ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪುರಿಯ ಜಗನ್ನಾಥ ದೇವಾಲಯದ ಹೆಸರಿನಲ್ಲಿರುವ ಆಸ್ತಿ ಎಷ್ಟು? ಸಾವಿರ ಕೋಟಿ ಒಡೆಯನ ಸಂಪತ್ತಿನ ವಿವರ ಬಹಿರಂಗ

Puri Jagannath Temple: ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯವು ಸುಮಾರು 1,912 ಕೋಟಿ ರೂಪಾಯಿಗಳ ಬ್ಯಾಂಕ್ ಠೇವಣಿಗಳನ್ನು ಹೊಂದಿದೆ ಮತ್ತು ದೇಶಾದ್ಯಂತ 60,821 ಎಕರೆ ಜಮೀನನ್ನು ಹೊಂದಿದೆ. ಆಗಸ್ಟ್ 31ರ ವೇಳೆಗೆ ದೇವಾಲಯವು ವಿವಿಧ ಉಳಿತಾಯ, ಚಾಲ್ತಿ ಮತ್ತು ಫ್ಲೆಕ್ಸಿ ಖಾತೆಗಳಲ್ಲಿ ರೂ. 100.71 ಕೋಟಿಗಳನ್ನು ಹೊಂದಿದ್ದು, ಒಟ್ಟು ಬ್ಯಾಂಕ್ ಠೇವಣಿ ಸುಮಾರು ರೂ. 1,911.80 ಕೋಟಿಗಳಿಗೆ ತಲುಪಿವೆ.

ಪುರಿಯ ಜಗನ್ನಾಥ ದೇವಾಲಯದ ಹೆಸರಿನಲ್ಲಿರುವ ಆಸ್ತಿ ಎಷ್ಟು?

ಪುರಿ ಜಗನ್ನಾಥ ದೇವಾಲಯ (ಸಂಗ್ರಹ ಚಿತ್ರ) -

Priyanka P
Priyanka P Sep 3, 2026 3:51 PM

ಭುವನೇಶ್ವರ, ಸೆ.3: ಭಾರತದ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ (Puri Jagannath Temple) ಅಪಾರ ಆಸ್ತಿ ಹಾಗೂ ಸಂಪತ್ತಿನ ಅಧಿಕೃತ ವಿವರಗಳು ಬಹಿರಂಗಗೊಂಡಿದೆ. ಇತ್ತೀಚೆಗೆ ಹಂಚಿಕೊಂಡ ಅಧಿಕೃತ ಮಾಹಿತಿಯ ಪ್ರಕಾರ, ಜಗನ್ನಾಥ ದೇವಾಲಯವು ಸುಮಾರು 1,912 ಕೋಟಿ ರೂಪಾಯಿಗಳ ಬ್ಯಾಂಕ್ ಠೇವಣಿಗಳನ್ನು ಹೊಂದಿದೆ ಮತ್ತು ದೇಶಾದ್ಯಂತ 60,821 ಎಕರೆ ಜಮೀನನ್ನು ಹೊಂದಿದೆ. ಇದರೊಂದಿಗೆ ದೇವಾಲಯದ ರತ್ನ ಭಂಡಾರದಲ್ಲಿ ಇರಿಸಲಾಗಿರುವ ಅಪಾರ ಚಿನ್ನ ಮತ್ತು ವಜ್ರದ ಆಭರಣಗಳನ್ನು ಸಹ ಇದು ಹೊಂದಿದೆ.

ಜಗನ್ನಾಥ ದೇವಾಲಯ ಆಡಳಿತ ಮಂಡಳಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಆಗಸ್ಟ್ 31ರ ವೇಳೆಗೆ ರೂ. 1,811.10 ಕೋಟಿ ಸ್ಥಿರ ಠೇವಣಿಗಳಿವೆ. ಇದರಲ್ಲಿ ರೂ. 1,311.10 ಕೋಟಿ ವಿವಿಧ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದ್ದು, ಇನ್ನುಳಿದ ರೂ. 500 ಕೋಟಿ ಒಡಿಶಾ ಸರ್ಕಾರ ಒದಗಿಸಿರುವ ದತ್ತಿ ನಿಧಿಯಾಗಿದ್ದು, ಇದನ್ನು ದೇವಾಲಯದ ಲಾಭ ಮತ್ತು ನಷ್ಟದ ಖಾತೆಯಲ್ಲಿ ಇರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆಗಸ್ಟ್ 31ರ ವೇಳೆಗೆ ದೇವಾಲಯವು ವಿವಿಧ ಉಳಿತಾಯ, ಚಾಲ್ತಿ ಮತ್ತು ಫ್ಲೆಕ್ಸಿ ಖಾತೆಗಳಲ್ಲಿ ರೂ. 100.71 ಕೋಟಿಗಳನ್ನು ಹೊಂದಿದ್ದು, ಒಟ್ಟು ಬ್ಯಾಂಕ್ ಠೇವಣಿಗಳು ಸುಮಾರು ರೂ. 1,911.80 ಕೋಟಿಗಳಿಗೆ ತಲುಪಿವೆ. ಭಕ್ತರ ದೇಣಿಗೆಗಳು, ದೇವಾಲಯದ ಒಡೆತನದ ಕಲ್ಲುಕ್ವಾರಿಗಳು ಹಾಗೂ ಗಣಿಗಳಿಂದ ಬರುವ ಆದಾಯ, ಸ್ಥಿರ ಠೇವಣಿಗಳ ಮೇಲಿನ ಬಡ್ಡಿ, ಭೂಮಿ ಮಾರಾಟ ಮತ್ತು ಸ್ವಾಧೀನ ಹಾಗೂ ಸರ್ಕಾರದ ಅನುದಾನಗಳಿಂದಲೇ ಮುಖ್ಯವಾಗಿ ದೇವಾಲಯಕ್ಕೆ ಆದಾಯ ಹರಿದುಬರುತ್ತದೆ ಎಂದು ಎಸ್‌ಜೆಟಿಎ (SJTA) ತಿಳಿಸಿದೆ.

ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ; ಓರ್ವ ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

“ಆದಾಯದ ಕೆಲವು ನಿರ್ದಿಷ್ಟ ಭಾಗವನ್ನು ದತ್ತಿ ನಿಧಿಯಾಗಿ ಮತ್ತು ಇನ್ನೊಂದು ಭಾಗವನ್ನು ಮೂಲ ನಿಧಿಯಾಗಿ ಸ್ಥಿರ ಠೇವಣಿಗಳಲ್ಲಿ (fixed deposits) ಇರಿಸಲಾಗುತ್ತದೆ. ಇನ್ನುಳಿದ ಆದಾಯವನ್ನು ದೇವಾಲಯದ ಸಾಮಾನ್ಯ ನಿಧಿಯಲ್ಲಿ (temple fund) ಇಡಲಾಗುತ್ತದೆ” ಎಂದು ಎಸ್‌ಜೆಟಿಎ ಮುಖ್ಯ ಆಡಳಿತಾಧಿಕಾರಿ ಅರಬಿಂದ್ ಪಾಢಿ ತಿಳಿಸಿದ್ದಾರೆ.

ದೇವಾಲಯದ ದೈನಂದಿನ ಖರ್ಚುಗಳನ್ನು ದೇವಾಲಯದ ನಿಧಿಯಿಂದ ಪೂರೈಸಲಾಗುತ್ತದೆ. ಉಳಿದ ಮೊತ್ತವನ್ನು ಸ್ಥಿರ ಠೇವಣಿಗಳಲ್ಲಿ ಇಡಲಾಗುತ್ತದೆ ಎಂದು ಅವರು ಹೇಳಿದರು. ದೇವಾಲಯದ ಹುಂಡಿ ದೇಣಿಗೆಗಳನ್ನು ಪ್ರತಿದಿನ ಎಣಿಸಲಾಗುತ್ತದೆ. ಇದನ್ನು ಸಾರ್ವಜನಿಕರಿಗೆ ತಿಳಿಸಲು ವಿವರಗಳನ್ನು ಮಾಹಿತಿ ಫಲಕಗಳಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಈ ವರ್ಷದ ಜುಲೈ 15 ರಂದು ರಥಯಾತ್ರೆಗೆ ಸ್ವಲ್ಪ ಮೊದಲು ದೇವಾಲಯವು ಸಮರ್ಪಣ್ ಎಂಬ ಡಿಜಿಟಲ್ ದೇಣಿಗೆ ವೇದಿಕೆಯನ್ನು ಪ್ರಾರಂಭಿಸಿತು. ಆಗಸ್ಟ್ 31 ರ ಹೊತ್ತಿಗೆ, ಭಕ್ತರು ಡಿಜಿಟಲ್ ವೇದಿಕೆ ಮೂಲಕ ರೂ. 56.71 ಲಕ್ಷ ದೇಣಿಗೆ ನೀಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ದೇವಾಲಯದ ಚಿನ್ನ, ವಜ್ರ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ರತ್ನ ಭಂಡಾರದಲ್ಲಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ. ಕಳೆದ 25 ವರ್ಷಗಳಲ್ಲಿ ದೇವಾಲಯದಲ್ಲಿ ನಗದು, ಆಭರಣಗಳು ಮತ್ತು ವಿಗ್ರಹಗಳ ಕಳ್ಳತನಕ್ಕೆ ಸಂಬಂಧಿಸಿದ ಕನಿಷ್ಠ ಏಳು ಘಟನೆಗಳು ವರದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.