ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ: ಪೊಲೀಸ್ ದೌರ್ಜನ್ಯ ಆರೋಪ ತನಿಖೆಗೆ ಸುಪ್ರೀಂ ಕೋರ್ಟ್ ಉನ್ನತಾಧಿಕಾರ ಸಮಿತಿ

NEET Stir Police Action: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸ್ ದೌರ್ಜನ್ಯ ಮತ್ತು ಹಿಂಸಾಚಾರ ನಡೆದಿದೆ ಎಂಬ ಆರೋಪಗಳ ತನಿಖೆಗೆ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಿದೆ. ಮಹಿಳೆಯ ಮೇಲಿನ ಕಿರುಕುಳ, ಅತಿಯಾದ ಬಲ ಪ್ರಯೋಗ, ಪೆಲೆಟ್ ಗನ್, ಲಾಠಿ ಚಾರ್ಜ್, ಅಶ್ರುವಾಯು ಬಳಕೆ, ಪ್ರತಿಭಟನಾಕಾರರ ಮೇಲಿನ ನಿಗಾ ಹಾಗೂ ಗಾಯಗೊಂಡವರಿಗೆ ಮಧ್ಯಂತರ ಪರಿಹಾರ ನೀಡುವ ವಿಚಾರಗಳನ್ನು ಸಮಿತಿ ಪರಿಶೀಲಿಸಲಿದೆ. ಸಮಿತಿಯು ನಿರಂತರವಾಗಿ ತನಿಖೆ ನಡೆಸಿ ಮಧ್ಯಂತರ ವರದಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ.

ಜೆನ್‌ ಝೀ ಪ್ರತಿಭಟನೆ: ತನಿಖೆಗೆ ಸುಪ್ರೀಂ ಕೋರ್ಟ್ ಸಮಿತಿ

ದೆಹಲಿಯಲ್ಲಿ ನಡೆದ ಪ್ರತಿಭಟನೆ (ಸಂಗ್ರಹ ಚಿತ್ರ) -

Profile
Sushmitha Jain Aug 20, 2026 6:37 PM

ನವದೆಹಲಿ, ಆ. 20: ಕಳೆದ ತಿಂಗಳು ದೆಹಲಿಯ ಜಂತರ್ ಮಂತತರ್‌ನಲ್ಲಿ (Jantar Mantar) ಆಯೋಜಿಸಿದ್ದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ (NEET Paper Leak) ವಿರೋಧಿ ವಿದ್ಯಾರ್ಥಿ ಪ್ರತಿಭಟನೆಗಳ (Student Protests) ವೇಳೆ ನಡೆದ ಹಿಂಸಾಚಾರ ಮತ್ತು ಪೊಲೀಸ್ ದೌರ್ಜನ್ಯ ಆರೋಪಗಳ ತನಿಖೆಗೆ ಸುಪ್ರೀಂ ಕೋರ್ಟ್(Supreme Court) ಉನ್ನತಾಧಿಕಾರ ಸಮಿತಿ (High-Powered Committee - HPC) ರಚಿಸಿದೆ. ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಅವರ ನೇತೃತ್ವದಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ. ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮ ಕಾನೂನುಬದ್ಧವಾಗಿತ್ತೇ, ಅಗತ್ಯಕ್ಕಿಂತ ಹೆಚ್ಚಿನ ಬಲ ಪ್ರಯೋಗಿಸಲಾಗಿತ್ತೇ ಎಂಬುದನ್ನು ಸಮಿತಿ ಪರಿಶೀಲಿಸಲಿದೆ. ಪ್ರತಿಭಟನಾಕಾರರಿಂದಲೂ ಹಿಂಸಾಚಾರ ನಡೆದ ಆರೋಪಗಳ ತನಿಖೆಯನ್ನೂ ಸಮಿತಿ ನಡೆಸಲಿದೆ.

ಸಮಿತಿಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರವಿ ಶಂಕರ್ ಝಾ, ಮಾಜಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಶಾಲಿಂದರ್ ಕೌರ್, ಮಾಜಿ ಸಿಬಿಐ ನಿರ್ದೇಶಕ ರಿಷಿ ಕುಮಾರ್ ಶುಕ್ಲಾ ಹಾಗೂ ಮೇಘಾಲಯ ಮಾಜಿ ಡಿಜಿಪಿ ಎಲ್.ಆರ್. ಬಿಷ್ಣೋಯ್ ಸದಸ್ಯರು.

ಸಮಿತಿಯ ಸದಸ್ಯರ ಅನುಭವ, ಪರಿಣತಿ ಮತ್ತು ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ರಚಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಸಮಿತಿಯ ಶಿಫಾರಸುಗಳು ಪ್ರಕರಣದ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲು ನ್ಯಾಯಾಲಯಕ್ಕೆ ನೆರವಾಗಲಿವೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದೆ.

ಗಮನಾರ್ಹವಾಗಿ, ಈ ತನಿಖೆ ಕೇವಲ ಒಂದು ಬಾರಿಯ ವಿಚಾರಣೆಯಾಗಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸಮಿತಿಯು ಪ್ರಕರಣದ ಬೆಳವಣಿಗೆಗಳು ಮತ್ತು ಸಮಸ್ಯೆಗಳನ್ನು ನಿರಂತರವಾಗಿ ಹಾಗೂ ನಿಯತ ಅವಧಿಯಲ್ಲಿ ಪರಿಶೀಲಿಸಿ, ಮಧ್ಯಂತರ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಅಗತ್ಯವಿದ್ದರೆ ಅದರ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಸೂಕ್ತ ನಿರ್ದೇಶನಗಳನ್ನು ನೀಡಬಹುದು.

