Rajnath Singh: ಸಿಂಧ್ ಪ್ರಾಂತ್ಯ ಮತ್ತೆ ಭಾರತದ ಭಾಗವಾಗಲಿದೆ; ರಾಜನಾಥ್ ಸಿಂಗ್ ಎಚ್ಚರಿಕೆಗೆ ಪತರಗುಟ್ಟಿದ ಪಾಕಿಸ್ತಾನ
Sindh Region: ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಪಾಕಿಸ್ತಾನದ ಸಿಂಧ್ ಪ್ರಾಂತ್ಯ ಭಾರತದ ಕೈವಶವಾಮಾಡುತ್ಗುತಿದೆ. ಇದಕ್ಕೆ ಕಾರಣವಾಗಿದ್ದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ʼʼಪಾಕಿಸ್ತಾನದ ಸಿಂಧ್ ಪ್ರಾಂತ್ಯ ಭಾರತದ ಕೈವಶವಾಗಬಹುದು, ಗಡಿ ಬದಲಾಗಬಹುದುʼʼ ಎಂದಿದ್ದಾರೆ.
ರಾಜನಾಥ್ ಸಿಂಗ್ (ಸಂಗ್ರಹ ಚಿತ್ರ). -
ದೆಹಲಿ, ನ. 23: ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಪತರಗುಟ್ಟುವಂತೆ ಮಾಡಿದ ಭಾರತ ಇದೀಗ ನೆರೆ ರಾಷ್ಟ್ರಕ್ಕೆ ಮತ್ತೊಂದು ಎಚ್ಚರಿಕೆ ನೀಡಿದೆ. ʼʼಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಪಾಕಿಸ್ತಾನದ ಸಿಂಧ್ ಪ್ರಾಂತ್ಯ (Sindh region) ಭಾರತದ ಕೈವಶವಾಗಬಹುದು, ಗಡಿ ಬದಲಾಗಬಹುದುʼʼ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಈ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು. 1947ರ ದೇಶ ವಿಭಜನೆಯ ವೇಳೆ ಹಲವು ನಾಯಕರ ವಿರೋಧದ ನಡೆವೆಯೂ ಸಿಂಧ್ ಪ್ರಾಂತ್ಯ ಪಾಕಿಸ್ತಾನದ ಕೈವಶವಾಗಿತ್ತು.
ಸಿಂಧ್ ಪ್ರಾಂತ್ಯ ಪಾಕಿಸ್ತಾನಕ್ಕೆ ಸೇರುವುದು ಹಿಂದೂಗಳಿಗೆ ಇಷ್ಟವಿರಲಿಲ್ಲ. ಎಲ್.ಕೆ. ಅಡ್ವಾಣಿಯಂತಹ ಧೀಮಂತ ನಾಯಕರು ಈ ವಿಭಜನೆಯನ್ನು ವಿರೋಧಿಸಿದ್ದರು ಎಂದು ರಾಜನಾಥ್ ಸಿಂಗ್ ನೆನಪಿಸಿಕೊಂಡರು.
ರಾಜನಾಥ್ ಸಿಂಗ್ ಹೇಳಿದ್ದೇನು?
"ಲಾಲ್ ಕೃಷ್ಣ ಅಡ್ವಾಣಿ ತಮ್ಮ ಪುಸ್ತಕವೊಂದರಲ್ಲಿ ಸಿಂಧಿ ಹಿಂದೂಗಳು, ವಿಶೇಷವಾಗಿ ಅವರ ಪೀಳಿಗೆಯವರು, ಭಾರತದಿಂದ ಸಿಂಧ್ ಪ್ರಾಂತ್ಯವನ್ನು ಪ್ರತ್ಯೇಕಿಸಿರುವುದನ್ನು ಇನ್ನೂ ಒಪ್ಪಿಕೊಂಡಿಲ್ಲ ಎಂದು ಬರೆದಿದ್ದಾರೆ. ಸಿಂಧ್‌ನಲ್ಲಿ ಮಾತ್ರವಲ್ಲ ಭಾರತದಾದ್ಯಂತ ಇರುವ ಹಿಂದೂಗಳು ಸಿಂಧೂ ನದಿಯನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಸಿಂಧ್‌ನಲ್ಲಿರುವ ಅನೇಕ ಮುಸ್ಲಿಮರು ಕೂಡ ಸಿಂಧೂ ನದಿಯ ನೀರು ಮೆಕ್ಕಾದ ಆಬ್-ಎ-ಜಮ್‌ಜಮ್‌ನಷ್ಟೇ ಪವಿತ್ರ ಎಂದು ನಂಬಿದ್ದರು. ಇದನ್ನು ಅಡ್ವಾಣಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ" ಎಂದು ಹೇಳಿದರು.
