ಸೋನಿಯಾ-ರಾಜೀವ್ ಮೊದಲ ಬಾರಿ ಭೇಟಿಯಾಗಿದ್ದ ರೆಸ್ಟೋರೆಂಟ್ಗೆ ಗರ್ಲ್ಫ್ರೆಂಡ್ ಜೊತೆ ಹೋಗಿದ್ದ ರಾಹುಲ್!
Sonia Gandhi's Memoir Launch: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ವೈಯಕ್ತಿಕ ಜೀವನದ ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ತಾಯಿ ಸೋನಿಯಾ ಗಾಂಧಿಯವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ, ಹಿಂದೆ ಅವರ ತಂದೆ, ತಾಯಿ ಭೇಟಿ ನೀಡಿದ್ದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ರೆಸ್ಟೋರೆಂಟ್ಗೆ ತಮ್ಮ ಗೆಳತಿಯ (Girlfriend) ಜೊತೆ ಹೋಗಿದ್ದ ಕ್ಷಣಗಳನ್ನು ಮತ್ತು ಸೋನಿಯಾ ಗಾಂಧಿ ನಾಲ್ಕು ಬಾರಿ ಕ್ಯಾನ್ಸರ್ ವಿರುದ್ಧ ಹೋರಾಡಿರುವುದನ್ನು ನೆನಪಿಸಿಕೊಂಡಿದ್ದಾರೆ.
ಗರ್ಲ್ಫ್ರೆಂಡ್ ಕುರಿತ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ -
ನವದೆಹಲಿ,ನ. 17: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ವೈಯಕ್ತಿಕ ಜೀವನದ ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ತಾಯಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ (Belonging: A Journey of Love) ಬಿಡುಗಡೆ ಸಮಾರಂಭದಲ್ಲಿ, ಹಿಂದೆ ಅವರ ತಂದೆ ತಾಯಿ ಭೇಟಿ ನೀಡಿದ್ದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ರೆಸ್ಟೋರೆಂಟ್ಗೆ ತಮ್ಮ ಗೆಳತಿಯ ಜೊತೆ ಹೋಗಿದ್ದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ಸಮಾರಂಭದಲ್ಲಿ ರಾಹುಲ್ ಗಾಂಧಿ, ತಮ್ಮ ಪೋಷಕರ ಪ್ರೇಮಕಥೆ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ತಂದೆ-ತಾಯಿ ಮೊದಲ ಬಾರಿಗೆ ಭೇಟಿಯಾದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ರೆಸ್ಟೋರೆಂಟ್ಗೆ ಹಲವು ವರ್ಷಗಳ ನಂತರ ತಾವು ಗೆಳತಿಯೊಂದಿಗೆ ಹೋದ ಸವಿನೆನಪನ್ನು ಮೆಲುಕು ಹಾಕಿದ್ದಾರೆ.
ವಿಡಿಯೋ ನೋಡಿ
Rahul Gandhi recalls taking his then-girlfriend to the restaurant where his parents first met! https://t.co/PKq1PEtPMJ
— Nabila Jamal (@nabilajamal_) November 16, 2026
ತಂದೆ ತಾಯಿ ಹೋಗಿದ್ದ ರೆಸ್ಟೋರೆಂಟ್ಗೆ ಗೆಳತಿಯೊಂದಿಗೆ ಭೇಟಿ
ರಾಹುಲ್ ತಮ್ಮ ಗೆಳತಿಯನ್ನು ರೆಸ್ಟೋರೆಂಟ್ಗೆ ಕರೆದುಕೊಂಡು ಹೋದ ವೇಳೆ, ʼʼರೆಸ್ಟೋರೆಂಟ್ ಒಳಗೆ ಹೋದಾಗ, ಅಲ್ಲಿದ್ದ ಸಿಬ್ಬಂದಿಯೊಬ್ಬರು ಮೆನ್ಯೂ ತಂದರು. ಅವರ ಬಳಿ, ‘ನನ್ನ ಪೋಷಕರು ಈ ರೆಸ್ಟೋರೆಂಟ್ನಲ್ಲೇ ಭೇಟಿಯಾಗಿದ್ದರು’ ಎಂದು ಹೇಳಿದೆ. ಅವರು ನನ್ನತ್ತ ನೋಡಿ, ‘ಓಹ್, ಅವರು ನನಗೆ ಗೊತ್ತು’ ಎಂದರು. ಆಗ ನಾನು, ‘ಅವರ ಬಗ್ಗೆ ನಿನಗೆ ಏನು ಗೊತ್ತು?’ ಎಂದು ಕೇಳಿದೆ. ಅದಕ್ಕೆ, ‘ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಎಂಬುದು ನನಗೆ ಗೊತ್ತಾಯ್ತು’ ಎಂದು ಹೇಳಿದ್ದʼʼ ಎಂದು ಆ ನೆನಪುಗಳನ್ನು ತೆರೆದಿಟ್ಟಿದ್ದಾರೆ. ಈ ಘಟನೆಯನ್ನು ವಿವರಿಸಿದ ಬಳಿಕ ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಬ್ಬರು ಆ ಗೆಳತಿಯ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ರಾಹುಲ್ ಗಾಂಧಿ ನಗುತ್ತಾ, ‘ಅವಳು ಈಗ ನನ್ನ ಸ್ನೇಹಿತೆ’ ಎಂದು ಉತ್ತರಿಸಿದ್ದಾರೆ. ಅವರ ಈ ಸರಳ ಉತ್ತರ ಸಭೆಯಲ್ಲಿ ನಗು ಮತ್ತು ಕುತೂಹಲ ಮೂಡಿಸಿದೆ.
ತಂದೆ ತೊಡೆ ಮೇಲೆ ಕುಳಿತು ಊಟ ಮಾಡುತ್ತಿದ್ದರು ರಾಹುಲ್ ಗಾಂಧಿ
ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ರಾಹುಲ್ ಗಾಂಧಿ, ʼʼನಮ್ಮ ಮನೆಯಲ್ಲಿ ಪ್ರತಿದಿನ ಊಟದ ಸಮಯದಲ್ಲಿ ನಾನು ತಂದೆ ರಾಜೀವ್ ಗಾಂಧಿ ಅವರ ತೊಡೆ ಮೇಲೆ ಕುಳಿತು ಊಟ ಮಾಡುತ್ತಿದ್ದೆ’ ಎಂದು ಹೇಳಿದ್ದಾರೆ. ʼʼನನ್ನ ಬಾಲ್ಯದಲ್ಲಿ ನಾನು ಎಲ್ಲಾ ಮನೆಗಳಲ್ಲೂ ತಂದೆ ತಾಯಿಯರು ಹೀಗೆ ಆತ್ಮೀಯವಾಗಿರುತ್ತಾರೆ ಎಂದು ನಾನು ಅಂದುಕೊಂಡಿದ್ದೆ, ಆದರೆ ಸ್ನೇಹಿತರ ಮನೆಗಳಿಗೆ ಹೋದಾಗ ಅವರ ತಂದೆ ತಾಯಿಯರು ಬೇರೆ ಬೇರೆಯಾಗಿ ಕುಳಿತಿರುವುದನ್ನು ಕಂಡು ನನಗೆ ಆಶ್ಚರ್ಯವಾಗಿತ್ತುʼʼ ಎಂದು ನಗುತ್ತಾ ಹೇಳಿದ್ದಾರೆ.
ತಂದೆ ತಾಯಿ ಮಧ್ಯೆ ಒಂದೇ ಒಂದು ಜಗಳ
ತಮ್ಮ ತಂದೆ ತಾಯಿಯ ದಾಂಪತ್ಯ ಜೀವನದ ಕುರಿತು ಮುಕ್ತವಾಗಿ ಹಂಚಿಕೊಂಡ ರಾಹುಲ್ ಗಾಂಧಿ, ತಂದೆ ತಾಯಿ ಮಧ್ಯೆ ಅಪಾರ ಪ್ರೀತಿ ಇತ್ತು, ಅವರಿಬ್ಬರೂ ಜಗಳವಾಡುವುದನ್ನು ನಾನು ನೋಡಿದ್ದೇ ಅಪರೂಪ ಎಂದು ರಾಹುಲ್ ತಿಳಿಸಿದ್ದಾರೆ. ʼʼನಾನು ನೋಡಿದಂತೆ ಅವರಿಬ್ಬರ ನಡುವೆ ಜಗಳವಾಗಿದ್ದು ಒಂದೇ ಒಂದು ಬಾರಿ. ಅದು ಕೂಡ ನನಗೆ ಮತ್ತು ಪ್ರಿಯಂಕಾಗೆ ಆಟವಾಡಲು ಕಂಪ್ಯೂಟರ್ ಕೊಡಿಸುವ ವಿಚಾರದಲ್ಲಿ ಜಗಳವಾಗಿತ್ತು. ಅದನ್ನು ಬಿಟ್ಟರೆ ಅವರಿಬ್ಬರೂ ಪರಸ್ಪರ ಬಹಳ ಗೌರವ ಮತ್ತು ಪ್ರೀತಿಯಿಂದ ಇದ್ದರು.ʼʼ ಎಂದು ರಾಹುಲ್ ನೆನಪಿಸಿದ್ದಾರೆ.
ನಾಲ್ಕು ಬಾರಿ ಕ್ಯಾನ್ಸರ್ ವಿರುದ್ಧ ಹೋರಾಡಿದ್ದ ಸೋನಿಯಾ ಗಾಂಧಿ
ಈ ಮಾತುಗಳ ನಡುವೆ ರಾಹುಲ್ ಗಾಂಧಿ ಅವರು, ತಮ್ಮ ತಾಯಿ ಸೋನಿಯಾ ಗಾಂಧಿ ಅವರು, ʼʼತಮ್ಮ ಆತ್ಮಕಥೆಯಲ್ಲಿ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಸಂಪೂರ್ಣವಾಗಿ ವಿವರಿಸಿಲ್ಲ, ಅವರು ನಾಲ್ಕು ಬಾರಿ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆʼʼ ಎಂದು ಬಹಿರಂಗಪಡಿಸಿದರು. ʼʼನನ್ನ ತಾಯಿ ತಮ್ಮ ಜೀವನದಲ್ಲಿ ನಾಲ್ಕು ಬಾರಿ ಕ್ಯಾನ್ಸರ್ನಿಂದ ಗೆದ್ದು ಬಂದಿದ್ದಾರೆ. ನನ್ನ ಜೀವನದಲ್ಲಿ ಒಮ್ಮೆಯೂ ಅವರು ಭಯಪಟ್ಟಿದ್ದನ್ನು ಅಥವಾ ಸವಾಲುಗಳಿಗೆ ಹೆದರಿ ಹಿಂದೆ ಸರಿದಿದ್ದನ್ನು ನಾನು ನೋಡಿಲ್ಲ” ಎಂದು ರಾಹುಲ್ ಸೋನಿಯಾ ಗಾಂಧಿ ಅವರು ಎದುರಿಸಿದ ಆರೋಗ್ಯ ಸವಾಲುಗಳನ್ನು ನೆನೆದು ಭಾವುಕರಾಗಿದ್ದಾರೆ.