CM Rekha Gupta: ದಿಲ್ಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತ ಪ್ರಮಾಣ ವಚನ: ಬಿಜೆಪಿ ಕೊಟ್ಟ ಸಂದೇಶವೇನು?
ದಿಲ್ಲಿಯಲ್ಲಿ 27 ವರ್ಷಗಳ ಬಳಿಕ ಅಚ್ಚರಿಯ ವಿಜಯ ದಾಖಲಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ, ಅಲ್ಲಿನ ಸಿಎಂ ಗಾದಿಗೆ ಹಿರಿಯ ಮಹಿಳಾ ನಾಯಕಿಯನ್ನು ಆಯ್ಕೆ ಮಾಡುವ ಮೂಲಕ ರಾಜಕಿಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ರೇಖಾ ಗುಪ್ತಾ ಅವರನ್ನು ಸಿಎಂ ಆಗಿ ಬಿಜೆಪಿ ಆಯ್ಕೆ ಮಾಡಿದ್ದರ ಹಿಂದಿನ ಲೆಕ್ಕಾಚಾರವೇನು?


ನವದೆಹಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ (Delhi Assembly Elections) ಅಧಿಕಾರರೂಢ ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ಸೋಲಿನ ರುಚಿ ತೋರಿಸಿ ಬರೋಬ್ಬರಿ ಎರಡೂವರೆ ದಶಕಗಳ ಬಳಿಕ ಅಧಿಕಾರದ ಗದ್ದುಗೆಗೇರಿದ ಬಿಜೆಪಿ (Bharatiya Janata Party) ಮುಖ್ಯಮಂತ್ರಿ ಗಾದಿಗೆ ಹಿರಿಯ ನಾಯಕಿಯೊಬ್ಬರಿಗೆ ಮಣೆ ಹಾಕಿದೆ. ಅವರೇ ಕೇಸರಿ ಪಾಳಯದ ಹಿರಿಯ ನಾಯಕಿ ಮತ್ತು ಈ ಬಾರಿಯ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶಾಲಿಮಾರ್ ಭಾಗ್ (Shalimar Bagh) ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾದ ರೇಖಾ ಗುಪ್ತಾ (Rekha Gupta). ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತ ಫೆ. 20ರಂದು ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ದಿಲ್ಲಿಯ 4ನೇ ಮಹಿಳಾ ಮುಖ್ಯಮಂತ್ರಿ ಎನಿಸಿಕೊಂಡರು.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಖುದ್ದು ಪ್ರಧಾನಿ ಮೋದಿ (Narendra Modi) ಸಹಿತ ಕೇಸರಿ ಪಾಳಯದ ಘಟಾನುಘಟಿ ನಾಯಕರು ಸಾಕ್ಷಿಯಾಗಿದ್ದು ವಿಶೇಷ.
ದಿಲ್ಲಿ ಮುಖ್ಯಮಂತ್ರಿ ಗಾದಿಯ ರೇಸ್‌ನಲ್ಲಿದ್ದ ಪರ್ವೇಶ್ ವರ್ಮಾ (Parvesh Verma), ವಿಜೇಂದರ್ ಗುಪ್ತಾ (Vijender Gupta) ಮತ್ತು ಆಶಿಸ್ ಸೂದ್ (Ashish Sood) ಅವರನ್ನೆಲ್ಲ ಪಕ್ಕಕ್ಕೆ ಸರಿಸಿ 50 ವರ್ಷದ ಅನುಭವಿ ನಾಯಕಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಈ ಮೂಲಕ ರೇಖಾ ಅವರನ್ನು ದಿಲ್ಲಿ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವಲ್ಲಿ ಕೇಂದ್ರ ಬಿಜೆಪಿ ನಾಯಕರು ಯಾವೆಲ್ಲ ಕಾರ್ಯತಂತ್ರಗಳನ್ನು ರೂಪಿಸಿದ್ದಾರೆ? ಕೇಜ್ರಿವಾಲ್ ಅವರಂತಹ ಕೇಜ್ರಿವಾಲ್ ಅವರನ್ನೇ ಮಣಿಸಿ ‘ಜೈಂಟ್ ಕಿಲ್ಲರ್’ ಎಂದೇ ಖ್ಯಾತಿಗೆ ಬಂದಿದ್ದ ಯುವ ನಾಯಕ ಪರ್ವೇಶ್ ವರ್ಮಾನಂತಹ ನಾಯಕರಿಗೆ ಮಣೆ ಹಾಕದೇ ರೇಖಾ ಗುಪ್ತ ಅವರನ್ನೇ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಹೆಸರಿಸಲು ಕಾರಣವೇನು ಎಂಬೆಲ್ಲ ವಿಷಯಗಳ ಕುರಿತು ಇದೀಗ ರಾಜಕೀಯ ಪಂಡಿತರು ಚರ್ಚೆಯಲ್ಲಿ ತೊಡಗಿದ್ದಾರೆ.
