ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Attack: ಉಗ್ರರ ದಾಳಿಯಿಂದ ಪ್ರವಾಸಿಗರನ್ನು ರಕ್ಷಿಸಿದ ಸಹೋದರಿಯರು

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯಲ್ಪಡುವ ಬೈಸರನ್ ಕಣಿವೆಯಲ್ಲಿ ಉಗ್ರರ ಎದುರು ದಿಟ್ಟವಾಗಿ ನಿಂತ ಸಹೋದರಿಯರಾದ ರುಬೀನಾ (14) ಮತ್ತು ಮುಮ್ತಾಜಾ (16) ಅನೇಕ ಪ್ರವಾಸಿಗರ ಪ್ರಾಣ ರಕ್ಷಿಸಿದ್ದಾರೆ. ಸದ್ಯ ಅವರ ಈ ಸಾಹಸಗಾಥೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಹಲ್ಗಾಮ್‌ನಲ್ಲಿ ಕೇಳುತ್ತಿದೆ ಈಗ ಸಹೋದರಿಯರ ಸಾಹಸಗಾಥೆ

ಶ್ರೀನಗರ: ದಕ್ಷಿಣ ಕಾಶ್ಮೀರದ (Kashmir) ಪಹಲ್ಗಾಮ್‌ (Pahalgam) ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏ. 22ರಂದು ನಡೆದ ಘಟನೆಯ ಕರಾಳ ನೆನಪು ಯಾರೂ ಮರೆಯುವಂತಿಲ್ಲ. ಸಾಕಷ್ಟು ಪ್ರವಾಸಿಗರು ಇದರಲ್ಲಿ ಜೀವ ಕಳೆದುಕೊಂಡರೆ, ಇನ್ನು ಕೆಲವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಕಷ್ಟು ಹೋರಾಡಿದ್ದಾರೆ. ಈ ನಡುವೆ ಮತ್ತೆ ಕೆಲವರು ಭಯೋತ್ಪಾದಕರ ದಾಳಿಗೆ (Terrorists Attack) ಸಿಲುಕಿದವರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟಿದ್ದಾರೆ. ಇವರಲ್ಲಿ ರುಬೀನಾ ಮತ್ತು ಮುಮ್ತಾಜಾ ಸಹೋದರಿಯರು ಕೂಡ ಸೇರಿದ್ದಾರೆ. ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ರಕ್ಷಿಸಲು ಮುಂದಾದ ಇವರು ಈಗ ಭಯೋತ್ಪಾದಕರ ವಿರುದ್ಧ ಹೋರಾಡಿ ಹೀರೋಗಳೆಂದೆನಿಸಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯಲ್ಪಡುವ ಸುಂದರ ಬೈಸರನ್ ಕಣಿವೆಯಲ್ಲಿ ಉಗ್ರರ ಎದುರು ಈ ಸಹೋದರಿಯರು ದಿಟ್ಟವಾಗಿ ನಿಂತರು. ಅವರ ನೆಲದಲ್ಲಿ ಭಯಾನಕ ದೃಶ್ಯ ಕಂಡಾಗ ಓಡಿಹೋಗುವ ಬದಲು ಅಲ್ಲಿ ಇದ್ದವರ ಪ್ರಾಣ ರಕ್ಷಿಸಲು ಮುಂದಾದರು.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಮಯದಲ್ಲಿ, ಗುಜ್ಜರ್- ಬಕೇರ್‌ವಾಲ್ ಸಮುದಾಯದ ಹದಿಹರೆಯದ ಸಹೋದರಿಯರಾದ ರುಬೀನಾ ಮತ್ತು ಮುಮ್ತಾಜಾ ಭಯಭೀತರಾದ ಪ್ರವಾಸಿಗರನ್ನು ರಕ್ಷಿಸಿ, ಅವರಿಗೆ ಆಶ್ರಯ ನೀಡಿ ಗಮನ ಸೆಳೆದಿದ್ದಾರೆ.

ಗುಜ್ಜರ್-ಬಕೇರ್ವಾಲ್ ಸಮುದಾಯದ ಹೆಣ್ಣುಮಕ್ಕಳಾದ ರುಬೀನಾ (14) ಮತ್ತು ಮುಮ್ತಾಜಾ (16) ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಮಯದಲ್ಲಿ ಹಲವಾರು ಪ್ರವಾಸಿಗರನ್ನು ರಕ್ಷಿಸಿದ್ದಾರೆ. ತನ್ನ ಕಾಲು ಮುರಿದಿದ್ದರೂ ಮುಮ್ತಾಜಾ ಪ್ರವಾಸಿಗರ ಮಗುವನ್ನು ಸುರಕ್ಷಿತವಾಗಿ ಹೊತ್ತೊಯ್ದರು. ಸಹೋದರಿಯರು ಚೆನ್ನೈನಿಂದ ಬಂದಿದ್ದ ದಂಪತಿಯನ್ನು ರಕ್ಷಿಸಿದರು.

ಅನೇಕರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮಾರ್ಗದರ್ಶನ ಮಾಡಿದರು. ಹಲವಾರು ಮಂದಿಗೆ ಅವರು ತಮ್ಮ ಮನೆಯಲ್ಲಿ ಆಶ್ರಯ, ನೀರನ್ನು ಒದಗಿಸಿದರು.

ಇದನ್ನೂ ಓದಿ: ‌Viral Video: ವಡಾಪಾವ್ ತಿಂದ ಹಾಂಗ್‌ಕಾಂಗ್‌ ಯುವತಿಯ ರಿಯಾಕ್ಷನ್‌ ಹೇಗಿತ್ತು? ಈ ವಿಡಿಯೊ ನೋಡಿ

ಭಯೋತ್ಪಾದಕರು ದಾಳಿ ಮಾಡಿದಾಗ ನಾವು ನಮ್ಮ ಬಗ್ಗೆ ಯೋಚಿಸಲಿಲ್ಲ ಎನ್ನುತ್ತಾಳೆ ಕಾಶ್ಮೀರದ ಮೊಲ ಹುಡುಗಿ ಎಂದೇ ಕರೆಯಲ್ಪಡುವ ರುಬೀನಾ. ಅವಳು ಇಲ್ಲಿಗೆ ಪ್ರವಾಸಗರಿಗೆ ಫೋಟೊ ತೆಗೆದುಕೊಳ್ಳಲು ತನ್ನ ಮೊಲವನ್ನು ನೀಡುವುದರಿಂದ ಎಲ್ಲರೂ ಅವಳನ್ನು ಕಾಶ್ಮೀರದ ಮೊಲ ಹುಡುಗಿ ಎಂದೇ ಕರೆಯುತ್ತಾರೆ.

ನಾವು ಮೂರು ಬಾರಿ ಸ್ಥಳಕ್ಕೆ ಹೋಗಿ ಯಾರಿಗಾದರೂ ನಮ್ಮ ಸಹಾಯದ ಅಗತ್ಯವಿದೆಯೇ ಎಂಬುದನ್ನು ನೋಡಿದೆವು. ಪ್ರವಾಸಿಗರ ಬಗ್ಗೆ ಮಾತ್ರ ನಾವು ಆ ದಿನ ಯೋಚಿಸಿದೆವು. ಅವರಿಗೆ ನಡೆಯಲು ಸಾಧ್ಯವಾಗಲಿಲ್ಲ. ಅವರು ಭಯಭೀತರಾಗಿದ್ದರು. ಅವರು ಕೇಳಿದ್ದು ಸಹಾಯ ಮಾತ್ರ ಎಂಬುದಾಗಿ ಆಕೆ ಆ ಭಯಾನಕ ದಿನದ ನೆನಪು ಮಾಡಿಕೊಳ್ಳುತ್ತಾಳೆ.

ಬೈಸರನ್ ಪರಿಸರ ಉದ್ಯಾನದಲ್ಲಿ ಮಾರ್ಗದರ್ಶಿ ಮತ್ತು ಸಹಾಯಕಳಾಗಿ ಕೆಲಸ ಮಾಡುತ್ತಿರುವ ರುಬೀನಾ, ದಾಳಿ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು ಚೆನ್ನೈನ ದಂಪತಿಯೊಂದಿಗೆ ಅಲ್ಲಿಗೆ ಬಂದಿರುವುದಾಗಿ ತಿಳಿಸಿದ್ದಾಳೆ.