ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಜ್ಜಯಿನಿಯಲ್ಲಿ ಜೆಸಿಬಿ, ಕ್ರೇನ್‌ಗೂ ಕದಲದ ಹನುಮಾನ್‌ ವಿಗ್ರಹ; ಜಿಲ್ಲಾಡಳಿತ ಸುಸ್ತೋ ಸುಸ್ತು!

ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಉಜ್ಜಯಿನಿಯ ಖಡೆ ಹನುಮಾನ್ ದೇವಸ್ಥಾನದ ಕಟ್ಟಡವನ್ನು ತೆರವುಗೊಳಿಸಲಾಗಿದೆ. ಆದರೆ ಹನುಮಾನ್ ವಿಗ್ರಹವನ್ನು ಸ್ಥಳಾಂತರಿಸಲು ನಡೆಸಿದ ನಾಲ್ಕು ಪ್ರಯತ್ನಗಳು ವಿಫಲವಾಗಿವೆ. ಭಾರೀ ಯಂತ್ರೋಪಕರಣಗಳಿಂದಲೂ ವಿಗ್ರಹ ಕದಲದ ಹಿನ್ನೆಲೆಯಲ್ಲಿ ಸದ್ಯ ಸ್ಥಳಾಂತರ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ವಿಗ್ರಹದ ಅಡಿಭಾಗವನ್ನು ಸ್ಕ್ಯಾನ್ ಮಾಡಿ ತಜ್ಞರ ಸಲಹೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.

ಉಜ್ಜಯಿನಿಯಲ್ಲಿ ಜೆಸಿಬಿ, ಕ್ರೇನ್‌ಗೂ ಕದಲದ ಹನುಮಾನ್‌ ವಿಗ್ರಹ

ಉಜ್ಜಯಿನಿಯ ಖಡೆ ಹನುಮಾನ್ ದೇವಸ್ಥಾನ -

Profile
Sushmitha Jain Sep 10, 2026 8:58 PM

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಸ್ತೆ ವಿಸ್ತರಣೆಗಾಗಿ ಹನುಮಾನ್ ದೇವಸ್ಥಾನದ ಕಟ್ಟಡವನ್ನು ತೆರವುಗೊಳಿಸಿದರೂ, ಅಲ್ಲಿನ ನಿಂತಿರುವ ಹನುಮಾನ್ ವಿಗ್ರಹವನ್ನು ಸ್ಥಳಾಂತರಿಸಲು ನಡೆಸಿದ ಹಲವು ಪ್ರಯತ್ನಗಳು ವಿಫಲವಾಗಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಉಜ್ಜಯಿನಿಯ ಕಾಂಥಲ್ ಚೌರಾಹಾ–ಛತ್ರಿ ಚೌಕ್ ರಸ್ತೆಯಲ್ಲಿರುವ ಖಡೆ ಹನುಮಾನ್ ದೇವಸ್ಥಾನ ರಸ್ತೆ ವಿಸ್ತರಣೆ ಕಾಮಗಾರಿಯ ವ್ಯಾಪ್ತಿಗೆ ಬಂದಿದೆ. ಸಿಂಹಸ್ಥ 2028ರ ಹಿನ್ನೆಲೆಯಲ್ಲಿ ನಗರದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ದೇವಸ್ಥಾನವನ್ನು ಸುರಕ್ಷಿತವಾಗಿ ತೆರವುಗೊಳಿಸಿ ವಿಗ್ರಹವನ್ನು ಟಂಕಿ ಚೌಕ್ ಸಮೀಪದ ಹೊಸ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ಹಾಗೂ ಉಜ್ಜಯಿನಿ ಮಹಾನಗರ ಪಾಲಿಕೆ ಯೋಜಿಸಿತ್ತು.

ದೇವಸ್ಥಾನದ ಬಹುತೇಕ ಕಟ್ಟಡವನ್ನು ತೆರವುಗೊಳಿಸಲಾಗಿದ್ದರೂ, ಹನುಮಾನ್ ವಿಗ್ರಹ ಮಾತ್ರ ತನ್ನ ಮೂಲ ಸ್ಥಳದಲ್ಲೇ ಉಳಿದಿದೆ. ಭಾರೀ ಯಂತ್ರೋಪಕರಣಗಳ ನೆರವಿನಿಂದ ವಿಗ್ರಹವನ್ನು ಸ್ಥಳಾಂತರಿಸಲು ಕಳೆದ ಕೆಲವು ದಿನಗಳಲ್ಲಿ ನಾಲ್ಕು ಬಾರಿ ಪ್ರಯತ್ನಿಸಲಾಗಿದ್ದು, ಎಲ್ಲವೂ ವಿಫಲವಾಗಿವೆ ಎನ್ನಲಾಗಿದೆ. ಹೀಗಾಗಿ ಸದ್ಯಕ್ಕೆ ಭಾರೀ ಯಂತ್ರೋಪಕರಣಗಳ ಬಳಕೆಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.

ವಿಗ್ರಹದ ಅಡಿಭಾಗ ಹಾಗೂ ಸುತ್ತಮುತ್ತಲಿನ ರಚನೆಯನ್ನು ಸ್ಕ್ಯಾನ್ ಮಾಡಿ, ವಿಗ್ರಹಕ್ಕೆ ಯಾವುದೇ ಹಾನಿಯಾಗದಂತೆ ಹೇಗೆ ಸ್ಥಳಾಂತರಿಸಬಹುದು ಎಂಬುದನ್ನು ತಜ್ಞರ ಮೂಲಕ ಪರಿಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Viral Video: ಚಾಲಕನ ನಿರ್ಲಕ್ಷ್ಯ ತಂದ ಆಪತ್ತು; ಪೆಟ್ರೋಲ್‌ ಬಂಕ್‌ ಸಿಬ್ಬಂದಿಯನ್ನು ಎಳೆದೊಯ್ದ ಕಾರ್‌

‘ಹನುಮಂತನ ದೈವ ಸಂಕೇತ’ ಎಂದ ಭಕ್ತರು

ವಿಗ್ರಹ ಸ್ಥಳಾಂತರದ ಪ್ರಯತ್ನಗಳು ವಿಫಲವಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲ ಭಕ್ತರು ಇದನ್ನು ‘ದೈವ ಸಂಕೇತ’ ಎಂದು ವ್ಯಾಖ್ಯಾನಿಸಿದ್ದಾರೆ. ದೇವಸ್ಥಾನದ ಬಳಿ ಕೋತಿಗಳ ದೊಡ್ಡ ಗುಂಪು ಕಾಣಿಸಿಕೊಂಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ದೇವಸ್ಥಾನದ ಅರ್ಚಕ ಮಹೇಶ್ ಬೈರಾಗಿ, ಹನುಮಂತ ದೇವರು ಇಲ್ಲೇ ಉಳಿಯಲು ಬಯಸುತ್ತಿರುವ ಸಂಕೇತಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ವಿಗ್ರಹವನ್ನು ಸ್ಥಳಾಂತರಿಸುವುದು ಅನಿವಾರ್ಯವಾದರೆ, ಅದರ ಮೂಲ ಸ್ವರೂಪಕ್ಕೆ ಯಾವುದೇ ಹಾನಿಯಾಗದಂತೆ ಅತ್ಯಂತ ಸುರಕ್ಷಿತವಾಗಿ ಸ್ಥಳಾಂತರಿಸಬೇಕು ಎಂದು ಅವರು ಆಡಳಿತಕ್ಕೆ ಮನವಿ ಮಾಡಿದ್ದಾರೆ.

170 ವರ್ಷಗಳ ಇತಿಹಾಸ?

ಸ್ಥಳೀಯರ ಪ್ರಕಾರ ಈ ದೇವಸ್ಥಾನ ಸುಮಾರು 170 ವರ್ಷಗಳಷ್ಟು ಹಳೆಯದು. 1857ರ ಕಾಲಘಟ್ಟದೊಂದಿಗೆ ದೇವಸ್ಥಾನದ ಇತಿಹಾಸವನ್ನು ಸ್ಥಳೀಯರು ಸಂಪರ್ಕಿಸುತ್ತಾರೆ. ವಿಗ್ರಹಕ್ಕೆ ಪರಮಾರರ ಕಾಲದ ಇತಿಹಾಸವಿದೆ ಎಂಬ ಮಾತುಗಳೂ ಕೇಳಿಬಂದಿದ್ದು, ಈ ಕುರಿತು ಇನ್ನೂ ಖಚಿತವಾದ ಪುರಾವೆಗಳು ದೃಢಪಟ್ಟಿಲ್ಲ.

ಸದ್ಯ ವಿಗ್ರಹವನ್ನು ತಾತ್ಕಾಲಿಕ ಛಾವಣಿಯಡಿ ಸುರಕ್ಷಿತವಾಗಿ ಇರಿಸಲಾಗಿದ್ದು, ತಜ್ಞರ ಪರಿಶೀಲನೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ರಸ್ತೆ ಅಭಿವೃದ್ಧಿ ಮತ್ತು ಭಕ್ತರ ನಂಬಿಕೆ ಈ ಎರಡರ ನಡುವೆ ಉಜ್ಜಯಿನಿಯ ಖಡೆ ಹನುಮಾನ್ ವಿಗ್ರಹದ ಸ್ಥಳಾಂತರ ಇದೀಗ ‘ಅಭಿವೃದ್ಧಿ ವರ್ಸಸ್ ನಂಬಿಕೆ’ ಚರ್ಚೆಗೆ ಕಾರಣವಾಗಿದೆ.