ಕೊನೆಗೊಳ್ಳಲಿದೆ ರಾಷ್ಟ್ರಪತಿ ಆಳ್ವಿಕೆ ಅವಧಿ; ಮಣಿಪುರದ ಎನ್‌ಡಿಎ ಶಾಸಕರು ದೆಹಲಿಗೆ ದೌಡು
ಮಣಿಪುರದಲ್ಲಿ ಘರ್ಷಣೆ ಉದ್ಭವಾದ ಬಳಿಕ ಹೇರಿದ್ದ ರಾಷ್ಟ್ರಪತಿ ಆಳ್ವಿಕೆಯ ವಿಸ್ತರಣೆ ಅವಧಿಯು ಶೀಘ್ರದಲ್ಲೇ ಕೊನೆಗೊಳ್ಳಲಿದ್ದು, ಸರ್ಕಾರ ರಚನೆಯ ಊಹಾಪೋಹಗಳು ಎದ್ದಿವೆ. ಇದರ ಬೆನ್ನಲ್ಲೇ ಎನ್‌ಡಿಎ ಶಾಸಕರು ದೆಹಲಿಗೆ ಧಾವಿಸಿದ್ದಾರೆ. ಮಣಿಪುರದಲ್ಲಿ ಹೇರಿದ್ದ ರಾಷ್ಟ್ರಪತಿ ಆಳ್ವಿಕೆಯ ಆರು ತಿಂಗಳ ವಿಸ್ತರಣೆ ಅವಧಿ ಫೆಬ್ರವರಿ 12ರಂದು ಮುಕ್ತಾಯಗೊಳ್ಳಲಿದೆ.
ಎನ್ ಬಿರೇನ್ ಸಿಂಗ್ (ಸಂಗ್ರಹ ಚಿತ್ರ) -
ಇಂಫಾಲ್: ಮಣಿಪುರದಲ್ಲಿ (Manipur) ಸರ್ಕಾರ ರಚನೆಯಾಗಲಿದೆ ಎನ್ನುವ ಊಹಾಪೋಹದ ನಡುವೆ ಇಲ್ಲಿನ ಎನ್‌ಡಿಎ (NDA) ಶಾಸಕರು (MLA) ದೆಹಲಿಗೆ (Delhi) ದೌಡಾಯಿಸಿದ್ದಾರೆ. 2023ರ ಮೇ 3ರಂದು ಉಂಟಾದ ಸಂಘರ್ಷದ ಬಳಿಕ ಹೇರಿದ್ದ ರಾಷ್ಟ್ರಪತಿ ಆಳ್ವಿಕೆಯ (Presidents Rule) ವಿಸ್ತರಣೆ ಅವಧಿಯು ಫೆಬ್ರವರಿ 12ರಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ದರಿಂದ ಮಣಿಪುರದಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಬಹುತೇಕ ಎಲ್ಲಾ ಶಾಸಕರು, ಅದರ ಮಿತ್ರಪಕ್ಷಗಳು ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥರು ಸೋಮವಾರ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಲು ಭಾನುವಾರವೇ ದೆಹಲಿಗೆ ತೆರಳಿದ್ದಾರೆ.
2023ರಲ್ಲಿ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಸುಮಾರು 260ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದರ ಜೊತೆಗೆ 60,000ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಇದರ ಬಳಿಕ ಶಾಸಕರ ಅವಿಶ್ವಾಸ ನಿರ್ಣಯದ ಬೆದರಿಕೆ ಹಿನ್ನೆಲೆಯಲ್ಲಿ 2025ರ ಫೆಬ್ರವರಿ 9ರಂದು ಎನ್. ಬಿರೇನ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರ ಪರಿಣಾಮ ಫೆಬ್ರವರಿ 13ರಂದು ಸರಕಾರವನ್ನು ಅಮಾನತಿನಲ್ಲಿರಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು.
