ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸನಾತನ ಧರ್ಮವನ್ನು ನಿರ್ಮೂಲನ ಮಾಡಬೇಕು: ನೂತನ ಸಿಎಂ ವಿಜಯ್‌ ಸಮ್ಮುಖದಲ್ಲೇ ನಾಲಗೆ ಹರಿಯಬಿಟ್ಟ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್

Udhayanidhi Stalin sparks controversy: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಕರೆ ನೀಡುವ ಮೂಲಕ ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಈ ವೇಳೆ ಪುನರುಚ್ಚರಿಸಿದರು. ಸನಾತನವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಈ ಹಿಂದೆಯೂ ಹೇಳಿದ್ದರು.

ಸನಾತನ ಧರ್ಮವನ್ನು ನಿರ್ಮೂಲನ ಮಾಡಬೇಕು: ಉದಯನಿಧಿ ಸ್ಟಾಲಿನ್‌

ಉದಯನಿಧಿ ಸ್ಟಾಲಿನ್‌ ಮತ್ತು ವಿಜಯ್‌ (ಸಂಗ್ರಹ ಚಿತ್ರ) -

Priyanka P
Priyanka P May 12, 2026 7:03 PM

ಚೆನ್ನೈ, ಮೇ 12: ಸನಾತನ ಅಥವಾ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಮತ್ತೊಮ್ಮೆ ನಾಲಗೆಯ ಹರಿಯಬಿಟ್ಟಿದ್ದಾರೆ. ಹೊಸದಾಗಿ ನೇಮಕಗೊಂಡ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ (Joseph Vijay) ಅವರ ಸಮ್ಮುಖದಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ಅವರು ಭಾಷಣ ಮಾಡಿದರು. ಜನರನ್ನು ವಿಭಜಿಸುವ ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಈ ವೇಳೆ ಪುನರುಚ್ಚರಿಸಿದರು.

ಉದಯನಿಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್, ಇದು ದ್ವೇಷ ಪೂರಿತ ಹೇಳಿಕೆ ಎಂದು ಟೀಕಿಸಿದ್ದಾರೆ. ಈ ರೀತಿ ಹೇಳುವವರು ಒಂದು ವಿಷಯವನ್ನು ನೆನಪಿನಲ್ಲಿಡಬೇಕು. ತಮಿಳುನಾಡಿನ ರಾಜ್ಯ ಲಾಂಛನದಲ್ಲೇ ದೇವಾಲಯದ ಗೋಪುರವಿದೆ. ತಮಿಳುನಾಡಿನ ಜನತೆ ತಮ್ಮ ನಂಬಿಕೆ ಮತ್ತು ಭಾವನೆಗಳಿಗೆ ಮಾಡಿದ ಇಂತಹ ಘೋರ ಅವಮಾನವನ್ನು ಮರೆಯುವುದಿಲ್ಲ ಮತ್ತು ಕ್ಷಮಿಸುವುದೂ ಇಲ್ಲ ಎಂದು ಅವರು ಹೇಳಿದ್ದಾರೆ.

ಇಲ್ಲಿದೆ ವಿಡಿಯೊ:



ರಾಹುಲ್ ಗಾಂಧಿ ವಿರುದ್ಧವೂ ಸಿ.ಆರ್. ಕೇಶವನ್ ವಾಗ್ದಾಳಿ ಮುಂದುವರಿಸಿದ್ದಾರೆ. ಉದಯನಿಧಿ ಸ್ಟಾಲಿನ್ ತಮಿಳುನಾಡಿನ ರಾಹುಲ್ ಗಾಂಧಿ ಇದ್ದಂತೆ. ಅವರು ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಪವಿತ್ರವಾದ ಸೆಂಗೋಲ್ (ರಾಜದಂಡ) ಅನ್ನು ಅಪಹಾಸ್ಯ ಮಾಡಿದರು. ರಾಮಮಂದಿರದ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ಅವಮಾನಿಸಿ ಬಹಿಷ್ಕರಿಸಿದರು. ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ತಿರಸ್ಕರಿಸಲ್ಪಟ್ಟ ರಾಹುಲ್ ಗಾಂಧಿಯಂತೆಯೇ, ಉದಯನಿಧಿ ಸ್ಟಾಲಿನ್ ಕೂಡ ತಮಿಳುನಾಡಿನ ಜನರಿಂದ ಹೊರಹಾಕಲ್ಪಟ್ಟಿದ್ದರೂ ದ್ವೇಷಪೂರಿತ ಮಾತುಗಳನ್ನು ಮುಂದುವರಿಸುತ್ತಿದ್ದಾರೆ ಎಂದು ವಾಕ್ಪ್ರಹಾರ ನಡೆಸಿದರು.

