ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಕ್ರೇನ್ ದಾಳಿಯಿಂದ ರಷ್ಯಾಗೆ ಇಂಧನ ಬಿಕ್ಕಟ್ಟು: ಪೆಟ್ರೋಲ್ ಪೂರೈಸುವಂತೆ ಭಾರತಕ್ಕೆ ಮನವಿ; ಏನಿದು ಹೊಸ ಬೆಳವಣಿಗೆ?

Russia-Ukraine War: ಉಕ್ರೇನ್ ದಾಳಿಯಿಂದ ರಷ್ಯಾದ ತೈಲ ಸಂಸ್ಕರಣಾ ಘಟಕಗಳಿಗೆ ಭಾರಿ ಹಾನಿಯಾಗಿದ್ದು, ದೇಶದಲ್ಲಿ ಪೆಟ್ರೋಲ್ ಬಿಕ್ಕಟ್ಟು ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಪ್ರಮುಖ ತೈಲ ಕಂಪನಿಗಳು ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುವಂತೆ ಮನವಿ ಮಾಡಿವೆ ಎಂದು ವರದಿಯಾಗಿದೆ.

ಭಾರತದಿಂದ ಪೆಟ್ರೋಲ್ ಕೇಳಿದ ರಷ್ಯಾ; ಏನಿದು ರಿವರ್ಸ್‌ ಎಕಾನಮಿ?

ಚಾಟ್ ಜಿಪಿಟಿ ಚಿತ್ರ -

Profile
Sushmitha Jain Jul 16, 2026 4:39 PM

ನವದೆಹಲಿ, ಜು. 16: ಉಕ್ರೇನ್ ನಡೆಸಿದ ದಾಳಿಗಳಿಂದ ರಷ್ಯಾದ ತೈಲ ಸಂಸ್ಕರಣಾ ಘಟಕಗಳಿಗೆ ಭಾರಿ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಪ್ರಮುಖ ತೈಲ ಕಂಪನಿಗಳು ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುವಂತೆ ಭಾರತೀಯ ತೈಲ ಸಂಸ್ಕರಣಾ ಸಂಸ್ಥೆಗಳನ್ನು (Oil Refining Companies) ಸಂಪರ್ಕಿಸಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಭಾರತವು ಈಗಾಗಲೇ ಸಮುದ್ರ ಮಾರ್ಗದ ಮೂಲಕ ರಷ್ಯಾದ ಕಚ್ಚಾ ತೈಲವನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಖರೀದಿಸುವ ದೇಶವಾಗಿದೆ. ಆದರೆ ಈಗ ರಷ್ಯಾ ಭಾರತದಿಂದಲೇ ಪೆಟ್ರೋಲ್ ಖರೀದಿಸಲು ಮುಂದಾಗಿರುವುದು ಉಭಯ ದೇಶಗಳ ಇಂಧನ ವ್ಯಾಪಾರದಲ್ಲಿ ಅಪರೂಪದ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಷ್ಯಾದಲ್ಲಿ ತೀವ್ರ ಪೆಟ್ರೋಲ್ ಬಿಕ್ಕಟ್ಟು

ಮೂಲಗಳ ಪ್ರಕಾರ, ಉಕ್ರೇನ್ ದಾಳಿಯಿಂದ ರಷ್ಯಾದ ಸುಮಾರು 40% ತೈಲ ಸಂಸ್ಕರಣಾ ಸಾಮರ್ಥ್ಯ ಹಾನಿಗೊಳಗಾಗಿದ್ದು, ಮುಂದಿನ ಎರಡು ತಿಂಗಳವರೆಗೆ ಸಂಪೂರ್ಣ ಪುನಃ ಸ್ಥಾಪನೆಯಾಗುವ ಸಾಧ್ಯತೆ ಕಡಿಮೆ. ಇದರ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಕೊರತೆ ಉಂಟಾಗಿದೆ.

