New Delhi Stampede: ದೆಹಲಿ ಭೀಕರ ಕಾಲ್ತುಳಿತ ದುರಂತ: ಹರಿದಾಡಿದ ವಿಡಿಯೊ-ಮೋದಿ ಸೇರಿ ಹಲವು ನಾಯಕರ ಸಂತಾಪ!
ಶನಿವಾರ(ಫೆ.15) ರಾತ್ರಿ ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ನಡೆದ ಭೀಕರ ಕಾಲ್ತುಳಿತದಿಂದಾಗಿ 18 ಜನರು ದಾರುಣವಾಗಿ ಸಾವನ್ನಪ್ಪಿದ್ದರೆ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಸಂಬಂಧ ಸಾಕಷ್ಟು ವಿಡಿಯೊಗಳು ಎಲ್ಲೆಡೆ ಹರಿದಾಡುತ್ತಿದೆ. ರೈಲು ಹತ್ತುವಾಗ ಪ್ರಯಾಣಿಕರ ನಡುವೆ ನೂಕು ನುಗ್ಗಲಾಗಿದ್ದು,ಗಲಾಟೆ ಗಲಭೆಗಳು ನಡೆದಿರುವುದನ್ನು ವಿಡಿಯೊಗಳಲ್ಲಿ ನೋಡಬಹುದು.

ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ನೂಕು ನುಗ್ಗಲು

ನವದೆಹಲಿ: ಶನಿವಾರ(ಫೆ.15) ರಾತ್ರಿ ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ(New Delhi Stampede) ನಡೆದ ಭೀಕರ ಕಾಲ್ತುಳಿತದಿಂದಾಗಿ 18 ಜನರು ದಾರುಣವಾಗಿ ಸಾವನ್ನಪ್ಪಿದ್ದರೆ, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಸಂಬಂಧ ಹತ್ತಾರು ವಿಡಿಯೊಗಳು ಎಲ್ಲೆಡೆ ಹರಿದಾಡುತ್ತಿದೆ. ರೈಲು ಹತ್ತುವಾಗ ಪ್ರಯಾಣಿಕರ ನಡುವೆ ನೂಕು ನುಗ್ಗಲಾಗಿದ್ದು,ಗಲಾಟೆ ಗಲಭೆಗಳು ನಡೆದಿರುವುದನ್ನು ವಿಡಿಯೊಗಳಲ್ಲಿ ನೋಡಬಹುದು. ಇನ್ನು ದುರಂತಕ್ಕೆ ಪ್ರಧಾನಿ ಮೋದಿ(PM Modi) ಸೇರಿದಂತೆ ಹಲವು ನಾಯಕರು ವಿಷಾದ ವ್ಯಕ್ತಪಡಿಸಿದ್ದು ಮೃತರಿಗೆ ಸಂತಾಪ ಸೂಚಿಸಿದ್ದಾರೆ.
ನಿನ್ನೆ ರಾತ್ರಿ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ದುರ್ಘಟನೆ ಸಂಭವಿಸಿದೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೊರಟಿದ್ದ ಭಕ್ತರು ಕಾಲ್ತುಳಿತದಿಂದಾಗಿ ಸಾವನ್ನಪ್ಪಿದ್ದಾರೆ. ಅತಿಯಾದ ಜನಸಂದಣಿಯಿಂದಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ರೈಲ್ವೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ. ಅತಿ ಹೆಚ್ಚು ಟಿಕೆಟ್ ಮಾರಾಟವೇ ಈ ದುರಂತಕ್ಕೆ ಕಾರಣ ಎಂದು ತನಿಖಾ ವರದಿ ಹೇಳಿದೆ. ಈ ಮಧ್ಯೆ ಘಟನೆಯ ಸಾಕಷ್ಟು ವಿಡಿಯೊಗಳು ಹರಿದಾಡುತ್ತಿದ್ದು, ಪ್ರಯಾಣಿಕರ ನಡುವೆ ನಡೆದಿರುವ ಗಲಭೆಗಳನ್ನು ಅದು ತೋರಿಸುತ್ತದೆ. ರೈಲುಗಳನ್ನು ಹತ್ತಲು ಪ್ರಯಾಣಿಕರು ಪ್ಲಾಟ್‌ಫಾರ್ಮ್‌ಗಳಲ್ಲಿ ಒಬ್ಬರನ್ನೊಬ್ಬರು ತಳ್ಳಿದ್ದಾರೆ. ಕೆಲವು ಗಂಡಸರು ಕಿಟಕಿಗಳ ಮೂಲಕವೇ ರೈಲಿನೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಪ್ಲಾಟ್‌ಫಾರ್ಮ್ ಸಂಖ್ಯೆ 14 ಮತ್ತು 15 ರಲ್ಲಿ ಪ್ರಯಾಗ್‌ರಾಜ್‌ಗೆ ಹೊರಡುವ ರೈಲಿನ ಬಳಿ ಜನರು ಕಿಕ್ಕಿರಿದು ಸೇರಿದ ಪರಿಣಾಮ ಪರಿಸ್ಥಿತಿ ಕೈ ಮೀರಿ ಕಾಲ್ತುಳಿತ ಸಂಭವಿಸಿದೆ.
#WATCH | Delhi | Visuals from platform number 14 - one of the platforms at New Delhi Railway Station, where a stampede broke out at 10 PM, yesterday, leaving 15 people dead and several others injured pic.twitter.com/WQBeoef0Le
— ANI (@ANI) February 16, 2025
ಪ್ರಧಾನಿ ಮೋದಿ ಸೇರಿ ಹಲವು ನಾಯಕರು ಸಂತಾಪ
ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಯವರು ಸಂತಾಪ ಸೂಚಿಸಿದ್ದಾರೆ. ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಿಂದ ಸಾಕಷ್ಟು ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಬಗ್ಗೆ ಸಂತಾಪವಿದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಸಂತಾಪ ಸೂಚಿಸಿದ್ದಾರೆ. ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವರು ಮೃತಪಟ್ಟಿರುವ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತಿದ್ದೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:New Delhi Stampede : ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಗೃಹ ಸಚಿವ ಅಮಿತ್ ಶಾ, ಉಪರಾಷ್ಟ್ರಪತಿ ಜಗದೀಪ್ ಧನಕರ್, ವಿಪಕ್ಷ ನಾಯಕ ರಾಹುಲ್ ಗಾಂಧಿ, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿ ಅನೇಕರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಕುಂಭಮೇಳಕ್ಕೆ ಹೊರಟಿದ್ದ 18 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ 11 ಮಹಿಳೆಯರು ಹಾಗೂ 4 ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ.