿಯೋ
ಮಹಿಳೆಯರು ಪರಸ್ಪರ ಜಗಳವಾಡುತ್ತಿರುವುದನ್ನು ಮತ್ತು ಕಾಲ್ತುಳಿತದಿಂದ ತಪ್ಪಿಸಿಕೊಳ್ಳಲು ಹಳಿಗಳ ಮೇಲೆ ಹಾರಲು ಪ್ರಯತ್ನಿತ್ತಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಕೆಲವು ಪುರುಷರು ಅವರನ್ನು ಸುರಕ್ಷಿತ ಸ್ಥಳಕ್ಕೆ ಎಳೆಯಲು ಪ್ರಯತ್ನಿಸುತ್ತಿರುವಾಗ ಅವರಲ್ಲಿ ಹಲವರು ಸಹಾಯಕ್ಕಾಗಿ ಕೂಗುತ್ತಿರುವುದು ಕೇಳಿಬರುತ್ತಿದೆ.
-
Vishakha Bhat
Nov 1, 2025 3:07 PM
ಹೈದರಾಬಾದ್: ಆಂಧ್ರ ಪ್ರದೇಶದ (Andhra Pradesh) ಶ್ರೀಕಾಕುಳನಲ್ಲಿರುವ ಕಾಶಿಬುಗ್ಗ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದ್ದು (Andhra Stampede) ದುರಂತದಲ್ಲಿ ಇದು ವರೆಗೂ 12 ಮಂದಿ ಮೃತಪಟ್ಟಿದ್ದಾರೆ. ಕಾರ್ತಿಕ ಮಾಸದ ಏಕಾದಶಿ ಶನಿವಾರ ಬಂದಿದ್ದರಿಂದ, ದೇವರ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದರು. ಈ ಸಮಯದಲ್ಲಿ, ಜನಸಂದಣಿ ಹೆಚ್ಚಾದ ಕಾರಣ ಏಕಾಏಕಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಕಾಲ್ತುಳಿತದ ವಿಡಿಯೋ ವೈರಲ್ ಆಗಿದ್ದು, ಕಿರಿದಾದ ಜಾಗದಲ್ಲಿ ಸಿಲುಕಿಕೊಂಡಿರುವ ನೂರಾರು ಮಹಿಳೆಯರು, ಕೈಯಲ್ಲಿ ಪೂಜೆಯ ಬುಟ್ಟಿಗಳು, ಮತ್ತು ಅವರಲ್ಲಿ ಹಲವರು ಗಾಳಿಗಾಗಿ ಏದುಸಿರು ಬಿಡುತ್ತಾ ಸಹಾಯಕ್ಕಾಗಿ ಕಿರುಚುತ್ತಿರುವ ದೃಶ್ಯ ಮನಕಲಕುವಂತಿದೆ.
ಮಹಿಳೆಯರು ಪರಸ್ಪರ ಜಗಳವಾಡುತ್ತಿರುವುದನ್ನು ಮತ್ತು ಕಾಲ್ತುಳಿತದಿಂದ ತಪ್ಪಿಸಿಕೊಳ್ಳಲು ಹಳಿಗಳ ಮೇಲೆ ಹಾರಲು ಪ್ರಯತ್ನಿತ್ತಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಕೆಲವು ಪುರುಷರು ಅವರನ್ನು ಸುರಕ್ಷಿತ ಸ್ಥಳಕ್ಕೆ ಎಳೆಯಲು ಪ್ರಯತ್ನಿಸುತ್ತಿರುವಾಗ ಅವರಲ್ಲಿ ಹಲವರು ಸಹಾಯಕ್ಕಾಗಿ ಕೂಗುತ್ತಿರುವುದು ಕೇಳಿಬರುತ್ತಿದೆ. ಕೆಲವು ದೃಶ್ಯಗಳಲ್ಲಿ ಸಿಪಿಆರ್ ನೀಡುತ್ತಿರುವುದು ಕಂಡು ಬಂದಿದೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
Stampede in Andhra’s Srikakulam temple, 9 devotees have died… footage below shows how so many women were struggling to get out of the chaos, and had nowhere to go… clearly zero preps on ground for the crowd! pic.twitter.com/w0hOFAlgTY
— Akshita Nandagopal (@Akshita_N) November 1, 2025
ಬಲಿಯಾದವರ ಪೈಕಿ ಹೆಚ್ಚನವರು ಮಹಿಳೆಯರು ಎಂದು ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಕಚೇರಿ ಕಾಲ್ತುಳಿತಕ್ಕೆ ಬಲಿಯಾದವರಿಗೆ ಸಂತಾಪ ಸೂಚಿಸಿದೆ. "ತಮ್ಮ ಆತ್ಮೀಯರನ್ನು ಕಳೆದುಕೊಂಡವರೊಂದಿಗೆ ಸಂತಾಪ ಸೂಚಿಸುತ್ತೇವೆ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ PMNRF ನಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು" ಎಂದು PMO ತಿಳಿಸಿದೆ.
ದುರಂತದ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಘಾತ ವ್ಯಕ್ತಪಡಿಸಿದ್ದು, ಈ ಸಾವುಗಳನ್ನು "ಹೃದಯ ವಿದ್ರಾವಕ" ಎಂದು ಹೇಳಿದರು. ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತ ಘಟನೆ ಆಘಾತವನ್ನುಂಟು ಮಾಡಿದೆ. ಈ ದುರಂತ ಘಟನೆಯಲ್ಲಿ ಭಕ್ತರ ಸಾವು ಅತ್ಯಂತ ಹೃದಯ ವಿದ್ರಾವಕವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರಿಗೆ ತ್ವರಿತ ಮತ್ತು ಸರಿಯಾದ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಮುಖ್ಯಮಂತ್ರಿ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಸ್ಥಳೀಯ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುವಂತೆ ಅವರು ಕೇಳಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Andhra Pradesh Stampede: ದೇಶದಲ್ಲಿ ಮತ್ತೊಂದು ರಣ ಭೀಕರ ಕಾಲ್ತುಳಿತ- 9 ಬಲಿ; ಸಾವಿನ ಸಂಖ್ಯೆ ಮತ್ತಷ್ಟು ಏರುವ ಭೀತಿ!
ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಕಾಲ್ತುಳಿತವು "ತೀವ್ರ ದುಃಖಕರ" ಎಂದು ಹೇಳಿದ್ದಾರೆ. "ಖಾಸಗಿ ಅಧಿಕಾರಿಗಳ ನಿರ್ವಹಣೆಯಲ್ಲಿರುವ ದೇವಾಲಯದಲ್ಲಿ ನಡೆದ ಈ ದುರಂತ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು. ಕಾರ್ತಿಕ ಮಾಸದಲ್ಲಿ, ರಾಜ್ಯಾದ್ಯಂತ ಪ್ರಮುಖ ದೇವಾಲಯಗಳು ಮತ್ತು ಶೈವ ದೇವಾಲಯಗಳಿಗೆ ಹೆಚ್ಚಿನ ಜನಸಮೂಹ ಭೇಟಿ ನೀಡುತ್ತದೆ. ಸರಿಯಾದ ಸರತಿ ಸಾಲು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಯಾವುದೇ ಅನಾನುಕೂಲತೆಯನ್ನು ಎದುರಿಸದಂತೆ ನೋಡಿಕೊಳ್ಳಲು ದತ್ತಿ ಇಲಾಖೆ ಅಧಿಕಾರಿಗಳನ್ನು ನಾನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.