ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಪ್‌ಗೆ ತಪ್ಪದ ಇಡಿ ಸಂಕಷ್ಟ; ದಾಳಿ ಬೆನ್ನಲ್ಲೇ ಪಂಜಾಬ್ ಸಚಿವ ಸಂಜೀವ್ ಅರೋರಾ ಬಂಧನ

Sanjeev Arora: ವಿದ್ಯುತ್ ಸಚಿವ ಸಂಜೀವ್ ಅರೋರಾ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಬಂಧಿಸಿದೆ. ಈ ಕ್ರಮವನ್ನು ಖಂಡಿಸಿರುವ ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್, ಕೇಂದ್ರ ಸಂಸ್ಥೆಗಳನ್ನು ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಪಂಜಾಬ್ ಸಚಿವ ಸಂಜೀವ್ ಅರೋರಾ ಬಂಧನ

ಸಂಜೀವ್ ಅರೋರಾ (ಸಂಗ್ರಹ ಚಿತ್ರ) -

Profile
Sushmitha Jain May 9, 2026 10:00 PM

ಚಂಡೀಗಢ, ಮೇ 9: ಪಂಜಾಬ್‌ನ ವಿದ್ಯುತ್ ಸಚಿವ ಸಂಜೀವ್ ಅರೋರಾ (Power Minister Sanjeev Arora) ಅವರನ್ನು ಜಾರಿ ನಿರ್ದೇಶನಾಲಯ (ED) ಶನಿವಾರ ಬಂಧಿಸಿದೆ. ಅರೋರಾ ಮತ್ತು ಅವರ ಸಹವರ್ತಿಗಳಿಗೆ ಸೇರಿದ ಹಲವು ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ಬಂಧನ ನಡೆದಿದೆ. ಈ ಕ್ರಮವನ್ನು ಆಮ್ ಆದ್ಮಿ ಪಕ್ಷದ (AAP) ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ತೀವ್ರವಾಗಿ ಖಂಡಿಸಿದ್ದಾರೆ.

62 ವರ್ಷದ ಸಂಜೀವ್ ಅರೋರಾ ಲೂಧಿಯಾನ ವೆಸ್ಟ್ ವಿಧಾನಸಭಾ ಕ್ಷೇತ್ರದ ಎಎಪಿ ಶಾಸಕರಾಗಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಅಡಿಯಲ್ಲಿ ಅರೋರಾ ಮತ್ತು ಅವರ ಸಂಸ್ಥೆಗಳಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಇಡಿ ಶೋಧ ನಡೆಸಿದೆ. ಚಂಡೀಗಢ ಮತ್ತು ದೆಹಲಿ-ಎನ್‌ಸಿಆರ್ ಪ್ರದೇಶಗಳಲ್ಲಿ ಈ ದಾಳಿಗಳು ನಡೆದಿದ್ದು, ಚಂಡೀಗಢದ ಸೆಕ್ಟರ್ 2ರಲ್ಲಿರುವ ಅವರ ಅಧಿಕೃತ ನಿವಾಸದಿಂದ ಬಂಧಿಸಲಾಗಿದೆ. ವಿಶೇಷವೆಂದರೆ, ಅರೋರಾ ಅವರ ಮೇಲೆ ಈ ವರ್ಷ ನಡೆದ ಮೂರನೇ ಇಡಿ ದಾಳಿ ಇದಾಗಿದೆ. ಈ ಹಿಂದೆ ಏಪ್ರಿಲ್ ಮತ್ತು ಇದೇ ತಿಂಗಳ ಆರಂಭದಲ್ಲಿ ಅವರ ಮೇಲೆ ಇಂತಹದ್ದೇ ಕ್ರಮ ಕೈಗೊಳ್ಳಲಾಗಿತ್ತು

ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಪ್ರತಿಕ್ರಿಯೆ

ಈ ಬಂಧನದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಆಪ್‌ ನಾಯಕ ಅರವಿಂದ್ ಕೇಜ್ರಿವಾಲ್, ಕೇಂದ್ರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. "ಪಂಜಾಬಿಗಳು ಪ್ರೀತಿಯಿಂದ ಕೇಳಿದರೆ ಎಲ್ಲವನ್ನೂ ನೀಡುತ್ತಾರೆ. ಆದರೆ ಅವರನ್ನು ದಬಾಯಿಸಲು ಪ್ರಯತ್ನಿಸಿದರೆ ಅವರು ಅಷ್ಟೇ ಬಲವಾಗಿ ತಿರುಗೇಟು ನೀಡುತ್ತಾರೆ. ಮೋದಿ ಅವರೇ, ನೀವು ಇನ್ನಷ್ಟು ದಾಳಿಗಳನ್ನು ನಡೆಸಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ತನ್ನ ಎಲ್ಲ ಸ್ಥಾನಗಳಲ್ಲಿ ಠೇವಣಿ ಕಳೆದುಕೊಳ್ಳಲಿದೆ. ನೀವು ಬಂಧಿಸಿದವರು ನಾಲ್ಕು ದಿನಗಳಲ್ಲಿ ಹೊರಬರುತ್ತಾರೆ. ಆದರೆ ಮುಂದಿನ ಇಪ್ಪತ್ತು ವರ್ಷಗಳ ಕಾಲ ಬಿಜೆಪಿ ಪಂಜಾಬ್‌ನಲ್ಲಿ ಕಾಲಿಡಲು ಸಾಧ್ಯವಾಗುವುದಿಲ್ಲ" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಡಿ ದಾಳಿ: ಕೇಂದ್ರ ಸರ್ಕಾರ ಕಾಂಗ್ರೆಸ್‌ನವರನ್ನು ಟಾರ್ಗೆಟ್‌ ಮಾಡಿದೆ ಎಂದ ಸಿಎಂ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಬಿಜೆಪಿಯನ್ನು ಟೀಕಿಸಿದ್ದು, ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು "ರಾಜಕೀಯ ಅಸ್ತ್ರ"ಗಳಾಗಿ ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ. "ಮಹಾರಾಷ್ಟ್ರ, ಒಡಿಶಾ, ಬಿಹಾರ ಅಥವಾ ಪಶ್ಚಿಮ ಬಂಗಾಳದಂತೆ ಈಗ ಪಂಜಾಬ್ ಅನ್ನು ಗುರಿಯಾಗಿಸಲಾಗಿದೆ. ಕಪ್ಪು ಹಣವನ್ನು ಮರಳಿ ಪಡೆಯುವುದು ಇಡಿ ಉದ್ದೇಶವಲ್ಲ, ಬದಲಿಗೆ ಬೆದರಿಕೆ ಹಾಕುವ ಮೂಲಕ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದು ಇವರ ಅಸಲಿ ಉದ್ದೇಶ" ಎಂದು ಅವರು ಆರೋಪಿಸಿದ್ದಾರೆ. ಮುಂದಿನ ವರ್ಷ ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಇಂತಹ ರಾಜಕೀಯ ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ಎಎಪಿ ನಾಯಕರು ದೂರಿದ್ದಾರೆ.