ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ತನ್ನ ಕಣ್ಮುಂದೆಯೇ ಜನರು ಕೊಚ್ಚಿಕೊಂಡು ಹೋದರು”: ನೇಪಾಳ ಪ್ರವಾಹದಲ್ಲಿ ಬದುಕುಳಿದ ವ್ಯಕ್ತಿ ಹೇಳಿದ್ದೇನು?

Nepal flood survivor: ನೇಪಾಳದಲ್ಲಿ 1,200 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಮತ್ತು ಸುಮಾರು 4,800 ಜನರನ್ನು ಕಾಣೆಯಾದ ಭೀಕರ ಪ್ರವಾಹದಿಂದ ಬದುಕುಳಿದ ಉತ್ತರ ಪ್ರದೇಶದ ಗೋರಖ್‌ಪುರದ ವ್ಯಕ್ತಿಯೊಬ್ಬರು ದುರಂತದ ಘಟನೆ ಬಗ್ಗೆ ಮಾತನಾಡಿದ್ದಾರೆ. ತಾವು ಬದುಕುಳಿದದ್ದೇ ಒಂದು ಪವಾಡ ಎಂದು ಅವರು ಹೇಳಿದ್ದಾರೆ.

ನೇಪಾಳ ಪ್ರವಾಹದಲ್ಲಿ ಬದುಕುಳಿದ ವ್ಯಕ್ತಿ ಹೇಳಿದ ಕಥೆಯಿದು

ನೇಪಾಳ ಪ್ರವಾಹ ದುರಂತ -

Priyanka P
Priyanka P Sep 3, 2026 5:52 PM

ಲಖನೌ, ಸೆ.3: ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ (Nepal flood) ಹಲವಾರು ಜನರು ಮೃತಪಟ್ಟಿದ್ದು, ಸಾವಿರಾರು ಮಂದಿ ಕಾಣೆಯಾಗಿದ್ದಾರೆ. ಅನೇಕ ಭಾರತೀಯರು ಕೂಡ ಪ್ರವಾಹದಲ್ಲಿ ಕಾಣೆಯಾಗಿದ್ದಾರೆ. ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ನೇಪಾಳ ದುರಂತದಲ್ಲಿ ಬದುಕುಳಿದ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಉತ್ತರ ಪ್ರದೇಶದ (Uttar Pradesh) ಗೋರಖ್‌ಪುರದ 22 ವರ್ಷದ ಅಶುತೋಷ್ ಉಪಾಧ್ಯಾಯ ಎಂಬುವವರು ಪ್ರತಿ ದಿನದಂತೆಯೇ ಕಳೆದ ವಾರ, ರಸುವಾ ಜಿಲ್ಲೆಯಲ್ಲಿರುವ ಪವರ್‌ಹೌಸ್‌ನಲ್ಲಿ (ವಿದ್ಯುತ್ ಸ್ಥಾವರ) ಕೆಲಸಕ್ಕೆ ತೆರಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಎಲ್ಲಿಂದಲೋ ಭಾರಿ ಪ್ರಮಾಣದ ಪ್ರವಾಹದ ನೀರು ನುಗ್ಗಿ ಬಂದಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ತೀವ್ರ ಆತಂಕವನ್ನು ಉಂಟುಮಾಡಿತು.

ಓಡಿ.. ಓಡಿ.. ವಿದ್ಯುತ್ ಸ್ಥಾವರಕ್ಕೆ ನೀರು ನುಗ್ಗುತ್ತಿದೆ ಎನ್ನುತ್ತಾ ಅಲ್ಲಿದ್ದವರು ಓಡಲು ಶುರು ಮಾಡಿದರು ಎಂದು ಅಶುತೋಷ್ ಹೇಳಿದರು. ಪ್ರವಾಹದ ನೀರು ಏರಲು ಪ್ರಾರಂಭಿಸುತ್ತಿದ್ದಂತೆ, ಕಾರ್ಮಿಕರು ಒಂದು ಬೆಟ್ಟವನ್ನು ಹತ್ತಿದರು. ರಾಹುಲ್ ಎಂಬ ಕಾರ್ಮಿಕ ಹೊರಬರಲಾರದೆ ವಿದ್ಯುತ್ ಸ್ಥಾವರದಲ್ಲೇ ಮೃತಪಟ್ಟ. ಕಣ್ಮುಂದೆಯೇ 30-40 ಜನರು ಪ್ರವಾಹಕ್ಕೆ ಕೊಚ್ಚಿಕೊಂಡು ಹೋದರು ಎಂದು ಹೇಳಿದರು.

