ಆಪ್ ಜೊತೆ ನಂಟು: ಕಾಕ್ರೋಚ್ ಜನತಾ ಪಾರ್ಟಿ ಸೇರಿದ್ದ ಮಾಜಿ ನಾಗರಿಕ ಸೇವಕ ರಾಜೀನಾಮೆ
ಕೆಲವು ವರ್ಷಗಳ ಹಿಂದೆ ಹುಟ್ಟಿ ಸಾಕಷ್ಟು ಗದ್ದಲವೆಬ್ಬಿಸಿ ಇವತ್ತಿಗೂ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಆಮ್ ಆದ್ಮಿ ಪಕ್ಷದೊಂದಿಗೆ ವಾರಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಜನ್ಮ ತಳೆದ ಕಾಕ್ರೋಚ್ ಜನತಾ ಪಾರ್ಟಿ ಸಂಬಂಧ ಹೊಂದಿದೆಯೇ? ಈ ಕುರಿತು ಪ್ರಶ್ನಿಸಿದ ಮಾಜಿ ನಾಗರಿಕ ಸೇವಕರಿಗೆ ಯಾವುದೇ ಉತ್ತರ ಸಿಗದೇ ಇದ್ದುದರಿಂದ ಅವರು ಇದೀಗ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ವಾರಗಳ ಹಿಂದೆಯಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ಜನ್ಮ ತಳೆದ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಇನ್‌ಸ್ಟಾಗ್ರಾಮ್‌ನಲ್ಲಿ (instagram) ಬಿಜೆಪಿಗಿಂತಲೂ (BJP) ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿ ಎಲ್ಲರ ಗಮನ ಸೆಳೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಅತೀ ವೇಗವಾಗಿ ಬೆಳೆದ ಈ ಪಕ್ಷಕ್ಕೂ ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ಸಂಬಂಧವಿದೆಯೇ ಎಂದು ಪ್ರಶ್ನಿಸಿದ ಮಾಜಿ ನಾಗರಿಕ ಸೇವಕರಿಗೆ (Ex-civil servant) ಯಾವುದೇ ಉತ್ತರ ಸಿಗದೇ ಇದ್ದುದರಿಂದ ಅವರು ಇದೀಗ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಸದ್ಯ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿಯು ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿಯವರ ಕೆಲವು ಹೇಳಿಕೆಗಳಿಂದ ಪ್ರೇರಿತವಾಗಿ ಹುಟ್ಟಿಕೊಂಡಿತ್ತು ಎನ್ನಲಾಗಿದೆ. ಆರಂಭದಲ್ಲಿ ವಿಡಂಬನೆಯ ರೂಪದಲ್ಲಿ ಜನ್ಮ ತಳೆದ ಈ ಪಕ್ಷ ಇದ್ದಕ್ಕಿದ್ದಂತೆ ದೇಶಾದ್ಯಂತ ಹೆಚ್ಚು ಚರ್ಚಿಸಲ್ಪಡುವ ಆನ್‌ಲೈನ್ ಅಭಿಯಾನವಾಗಿ ಗುರುತಿಸಿಕೊಂಡಿದೆ.
