ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೋಶಿಯಲ್‌ ಮೀಡಿಯಾ ಬಳಸಲು ಮಕ್ಕಳಿಗೆ ಹೆತ್ತವರೇ ಪ್ರೇರಣೆ; ರಾಜ್ಯಸಭೆಯಲ್ಲಿ ಸುಧಾ ಮೂರ್ತಿ ಕಳವಳ

Sudha Murthy: ಸೋಶಿಯಲ್‌ ಮೀಡಿಯಾದಲ್ಲಿ ಮಕ್ಕಳನ್ನು ಹೆತ್ತವರೇ ಪ್ರದರ್ಶಿಸುತ್ತಿರುವ ಬಗ್ಗೆ ರಾಜ್ಯಸಭೆಯಲ್ಲಿ ಸುಧಾ ಮೂರ್ತಿ ತೀವ್ರ ಕಳವಳ ವ್ಯಕ್ತಪಡಿಸಿದರು. ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದರು. ಹೆತ್ತವರು ತಮ್ಮ ಮಕ್ಕಳನ್ನು ಸಾಮಾಜಿಕ ಮಾಧ್ಯಮಕ್ಕೆ ಒಡ್ಡಿಕೊಳ್ಳದಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು.

ಮಕ್ಕಳ ಸೋಶಿಯಲ್‌ ಮೀಡಿಯಾ ಬಳಕೆ ಬಗ್ಗೆ ಸುಧಾ ಮೂರ್ತಿ ಕಳವಳ

ಸುಧಾ ಮೂರ್ತಿ (ಸಂಗ್ರಹ ಚಿತ್ರ) -

Priyanka P
Priyanka P Dec 6, 2025 7:28 PM

ನವದೆಹಲಿ, ಡಿ. 6: ಇತ್ತೀಚೆಗೆ ವಯಸ್ಕರು ಮಾತ್ರವಲ್ಲದೆ ಮಕ್ಕಳು ಕೂಡ ಸೋಶಿಯಲ್‌ ಮೀಡಿಯಾ ಬಳಸುವುದು ಹೆಚ್ಚಾಗುತ್ತಿದೆ. ಲೈಕ್ಸ್, ವೀವ್ಸ್‌ಗಾಗಿ ಹೆತ್ತವರೇ ಮಕ್ಕಳಿಂದ ರೀಲ್ಸ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ (social media) ಹಂಚಿಕೊಳ್ಳುತ್ತಿದ್ದಾರೆ. ಹೆತ್ತವರು ತಮ್ಮ ಮಕ್ಕಳನ್ನು ಆನ್‌ಲೈನ್‌ನಲ್ಲಿ ಪ್ರದರ್ಶಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸಂಸದೆ ಸುಧಾ ಮೂರ್ತಿ (Sudha Murthy) ತಿಳಿಸಿದ್ದಾರೆ. ಇದು ಮಕ್ಕಳ ಮೇಲೆ ದೀರ್ಘಕಾಲೀನ ಮಾನಸಿಕ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳನ್ನು ಚಿತ್ರಿಸುವುದಕ್ಕೆ ಮಾನದಂಡ ನಿಗದಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಅವರು ಆಗ್ರಹಿಸಿದರು.

ಶೂನ್ಯ ವೇಳೆಯಲ್ಲಿ ಸಂಸದೆ ಈ ವಿಷಯವನ್ನು ಪ್ರಸ್ತಾಪಿಸಿ, ಫ್ರಾನ್ಸ್‌ನಂತಹ ಹಲವು ಮುಂದುವರಿದ ದೇಶಗಳು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ ಎಂದು ಹೇಳಿದರು. ಭಾರತವು ಸಹ ಇದೇ ರೀತಿಯ ನಿಯಮಗಳನ್ನು ಪರಿಚಯಿಸಲು ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ತಾವು ಕಲಿತ ಶಾಲೆಗೆ 4 ಕೋಟಿ ರೂ. ವೆಚ್ಚ ಮಾಡಿ ಮರುಜೀವ ನೀಡಿದ ಸುಧಾ ಮೂರ್ತಿ

ಸಾವಿರಾರು ಅಥವಾ ಲಕ್ಷಾಂತರ ಅನುಯಾಯಿಗಳನ್ನು ಆಕರ್ಷಿಸಲು ಮಕ್ಕಳನ್ನು ಬಳಸುವ ಹೆತ್ತವರ ಮನಸ್ಥಿತಿಯನ್ನು ಸುಧಾ ಮೂರ್ತಿ ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ. ಈ ವಿಡಿಯೊಗಳು ಹೆತ್ತವರ ಆದಾಯದ ಮೂಲ. ಆದರೆ ಇದರಿಂದ ಮಕ್ಕಳು ತಮ್ಮ ಮುಗ್ಧತೆಯನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಾರೆ. ಇದು ಅವರಿಗೆ ಮೂಲಭೂತ ಸಾಮಾಜಿಕ ಕೌಶಲಗಳು, ಕ್ರೀಡೆಗಳನ್ನು ಕಲಿಯಲು ಸಾಧ್ಯವಾಗದಿರಬಹುದು. ಅವರು ಶಿಕ್ಷಣದತ್ತಲೂ ಗಮನಹರಿಸಲು ಸಾಧ್ಯವಾಗದಿರಬಹುದು ಎಂದು ಅವರು ಹೇಳಿದರು.