ರಕ್ಷಣೆಗಾಗಿ ಕಾಯುತ್ತಾ ಬೆಟ್ಟಕ್ಕೆ ಹತ್ತಿದ್ದ ಕಾರ್ಮಿಕರನ್ನು, 24 ಗಂಟೆಗಳ ನಂತರ ರಕ್ಷಣಾ ತಂಡ ಆಗಮಿಸಿ ಅವರೆಲ್ಲರನ್ನೂ ತ್ರಿಶೂಲಿ ಸೇನಾ ಶಿಬಿರಕ್ಕೆ ಕರೆದೊಯ್ದರು. ಅಲ್ಲಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ನೀರಿನ ಪ್ರಮಾಣ ಎಷ್ಟು ಅಗಾಧವಾಗಿತ್ತೆಂದರೆ ತಾವು ಬದುಕಬಹುದು ಎಂದು ಅಂದುಕೊಂಡೇ ಇರಲಿಲ್ಲ ಎಂದು ತಿಳಿಸಿದರು.

ನೇಪಾಳ ಪ್ರವಾಹದ ವೇಳೆ ಕಂಡುಬಂದ ಹೃದಯವಿದ್ರಾವಕ ದೃಶ್ಯ: ಪುಟ್ಟ ತಂಗಿಯನ್ನು ಹೊತ್ತು ಪೋಷಕರನ್ನು ಹುಡುಕುತ್ತ ಹೊರಟ ಬಾಲಕ!

ವೈದ್ಯಕೀಯ ತಪಾಸಣೆಯ ನಂತರ, ಉಪಾಧ್ಯಾಯ ಮತ್ತು ಇತರರಿಗೆ ಕಠ್ಮಂಡುವಿನ ಹೋಟೆಲ್‌ನಲ್ಲಿ ವಸತಿ ಕಲ್ಪಿಸಲಾಯಿತು. ಅವರ ದಾಖಲೆಗಳು ಸಹ ಪ್ರವಾಹದಲ್ಲಿ ಕಳೆದುಹೋದವು. “ನಮ್ಮ ಎಲ್ಲಾ ಗುರುತಿನ ದಾಖಲೆಗಳನ್ನು ನಾವು ಕಳೆದುಕೊಂಡಿದ್ದೆವು. ಆದರೆ ರಾಯಭಾರ ಕಚೇರಿಯಿಂದ ಬದಲಿ ದಾಖಲೆಗಳನ್ನು ಪಡೆದ ನಂತರ, ನಾವು ಪ್ರಯಾಣಿಸಲು ಮತ್ತು ಗಡಿ ದಾಟಲು ಸಾಧ್ಯವಾಯಿತು” ಎಂದು ಅವರು ಹೇಳಿದರು.

“ನಾವು ಅಲ್ಲಿಂದ ಭಾರತದ ಗಡಿಯತ್ತ ಪ್ರಯಾಣಿಸಿದೆವು. ನಮ್ಮನ್ನು ಗಡಿಯಲ್ಲಿ ಬಿಡಲಾಯಿತು. ನಂತರ ನಾವು ಭಾರತವನ್ನು ತಲುಪಿದೆವು” ಎಂದು ಅವರು ಹೇಳಿದರು. ತಮ್ಮ ಮಗನ ಬಗ್ಗೆ ಯಾವುದೇ ಮಾಹಿತಿಯಿಲ್ಲದೆ ಉಪಾಧ್ಯಾಯ ಅವರ ಪೋಷಕರು ಆತಂಕಗೊಂಡಿದ್ದರು.

“ನಾವು ಆಗಸ್ಟ್ 25 ರಂದು ಮಾತನಾಡಿದ್ದೆವು. ತಮ್ಮ ಮಗ ಪ್ರತಿದಿನ ಸಂಜೆ ತಮಗೆ ಕರೆ ಮಾಡುತ್ತಾರೆ. ಆದರೆ, ಆತನ ಕರೆ ಬಾರದೇ ಇದ್ದುದರಿಂದ ಆತಂಕವಾಗಿತ್ತು. ಆಗಸ್ಟ್ 26ರ ಸಂಜೆ ಕರೆ ಮಾಡಿ ತಾನು ಚೆನ್ನಾಗಿರುವುದಾಗಿ ತಿಳಿಸಿದರು. ತಾವು ವಿಡಿಯೊ ಕರೆ ಮೂಲಕ ಮಾತನಾಡಿ ತಮ್ಮ ಮಗ ಬದುಕಿದ್ದಾನೆ ಎಂಬುದನ್ನು ಅರಿತುಕೊಂಡೆವು” ಎಂದು ದುಃಖಿತರಾಗಿ ಉಪಾಧ್ಯಾಯರ ತಾಯಿ ತಿಳಿಸಿದರು. ನೇಪಾಳಿ ಸೇನಾ ಸಿಬ್ಬಂದಿ ಮತ್ತು ವಿದೇಶಿ ತಜ್ಞರು ಸೇರಿದಂತೆ ರಕ್ಷಣಾ ತಂಡಗಳು ಜಲವಿದ್ಯುತ್ ಸುರಂಗಗಳಲ್ಲಿ ಸಿಲುಕಿಕೊಂಡಿರಬಹುದಾದ ಸಂತ್ರಸ್ತರಿಗಾಗಿ ಹುಡುಕಾಟ ಮುಂದುವರೆಸಿವೆ.