ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

''ರಕ್ಷಕರೇ ಭಕ್ಷಕರಾದರುʼʼ: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮೌನ ಮುರಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌; ವಿದ್ಯಾರ್ಥಿಗಳ ಆತ್ಮಹತ್ಯೆ ಬಗ್ಗೆ ಹೇಳಿದ್ದೇನು?

Dharmendra Pradhan: ಪರೀಕ್ಷೆಯ ಜಬಾಬ್ದಾರಿ ಹೊತ್ತ ಸಿಕ್ಷಕರಿಂದಲೇ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇದ್ರ ಪ್ರಧಾನ್‌ ಹೇಳಿದ್ದಾರೆ. ಜತೆಗೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣದ ಜವಾಬ್ದಾರಿ ಹೊರುವುದಾಗಿಯೂ ತಿಳಿಸಿದ್ದಾರೆ. ಈ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಧರ್ಮೇಂದ್ರ ಪ್ರಧಾನ್‌ ಹೇಳಿದ್ದೇನು?

ಧರ್ಮೇಂದ್ರ ಪ್ರಧಾನ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Jun 23, 2026 5:53 PM

ದೆಹಲಿ, ಜೂ. 23: ದೇಶಾದ್ಯಂತ ಭಾರಿ ಕೋಲಾಹಲ ಸೃಷ್ಟಿಸಿದ ನೀಟ್‌-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ (NEET Paper Leak Case) ವಿಚಾರವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ (Dharmendra Pradhan) ಮೌನ ಮುರಿದಿದ್ದಾರೆ. ಪರೀಕ್ಷೆಯ ಜವಾಬ್ದಾರಿ ಹೊತ್ತುಕೊಂಡ ಶಿಕ್ಷಕರೇ ಮೋಸ ಮಾಡಿದರು ಎಂದ ಅವರು ರಕ್ಷಕರೇ ಭಕ್ಷಕರಾದರು ಎಂಬುದಾಗಿ ದೂರಿದ್ದಾರೆ. ಜತೆಗೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣದ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡಿದ್ದಾರೆ. ಇದೀಗ ನೀಟ್‌ ಮರುಪರೀಕ್ಷೆ ಯಶಸ್ವಿಯಾಗಿ ಮುಗಿದಿದ್ದು, ಶೀಘ್ರದಲ್ಲೇ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಮಧ್ಯೆ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (National Testing Agency-NTA) ನೀಡಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಶಿಕ್ಷಕರು ವಿಫಲವಾಗಿದ್ದರಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದಾಗಿ ಪ್ರಧಾನ್‌ ತಿಳಿಸಿದ್ದಾರೆ. ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು, ಕಾಕ್ರೋಚ್‌ ಜನತಾ ಪಾರ್ಟಿ ಪಟ್ಟು ಹಿಡಿಯುತ್ತಿರುವ ನಡುವೆಯೇ ಸಚಿವರ ಈ ಹೇಳಿಕೆ ಹೊರ ಬಿದ್ದಿದೆ.

ನೀಟ್‌ ಅಭ್ಯರ್ಥಿಗಳಿಗೆ ತೊಂದರೆಯಾಗದಿರಲು 45 ನಿಮಿಷ ವಿಮಾನ ನಿಲ್ದಾಣದಲ್ಲೇ ಕಾದ ನರೇಂದ್ರ ಮೋದಿ

ಜೂನ್‌ 21ರಂದು ದೇಶಾದ್ಯಂತ ನಡೆದ ನೀಟ್‌ ಮರುಪರೀಕ್ಷೆಯಲ್ಲಿ 20 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಗ್ಗೆ ಮೇ 8ರಂದು ಇಮೇಲ್‌ ಮೂಲಕ ಮಾಹಿತಿ ಬಂದ ಹಿನ್ನೆಲೆಯಲ್ಲಿ ಎನ್‌ಟಿಎ ಮೇ 3ರಂದು ನಡೆದ ಪರೀಕ್ಷೆ ರದ್ದುಗೊಳಿಸಿ ಮೇ 15ರಂದು ಮರು ಪರೀಕ್ಷೆ ಘೋಷಿಸಿತ್ತು. ಮೇ 3ರಂದು ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೂ ಸೋರಿಕೆಯಾದ ಪ್ರಶ್ನೆ ಪತ್ರಿಕೆಗೂ ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು.

ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದೇನು?

ʼʼಪರೀಕ್ಷೆ ಆಯೋಜಿಸುವ ಎನ್‌ಟಿಎ ಕೆಲವು ಶಿಕ್ಷಕರ ಮೇಲೆ ನಂಬಿಕೆ ಇಟ್ಟು ಅವರಿಗೆ ಜಬಾಬ್ದಾರಿ ವಹಿಸಿತ್ತು. ಆದರೆ ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲಿಲ್ಲ. ಈ ಮೂಲಕ ರಕ್ಷಕರೇ ಭಕ್ಷಕರಾದರುʼʼ ಎಂದು ಪ್ರಧಾನ್‌ ಹೇಳಿದ್ದಾರೆ. ಶಿಕ್ಷಕರಾದ ಪಿ.ವಿ. ಕುಲಕರ್ಣಿ, ಮನೀಷಾ ಮಂಧಾರೆ ಮತ್ತು ಮನೀಷಾ ಹವಾಲ್ದಾರ್‌ ಕೆಮೆಸ್ಟ್ರಿ, ಬಯಾಲಜಿ ಹಾಗೂ ಫಿಸಿಕ್ಸ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದಿನ ಮಾಸ್ಟರ್‌ ಮೈಂಡ್‌ಗಳು ಎನ್ನುವುದು ತನಿಖೆ ವೇಳೆ ತಿಳಿದು ಬಂದಿದ್ದು, ಅವರ ವಿಚಾರಣೆ ನಡೆಯುತ್ತಿದೆ. ಯಾವುದೇ ಅರ್ಹ ವಿದ್ಯಾರ್ಥಿ ಅವಕಾಶ ವಂಚಿತವಾಗಬಾರದು ಎನ್ನುವ ಉದ್ದೇಶದಿಂದ ಮರುಪರೀಕ್ಷೆ ಆಯೋಜಿಸಿದ್ದಾಗಿ ಸಚಿವರು ತಿಳಿಸಿದ್ದಾರೆ.

ನೀಟ್‌ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ? NAT ಹೇಳಿದ್ದೇನು?

ವಿದ್ಯಾರ್ಥಿಗಳ ಆತ್ಮಹತ್ಯೆ ಬಗ್ಗೆ ಹೇಳಿದ್ದೇನು?

ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಳಿಕ ಮರು ಪರೀಕ್ಷೆಯ ಒತ್ತಡ ತಾಳಲಾರದೆ ದೇಶದಲ್ಲಿ ಇದುವರೆಗೆ ಒಟ್ಟು 14 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನ್‌, "ಶಿಕ್ಷಣ ಸಚಿವನಾಗಿ ವಿದ್ಯಾರ್ಥಿಗಳ ಆತ್ಮಹತ್ಯೆ ನಡೆದಾಗಲೆಲ್ಲ ಭಾರಿ ನೋವು ಅನುಭವಿಸಿದ್ದೇನೆ. ಇದರ ಜವಾಬ್ದಾರಿ ನಾನೇ ಹೊರುತ್ತೇನೆ. ನಾವು ಹಾಳಾದ ವ್ಯವಸ್ಥೆಯನ್ನು ಸರಿಪಡಿಸಬೇಕು. ಆದರೆ ಕಾಂಗ್ರೆಸ್ ನಾಯಕರು ಮತ್ತು ರಾಹುಲ್ ಗಾಂಧಿ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ಕೀಳು ಮಟ್ಟದ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ. ಸದ್ಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಸಿಬಿಐಗೆ ಒಪ್ಪಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 13 ಮಂದಿಯನ್ನು ಬಂಧಿಸಲಾಗಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.