ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಜನ್ಮದಿನ; ಶುಭಾಶಯ ತಿಳಿಸಿದ ಪ್ರಧಾನಿ ಮೋದಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ 64ನೇ ವರ್ಷದ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಕೆಯ ಪತ್ರ ಬರೆದಿದ್ದಾರೆ. ದೇಶದ ಅಭಿವೃದ್ಧಿಗೆ ಜೋಶಿ ಅವರ ದೃಢ ಸಂಕಲ್ಪ ಮತ್ತು ಸಮರ್ಪಣಾ ಭಾವವನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಲ್ಹಾದ್ ಜೋಶಿ (ಸಂಗ್ರಹ ಚಿತ್ರ) -
ನವದೆಹಲಿ, ನ. 27: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ (Pralhad Joshi) ಗುರುವಾರ 64ನೇ ವರ್ಷದ ಜನ್ಮದಿನದ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಕೇಂದ್ರ ಸಚಿವರು ಹಾಗು ಬಿಜೆಪಿ ವರಿಷ್ಠರು ಅನೇಕರು ಜೋಶಿ ಅವರಿಗೆ ಶುಭ ಹಾರೈಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಚಿವ ಜೋಶಿ ಅವರಿಗೆ ಶುಭ ಹಾರೈಕೆಯ ಪತ್ರ ಬರೆದಿದ್ದಾರೆ. ದೇಶದ ಅಭಿವೃದ್ಧಿಗೆ ಜೋಶಿ ಅವರ ದೃಢ ಸಂಕಲ್ಪ ಮತ್ತು ಸಮರ್ಪಣಾ ಭಾವವನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಇಂದು ಜನ್ಮದಿನದ ಸಂಭ್ರಮದಲ್ಲಿರುವ ಪ್ರಹ್ಲಾದ್ ಜೋಶಿ ಅವರಿಗೆ ಹೆಚ್ಚಿನ ಆಯುರಾರೋಗ್ಯ ಮತ್ತು ಉನ್ನತ ಸ್ಥಾನಮಾನಗಳು ಲಭಿಸಿ ಸಂತೃಪ್ತಿ ಜೀವನ ದೊರೆಯಲಿ ಪ್ರಧಾನಿ ಶುಭ ಕೋರಿದ್ದಾರೆ. ಜೋಶಿ ಜನಸೇವೆ ಮತ್ತು ದೇಶದ ಕಲ್ಯಾಣಕ್ಕಾಗಿ ಅರ್ಪಿಸಿಕೊಂಡಿರುವುದಕ್ಕೆ ಅಪಾರ ಗೌರವವಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಮತ್ತು ರಾಷ್ಟ್ರಭಿವೃದ್ಧಿ ಕಾಯಕದಲ್ಲಿ ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ದೇಶದ ಸುಸ್ಥಿರತೆಯಲ್ಲಿ ಜೋಶಿ ಅವರ ಪ್ರಾಮಾಣಿಕ ಪ್ರಯತ್ನ ಅರ್ಥಪೂರ್ಣ ಬದಲಾವಣೆ ತಂದಿದೆ. ನವೀಕರಿಸಬಹುದಾದ ಇಂಧನ ವಲಯ, ಆಹಾರ ಭದ್ರತೆಯಲ್ಲಿನ ಬದ್ಧತೆ ಲಕ್ಷಾಂತರ ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ ಮೋದಿ ಶುಭ ಹಾರೈಕೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಧಾನಿ ಮೋದಿ ಅವರ ಎಕ್ಸ್ ಪೋಸ್ಟ್:
Best wishes to Shri Pralhad Joshi Ji on his birthday. His efforts to boost sustainable living by focusing on renewable energy are admirable. He is actively engaged in protecting consumer rights as well as ensuring food security for our people. Praying for his long and healthy…
— Narendra Modi (@narendramodi) November 27, 2025
ಕೇಂದ್ರ ಸಚಿವರಾದ ಅಮಿತ್ ಶಾ, ಪಿಯೂಷ್ ಗೋಯಲ್, ರಾಜನಾಥ್ ಸಿಂಗ್, ಅಶ್ವಿನಿ ವೈಷ್ಣವ್, ಎಚ್.ಡಿ. ಕುಮಾರಸ್ವಾಮಿ, ಶಿವರಾಜ್ ಸಿಂಗ್ ಚೌಹಾಣ್, ಜೈಶಂಕರ್, ಜೆ.ಪಿ. ನಡ್ಡಾ, ನಿರ್ಮಲಾ ಸೀತಾರಾಮನ್, ವಿ. ಸೋಮಣ್ಣ ಸೇರಿದಂತೆ ಕೇಂದ್ರದ ಹಿರಿಯ ಬಿಜೆಪಿ ನಾಯಕರು ಹಾಗು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಪ್ರಭಾಕರ್ ಕೋರೆ ಹೀಗೆ ಪಕ್ಷದ ನಾಯಕರು, ಪ್ರಮುಖರು ಮತ್ತು ಅಸಂಖ್ಯಾತ ಕಾರ್ಯಕರ್ತರು ಜೋಶಿ ಅವರಿಗೆ ಜನ್ಮದಿನದ ಶುಭ ಹಾರೈಸಿದ್ದಾರೆ.
ಸಿಎಂ ಅಲ್ಪಸಂಖ್ಯಾತರ ವಿಷಯದಲ್ಲಿ ಮಾತ್ರ ಅತೀ ಉದಾರಿ: ಪ್ರಲ್ಹಾದ್ ಜೋಶಿ
ಸರಳತೆ ಮೆರೆದ ಜೋಶಿ
ಇದೇ ವೇಳೆ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಜನ್ಮದಿನವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಿಕೊಳ್ಳಲು ಇಚ್ಛಿಸಿ, ಪಕ್ಷದ ಕಾರ್ಯಕರ್ತರಿಗೆ, ಹಿತೈಷಿಗಳು ಮತ್ತು ಅಭಿಮಾನಿಗಳಿಗೂ ಅದೇ ರೀತಿ ಕರೆ ನೀಡಿದರು. ಸಾರ್ವಜನಿಕ ಜೀವನದಲ್ಲಿರುವ ನಾನು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಬದಲಿಗೆ ಎಂದಿನಂತೆ ಜನಸೇವೆಯ ದಿನವಾಗಿದ್ದು, ದೆಹಲಿಯಲ್ಲಿ ಇಲಾಖೆಯಲ್ಲೇ ತೊಡಗಿಕೊಳ್ಳುತ್ತೇನೆ. ಹಾಗಾಗಿ ದಯಮಾಡಿ ಯಾವುದೇ ತರಹದ ಹೂ-ಗುಚ್ಚ, ಉಡುಗೊರೆ, ಬ್ಯಾನರ್ ಎಂದು ಅನಾವಶ್ಯಕ ಅದ್ದೂರಿತನದ ಪ್ರದರ್ಶನ ಬೇಡವೆಂದು ಮನವಿ ಮಾಡಿದರು.