Digital Fraud: ಆನ್‌ಲೈನ್‌ನಲ್ಲಿ ಹೊಟೇಲ್ ರೂಂ ಬುಕ್ಕಿಂಗ್ ಮಾಡಲು ಹೋಗಿ ಹಣ ಕಳೆದುಕೊಂಡ ಮಹಿಳೆ
ವಿವಿಧ ರೀತಿಯ ಆನ್‌ಲೈನ್ ವಂಚನೆ ಪ್ರಕರಣಗಳು ದಿನನಿತ್ಯ ಎಂಬಂತೆ ವರದಿಯಾಗುತ್ತಲೇ ಇರುತ್ತದೆ. ಅಂತಹ ಒಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ಆನ್‌ಲೈನ್ ಮೂಲಕ ಹೊಟೇಲ್ ರೂಂ ಬುಕ್ ಮಾಡಲು ಹೋಗಿ ಬರೋಬ್ಬರಿ 93 ಸಾವಿರ ರೂ. ಕಳೆದುಕೊಂಡಿದ್ದಾರೆ.
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮೋಸದ (Digital Fraud) ಹಲವು ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಲೇ ಇದೆ. ಡಿಜಿಟಲ್ ಮೋಸಗಳಲ್ಲಿ ಹಲವಾರು ವಿಧಗಳಿದ್ದು, ಒಂದಲ್ಲ ಒಂದು ವಿಧಾನಗಳಲ್ಲಿ ಜನರು ಈ ಡಿಜಿಟಲ್ ಮೋಸಗಾರರ ಬಲೆಗೆ ಬೀಳುತ್ತಿರುತ್ತಾರೆ. ಇಂತಹ ಹಲವು ಮೋಸದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಅಂತಹ ಒಂದು ಡಿಜಿಟಲ್ ಫ್ರಾಡ್ ಪ್ರಕರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಚರ್ಚೆಯ ವಸ್ತುವಾಗಿದೆ. ಮಹಿಳೆಯೊಬ್ಬರು ಆನ್‌ಲೈನ್ (Online Booking) ಮೂಲಕ ಹೋಟೆಲ್ ರೂಂ ಬುಕ್ ಮಾಡಲು ಹೋಗಿ ಬರೋಬ್ಬರಿ 93,600 ರೂ. ಕಳೆದುಕೊಂಡಿದ್ದಾರೆ. ಫೇಕ್ ಗೂಗಲ್ ಲಿಸ್ಟಿಂಗ್ (Google Listing) ಮೂಲಕ ಹೊಟೇಲ್ ರೂಂ ಬುಕ್ ಮಾಡಲು ಹೋಗಿ ಈಕೆ ಇಷ್ಟೊಂದು ಬೃಹತ್ ಮೊತ್ತವನ್ನು ಕಳೆದುಕೊಂಡಿದ್ದಾರೆ.
ತನಗಾದ ಡಿಜಿಟಲ್ ಮೋಸವನ್ನು ಕಂಟೆಂಟ್ ಕ್ರಿಯೇಟರ್ (Content Creator) ಆಗಿರುವ ಶ್ರೇಯಾ ಮಿತ್ರ ತನ್ನ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ತಮಗಾದ ಮೋಸವನ್ನು ಬಿಚ್ಚಿಟ್ಟಿದ್ದಾರೆ. ಭುವನೇಶ್ವರದ ಪುರಿಗೆ ಪ್ರವಾಸದ ಯೋಜನೆ ಹಾಕಿಕೊಂಡಿದ್ದ ಸಂದರ್ಭದಲ್ಲಿ ಅಲ್ಲಿ ತನಗೆ ತಂಗಲು ಸೂಕ್ತವಾದ ಹೋಟೆಲ್ ಅನ್ನು ಶ್ರೇಯಾ ಗೂಗಲ್ ಲಿಸ್ಟಿಂಗ್ ಮೂಲಕ ಹುಡುಕುತ್ತಿದ್ದರು.
