ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಸತಿ ಹಂಚಿಕೆ ಮಾಡುವುದಾಗಿ ಹಣ ಪಡೆದು ವಂಚಿಸಿದ ಟಿಎಂಸಿ ಮುಖಂಡನ ವಿರುದ್ಧ ಆಕ್ರೋಶ; ಮಂಚದ ಕೆಳಗೆ ಅಡಗಿ ಕುಳಿತರೂ ಬಿಡಲಿಲ್ಲ ಜನ

TMC Leader hiding under a bed: ಜನಾಕ್ರೋಶಕ್ಕೆ ತುತ್ತಾದ ತೃಣಮೂಲ ಕಾಂಗ್ರೆಸ್‌ನ ಮುಖಂಡ ಮಂಚದ ಕೆಳಗೆ ಅಡಗಿ ಕುಳಿತಿದ್ದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಸತಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಜನರು ಮುತ್ತಿಗೆ ಹಾಕಿದಾಗ, ಹೆದರಿದ ಮುಖಂಡ ಅಡಗಿ ಕುಳಿತಿದ್ದಾನೆ.

ಮಂಚದ ಕೆಳಗೆ ಅಡಗಿ ಕುಳಿತ ಟಿಎಂಸಿ ನಾಯಕ; ಇಲ್ಲಿದೆ ವಿಡಿಯೊ

ಮಂಚದ ಕೆಳಗೆ ಅಡಗಿ ಕುಳಿತ ಟಿಎಂಸಿ ಮುಖಂಡ ಸಾಹಿದುಲ್ ಮಿಯಾ -

Priyanka P
Priyanka P Jun 4, 2026 9:00 PM

ಕೋಲ್ಕತ್ತಾ, ಜೂ. 4: ವಸತಿ ಹಂಚಿಕೆ ಮಾಡುವುದಾಗಿ ಹಣ ಪಡೆದು ವಂಚಿಸಿದ ಟಿಎಂಸಿ (Trinamool Congress) ಮುಖಂಡ ಜನರ ಆಕ್ರೋಶಕ್ಕೆ ಬೆದರಿ ಮಂಚದ ಅಡಿಯಲ್ಲಿ ಅಡಗಿ ಕುಳಿತ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಆಕ್ರೋಶಗೊಂಡ ಗ್ರಾಮಸ್ಥರ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕೊನೆಗೆ ದಿಕ್ಕು ತೋಚನೆ ಮಂಚದ ಕೆಳಗೆ ತೂರಿದ ಟಿಎಂಸಿ ಮುಖಂಡನನ್ನು ಸಾಹಿದುಲ್ ಮಿಯಾ ಎಂದು ಗುರುತಿಸಲಾಗಿದೆ. ಆತನನ್ನು ಹೊರಗೆಳೆದ ಸಾರ್ವಜನಿಕರು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಘಟನೆ ಮಠಭಂಗ I ಬ್ಲಾಕ್ ವ್ಯಾಪ್ತಿಯ ಜೋರ್ಪಾರ್ಕಿ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಸದ್ಯ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ. ಸಾಹಿದುಲ್ ಮಿಯಾ ವಿರುದ್ಧ ವಸತಿ ಯೋಜನೆಯಡಿ ಸರ್ಕಾರಿ ಮನೆಗಳನ್ನು ಮಂಜೂರು ಮಾಡುವ ಭರವಸೆಯ ಮೇರೆಗೆ ಸ್ಥಳೀಯ ನಿವಾಸಿಗಳಿಂದ ಹಣವನ್ನು ಸಂಗ್ರಹಿಸಿದ ಆರೋಪವಿದೆ. ಕಟ್ ಮನಿ ಹೆಸರಿನಲ್ಲಿ ಹಣವನ್ನು ವಸೂಲಿ ಮಾಡಲಾಗಿದ್ದು, ಅದಕ್ಕೆ ಪ್ರತಿಯಾಗಿ ಯಾವುದೇ ವಸತಿ ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಲ್ಲಿದೆ ವಿಡಿಯೊ:



ಮೇ 25ರಂದು ಮಹಿಳೆಯರ ಗುಂಪೊಂದು ಮಿಯಾ ಮನೆಯ ಹೊರಗೆ ತಮ್ಮ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದಾಗಿನಿಂದ ಆ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ. ಬುಧವಾರ (ಜೂನ್‌ 3) ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಗುಂಪು ಮತ್ತೆ ಅವರ ಮನೆಯತ್ತ ಧಾವಿಸಿತು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಹೆದರಿದ ಮಿಯಾ ಮಲಗುವ ಕೋಣೆಗೆ ತೆರಳಿ ಮಂಚದ ಕೆಳಗೆ ಅಡಗಿಕೊಂಡಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿದಾಗ ಮಿಯಾ ಮಂಚದ ಕೆಳಗೆ ಅಡಗಿಕೊಂಡಿರುವುದನ್ನು ಗಮನಿಸಿದರು. ನಂತರ ಆತನನ್ನು ಹೊರಗೆಳೆದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.

