ಸಂಕ್ರಾಂತಿಯಂದೇ ಹೈದರಾಬಾದ್‌ನಲ್ಲಿ ದೇವಾಲಯ ಧ್ವಂಸ; ಉದ್ವಿಗ್ನ ವಾತಾವರಣ: ಸ್ಥಳಕ್ಕೆ ಅಸಾದುದ್ದೀನ್ ಓವೈಸಿ ಭೇಟಿ
Temple Vandalism: ಹೈದರಾಬಾದ್‌ನಲ್ಲಿ ದೇವಾಲಯ ಅಪವಿತ್ರಗೊಳಿಸಿದ ಘಟನೆ ನಡೆದಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
ಹೈದರಾಬಾದ್‌ನಲ್ಲಿ ದೇವಾಲಯವನ್ನು ಧ್ವಂಸ ಮಾಡಲಾಗಿದೆ -
ಹೈದರಾಬಾದ್, ಜ. 15: ಗುರುವಾರ (ಜನವರಿ14) ರಾತ್ರಿ ಅಪರಿಚಿತ ವ್ಯಕ್ತಿಗಳು ದೇವಾಲಯವನ್ನು ಧ್ವಂಸ ಮಾಡಿದ (Temple Vandalism) ನಂತರ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಆಘಾತಕಾರಿ ಘಟನೆ ಹೈದರಾಬಾದ್‌ನ (Hyderabad) ಪುರಾನಪುಲ್ ದರ್ವಾಜಾದಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಸ್ಥಳದ ಬಳಿ ಜನಸ್ತೋಮ ಸೇರಿದೆ. ಹಾನಿಗೊಂಡ ವಿಚಾರ ತಿಳಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಶೀಘ್ರದಲ್ಲೇ ಸ್ಥಳೀಯರು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಜಮಾಯಿಸಿದರು. ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಹಿರಿಯ ಪೊಲೀಸ್ ಅಧಿಕಾರಿಗಳು ಪ್ರದೇಶದ ನಿವಾಸಿಗಳ ಬಳಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಹಾನಿಗೊಳಗಾದ ವಿಗ್ರಹದ ಪುನಃಸ್ಥಾಪನೆಯ ಮೇಲ್ವಿಚಾರಣೆ ನಡೆಸಿದರು. ಮುನ್ನೆಚ್ಚರಿಕೆಯ ಕ್ರಮವಾಗಿ ಪುರನಾಪುಲ್ ಮತ್ತು ಸುತ್ತಮುತ್ತ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ಪ್ರವಾಸಿಗರ ಬೇಜವಾಬ್ದಾರಿಗೆ ಸುಟ್ಟು ಕರಕಲಾಯ್ತು ಚೀನಾದ ಪುರಾತನ ದೇಗುಲ!
ಶುಕ್ರವಾರ ಬೆಳಗ್ಗೆ, ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಆ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಅವರು ನಿವಾಸಿಗಳು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದರು. ಜನರು ಶಾಂತವಾಗಿರಲು ಮತ್ತು ಅಧಿಕಾರಿಗಳೊಂದಿಗೆ ಸಹಕರಿಸಲು ಮನವಿ ಮಾಡಿದರು. ಶಾಂತಿಯನ್ನು ಕಾಪಾಡಿಕೊಳ್ಳಲು ಕರೆ ನೀಡಿದ ಅವರು ಪೊಲೀಸರು ಪರಿಸ್ಥಿತಿ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ವಿಧ್ವಂಸಕ ಕೃತ್ಯದ ಹಿಂದೆ ಯಾರಿದ್ದಾರೆಂದು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಸಾರ್ವಜನಿಕರು ವದಂತಿಗಳನ್ನು ನಂಬಬಾರದು ಅಥವಾ ಹರಡಬಾರದು ಎಂದು ಅಧಿಕಾರಿಗಳು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ವಿಡಿಯೊ ವೀಕ್ಷಿಸಿ:
Deity of Goddess and Shivaji dhwaj were desecrated in Puranapul, Hyderabad.
— BJP Telangana (@BJP4Telangana) January 15, 2026
An organized and systematic desecration of Hindu temples is underway in Telangana.
Congress government to protect its vote bank has allowed these extremist forces to take over the state. pic.twitter.com/NjvwxSk2it
ʼʼಹೈದರಾಬಾದ್‌ನ ಪುರನಪುಲ್‌ನಲ್ಲಿ ದೇವಿಯ ವಿಗ್ರಹ ಮತ್ತು ಶಿವಾಜಿ ಧ್ವಜವನ್ನು ಅಪವಿತ್ರಗೊಳಿಸಲಾಗಿದೆ. ತೆಲಂಗಾಣದಲ್ಲಿ ಹಿಂದೂ ದೇವಾಲಯಗಳ ಸಂಘಟಿತ ಮತ್ತು ವ್ಯವಸ್ಥಿತ ಅಪವಿತ್ರಕರಣ ನಡೆಯುತ್ತಿದೆ. ತನ್ನ ಮತ ಬ್ಯಾಂಕ್ ಅನ್ನು ರಕ್ಷಿಸುವ ಸಲುವಾಗಿ ಕಾಂಗ್ರೆಸ್ ಸರ್ಕಾರವು ಈ ಅತಿವಾದಿ ಶಕ್ತಿಗಳಿಗೆ ರಾಜ್ಯವನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಿದೆʼʼ ಎಂದು ತೆಲಂಗಾಣ ಬಿಜೆಪಿಯ ಎಕ್ಸ್ ಖಾತೆ ಪೋಸ್ಟ್ ಮಾಡಿದೆ. ತೆಲಂಗಾಣ ಬಿಜೆಪಿ ನಾಯಕ ಎನ್. ರಾಮಚಂದರ್ ರಾವ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ʼʼಕಾಂಗ್ರೆಸ್ ಸರ್ಕಾರ ಗಾಢ ನಿದ್ರೆಯಲ್ಲಿರುವಾಗ ಉಗ್ರರು ತೆಲಂಗಾಣವನ್ನು ವಶಪಡಿಸಿಕೊಂಡಿದ್ದಾರೆ. ಕಾಂಗ್ರೆಸ್ ತನ್ನ ಮತಬ್ಯಾಂಕ್ ವಿರುದ್ಧ ಎಂದಿಗೂ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ ದೇವಾಲಯ ಅಪವಿತ್ರಗೊಳಿಸುವಿಕೆ ನಡೆಯುತ್ತಿದೆ. ಹುಸಿ ಜಾತ್ಯತೀತರು ಈ ವಿಷಯದ ಬಗ್ಗೆ ಮೌನ ವಹಿಸಿದ್ದಾರೆ. ಬಿಜೆಪಿಯು ನಮ್ಮ ದೇವಾಲಯಗಳನ್ನು ರಕ್ಷಿಸಲು ಅಚಲ ಸಂಕಲ್ಪದೊಂದಿಗೆ ದೃಢವಾಗಿ ನಿಂತು ಹೋರಾಡಲಿದೆʼʼ ಎಂದು ಎನ್. ರಾಮಚಂದರ್ ರಾವ್ ಹೇಳಿದ್ದಾರೆ.