ಮೇಫೇರ್ ಹೆರಿಟೇಜ್ ಪುರಿ (Mayfair Heritage Puri) ಎಂದು ಗೂಗಗ್‌ನಲ್ಲಿ ಟೈಪಿಸಿದಾಗ ಅಲ್ಲಿ ಬಂದ ಮೊದಲ ರಿಸಲ್ಟ್‌ನ ಲಿಂಕ್ ಮೇಲೆ ಅವರು ಕ್ಲಿಕ್ ಮಾಡಿದ್ದಾರೆ. ಅಲ್ಲಿ ಸಿಕ್ಕಿದ ಸಂಪರ್ಕ ಸಂಖ್ಯೆಗೆ ಅವರು ಕರೆ ಮಾಡಿದ್ದಾರೆ ಮತ್ತು ತನ್ನ ಸ್ಟೇ ಬಗ್ಗೆ ಅವರು ವಿಚಾರಿಸಿದ್ದಾರೆ. ಕೂಡಲೇ ವಂಚಕರು ಆಕೆಗೆ ಹೊಟೇಲ್ ರೂಂನ ಫೋಟೊ ಹಾಗೂ ವಿವರಗಳನ್ನು ಹಂಚಿಕೊಂಡಿದ್ದಾರೆ. ಇದಾದ ಬಳಿಕ ಅಗತ್ಯ ಹಣ ಪಾವತಿಸಿ ಹೋಟೆಲ್ ರೂಂ ಬುಕ್ಕಿಂಗ್ ಮಾಡುವಂತೆ ಅವರಿಗೆ ಸೂಚಿಸಿದ್ದಾರೆ.
ಬಳಿಕ ವಂಚಕ ಅವರಿಗೊಂದು ನಕಲಿ ಇಬ್‌ವಾಯ್ಸ್ ಕಳುಹಿಸಿದ್ದಾರೆ. ಆದರೆ ಇವರು ಇಮೇಲ್ ಕನ್ಫರ್ಮೇಶನ್ ಬೇಕೆಂದು ಹೇಳಿದಾಗ ಸಿಸ್ಟಮ್ ಸರಿ ಇಲ್ಲ ಎಂದು ಸಬೂಬು ಹೇಳಿ ತಪ್ಪಿಸಿಕೊಂಡಿದ್ದಾರೆ. ಮರುದಿನ ಬೆಳಗ್ಗೆ ಇವರಿಗೆ ವಂಚಕರಿಂದ ಒಂದು ಕರೆ ಬಂದಿದೆ. ಗೂಗಲ್ ಪೇ ಅಪ್ಲಿಕೇಷನ್ ಓಪನ್ ಮಾಡಿ ಅಲ್ಲಿ ‘ಪೇ’ ಆಯ್ಕೆಯನ್ನು ಕ್ಲಿಕ್ ಮಾಡುವಂತೆ ಸೂಚಿಸಲಾಗಿದೆ. ಅಲ್ಲಿ ಈಗಾಗಲೇ ನೀಡಲಾಗಿರುವ ಬುಕ್ಕಿಂಗ್ ಐಡಿಯನ್ನು ಎಂಟ್ರಿ ಮಾಡುವಂತೆಯೂ ಸೂಚಿಸಲಾಗಿದೆ ಮತ್ತು ಈ ಮೂಲಕ ಹೋಟೆಲ್ ರೂಂ ಬುಕ್ಕಿಂಗ್ ಕನ್‌ಫರ್ಮ್ ಮಾಡುವಂತೆ ಅವರಿಗೆ ಸೂಚಿಸಲಾಗಿದೆ.
ಆದರೆ ಈ ಹಂತದಲ್ಲಿ ಶ್ರೇಯಾ ಅವರಿಗೆ ಈ ವ್ಯವಹಾರದ ಕುರಿತು ಸಂಶಯ ಬಂದು ಅವರು ಹಣ ಪಾವತಿಸಲು ನಿರಾಕರಿಸಿದ್ದಾರೆ. ಅಧಿಕೃತ ಇಮೇಲ್ ದೃಢೀಕರಣದ ಬಳಿಕವೇ ಹಣ ಪಾವತಿಸುವುದಾಗಿ ಅವರು ಪಟ್ಟು ಹಿಡಿದಿದ್ದಾರೆ. ಕೂಡಲೇ ವಂಚಕರು ಉದ್ದೇಶಪೂರ್ವಕವಾಗಿಯೇ ಕರೆಯನ್ನು ಹ್ಯಾಂಗ್ ಮೋಡ್‌ನಲ್ಲಿಟ್ಟಿದ್ದಾರೆ. ಇಲ್ಲಿಗೆ ತಾನು ಮೋಸ ಹೋಗಿದ್ದೇನೆ ಎಂದು ಅರಿತ ಶ್ರೇಯಾ ತನ್ನ ಅಕೌಂಟ್ ಚೆಕ್ ಮಾಡಿದಾಗ ಹಣ ಕಟ್ ಆಗಿರುವುದು ಗೊತ್ತಾಗಿದೆ.
