Pahalgam Terror Attack: ''ಹಂದಿಗೆ ಲಿಪ್‌ಸ್ಟಿಕ್ ಹಚ್ಚಿದರೂ ಅದು ಹಂದಿಯೇ''- ಪಾಕ್ ವಿರುದ್ಧಅಮೆರಿಕದ ಮಾಜಿ ಅಧಿಕಾರಿ ವ್ಯಂಗ್ಯ
Pahalgam Terror Attack: ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರನ್ನು ದಿವಂಗತ ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿರುವ ಮಾಜಿ ಪೆಂಟಗನ್ ಅಧಿಕಾರಿ ಮೈಕಲ್ ರೂಬಿನ್ , ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಮಾಜಿ ಪೆಂಟಗನ್ ಅಧಿಕಾರಿ ಮೈಕಲ್ ರೂಬಿನ್

ನವದೆಹಲಿ: ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ (Asim Munir) ಅವರನ್ನು ದಿವಂಗತ ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ಗೆ (Al-Qaeda chief Osama Bin Laden) ಹೋಲಿಸಿರುವ ಮಾಜಿ ಪೆಂಟಗನ್ ಅಧಿಕಾರಿ ಮೈಕಲ್ ರೂಬಿನ್ (Michael Rubin), ಪಹಲ್ಗಾಮ್ ಭಯೋತ್ಪಾದಕ ದಾಳಿ(Pahalgam Terror Attack)ಯಲ್ಲಿ ಪಾಕಿಸ್ತಾನದ ಪಾತ್ರವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಮೆರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಸಂಶೋಧಕರಾದ ರೂಬಿನ್, "ಒಸಾಮಾ ಬಿನ್ ಲಾಡೆನ್ ಮತ್ತು ಅಸೀಮ್ ಮುನೀರ್ ನಡುವಿನ ಏಕೈಕ ವ್ಯತ್ಯಾಸವೆಂದರೆ, ಬಿನ್ ಲಾಡೆನ್ ಗುಹೆಯಲ್ಲಿ ವಾಸಿಸುತ್ತಿದ್ದ, ಆದರೆ ಮುನೀರ್ ಅರಮನೆಯಲ್ಲಿ ವಾಸಿಸುತ್ತಿದ್ದಾನೆ. ಇವರಿಬ್ಬರೂ ಒಂದೇ, ಇವರ ಅಂತ್ಯವೂ ಒಂದೇ ಆಗಬೇಕು," ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವನ್ನು ಭಯೋತ್ಪಾದಕರ ಪ್ರಾಯೋಜಕ ರಾಷ್ಟ್ರವೆಂದು ಮತ್ತು ಅಸೀಮ್ ಮುನೀರ್‌ನನ್ನು ಭಯೋತ್ಪಾದಕನೆಂದು ಅಮೆರಿಕವು ಔಪಚಾರಿಕವಾಗಿ ಘೋಷಿಸಬೇಕು ಎಂದು ರೂಬಿನ್ ಒತ್ತಾಯಿಸಿದರು. ಹಂದಿಗೆ ಲಿಪ್‌ಸ್ಟಿಕ್ ಬಳಿದರೂ ಅದು ಹಂದಿಯೇ ಆಗಿರುತ್ತದೆ, ಜಮ್ಮು ಮತ್ತು ಕಾಶ್ಮೀರ ದಾಳಿಯು "ಸ್ವಯಂಪ್ರೇರಿತ ಕ್ರಮ" ಎಂದು ಯಾವುದೇ ನೆಪ ಹೇಳಬಾರದು ಎಂದು ರೂಬಿನ್ ಹೇಳಿದ್ದಾರೆ.
"ದಾಳಿಯ ಸಮಯದ ಬಗ್ಗೆ ಹೇಳುವುದಾದರೆ, ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದಾಗ ಭಯೋತ್ಪಾದಕ ದಾಳಿಯಾಗಿದ್ದಂತೆ, ಈಗಲೂ ಪಾಕಿಸ್ತಾನವು ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ರ ಭಾರತ ಭೇಟಿಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಬಯಸುತ್ತಿದೆ," ಎಂದು ಅವರು ಆರೋಪಿಸಿದರು. ಮಂಗಳವಾರ ಪಹಲ್ಗಾಮ್‌ನ ಜನಪ್ರಿಯ ಬೈಸಾರನ್ ಹುಲ್ಲುಗಾವಲಿನಲ್ಲಿ ನಡೆದ ದಾಳಿಯಲ್ಲಿ ಸಾವನ್ನಪ್ಪಿದವರ ಮೃತದೇಹಗಳು ಅವರ ಸ್ವಗ್ರಾಮಗಳಿಗೆ ತಲುಪಿದ್ದು, ಅಂತಿಮ ವಿಧಿವಿಧಾನಗಳು ನಡೆದಿವೆ. ಈ ನಡುವೆ ಭಾರತವು ಪಾಕಿಸ್ತಾನದ ವಿರುದ್ಧ ಹಲವು ರಾಜತಾಂತ್ರಿಕ ಕ್ರಮಗಳನ್ನು ಘೋಷಿಸಿದೆ.
ಈ ಸುದ್ದಿಯನ್ನು ಓದಿ: Pahalgam terror attack: ಉಗ್ರರ ದಾಳಿ; ಮೃತ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ತಲಾ 1 ಲಕ್ಷ ಪರಿಹಾರ
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, 1960ರ ಸಿಂಧೂ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವುದು ಮತ್ತು ಅಟಾರಿ ಭೂಮಾರ್ಗದ ಟ್ರಾನ್ಸಿಟ್ ಪೋಸ್ಟ್‌ನ್ನು ತಕ್ಷಣವೇ ಮುಚ್ಚುವ ಕ್ರಮಗಳನ್ನು ಘೋಷಿಸಿದರು. ಪಾಕಿಸ್ತಾನ ಮತ್ತು ಭಾರತದ ಹೈಕಮಿಷನ್‌ಗಳ ಒಟ್ಟಾರೆ ಸಿಬ್ಬಂದಿ ಸಂಖ್ಯೆಯನ್ನು ಪ್ರಸ್ತುತ 55 ರಿಂದ 30ಕ್ಕೆ ಇಳಿಸಲಾಗುವುದು, ಈ ಕಡಿತವು ಮೇ 1ರ ವೇಳೆಗೆ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.
ಪಾಕಿಸ್ತಾನದ ನಾಗರಿಕರಿಗೆ SAARC ವೀಸಾ ವಿನಾಯಿತಿ ಯೋಜನೆಯಡಿ ಭಾರತಕ್ಕೆ ಪ್ರಯಾಣಿಸಲು ಅನುಮತಿಯಿರುವುದಿಲ್ಲ ಮತ್ತು ಪ್ರಸ್ತುತ ಈ ವೀಸಾದಡಿ ಭಾರತದಲ್ಲಿರುವ ಯಾವುದೇ ಪಾಕಿಸ್ತಾನಿ ನಾಗರಿಕನಿಗೆ 48 ಗಂಟೆಗಳ ಒಳಗೆ ದೇಶ ತೊರೆಯಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದರು. "ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿರುವ ರಕ್ಷಣಾ, ಮಿಲಿಟರಿ, ನೌಕಾಪಡೆ ಮತ್ತು ವಾಯುಪಡೆ ಸಲಹೆಗಾರರು ಒಂದು ವಾರದ ಒಳಗೆ ಭಾರತವನ್ನು ತೊರೆಯಬೇಕು ಎಂದು ಅವರು ಸ್ಪಷ್ಟಪಡಿಸಿದರು.