5 ದಿನಗಳಲ್ಲಿ 10 ಮಿಲಿಯನ್ ಫಾಲೋವರ್ಸ್: ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿಯನ್ನು ಹಿಂದಿಕ್ಕಿದ ಜಿರಳೆ ಜನತಾ ಪಕ್ಷ
ಬೋಸ್ಟನ್ ಮೂಲದ ಅಭಿಜೀತ್ ದಿಪ್ಕೆ ಅವರು ಸ್ಥಾಪಿಸಿದ ಈ ಪಕ್ಷವು ಇನ್‌ಸ್ಟಾಗ್ರಾಮ್ ನಲ್ಲಿ ಬಿಜೆಪಿ, ಕಾಂಗ್ರೆಸ್ ಗಿಂತಲೂ ಹೆಚ್ಚು ಅನುಯಾಯಿಗಳನ್ನು ಗಳಿಸಿದೆ. ಆದರೆ ಇದು ಆಮ್ ಆದ್ಮಿ ಪಕ್ಷದೊಂದಿಗೆ ಸಂಬಂಧ ಹೊಂದಿದೆ ಎನ್ನುವ ಸಂದೇಹಗಳು ಈಗ ಹಲವರನ್ನು ಕಾಡತೊಡಗಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಕಾಕ್ರೋಚ್ ಪಕ್ಷದೊಂದಿಗಿನ ಸಂಬಂಧವನ್ನು ತಳ್ಳಿ ಹಾಕಿದೆ. ಆದರೆ ಅದು ಸಾಮಾಜಿಕ ಮಾಧ್ಯಮದ ಮೂಲಕ ನಿಗೂಢವಾಗಿ ಕಾಕ್ರೋಚ್ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿದೆ ಎನ್ನಲಾಗುತ್ತಿದೆ. ಈ ಕುರಿತು ಮಾಜಿ ನಾಗರಿಕ ಸೇವಕರು ಮತ್ತು ಶಿಕ್ಷಣ ತಜ್ಞರೊಬ್ಬರು ಪ್ರಶ್ನೆ ಮಾಡಿದ್ದು, ಅದಕ್ಕೆ ಯಾವುದೇ ಉತ್ತರ ಬಾರದೇ ಇದ್ದುದರಿಂದ ಅವರು ಈಗ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಾಜಿ ನಾಗರಿಕ ಸೇವಕರಾಗಿರುವ ಆಶಿಶ್ ಜೋಶಿ ಅವರು ಈ ಕುರಿತು ಕಳವಳ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಆರಂಭದಲ್ಲಿ ಸಿಜೆಪಿಯ ಅಭಿಯಾನವನ್ನು ಬೆಂಬಲಿಸಿದ್ದ ಅವರು ಬುಧವಾರ ಈ ಚಳುವಳಿ ನಿಜವಾಗಿಯೂ ಸ್ವತಂತ್ರವಾಗಿದೆಯೇ ಅಥವಾ ಎಎಪಿಗೆ ಸಂಬಂಧಿಸಿದೆಯೇ ಎಂಬುದರ ಕುರಿತು ಅಭಿಜೀತ್ ದಿಪ್ಕೆ ಅವರಿಗೆ ಪ್ರಶ್ನೆ ಮಾಡಿ ಉತ್ತರ ಕೇಳಿದ್ದರು. ಆದರೆ ಅಭಿಜೀತ್ ದಿಪ್ಕೆ ಅವರು 24 ಗಂಟೆಗಳಲ್ಲಿ ಉತ್ತರಿಸದೇ ಇದ್ದುದರಿಂದ ಅವರು ಈಗ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದಿರುವ ಆಶಿಶ್ ಜೋಶಿ, ಸಿಜೆಪಿಯು ಆಪ್ ನ ಒಂದು ಭಾಗ ಎಂದು ಸಾಕಷ್ಟು ಮಂದಿ ಹೇಳಿದ್ದು, ಇದರಿಂದ ದೂರವಿರುವಂತೆ ನನಗೆ ಸಂದೇಶಗಳು ಬರುತ್ತಿವೆ. ಹೀಗಾಗಿ ಈ ಕುರಿತು ತಾವು ಸ್ಪಷ್ಟಪಡಿಸಬೇಕು. ನಾನು ರಾಜಕೀಯವಾಗಿ ತಟಸ್ಥ ವ್ಯಕ್ತಿ. ಯಾವುದೇ ರಾಜಕೀಯ ಪಕ್ಷದ ಭಾಗವಾಗಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು.
ಇದಕ್ಕಿಂತ ಮೊದಲು ಅವರು ಸಿಜೆಪಿ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಇದ್ದಕ್ಕಿದ್ದಂತೆ ಬಂದ ಕಾಕ್ರೋಚ್ ಜನತಾ ಪಕ್ಷದ ಬಗ್ಗೆ ಎಚ್ಚರದಿಂದಿರಿ ಎಂದು ಎಚ್ಚರಿಸಿದ್ದರು.