ಭಾರತೀಯ ಕಂಪನಿಗಳನ್ನು ಸಂಪರ್ಕಿಸಿದ ರಷ್ಯಾ

ರಷ್ಯಾದ ರೋಸ್‌ನೆಫ್ಟ್ (Rosneft), ಗ್ಯಾಜ್‌ಪ್ರೊಮ್ ನೆಫ್ಟ್ (Gazprom Neft) ಮತ್ತು ಲುಕೊಯಿಲ್ (Lukoil) ಸೇರಿ ಪ್ರಮುಖ ತೈಲ ಕಂಪನಿಗಳು ಭಾರತೀಯ ಖಾಸಗಿ ಹಾಗೂ ಸರ್ಕಾರಿ ತೈಲ ಸಂಸ್ಕರಣಾ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿವೆ ಎಂದು ವರದಿಯಾಗಿದೆ. ಆದರೆ ಭಾರತದ ಸರ್ಕಾರಿ ಸ್ವಾಮ್ಯದ ಪ್ರಮುಖ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಹೆಚ್ಚುವರಿ ಪೆಟ್ರೋಲ್ ರಫ್ತು ಮಾಡಲು ತಮ್ಮ ಬಳಿ ಲಭ್ಯತೆ ಇಲ್ಲ ಎಂದು ತಿಳಿಸಿದ್ದಾಗಿ ಮೂಲಗಳು ವರದಿ ಮಾಡಿವೆ.

ರಷ್ಯಾ ತೈಲ ಆಮದಿನ ಮೇಲೆ ಸುಂಕ ಇಳಿಸಿದ ಅಮೆರಿಕ; ಭಾರತ, ಚೀನಾಕ್ಕೆ ಬಿಗ್ ರಿಲೀಫ್

ಈಗಾಗಲೇ ಒಂದು ಸಾಗಣೆ ರಷ್ಯಾಕ್ಕೆ

ವರದಿ ಪ್ರಕಾರ, ಭಾರತದಿಂದ ಒಂದು ಹಡಗು ಮೂಲಕ ಪೆಟ್ರೋಲ್ ಈಗಾಗಲೇ ರಷ್ಯಾಕ್ಕೆ ರವಾನೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಗಣೆಗಳು ನಡೆಯುವ ಸಾಧ್ಯತೆ ಇದೆ. ಈ ಸಾಗಣೆಯನ್ನು ಹಡಗಿನಿಂದ ಹಡಗಿಗೆ ವರ್ಗಾಯಿಸಲಾಗಿದೆ. ಈಜಿಪ್ಟ್ ಸಮೀಪದ ಸಮುದ್ರ ಪ್ರದೇಶದಲ್ಲಿ ಭಾರತದ ಹಡಗಿನಿಂದ ಮತ್ತೊಂದು ಹಡಗಿಗೆ ವರ್ಗಾಯಿಸಿ ರಷ್ಯಾಕ್ಕೆ ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಯಾರಾ ಎನರ್ಜಿ ಸ್ಪಷ್ಟನೆ

ರೋಸ್‌ನೆಫ್ಟ್ ಪಾಲುದಾರಿಕೆಯನ್ನು ಹೊಂದಿರುವ ನಯಾರಾ ಎನರ್ಜಿ, "ನಾವು ರಷ್ಯಾದ ಕಂಪನಿಗಳಿಗೆ ಯಾವುದೇ ಇಂಧನವನ್ನು ಮಾರಾಟ ಮಾಡಿಲ್ಲ ಮತ್ತು ಮಾರಾಟ ಮಾಡುವ ಯೋಜನೆಯೂ ಇಲ್ಲ" ಎಂದು ಸ್ಪಷ್ಟಪಡಿಸಿದೆ. ಸಂಸ್ಥೆಯು ಭಾರತದಲ್ಲಿನ ತನ್ನ 7,000ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಿಗೆ ಮತ್ತು ದೇಶೀಯ ಗ್ರಾಹಕರಿಗೆ ನಿರಂತರ ಇಂಧನ ಪೂರೈಕೆ ಮಾಡುವುದು ಮೊದಲ ಆದ್ಯತೆ ಎಂದು ತಿಳಿಸಿದೆ.

ಭಾರತದ ನಿಲುವು

ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಈ ತಿಂಗಳ ಆರಂಭದಲ್ಲಿ ಮಾತನಾಡಿ, "ಭಾರತೀಯ ಕಂಪನಿಗಳು ನೇರವಾಗಿ ರಷ್ಯಾಕ್ಕೆ ಇಂಧನ ಮಾರಾಟ ಮಾಡುತ್ತಿಲ್ಲ. ಆದರೆ ವ್ಯಾಪಾರಿಗಳ ಮೂಲಕ ಭಾರತೀಯ ಮೂಲದ ಇಂಧನ ರಷ್ಯಾಕ್ಕೆ ತಲುಪುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ" ಎಂದು ಹೇಳಿದ್ದರು. ಈ ಬೆಳವಣಿಗೆ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಉಕ್ರೇನ್-ರಷ್ಯಾ ಯುದ್ಧದ ಪರಿಣಾಮ ಇಂಧನ ವ್ಯಾಪಾರದ ಮೇಲೂ ಸ್ಪಷ್ಟವಾಗಿ ಕಾಣಿಸತೊಡಗಿದೆ.