ಕೆಲವೊಂದು ಸಂಭಾವ್ಯ ಕಾರಣಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ
ಪಕ್ಷದ ದೊಡ್ಡ ಸಂಖ್ಯೆಯ ಮಹಿಳಾ ಮತದಾರರನ್ನು ಖುಷಿಪಡಿಸಲು: ರೇಖಾ ಗುಪ್ತಾ ಅವರನ್ನು ದಿಲ್ಲಿ ಮುಖ್ಯಮಂತ್ರಿ ಗಾದಿಯಲ್ಲಿ ಕುಳ್ಳಿರಿಸುವ ಮೂಲಕ ಬಿಜೆಪಿ ತನ್ನ ಬೃಹತ್ ಮಹಿಳಾ ಮತದಾರರನ್ನು ಮೆಚ್ಚಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ಈ ಬಾರಿಯ ದಿಲ್ಲಿ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ದೊಡ್ಡ ಸಂಖ್ಯೆಯಲ್ಲಿ ಕಮಲ ಪಕ್ಷದ ಅಭ್ಯರ್ಥಿಗಳು ಗೆಲುವಿನ ನಗೆ ಬೀರುವಂತೆ ಮಾಡಿರುವುದನ್ನು ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಬಿಜೆಪಿಯು ತನ್ನ ಸಂಕಲ್ಪ ಯಾತ್ರೆಯಲ್ಲಿ ಮಹಿಳೆಯರನ್ನೇ ಕೇಂದ್ರಿಕರಿಸಿಕೊಂಡು ಹಲವಾರು ಭರವಸೆಗಳನ್ನು ನೀಡಿತ್ತು, ಅದರಲ್ಲಿ ಪ್ರತಿ ತಿಂಗಳು 2,500 ರೂ. ಹಣಕಾಸಿನ ನೆರವೂ ಸೇರಿದೆ.
ಇನ್ನೊಂದೆಡೆ ಬಿಜೆಪಿ ತನ್ನ ಗೆಲುವಿಗಾಗಿ ಮಹಿಳಾ ಮತದಾರರನ್ನೇ ಬಹುವಾಗಿ ನೆಚ್ಚಿಕೊಳ್ಳುತ್ತದೆ ಮತ್ತು ಗೆಲುವ ಸಾಧಿಸಿದ ಬಳಿಕ ಅವರಿಗೆ ಸೂಕ್ತ ಸ್ಥಾನಮಾನವನ್ನು ಕೊಡುವುದಿಲ್ಲ ಎಂಬ ಅಪವಾದದಿಂದ ಹೊರಬರಲೆಂದೇ ದಿಲ್ಲಿಯಲ್ಲಿ ಮುಖ್ಯಮಂತ್ರಿ ಪಟ್ಟವನ್ನು ಮಹಿಳೆಯೊಬ್ಬರಿಗೆ ನೀಡಿದೆ ಎಂದೂ ಇದೀಗ ವಿಶ್ಲೇಷಿಸಲಾಗುತ್ತಿದೆ. ಇದೀಗ ರೇಖಾ ಗುಪ್ತಾ ಅವರು ದೇಶದ ವಿವಿಧ ರಾಜ್ಯಗಳಲ್ಲಿ ಹಾಲಿ ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳ ಪೈಕಿ ಎರಡನೇ ಮಹಿಳಾ ಮುಖ್ಯಮಂತ್ರಿ ಎಂದೆಣಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಈಗಾಗಲೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ.
