ಭಾರಿ ಗಾಳಿ-ಮಳೆ ಅಬ್ಬರ: ದೆಹಲಿ ಏರ್‌ಪೋರ್ಟ್‌ನಲ್ಲಿ 3 ಏರ್ ಇಂಡಿಯಾ ವಿಮಾನಗಳಿಗೆ ಹಾನಿ
ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ನಿಲುಗಡೆಗೊಂಡಿದ್ದ ಮೂರು ಏರ್ ಇಂಡಿಯಾ ವಿಮಾನಗಳು ಭಾರಿ ಗಾಳಿ ಮತ್ತು ಮಳೆಯ ಪರಿಣಾಮ ಹಾನಿಗೊಳಗಾಗಿವೆ. ಬಿರುಗಾಳಿಯಿಂದ ಸ್ಥಳಾಂತರಗೊಂಡ ಗ್ರೌಂಡ್ ಸಪೋರ್ಟ್ ಉಪಕರಣಗಳು ವಿಮಾನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದ್ದು, ಮೂರು ವಿಮಾನಗಳನ್ನು ತಾತ್ಕಾಲಿಕವಾಗಿ ಸೇವೆಯಿಂದ ಹೊರಗಿಡಲಾಗಿದೆ.
ಏರ್ ಇಂಡಿಯಾ ವಿಮಾನ (ಚಾಟ್ ಜಿಪಿಟಿ ಚಿತ್ರ) -
ನವದೆಹಲಿ, ಜೂ. 8: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುರಿದ ಭಾರೀ ಮಳೆ (Rain) ಹಾಗೂ ಬಿರುಗಾಳಿಯ ಪರಿಣಾಮವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ನಿಲುಗಡೆಗೊಂಡಿದ್ದ ಮೂರು ಏರ್ ಇಂಡಿಯಾ (Air India) ವಿಮಾನಗಳು ಹಾನಿಗೊಳಗಾದ ಘಟನೆ ಬೆಳಕಿಗೆ ಬಂದಿದೆ. ಶನಿವಾರ (ಜೂನ್ 6) ಸಂಜೆ ಏಕಾಏಕಿ ಹವಾಮಾನ ವೈಪರೀತ್ಯ ಉಂಟಾದ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಏರ್ ಇಂಡಿಯಾ ಎಂಜಿನಿಯರಿಂಗ್ ಮತ್ತು ಇಂಡಿಗೋ ಸಂಸ್ಥೆಗಳಿಗೆ ಸೇರಿದ ಗ್ರೌಂಡ್ ಸಪೋರ್ಟ್ ಉಪಕರಣಗಳು ಬಲವಾದ ಗಾಳಿ ಮತ್ತು ಮಳೆಯ ಹೊಡೆತಕ್ಕೆ ಸಿಲುಕಿ ತಮ್ಮ ಸ್ಥಾನದಿಂದ ಜಾರಿಬಂದಿವೆ. ಈ ವೇಳೆ ನಿಲ್ಲಿಸಲಾಗಿದ್ದ ಮೂರು ಏರ್ ಇಂಡಿಯಾ ನ್ಯಾರೋಬಾಡಿ ವಿಮಾನಗಳಿಗೆ ಡಿಕ್ಕಿ ಹೊಡೆದು ಹಾನಿ ಉಂಟು ಮಾಡಿವೆ.
ಭಾರಿ ಮಳೆಯಿಂದ ವಿಮಾನಗಳಿಗೆ ಹಾನಿ:
Three Air India Aircraft Damaged After Ground Equipment Collision at Delhi Airport pic.twitter.com/BPyUjfrsGU
— aircraftmaintenancengineer (@airmainengineer) June 7, 2026
ಘಟನೆಯ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಹಾನಿಗೊಳಗಾದ ಮೂರು ವಿಮಾನಗಳನ್ನು ತಕ್ಷಣವೇ ಸೇವೆಯಿಂದ ಹೊರಗಿಡಲಾಗಿದೆ. ತಾಂತ್ರಿಕ ತಜ್ಞರು ವಿಮಾನಗಳ ಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ದುರಸ್ತಿ ಕಾರ್ಯವೂ ಆರಂಭವಾಗಿದೆ ಎಂದು ತಿಳಿದುಬಂದಿದೆ.
ಅಕ್ರಮ ವಲಸಿಗರ ವಿರುದ್ಧ ಪಶ್ಚಿಮ ಬಂಗಾಳದಲ್ಲಿ 'ಸರ್ಜಿಕಲ್ ಸ್ಟ್ರೈಕ್': 4,800 ಮಂದಿ ಬಾಂಗ್ಲಾದೇಶಕ್ಕೆ ವಾಪಸ್
ಏರ್ ಇಂಡಿಯಾ ಈ ಘಟನೆ ಕುರಿತು ಅಧಿಕೃತ ಪ್ರತಿಕ್ರಿಯೆ ನೀಡದಿದ್ದರೂ, ಸಂಸ್ಥೆಯ ಮೂಲಗಳ ಪ್ರಕಾರ ಮೂರು ವಿಮಾನಗಳಲ್ಲಿ ಎರಡು ವಿಮಾನಗಳು ಶೀಘ್ರದಲ್ಲೇ ಮರುಸೇವೆಗೆ ಮರಳುವ ಸಾಧ್ಯತೆ ಇದೆ. ಆದರೆ ಮತ್ತೊಂದು ವಿಮಾನಕ್ಕೆ ಹೆಚ್ಚಿನ ಹಾನಿಯಾಗಿರುವ ಕಾರಣ ಅದರ ದುರಸ್ತಿಗೆ ಇನ್ನಷ್ಟು ಸಮಯ ಬೇಕಾಗಬಹುದು ಎಂದು ಹೇಳಲಾಗಿದೆ. ಇದಲ್ಲದೆ, ಪ್ರತಿಕೂಲ ಹವಾಮಾನದಿಂದ ಏರ್ ಇಂಡಿಯಾ ಮಾತ್ರವಲ್ಲದೆ ಇತರ ಕೆಲವು ವಿಮಾನಯಾನ ಸಂಸ್ಥೆಗಳ ವಿಮಾನಗಳೂ ಪರಿಣಾಮಕ್ಕೊಳಗಾಗಿವೆ ಎಂದು ಮೂಲಗಳು ತಿಳಿಸಿವೆ. ಆದರೆ ಹಾನಿಯ ಪ್ರಮಾಣದ ಕುರಿತು ಯಾವುದೇ ಅಧಿಕೃತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ.
ಘಟನೆಯ ಮತ್ತೊಂದು ಪ್ರಮುಖ ಅಂಶವೆಂದರೆ, ಹವಾಮಾನದಲ್ಲಿ ಏಕಾಏಕಿ ಉಂಟಾದ ಬದಲಾವಣೆ ಕುರಿತು ಏರ್ ಟ್ರಾಫಿಕ್ ಕಂಟ್ರೋಲ್ (ATC) ವತಿಯಿಂದ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆ ಅಥವಾ ವಿಮಾನಯಾನ ಸಂಸ್ಥೆಗಳಿಗೆ ಯಾವುದೇ ಮುನ್ನೆಚ್ಚರಿಕೆ ನೀಡಲಾಗಿರಲಿಲ್ಲ ಎಂದು ದೆಹಲಿ ವಿಮಾನ ನಿಲ್ದಾಣದ ಖಾಸಗಿ ನಿರ್ವಹಣಾ ಸಂಸ್ಥೆ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಬಿರುಗಾಳಿ ಮತ್ತು ಮಳೆಯಿಂದ ವಿಮಾನ ಸಂಚಾರ ಹಾಗೂ ಸಾರ್ವಜನಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಈ ಘಟನೆಯು ಹವಾಮಾನ ವೈಪರೀತ್ಯದ ಸಂದರ್ಭಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮಗಳ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.