ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಮೋದಿ-ವ್ಯಾನ್ಸ್ ದ್ವಿಪಕ್ಷೀಯ ಮಾತುಕತೆ; ವ್ಯಾಪಾರ ಒಪ್ಪಂದಕ್ಕೆ ಆದ್ಯತೆ

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರು ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿದ್ದು, ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡಿದ್ದಾರೆ. ಅವರ ಪತ್ನಿ ಉಷಾ ವ್ಯಾನ್ಸ್‌ ಹಾಗೂ ಮೂವರು ಮಕ್ಕಳು ದೆಹಲಿಗೆ ಬಂದಿಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತಮ್ಮ ಅಧಿಕೃತ ನಿವಾಸದಲ್ಲಿ ಅವರನ್ನು ಸ್ವಾಗತಿಸಿದ್ದಾರೆ.

ಮೋದಿ-ವ್ಯಾನ್ಸ್ ದ್ವಿಪಕ್ಷೀಯ ಮಾತುಕತೆ

Profile Vishakha Bhat Apr 21, 2025 10:07 PM

ನವದೆಹಲಿ: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರು ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿದ್ದು, ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡಿದ್ದಾರೆ. ಅವರ ಪತ್ನಿ ಉಷಾ ವ್ಯಾನ್ಸ್‌ ಹಾಗೂ ಮೂವರು ಮಕ್ಕಳು ದೆಹಲಿಗೆ ಬಂದಿಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ತಮ್ಮ ಅಧಿಕೃತ ನಿವಾಸದಲ್ಲಿ ಅವರನ್ನು ಸ್ವಾಗತಿಸಿದ್ದಾರೆ. ಅಮೆರಿಕ ಉಪಾಧ್ಯಕ್ಷರು, ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಅಮೆರಿಕ-ಚೀನಾ ವ್ಯಾಪಾರ ಯುದ್ಧದಿಂದಾಗಿ ನಡೆಯುತ್ತಿರುವ ಜಾಗತಿಕ ಅನಿಶ್ಚಿತತೆಯ ನಡುವೆ ಉಭಯ ನಾಯಕರ ನಡುವಿನ ಮಾತುಕತೆ ಮಹತ್ವ ಪಡೆದುಕೊಂಡಿದ್ದು, ವ್ಯಾಪಾರ ಒಪ್ಪಂದದತ್ತ ಗಮನ ಹರಿಸುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಭೇಟಿಯಾದಾಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಶುಭಾಶಯ ಕೋರಿದರು ಮತ್ತು ಈ ವರ್ಷದ ಕೊನೆಯಲ್ಲಿ ಟ್ರಂಪ್ ಅವರ ಭಾರತ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಭಾರತ-ಅಮೆರಿಕ ಜಾಗತಿಕ ಕಾರ್ಯತಂತ್ರದ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳ ಕುರಿತು ಹಾಗೂ ವಾಷಿಂಗ್ಟನ್‌ನ ವ್ಯಾಪಾರ ನೀತಿಯ ಬಗ್ಗೆ ಭಾರತದ ಕಳವಳಗಳ ಕುರಿತು ಇಬ್ಬರೂ ನಾಯಕರು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಮಾತುಕತೆಯ ನಂತರ, ಪ್ರಧಾನ ಮಂತ್ರಿಯವರು ವ್ಯಾನ್ಸ್, ಅವರ ಭಾರತೀಯ ಮೂಲದ ಪತ್ನಿ ಉಷಾ ಚಿಲುಕುರಿ ಮತ್ತು ಉಪಾಧ್ಯಕ್ಷರೊಂದಿಗೆ ಇರುವ ಹಿರಿಯ ಯುಎಸ್ ಸರ್ಕಾರಿ ಅಧಿಕಾರಿಗಳ ನಿಯೋಗಕ್ಕೆ ಭೋಜನ ಕೂಟವನ್ನು ಆಯೋಜಿಸಲಾಗಿದೆ. ಜೆಡಿ ವ್ಯಾನ್ಸ್‌ ಮಕ್ಕಳು ಪ್ರಧಾನಿ ಮೋದಿ ತಮ್ಮ ಬಂಗಲೆಯ ಲಾನ್​ನಲ್ಲಿರುವ ನವಿಲುಗಳನ್ನು ನೋಡಿ ಖುಷಿಪಟ್ಟಿದ್ದಾರೆ. ಬಳಿಕ ಪ್ರಧಾನಿ ಮೋದಿ ಜೆಡಿ ವ್ಯಾನ್ಸ್ ಅವರ ಮೂವರು ಮಕ್ಕಳಿಗೂ ನವಿಲುಗರಿಗಳನ್ನು ನೀಡಿದ್ದಾರೆ. ಅದನ್ನು ಹಿಡಿದು ಆ ಮಕ್ಕಳು ಕುಣಿದಾಡಿರುವ ವಿಡಿಯೋ ವೈರಲ್ ಆಗಿದೆ.

ಈ ಸುದ್ದಿಯನ್ನೂ ಓದಿ: JD Vance: ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಂದು ಭಾರತಕ್ಕೆ ಭೇಟಿ-ದೆಹಲಿಯಲ್ಲಿ ಹೈ ಸೆಕ್ಯೂರಿಟಿ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆರಂಭದಲ್ಲಿಯೇ ಭಾರತಕ್ಕೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭೇಟಿ ನೀಡುತ್ತಿರುವುದು ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದು ಅಮೆರಿಕಕ್ಕೆ ಭಾರತದ ಮಾಜಿ ರಾಯಭಾರಿ ತರಂಜಿತ್ ಸಿಂಗ್ ಸಂಧು ಹೇಳಿದ್ದಾರೆ. ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಹಲವು ಆಯಾಮಗಳನ್ನು ಹೊಂದಿದೆ ಮತ್ತು ವ್ಯಾಪಾರ ಸಮಸ್ಯೆಗಳು ಸಹ ಬಗೆಹರಿಯುತ್ತವೆ ಎಂದು ಅವರು ಹೇಳಿದ್ದಾರೆ.