ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸನ್‌ರೈಸರ್ಸ್‌ಗೆ ಶಾಕ್‌; ಮುಂದಿನ ಐಪಿಎಲ್‌ ಆಡದಿರಲು ಟ್ರಾವಿಸ್ ಹೆಡ್ ನಿರ್ಧಾರ?

Travis Head: ಸ್ಫೋಟಕ ಬ್ಯಾಟರ್‌ ಟ್ರಾವಿಸ್ ಹೆಡ್‌ ಅವರ ಅನುಪಸ್ಥಿತಿಯು ಸನ್‌ರೈಸರ್ಸ್ ಹೈದರಾಬಾದ್‌ನ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಆದರೆ ಅವರು ಹಿಂದೆ ಸರಿದಿರುವುದರಿಂದ, ಗೋವಾದಲ್ಲಿ ಡಿಸೆಂಬರ್ 16ರಂದು ನಡೆಯಲಿರುವ ಹರಾಜಿಗಾಗಿ ಗಮನಾರ್ಹ ಮೊತ್ತವೊಂದು ಲಭ್ಯವಾಗಲಿದೆ.

ಮುಂದಿನ ಐಪಿಎಲ್‌ ಆಡದಿರಲು ಟ್ರಾವಿಸ್ ಹೆಡ್ ನಿರ್ಧಾರ?

Travis Head -

Abhilash BC
Abhilash BC Nov 17, 2026 2:35 PM

ಮುಂಬಯಿ, ನ.17: ಐಪಿಎಲ್ 2027(IPL 2027)ರ ಆರಂಭಕ್ಕೂ ಮುನ್ನ, ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್‌ ಟ್ರಾವಿಸ್ ಹೆಡ್‌(Travis Head) ಅವರು ಮುಂಬರುವ ಐಪಿಎಲ್ ಋತುವಿನಿಂದ ದೂರ ಉಳಿಯುವ ನಿರ್ಧಾರವನ್ನು ಫ್ರಾಂಚೈಸಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ ಅತ್ಯಂತ ಬಿಗಿಯಾಗಿರುವುದರಿಂದ, ತಮ್ಮ ಕೆಲಸದೊತ್ತಡವನ್ನು ನಿರ್ವಹಿಸಲು ಟ್ರಾವಿಸ್ ಹೆಡ್ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.

ಹೆಡ್ ಅವರ ಅನುಪಸ್ಥಿತಿಯು ಸನ್‌ರೈಸರ್ಸ್ ಹೈದರಾಬಾದ್‌ನ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಆದರೆ ಅವರು ಹಿಂದೆ ಸರಿದಿರುವುದರಿಂದ, ಗೋವಾದಲ್ಲಿ ಡಿಸೆಂಬರ್ 16ರಂದು ನಡೆಯಲಿರುವ ಹರಾಜಿಗಾಗಿ ಗಮನಾರ್ಹ ಮೊತ್ತವೊಂದು ಲಭ್ಯವಾಗಲಿದೆ. 2025ರ ಮೆಗಾ ಹರಾಜಿಗೂ ಮುನ್ನ, ತಂಡವು ಉಳಿಸಿಕೊಂಡ ಐವರು ಅನುಭವಿ (ಕ್ಯಾಪ್ಡ್) ಕ್ರಿಕೆಟಿಗರಲ್ಲಿ ಹೆಡ್ ಕೂಡ ಒಬ್ಬರಾಗಿದ್ದರು. ಅವರನ್ನು ಬರೋಬ್ಬರಿ 14 ಕೋಟಿ ರೂ.ಗಳಿಗೆ ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು.

ಹೀಗಾಗಿ, ಆಟಗಾರರನ್ನು ಬಿಡುಗಡೆ ಮಾಡಿದ ನಿರ್ಧಾರವನ್ನು ಐಪಿಎಲ್ ಅನುಮೋದಿಸಿದ ನಂತರ, ಹೈದರಾಬಾದ್ ತಂಡದ ಹರಾಜು ಮೊತ್ತವು ಆ ಮೊತ್ತದಷ್ಟು ಹೆಚ್ಚಾಗಲಿದೆ. 2025ರ ಮೆಗಾ ಹರಾಜಿಗೂ ಮುನ್ನ ತಂಡವೊಂದು ತಾನು ಉಳಿಸಿಕೊಂಡ ಕ್ರಿಕೆಟಿಗನನ್ನು ಬಿಡುಗಡೆ ಮಾಡಿದರೆ ಅಥವಾ ಬೇರೆ ತಂಡಕ್ಕೆ ವರ್ಗಾಯಿಸಿದರೆ, ಆ ತಂಡದ ಬಳಿ ಇರುವ ಹಣದ ಮಿತಿಯನ್ನು ಅಂದಿನ ನಿಯಮಗಳಿಗೆ ಅನುಗುಣವಾಗಿ ಸರಿಹೊಂದಿಸಲಾಗುತ್ತದೆ.