ವಿಡಿಯೊ ವೀಕ್ಷಿಸಿ:



ಮಕ್ಕಳಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ. ಆದರೆ ಪೋಷಕರು ಎಚ್ಚರವಹಿಸಬೇಕು. ಮಕ್ಕಳ ಹಕ್ಕುಗಳನ್ನು ಸಾಮಾಜಿಕ ಜಾಲತಾಣದಿಂದ ಹೇಗೆ ರಕ್ಷಿಸಬಹುದು ಎಂಬುದನ್ನು ಮರುಮೌಲ್ಯಮಾಪನ ಮಾಡುವಂತೆ ಆಗ್ರಹಿಸಿದರು. ಸಾಮಾಜಿಕ ಮಾಧ್ಯಮದ ಜನಪ್ರಿಯತೆ ಮತ್ತು ಅನುಕೂಲಗಳನ್ನು ಒಪ್ಪಿಕೊಂಡರೂ ಸಹ, ಮಕ್ಕಳನ್ನು ಉತ್ತಮ ಮೌಲ್ಯ ವ್ಯವಸ್ಥೆಯಲ್ಲಿ ಬೆಳೆಸುವುದು ಮತ್ತು ಉತ್ತಮ ಶಿಕ್ಷಣ ಹಾಗೂ ಇತರ ಕೌಶಲ ನೀಡುವುದು ಅಗತ್ಯ ಎಂದು ಸುಧಾ ಮೂರ್ತಿ ಒತ್ತಿ ಹೇಳಿದರು.

ಜಾಹೀರಾತುಗಳಲ್ಲಿ ಮತ್ತು ಚಲನಚಿತ್ರೋದ್ಯಮದಲ್ಲಿ ಮಕ್ಕಳ ಚಿತ್ರಣವನ್ನು ನಿಯಂತ್ರಿಸುವಲ್ಲಿ ಸರ್ಕಾರವು ಕೆಲವು ಶ್ಲಾಘನೀಯ ಕೆಲಸಗಳನ್ನು ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕ್ಷೇತ್ರಗಳಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಯನ್ನು ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳ ಹಕ್ಕನ್ನು ರಕ್ಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ನೂತನ ಕಾನೂನು ಜಾರಿಗೆ ಬರಬೇಕು ಎಂದು ಅವರು ಒತ್ತಿ ಹೇಳಿದರು.

ಸಾಮಾಜಿಕ ಮಾಧ್ಯಮವು ಚಾಕುವಿದ್ದಂತೆ. ಅದು ಹಣ್ಣನ್ನು ಕತ್ತರಿಸೋದಕ್ಕೂ ಸಹಕಾರಿ, ಹಾಗೆಯೇ ಅದರಿಂದ ವ್ಯಕ್ತಿಯನ್ನು ಕೊಲ್ಲಬಹುದು. ಹೀಗಾಗಿ ನಿಮ್ಮ ಆಯ್ಕೆ ಯಾವುದೆಂದು ತಿಳಿದುಕೊಳ್ಳಿ. ಸಾಮಾಜಿಕ ಮಾಧ್ಯಮಕ್ಕೆ ಹೆಚ್ಚು ಅಂಟಿಕೊಂಡರೆ, ಮಕ್ಕಳು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾದೀತು. ಅವರ ಉಡುಗೆ ತೊಡುಗೆಯ ಮೇಲೆ ಕೆಲವು ನಿರ್ಬಂಧಗಳನ್ನು ಹೇರಬೇಕು ಎಂದು ಅವರು ಹೇಳಿದರು. ನಮ್ಮ ಮುಂದಿನ ಪೀಳಿಗೆಯ ಮಕ್ಕಳನ್ನು ಬೆಳೆಸುವ ವಿಧಾನ ಇದಲ್ಲ. ಮಕ್ಕಳ ಬಾಲ್ಯವನ್ನು ಬಲಿ ಕೊಡಬೇಡಿ ಎಂದು ಅವರು ಹೆತ್ತವರಲ್ಲಿ ಮನವಿ ಮಾಡಿದರು.