ರಾಜನಾಥ್ ಸಿಂಗ್ ಅವರ ಭಾಷಣ:
#WATCH | Delhi: Defence Minister Rajnath Singh says, "...Today, the land of Sindh may not be a part of India, but civilisationally, Sindh will always be a part of India. And as far as land is concerned, borders can change. Who knows, tomorrow Sindh may return to India again..."… pic.twitter.com/9Wp1zorTMt
— ANI (@ANI) November 23, 2025
"ಇಂದು ಸಿಂಧ್ ಭಾರತದ ಭಾಗವಲ್ಲದಿರಬಹುದು. ಆದರೆ ನಾಗರಿಕತೆಯ ದೃಷ್ಟಿಯಿಂದ ಸಿಂಧ್ ಯಾವಾಗಲೂ ಭಾರತದ ಭಾಗವೇ ಆಗಿರುತ್ತದೆ. ಗಡಿಗಳು ಬದಲಾಗಬಹುದು. ಯಾರಿಗೆ ಗೊತ್ತು, ನಾಳೆ ಸಿಂಧ್ ಮತ್ತೆ ಭಾರತಕ್ಕೆ ಸೇರಬಹುದು. ಸಿಂಧೂ ನದಿಯನ್ನು ಪವಿತ್ರವೆಂದು ಪರಿಗಣಿಸುವ ನಮ್ಮ ಸಿಂಧ್ ಜನರು ಯಾವಾಗಲೂ ನಮ್ಮವರೇ ಆಗಿರುತ್ತಾರೆ. ಅವರು ಎಲ್ಲೇ ಇದ್ದರೂ, ಅವರು ಯಾವಾಗಲೂ ನಮ್ಮವರೇ" ಎಂದು ರಕ್ಷಣಾ ಸಚಿವರು ಮಾರ್ಮಿಕವಾಗಿ ನುಡಿದರು. ಸದ್ಯ ಅವರ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ರಾಜನಾಥ್ ಸಿಂಗ್ ಹಿಂದೆಯೂ ಇದೇ ರೀತಿಯ ಹೇಳಿಕೆ ನೀಡಿದ್ದರು. ಸೆಪ್ಟೆಂಬರ್ 22ರಂದು ಮೊರಾಕೊದಲ್ಲಿ ಭಾರತೀಯ ಸಮುದಾಯದೊಂದಿಗೆ ನಡೆದ ಸಂವಾದದಲ್ಲಿ ಅವರು, ಪಿಒಕೆಯಲ್ಲಿರುವ ಜನರು ಸ್ವಾತಂತ್ರ್ಯವನ್ನು ಬಯಸುತ್ತಿರುವುದರಿಂದ ಯಾವುದೇ ಯುದ್ಧ ಇಲ್ಲದೆ ಭಾರತವು ಮರಳಿ ಪಡೆಯುವ ವಿಶ್ವಾಸವಿದೆ ಎಂದು ಹೇಳಿದ್ದರು. "ಪಿಒಕೆ ನಮ್ಮ ದೇಶದ ಭಾಗವಾಗಲಿದೆ. ಪಿಒಕೆಯಲ್ಲಿ ಈ ಬಗ್ಗೆ ಬೇಡಿಕೆ ಕೇಳಿ ಬರುತ್ತಿದೆ. ನೀವೂ ಈ ರೀತಿಯ ಘೋಷಣೆ ಕೇಳಿರಬಹುದು" ಎಂದು ಸಿಂಗ್ ತಿಳಿಸಿದ್ದರು.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ 26 ಮಂದಿಯನ್ನು ಹತ್ಯೆಗೈದ ಪಾಕಿಸ್ತಾನದ ಉಗ್ರರ ವಿರುದ್ದ ಭಾರತ ಆಪರೇಷನ್ ಸಿಂದೂರ್ ಮೂಲಕ ಸೇಡು ತೀರಿಸಿಕೊಂಡಿತ್ತು. ಈ ವೇಳೆ ಪಿಒಕೆಗೆ ನುಗ್ಗಿ ಭಾರತಕ್ಕೆ ಸೇರಿದ ಪ್ರದೇಶವನ್ನು ಭದ್ರಪಡಿಸಿಕೊಳ್ಳಬೇಕಾಗಿತ್ತು ಎಂದು ಕೆಲವು ಆಗ್ರಹಿಸಿದ್ದರು. ಇದೀಗ ರಾಜನಾಥ್ ಸಿಂಗ್ ಸಿಂಧ್ ಪ್ರಾಂತ್ಯದ ಕುರಿತು ನೀಡಿರುವ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.