ಅಭಿಷೇಕ್ ಬ್ಯಾನರ್ಜಿ ನಂತರ ಮತ್ತೋರ್ವ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ

5,000-20,000 ರುಪಾಯಿ ಲಂಚ

ಸ್ಥಳೀಯರ ಪ್ರಕಾರ, ಸಾಹಿದುಲ್ ಮಿಯಾ ಹಲವರಿಂದ 5,000 ರುಪಾಯಿಯಿಂದ 20,000 ರುಪಾಯಿವರೆಗೆ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟು ಸುಮಾರು 8 ಲಕ್ಷ ರುಪಾಯಿವರೆಗೆ ಸಂಗ್ರಹಿಸಿದ್ದಾನೆ ಎಂದು ಅಂದಾಜಿಸಲಾಗಿದೆ. ಸರ್ಕಾರಿ ವಸತಿ ಹಂಚಿಕೆ ಮಾಡುವುದಾಗಿ ಭರವಸೆ ನೀಡಿ ಈ ಹಣವನ್ನು ಪಡೆಯಲಾಗಿದೆ. ಆದರೆ ಅದು ಎಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಜನರು ಆರೋಪಿಸಿದ್ದಾರೆ. ನಮ್ಮ ಹಣ ನಮಗೆ ವಾಪಸ್ ನೀಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಸಾಹಿದುಲ್ ಮಿಯಾನನ್ನು ಮಠಭಂಗ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಸುಲಿಗೆ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭ್ರಷ್ಟಾಚಾರ, ಸುಲಿಗೆ ಹಾಗೂ ಹಲ್ಲೆ ಸೇರಿ ಗಂಭೀರ ಅಪರಾಧಗಳ ಆರೋಪಗಳ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಪಶ್ಚಿಮ ಬಂಗಾಳದಾದ್ಯಂತ ನಡೆಯುತ್ತಿರುವ ತೀವ್ರ ಕಾರ್ಯಾಚರಣೆಯ ನಡುವೆಯೇ ಈ ಘಟನೆ ನಡೆದಿದೆ.

ಕೌನ್ಸಿಲರ್ ಬಂಧನ

ಬುಧವಾರ (ಜೂನ್‌ 3) ಕೋಲ್ಕತ್ತಾ ಮಹಾನಗರ ಪಾಲಿಕೆಯ ಕೌನ್ಸಿಲರ್ ಒಬ್ಬನನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರ ಮೇಲೆ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಆತನನ್ನು ಬಂಧಿಸಲಾಯಿತು. ಜೂನ್ 1ರಂದು ಪುರ್ಬಾ ಪುಟಿಯರಿ ಪ್ರದೇಶದ ಮಹಿಳೆಯೊಬ್ಬರು ರೀಜೆಂಟ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ವಾರ್ಡ್ ಸಂಖ್ಯೆ 114 ಅನ್ನು ಪ್ರತಿನಿಧಿಸುವ ಆರೋಪಿ ಬಿಸ್ವಜಿತ್ ಮೊಂಡಲ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂನ್ 2ರಂದು ವಾರ್ಡ್ ಸಂಖ್ಯೆ 106ರ ಕೌನ್ಸಿಲರ್‌ ಅರಿಜಿತ್ ದಾಸ್ ಠಾಕೂರ್ ಮತ್ತು ವಾರ್ಡ್ ಸಂಖ್ಯೆ 36ರ ಸಚಿನ್ ಸಿಂಗ್ ಅವರನ್ನು ಸುಲಿಗೆ ಆರೋಪಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಯಿತು. ಒಂದು ದಿನದ ನಂತರ, ವಾರ್ಡ್ ಸಂಖ್ಯೆ 2ರ ಕೌನ್ಸಿಲರ್ ಮಹೇಶ್ ಕುಮಾರ್ ಶರ್ಮಾ ಅವರನ್ನು ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಬಂಧಿಸಲಾಯಿತು.