ತಮಿಳುನಾಡಿನಾದ್ಯಂತ 717 ಮದ್ಯದಂಗಡಿ ಬಂದ್

ಸನಾತನ ಧರ್ಮವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಈ ಹಿಂದೆ ಹೇಳಿದ್ದರು. ಇದು ರಾಜಕೀಯವಾಗಿ ಭಾರಿ ಬಿರುಗಾಳಿ ಎಬ್ಬಿಸಿತ್ತು. ಡೆಂಗ್ಯೂ, ಸೊಳ್ಳೆ, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಅದನ್ನು ನಿರ್ಮೂಲನೆ ಮಾಡಬೇಕು. ಸನಾತನವನ್ನು ನಿರ್ಮೂಲನೆ ಮಾಡುವುದು ಹೀಗೆಯೇ. ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಹೇಳಿದ್ದು ದೊಡ್ಡ ವಿವಾದವನ್ನು ಹುಟ್ಟುಹಾಕಿತ್ತು.

ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದರೂ ಉದಯನಿಧಿ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ತಾವು ಕೇವಲ ಜಾತಿ ತಾರತಮ್ಯಗಳ ವಿರುದ್ಧ ಮಾತನಾಡಿದ್ದಾಗಿ ವಾದಿಸಿರುವ ಅವರು, ತಮ್ಮ ಹೇಳಿಕೆಯನ್ನು ಪುನರಾವರ್ತಿಸುವುದಾಗಿ ಸವಾಲು ಹಾಕಿದ್ದಾರೆ.

ಉದಯನಿಧಿ-ವಿಜಯ್ ಸೌಹಾರ್ದಯುತ ಮಾತಿನ ವಿನಿಮಯ

ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ (ಮೇ 12) ಬೆಳಗ್ಗೆ ಆಸಕ್ತಿದಾಯಕ ಪ್ರಸಂಗವೊಂದು ಜರುಗಿತು. ಉದಯನಿಧಿ ಸ್ಟಾಲಿನ್ ನಟ ವಿಜಯ್, ಟಿವಿಕೆ ಶಾಸಕ ಜೆ.ಸಿ.ಡಿ. ಪ್ರಭಾಕರ್ ಜತೆ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರ ನೆನಪನ್ನು ಮೆಲುಕು ಹಾಕಿದರು. ನಾನು, ಸಿಎಂ ವಿಜಯ್, ಸ್ಪೀಕರ್ ಪ್ರಭಾಕರ್ ಎಲ್ಲರೂ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೆವು. ಆದರೆ ಡಿಎಂಕೆಯು ಆಡಳಿತದಲ್ಲಿ ಹಿರಿಯ ಬ್ಯಾಚ್. ಹೀಗಾಗಿ ನಾವು ನಿಮಗೆ ಕಲಿಸಲು ಸಿದ್ಧರಿದ್ದೇವೆ ಎಂದು ಸೌಹಾರ್ದಯುತ ಧಾಟಿಯಲ್ಲೇ ಹೇಳಿದರು. ಈ ಮಾತಿಗೆ ವಿಜಯ್ ಮುಖದಲ್ಲಿ ನಗು ಅರಳಿತು.

ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉದಯನಿಧಿ ಅವರ ಡಿಎಂಕೆ ಪಕ್ಷವು, ವಿಜಯ್ ಅವರ ಟಿವಿಕೆ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿತು. ಟಿವಿಕೆ ತನ್ನ ಚೊಚ್ಚಲ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದರೆ, ಡಿಎಂಕೆ ಕೇವಲ 59 ಸ್ಥಾನಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು.