ಮೋದಿ ಸಮಾಧಿ ಹೇಳಿಕೆ; ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ, ಕ್ಷಮೆ ಕೋರಲು ಆಗ್ರಹ: ಏನಿದು ವಿವಾದ?
BJP outrage Congress: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅಸಭ್ಯ ಹಾಗೂ ಅನುಚಿತ ಭಾಷೆ ಬಳಕೆಯ ಬಳಸಿದ್ದಕ್ಕಾಗಿ ಬಿಜೆಪಿಯು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಹಾಗೆಯೇ ಕಾಂಗ್ರೆಸ್‍ನ ಉನ್ನತ ನಾಯಕರು ತಕ್ಷಣ ಕ್ಷಮೆಯಾಚನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನಾಯಕರು (ಸಂಗ್ರಹ ಚಿತ್ರ) -
ನವದೆಹಲಿ, ಡಿ. 15: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಕಾಂಗ್ರೆಸ್ ರ‍್ಯಾಲಿಯಲ್ಲಿ ಬಳಸಿದ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ (BJP) ನಾಯಕರು ಖಂಡಿಸಿದ್ದಾರೆ. ಸೋಮವಾರ ಸಂಸತ್ತಿನಲ್ಲಿ ಬಿಜೆಪಿ ನಾಯಕರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಅನುಚಿತ ಭಾಷೆ ಬಳಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಪಕ್ಷದ ಉನ್ನತ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸಂಸದರು, ಪ್ರಧಾನಿ ನರೇಂದ್ರ ಮೋದಿ ಅವರ ಸಮಾಧಿಯನ್ನು ಅಗೆಯುವ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಭಾರತೀಯ ರಾಜಕೀಯ ಇತಿಹಾಸದಲ್ಲಿ ಅತ್ಯಂತ ವಿಷಾದದ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು. ರಾಜ್ಯಸಭೆಯಲ್ಲಿ ಜೆ.ಪಿ. ನಡ್ಡಾ ಈ ವಿಷಯವನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ರ‍್ಯಾಲಿಯಲ್ಲಿ ಎತ್ತಲಾದ ವಿವಾದಾತ್ಮಕ ಘೋಷಣೆಯ ಕುರಿತು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗ್ತಾರಾ ನಿತಿನ್ ನಬಿನ್?
ಕಾಂಗ್ರೆಸ್ ಯಾವ ಸಿದ್ಧಾಂತವನ್ನು ಆಯ್ಕೆ ಮಾಡುತ್ತದೆ ಎಂಬುದರ ಬಗ್ಗೆ ನನಗೆ ಚಿಂತೆ ಇಲ್ಲ. ರಾಹುಲ್ ಗಾಂಧಿ ಎಡಪಂಥೀಯ ವಿಚಾರಧಾರೆಯನ್ನು ಅಳವಡಿಸಿಕೊಳ್ಳಬಹುದು ಅಥವಾ ಅವರ ಪಕ್ಷ ಬಯಸುವ ಯಾವುದನ್ನಾದರೂ ಅನುಸರಿಸಿದರೂ ಪರವಾಗಿಲ್ಲ. ಆದರೆ ನಾವು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ರ‍್ಯಾಲಿಯಲ್ಲಿ ಪ್ರಧಾನಮಂತ್ರಿಯ ಪ್ರಾಣಕ್ಕೆ ಬೆದರಿಕೆ ಅಥವಾ ಮೋದಿ ಅವರ ಸಮಾಧಿ ತೋಡುವ ಬಗ್ಗೆ ಬಹಿರಂಗವಾಗಿ ಘೋಷಿಸುವುದು, ಭಾರತೀಯ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದುರದೃಷ್ಟಕರ ಸಂಗತಿ ಎಂದು ರಿಜಿಜು ಹೇಳಿದ್ದಾರೆ.
ನಾವು ಪ್ರತಿಸ್ಪರ್ಧಿಗಳು ಮಾತ್ರ ಶತ್ರುಗಳಲ್ಲ. ನಾವು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ವಿಭಿನ್ನ ಪಕ್ಷಗಳಿಗೆ ಸೇರಿದವರು. ಆದರೆ ನಾವು 2047ರ ವೇಳೆಗೆ ವಿಕಸಿತ ಭಾರತ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಗುರಿಯಾಗಿಟ್ಟುಕೊಂಡು ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಭಾರತವನ್ನು ಬಲಿಷ್ಠ ಮತ್ತು ಹೆಮ್ಮೆಯನ್ನಾಗಿ ಮಾಡುವುದು ಮೋದಿ ಅವರ ಕನಸು. ಆದರೆ ಕಾಂಗ್ರೆಸ್ ರ‍್ಯಾಲಿಯಲ್ಲಿ ಮಾಡಿರುವ ಘೋಷಣೆ ಸ್ವೀಕಾರಾರ್ಹವಲ್ಲ. ಕಾಂಗ್ರೆಸ್ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಸಂಸತ್ತಿನ ಸದನದಿಂದ ದೇಶದ ಕ್ಷಮೆಯಾಚಿಸಬೇಕು ಎಂದು ರಿಜಿಜು ಒತ್ತಾಯಿಸಿದರು.
ಪ್ರಧಾನಿಯ ವಿರುದ್ಧ ಬಳಸಲಾದ ಅನುಚಿತ ಭಾಷೆಗೆ ಕಾಂಗ್ರೆಸ್ ಮತ್ತು ಅದರ ಉನ್ನತ ನಾಯಕರು ಕ್ಷಮೆ ಯಾಚಿಸಬೇಕೆಂದು ಜೆ.ಪಿ. ನಡ್ಡಾ ಆಗ್ರಹಿಸಿದರು. ಕಾಂಗ್ರೆಸ್ ದೇಶದಲ್ಲಿ ರಾಜಕೀಯದ ಗುಣಮಟ್ಟವನ್ನು ನಂಬಲಾಗದಷ್ಟು ಕೆಳಮಟ್ಟಕ್ಕೆ ಇಳಿಸಿದೆ ಎಂದು ವಾಕ್ಪ್ರಹಾರ ನಡೆಸಿದರು.
ಡಿಸೆಂಬರ್ 14ರಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ, ಮೋದಿ ಅವರೇ ನಿಮ್ಮ ಸಮಾಧಿಯನ್ನು ಇಂದು ಅಲ್ಲದಿದ್ದರೆ ನಾಳೆ ಅಗೆಯಲಾಗುತ್ತದೆ ಎಂಬ ಘೋಷಣೆಗಳು ಮೊಳಗಿದವು. ಇದು ಕಾಂಗ್ರೆಸ್‌ನ ಚಿಂತನೆ ಮತ್ತು ಅಮಾನವೀಯತೆಯನ್ನು ತೋರಿಸುತ್ತದೆ. ದೇಶದ ಪ್ರಧಾನಿಯ ವಿರುದ್ಧ ಈ ರೀತಿಯ ಭಾಷೆ ಬಳಸಿದ್ದು ತೀವ್ರ ಖಂಡನೀಯ. ಕಾಂಗ್ರೆಸ್ ದೇಶದಲ್ಲಿ ರಾಜಕೀಯದ ಗುಣಮಟ್ಟವನ್ನು ನಂಬಲಾಗದಷ್ಟು ಕೆಳಮಟ್ಟಕ್ಕೆ ಇಳಿಸಿದೆ. ಕಾಂಗ್ರೆಸ್ ಉನ್ನತ ನಾಯಕರು ಮತ್ತು ಸೋನಿಯಾ ಗಾಂಧಿ ದೇಶದ ಕ್ಷಮೆಯಾಚಿಸಬೇಕು ಎಂದು ನಡ್ಡಾ ಆಗ್ರಹಿಸಿದರು.