ಕೋಟಿ ವೇತನ ಕಡಿತದೊಂದಿಗೆ ಗುಜರಾತ್ ಟೈಟಾನ್ಸ್ ಸೇರಿದ ಹರ್ಷಲ್ ಪಟೇಲ್

ಸನ್‌ರೈಸರ್ಸ್ ಹೈದರಾಬಾದ್‌ನ ವಿಷಯದಲ್ಲಿ, ಯಾವುದೇ ಹೆಚ್ಚುವರಿ ಸೇರ್ಪಡೆ ಅಥವಾ ಕಡಿತ ಇರುವುದಿಲ್ಲ. ಏಕೆಂದರೆ, ನಾಲ್ಕು 'ಕ್ಯಾಪ್ಡ್' (ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ) ಕ್ರಿಕೆಟಿಗರನ್ನು ಉಳಿಸಿಕೊಳ್ಳಲು ಮೀಸಲಿಟ್ಟ 61 ಕೋಟಿ ರೂಪಾಯಿಗಳು, ತಂಡವು ಉಳಿಸಿಕೊಂಡಿರುವ ಇತರ ನಾಲ್ಕು ಆಟಗಾರರ ಒಟ್ಟು ವೇತನಕ್ಕೆ (ಹೆನ್ರಿಕ್ ಕ್ಲಾಸೆನ್ - 23 ಕೋಟಿ ರೂ., ಪ್ಯಾಟ್ ಕಮಿನ್ಸ್ - 18 ಕೋಟಿ ರೂ., ಅಭಿಷೇಕ್ ಶರ್ಮಾ - 14 ಕೋಟಿ ರೂ. ಮತ್ತು ನಿತೀಶ್ ಕುಮಾರ್ ರೆಡ್ಡಿ - 6 ಕೋಟಿ ರೂ.) ಸಮನಾಗಿರುತ್ತದೆ. 2024ರ ಐಪಿಎಲ್ ಹರಾಜಿನಲ್ಲಿ SRH ತಂಡವು ಹೆಡ್ ಅವರನ್ನು 6.8 ಕೋಟಿ ರೂಪಾಯಿಗೆ ಖರೀದಿಸಿತು.

ಹೆಡ್‌ ಮಾತ್ರವಲ್ಲದೆ ಆಸ್ಟ್ರೇಲಿಯಾದ ಇನ್ನೂ ಕೆಲ ಆಟಗಾರರು ಇಂತಹದ್ದೇ ನಿರ್ಧಾರ ಕೈಗೊಂಡರೂ ಅಚ್ಚರಿಯಿಲ್ಲ. ಏಕೆಂದರೆ, 2027ರಲ್ಲಿ ಸಾಕಷ್ಟು 'ಪ್ರಮುಖ ಹಾಗೂ ಆದ್ಯತೆಯ ಕ್ರಿಕೆಟ್' ಪಂದ್ಯಗಳು ನಿಗದಿಯಾಗಿರುವುದರಿಂದ, ತಂಡವು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಆಸ್ಟ್ರೇಲಿಯಾದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಆಗಸ್ಟ್ ತಿಂಗಳಲ್ಲೇ ಹೇಳಿದ್ದರು.

ಗುಜರಾತ್‌ ಸೇರಿದ ಹರ್ಷಲ್‌

ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಿಂದ ವೇಗಿ ಹರ್ಷಲ್‌ ಪಟೇಲ್‌ ಅವರು 4 ಕೋಟಿ ರೂ.ಗೆ ಗುಜರಾತ್‌ ಟೈಟಾನ್ಸ್‌ ಸೇರಿದರು. ಕಳೆದ ಹರಾಜಿನಲ್ಲಿ ಹೈದರಾಬಾದ್‌ ತಂಡ ಅವರನ್ನು 8 ಕೋಟಿಗೆ ಖರೀದಿ ಮಾಡಿತ್ತು. ಹರ್ಷಲ್‌ ಎರಡು ಬಾರಿ ಪರ್ಪಲ್‌ ಕ್ಯಾಪ್‌ ವಿತೇತರಾಗಿದ್ದಾರೆ.