ಅಭಿಜೀತ್ ಡಿಪ್ಕೆ ಸ್ಪಷ್ಟನೆ
ಕಾಕ್ರೋಚ್ ಜನತಾ ಪಕ್ಷವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದಂತೆ ಅದರ ಬಗ್ಗೆ ತನಿಖೆಗಳು ಕೂಡ ತೀವ್ರಗೊಂಡಿವೆ. ಪ್ರಸ್ತುತ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕವನ್ನು ಅಧ್ಯಯನ ಮಾಡುತ್ತಿರುವ ಅಭಿಜೀತ್ ಡಿಪ್ಕೆ ಅವರು ಈ ಹಿಂದೆ ಸಿಜೆಪಿಯ ಸ್ವಾತಂತ್ರ್ಯದ ಬಗ್ಗೆ ಸ್ಪಷ್ಟಿಕರಣ ನೀಡಲು ಪ್ರಯತ್ನಿಸಿದ್ದರು.
2020 ರಿಂದ 2023 ರವರೆಗೆ ನಾನು ಆಪ್ ಗಾಗಿ ಕೆಲಸ ಮಾಡಿದ್ದೇನೆ. ಇದರಿಂದ ನನಗೆ ನಿಜವಾಗಿಯೂ ಸ್ಫೂರ್ತಿ ಸಿಕ್ಕಿತು. ಭಾರತೀಯ ರಾಜಕೀಯದಲ್ಲಿ ಆಗ ಆರೋಗ್ಯ ಮತ್ತು ಶಿಕ್ಷಣವು ಎಲ್ಲಿಯೂ ಚರ್ಚೆಯಲ್ಲಿ ಇರಲಿಲ್ಲ. ಆದರೆ ಆಪ್ ಅದನ್ನು ಮಾಡಿತ್ತು. ಅದರಿಂದ ನಾನು ಸ್ಫೂರ್ತಿ ಪಡೆದಿದ್ದೇನೆ ಮತ್ತು ಕೊಡುಗೆ ನೀಡಲು ಬಯಸಿದ್ದೆ. ಬಳಿಕ ಒಂದು ವರ್ಷ ರಜೆ ಪಡೆದಿದ್ದೇನೆ. ಈಗ ವೈಯಕ್ತಿಕ ಜೀವನ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಗಮನ ಕೇಂದ್ರೀಕರಿಸುವ ಸಮಯ. ಸದ್ಯ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿದ್ದೇನೆ ಎಂದು ಹೇಳಿದ್ದರು.
ಹಿರಿಯ ಆಪ್ ನಾಯಕ ಮನೀಶ್ ಸಿಸೋಡಿಯಾ ಅವರು ಕಾಕ್ರೋಚ್ ಜನತಾ ಪಕ್ಷಕ್ಕೆ ಸಾರ್ವಜನಿಕವಾಗಿ ಬೆಂಬಲ ಘೋಷಿಸಿದ ಮೇಲೆ ಸಿಜೆಪಿ ಮತ್ತು ಆಪ್ ನಡುವೆ ಸಂಬಂಧವಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಮನೀಶ್ ಸಿಸೋಡಿಯಾ ಅವರ ಬೆಂಬಲಕ್ಕೆ ಪ್ರತಿಕ್ರಿಯೆಯಾಗಿ ಅಭಿಜೀತ್ ಡಿಪ್ಕೆ ಅವರು ಆಪ್ ನಲ್ಲಿದ್ದಾಗ ನೀಡಿದ ಅವಕಾಶಗಳಿಗೆ ಧನ್ಯವಾದ ಅರ್ಪಿಸಿದರು. ಇವೆಲ್ಲವೂ ಕೂಡ ಆಪ್ ಜೊತೆ ಸಿಜೆಪಿ ನಂಟು ಹೊಂದಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುತ್ತಾರೆ ಟೀಕಾಕಾರರು.