ಇದನ್ನೂ ಓದಿ: Rekha Gupta: ರೇಖಾ ಗುಪ್ತಾ ತಳಮಟ್ಟದ ನಾಯಕಿ; ದಿಲ್ಲಿಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ: ಅಭಿನಂದನೆ ತಿಳಿಸಿದ ಮೋದಿ
ರೇಖಾ ಗುಪ್ತಾ ಅವರು ಬನಿಯಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬನಿಯಾ ಸಮುದಾಯದ ಕುಲ ಕಸುಬು ವ್ಯಾಪಾರ. ಈ ಸಮುದಾಯವು, ವಾಜಪೇಯಿ-ಅಡ್ವಾಣಿಯವರ ಕಾಲದಿಂದಲೂ ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ. ಬನಿಯಾ ಸಮುದಾಯವು ದಿಲ್ಲಿಯ ಬಿಜೆಪಿಯ ಬೆನ್ನೆಲುಬು ಎನಿಸಿಕೊಂಡಿದೆ. ಗುಪ್ತಾ ಅವರು ಮುಖ್ಯಮಂತ್ರಿಯಾಗುವ ಮೂಲಕ ಈ ಸಂಬಂಧ ಇನ್ನಷ್ಟು ಗಟ್ಟಿಗೊಂಡಿದೆ ಎಂದು ಬಿಜೆಪಿ ನಾಯಕರೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
Congratulations to Smt. Rekha Gupta Ji on taking oath as Delhi's Chief Minister. She has risen from the grassroots, being active in campus politics, state organisation, municipal administration and now MLA as well as Chief Minister. I am confident she will work for Delhi's… pic.twitter.com/GEC9liURd9
— Narendra Modi (@narendramodi) February 20, 2025
ತಳಮಟ್ಟದ ನಾಯಕರಿಗೆ ಮಹತ್ವದ ಹುದ್ದೆ: ರೇಖಾ ಗುಪ್ತಾ ಅವರು ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಬಳಿಕ ಅವರನ್ನು ಅಭಿನಂದಿಸುತ್ತಾ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೇಖಾ ಗುಪ್ತಾ ಜಿ ಅವರಿಗೆ ಅಭಿನಂದನೆಗೆಳು. ಇವರು ಪಕ್ಷದ ತಳಮಟ್ಟದಿಂದ ಬೆಳೆದು ಬಂದವರು. ಕ್ಯಾಂಪಸ್ ರಾಜಕಾರಣದಲ್ಲಿ ಸಕ್ರಿಯರಾಗಿದ್ದವರು, ಬಳಿಕ ರಾಜ್ಯ ರಾಜಕಾರಣ, ಸ್ಥಳಿಯಾಡಳಿತ, ಶಾಸಕಿಯಾಗಿ ಬಳಿಕ ಇದೀಗ ಮುಖ್ಯಮಂತ್ರಿ ಹುದ್ದೆಗೇರುತ್ತಿದ್ದಾರೆ. ದಿಲ್ಲಿಯ ಸರ್ವಾಂಗೀಣ ಅಭಿವೃದ್ಧಿಗೆ ಅವರು ಶ್ರಮಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ. ನಿಮ್ಮ ಅವಧಿ ಫಲಪ್ರದವಾಗಿರಲಿ ಎಂದು ನಾನು ಈ ಸಂದರ್ಭದಲ್ಲಿ ಹಾರೈಸಿ ನಿಮ್ಮನ್ನು ಅಭಿನಂದಿಸುತ್ತಿದ್ದೇನೆ’ ಎಂದು ಶುಭ ಹಾರೈಸಿದ್ದಾರೆ.
ರೇಖಾ ಗುಪ್ತಾ ಅವರನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸುವ ಮೂಲಕ ಬಿಜೆಪಿ, ತಳಮಟ್ಟದಿಂದ ಬೆಳೆದು ಬಂದ ತನ್ನ ನಾಯಕರನ್ನು ಎಂದೂ ಕಡೆಗಣಿಸುವುದಿಲ್ಲ ಎಂಬ ಸಂದೇಶವನ್ನು ರಾಷ್ಟ್ರ ರಾಜಧಾನಿಯಿಂದಲೇ ಪೂರ್ತಿ ದೇಶದ ರಾಜಕಿಯ ವಲಯಕ್ಕೆ ನೀಡಿದೆ ಎಂದೂ ಸಹ ಇದೀಗ ವಿಶ್ಲೇಷಿಸಲಾಗುತ್ತಿದೆ.