ಮಗುವನ್ನು ಎದೆಗೆ ಕಟ್ಟಿಕೊಂಡು ಮ್ಯಾರಾಥಾನ್ ಓಡಿದ ತಂದೆ: ನೆಟ್ಟಿಗರಿಂದ ಭಾರೀ ಆಕ್ರೋಶ!
ಅನಂತರ ರಾಷ್ಟ್ರಪತಿ ಆಳ್ವಿಕೆಯನ್ನು ಆರು ತಿಂಗಳ ಕಾಲ ವಿಸ್ತರಿಸಲಾಗಿದ್ದು ಫೆಬ್ರವರಿ 12ರಂದು ಇದರ ಅವಧಿ ಮುಗಿಯಲಿದೆ. ಇದಕ್ಕೂ ಮುನ್ನವೇ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಣಿಪುರ ವಿಧಾನಸಭೆಯು 60 ಸದಸ್ಯ ಬಲವನ್ನು ಹೊಂದಿದ್ದು, ಇದರಲ್ಲಿ ಬಿಜೆಪಿ 32, ಎನ್‌ಪಿಪಿ 7, ಜೆಡಿ(ಯು) 6, ಎನ್‌ಪಿಎಫ್ 5, ಕೆಪಿಎ 2 ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 5 ಸ್ಥಾನಗಳನ್ನು ಹೊಂದಿದೆ. ಇವರೊಂದಿಗೆ 3 ಸ್ವತಂತ್ರ ಶಾಸಕರೂ ಕೂಡ ಇದ್ದಾರೆ.
ಹೊಸ ಬೆಳವಣಿಗೆಯ ಕುರಿತು ಇಂಫಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಎನ್ ಬಿರೇನ್ ಸಿಂಗ್, ಸೋಮವಾರ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ಎಲ್ಲಾ ಎನ್‌ಡಿಎ ಮೈತ್ರಿಕೂಟದ ಜನಪ್ರತಿನಿಧಿಗಳನ್ನು ಕರೆಯಲಾಗಿದೆ. ಇದು ದೊಡ್ಡ ಬೆಳವಣಿಗೆಯಾಗಿದೆ. ಈ ಬಾರಿ ಎನ್‌ಡಿಎಯ ಎಲ್ಲಾ ಶಾಸಕರನ್ನು ಕರೆಯಲಾಗಿದ್ದು, ಹೊಸ ಸರ್ಕಾರ ರಚನೆ ಸಾಧ್ಯತೆ ಇದೆ ಎಂದು ತಿಳಿಸಿದರು.
ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ: ಬಲೂಚಿಸ್ತಾನದಲ್ಲಿ 145 ಭಯೋತ್ಪಾದಕರು, 17 ಭದ್ರತಾ ಸಿಬ್ಬಂದಿ ಸಾವು
ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಶಾಸಕಿ ಜಂಗೆಮ್‌ಲುಂಗ್ ಪನ್ಮೆಯಿ ಅವರು ಮಾತನಾಡಿ, ಮಣಿಪುರಕ್ಕೆ ಮತ್ತೆ ಒಳ್ಳೆಯದಾಗಬೇಕು. ಸಭೆಯ ಅನಂತರವೇ ಮುಂದೇನು ಎಂಬುದು ತಿಳಿಯುತ್ತದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷೆ ಎ. ಶಾರದಾ ದೇವಿ ಮಾತನಾಡಿ, ಹೊಸ ಜನಪ್ರಿಯ ಸರ್ಕಾರ ರಚನೆಗೆ ಸೋಮವಾರ ನಡೆಯುವ ಸಭೆ ಸಕಾರಾತ್ಮಕ ಹೆಜ್ಜೆಯಾಗಿರಲಿದೆ. ಎನ್‌ಡಿಎ ಶಾಸಕರೊಂದಿಗೆ ಕುಕಿ-ಝೋ ಶಾಸಕರು ಕೂಡ ಈ ಸಭೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.