ಇದನ್ನೂ ಓದಿ: Monalisa Bhosle: ಕುಂಭಮೇಳದ ಮೊನಾಲಿಸಾ ಈಗ ಇನ್‌ಸ್ಟಗ್ರಾಂ ಸುಂದರಿ
ತಾವು ವಂಚನೆಗೊಳಗಾಗಿರುವುದು ಗೊತ್ತಾದ ಕೂಡಲೇ ಅವರು ಮೈಫೇರ್ ಹೆರಿಟೇಜ್ ಪುರಿಯ ಅಧಿಕೃತ ಸಂಪರ್ಕ ಸಂಖ್ಯೆಗೆ ಫೋನ್ ಮಾಡಿ ಬುಕ್ಕಿಂಗ್ ದೃಢೀಕರಣದ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಹೋಟೆಲ್‌ನವರು ಹೇಳಿದ ಪ್ರಕಾರ ಅವರು ಲಿಸ್ಟಿಂಗ್ ಮಾಡಿದ ಲಿಂಕ್ ಫೇಕ್ ಆಗಿತ್ತು.
‘ಗೂಗಲ್ ಸರ್ಚ್ ಮಾಡಿದಾಗ ಸಿಗುವ ಮೈ ಪೇರ್‌ನ ಮೊದಲ ಲಿಂಕೇ ನಕಲಿ ಎಂದು ತಿಳಿದಾಗ ಅದನ್ನು ನಂಬುವುದು ಕಷ್ಟವಾಗಿತ್ತು. ಕ್ಲಿಕ್ ಮಾಡಿದಾಗ ಈ ಪೇಜ್ ನಿಮ್ಮನ್ನು ನೇರವಾಗಿ ಫೇಕ್ ವೆಬ್ ಪೇಜ್ ಒಂದಕ್ಕೆ ಕರೆದೊಯ್ಯುತ್ತದೆ ಮತ್ತು ಅದರ ವಿವರಗಳನ್ನು ನಿಮಗೆ ತೋರಿಸುತ್ತದೆ. ವಂಚಕರು ಇನ್ನೂ ಜನರನ್ನು ವಂಚಿಸುತ್ತಿದ್ದಾರೆ. ಈ ಸಂಖ್ಯೆ ಇನ್ನೂ ಚಾಲ್ತಿಯಲ್ಲಿದೆ ಮತ್ತು ಅವರ ಬಳಿ ಹಲವಾರು ಬ್ಯಾಂಕ್ ಅಕೌಂಟ್‌ಗಳಿವೆ. ನೀವು ಆ ಭಾಗದವರಾಗಿದ್ದರೆ ದಯವಿಟ್ಟು ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ’ ಎಂದು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
‘ನನ್ನ ದುಡ್ಡಂತೂ ಹೋಯಿತು. ಪೊಲೀಸರು ವಂಚಕರನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇಂತಹ ವಂಚನೆ ಪ್ರಕರಣಗಳಲ್ಲಿ ಒಮ್ಮೆ ಹಣ ಹೋಯಿತೆಂದರೆ, ಅದು ಮರಳಿ ಸಿಗುವುದು ಕಷ್ಟವೇ. ಇದರ ಬದಲು ಇಂತಹ ವಂಚನಾ ಜಾಲವನ್ನೇ ಬಂಧಿಸಬೇಕುʼ ಎಂದು ಅವರುಖೇದ ವ್ಯಕ್ತಪಡಿಸಿದ್ದಾರೆ.