20 ರುಪಾಯಿ ಲಂಚ ಪ್ರಕರಣ ಬರೋಬ್ಬರಿ 30 ವರ್ಷಗಳ ಬಳಿಕ ಅಂತ್ಯ

ಉನ್ನತಾಧಿಕಾರ ಸಮಿತಿ ಏನೆಲ್ಲ ಪರಿಶೀಲಿಸಲಿದೆ?

ಮಹಿಳಾ ಪ್ರತಿಭಟನಾಕಾರರ ವಿರುದ್ಧ ನಡೆದ ಹಿಂಸಾಚಾರ, ಕಿರುಕುಳ ಮತ್ತು ಲೈಂಗಿಕ ಕಿರುಕುಳ ಆರೋಪಗಳಿಗೆ ಸಮಿತಿ ಮೊದಲ ಆದ್ಯತೆ ನೀಡಲಿದೆ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ಕ್ರಮದಿಂದ ಪ್ರತಿಭಟನಾಕಾರರಿಗೆ ಗಂಭೀರ ಗಾಯಗಳಾಗಿವೆ ಎಂಬ ಆರೋಪಗಳನ್ನೂ ಪರಿಶೀಲಿಸಲಾಗುವುದು. ಬಲ ಪ್ರಯೋಗಕ್ಕೆ ಕಾರಣವಾದ ಆದೇಶ, ಕ್ರಮಕ್ಕೆ ಹೊಣೆಗಾರರಾದ ಅಧಿಕಾರಿಗಳು ಹಾಗೂ ಬಲ ಪ್ರಯೋಗಿಸುವಾಗ ಕಾನೂನು, ನಿಯಮಗಳು ಅಥವಾ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ.

ಪ್ರತಿಭಟನಾಕಾರರ ವಿರುದ್ಧ ಪೆಲೆಟ್ ಗನ್, ಎಲೆಕ್ಟ್ರಿಕ್ ಬ್ಯಾಟನ್, ಲಾಠಿ ಚಾರ್ಜ್ ಮತ್ತು ಅಶ್ರುವಾಯು ಬಳಸಿರುವ ಆರೋಪಗಳ ಕುರಿತು ಸಮಿತಿ ಪರಿಶೀಲನೆ ನಡೆಸಲಿದೆ. ಈ ಕ್ರಮಗಳಿಗೆ ಮುನ್ನ ಸಮರ್ಪಕ ಎಚ್ಚರಿಕೆ ನೀಡಲಾಗಿತ್ತೇ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಬಲ ಪ್ರಯೋಗಿಸಲಾಗಿತ್ತೇ ಎಂಬುದನ್ನೂ ಪರಿಶೀಲಿಸಲಾಗುವುದು.

ಶಾಂತಿಯುತ ಪ್ರತಿಭಟನೆಗಳು, ಸಾರ್ವಜನಿಕ ಸಭೆಗಳು ಮತ್ತು ಜನಸಮೂಹಗಳ ಸಂದರ್ಭಗಳಲ್ಲಿ ಪೊಲೀಸರ ಪ್ರತಿಕ್ರಿಯೆ ಸಮಂಜಸ ಮತ್ತು ಮಿತವಾಗಿತ್ತೇ ಎಂಬುದರ ಮೌಲ್ಯಮಾಪನವೂ ನಡೆಯಲಿದೆ. ಪಂಪ್-ಆ್ಯಕ್ಷನ್ ಅಥವಾ ಪ್ರೊಜೆಕ್ಟೈಲ್-ಆ್ಯಕ್ಷನ್ ಗನ್‌ಗಳಿಂದ ಹಾರಿಸಲಾಗುವ ಲೋಹದ ಪೆಲೆಟ್‌ಗಳು ಅಥವಾ ಇತರ ಪ್ರಕ್ಷೇಪಕಗಳನ್ನು ನಿಷೇಧಿಸುವ ಅಗತ್ಯವಿದೆಯೇ ಎಂಬುದನ್ನೂ ಸಮಿತಿ ಪರಿಶೀಲಿಸಲಿದೆ.

ಬಂಧಿಸುವಾಗ ಅಥವಾ ಬಲ ಪ್ರಯೋಗಿಸುವ ಸಂದರ್ಭಗಳಲ್ಲಿ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಸರಿಯಾದ ಸಮವಸ್ತ್ರ ಧರಿಸಿದ್ದರೇ ಹಾಗೂ ಅವರ ಹೆಸರಿನ ಫಲಕಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವೆಯೇ ಎಂಬುದೂ ತನಿಖೆಯ ಭಾಗವಾಗಲಿದೆ. ಪ್ರತಿಭಟನಾಕಾರರ ಮೇಲಿನ ಪೊಲೀಸ್ ನಿಗಾ ಮತ್ತು ಕಣ್ಗಾವಲು ಕ್ರಮಗಳು ಸಂವಿಧಾನ ನೀಡಿರುವ ಗೌಪ್ಯತೆ ಮತ್ತು ಶಾಂತಿಯುತ ಸಭೆಯ ಹಕ್ಕಿಗೆ ಅನುಗುಣವಾಗಿದ್ದವೆಯೇ ಎಂಬುದನ್ನೂ ಸಮಿತಿ ಪರಿಶೀಲಿಸಲಿದೆ.

ಇದರ ಜತೆಗೆ, ಗಾಯಗೊಂಡ ಪೊಲೀಸ್ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರಿಗೆ ಮಧ್ಯಂತರ ಪರಿಹಾರ ನೀಡುವ ಸಾಧ್ಯತೆಯನ್ನೂ ಉನ್ನತಾಧಿಕಾರ ಸಮಿತಿ ಪರಿಗಣಿಸಲಿದೆ.