ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Rekha Gupta: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರೇಖಾ ಗುಪ್ತಾ ಫುಲ್‌ ಆ್ಯಕ್ಟಿವ್‌; ಸಚಿವರೊಂದಿಗೆ ಯಮುನಾ ಆರತಿ

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿಯ ಹಿರಿಯ ನಾಯಕಿ ರೇಖಾ ಗುಪ್ತಾ ಅವರು ಯಮುನಾ ಆರತಿ ನೆರವೇರಿಸಿದ್ದಾರೆ. ಸಚಿವರೊಂದಿಗೆ ವಾಸುದೇವ ಘಾಟ್‌ಗೆ ತೆರಳಿದ ಅವರು ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ವೇಳೆ ಅವರು ಯಮುನಾ ನದಿ ಸ್ವಚ್ಛಗೊಳಿಸುವ ವಾಗ್ದಾನವನ್ನು ಪುನರುಚ್ಚರಿಸಿದರು.

ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದಿಲ್ಲಿ ಮುಖ್ಯಮಂತ್ರಿಯಿಂದ ಯಮುನಾ ಆರತಿ

ಯಮುನಾ ಆರತಿ.

Profile Ramesh B Feb 20, 2025 8:45 PM

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿಯ ಹಿರಿಯ ನಾಯಕಿ ರೇಖಾ ಗುಪ್ತಾ (Rekha Gupta) ಫುಲ್‌ ಆ್ಯಕ್ಟಿವ್‌ ಆಗಿದ್ದಾರೆ. ಗುರುವಾರ (ಫೆ. 20) ಅಧಿಕಾರ ವಹಿಸಿಕೊಂಡ ಅವರು ತಮ್ಮ ಸಂಪುಟದ ನೂತನ ಸಚಿವರೊಂದಿಗೆ ವಾಸುದೇವ ಘಾಟ್‌ನಲ್ಲಿ ಯಮುನಾ ಆರತಿ (Yamuna aarti) ನೆರವೇರಿಸಿದರು. ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಯಮುನಾ ನದಿಯ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಬಿಜೆಪಿ ಹೇಳಿದೆ. ಮಲೀನಗೊಂಡ ಯಮುನಾ ನದಿಯೇ ಚುನಾವಣೆ ವೇಳೆ ಬಿಜೆಪಿ ಮತ್ತು ಆಪ್‌ ನಡುವೆ ಪ್ರಮುಖ ಚರ್ಚಾ ವಿಷಯವಾಗಿತ್ತು.

ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಜತೆಗೆ ಅವರ ಸಚಿವ ಸಂಪುಟದ ಪರ್ವೇಶ್‌ ಸಾಹಿಬ್‌ ಸಿಂಗ್‌, ಆಶೀಷ್‌ ಸೂದ್‌, ಮಜೀಂದರ್‌ ಸಿಂಗ್‌ ಸಿರ್ಸಾ, ರವೀಂದರ್‌ ಕುಮಾರ್‌ ಇಂದ್ರಜ ಸಿಂಗ್‌ ಮತ್ತು ಪಂಕಜ್‌ ಕುಮಾರ್‌ ಸಿಂಗ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿರೇಂದ್ರ ಸಚ್‌ದೇವ್‌ ಯಮುನಾ ಆರತಿ ವೇಳೆ ಉಪಸ್ಥಿತರಿದ್ದರು.

ʼʼಜೈ ಶ್ರೀ ರಾಮʼʼ, ʼʼಯಮುನಾ ಮಾಯಿ ಕಿ ಜೈʼʼ ಇತ್ಯಾದಿ ಘೋಷ ವಾಕ್ಯದ ನಡುವೆ ರಾಮ ಭಜನೆಯೂ ನೆರವೇರಿತು. ʼʼಯಮುನಾ ತಾಯಿಗೆ ಆರತಿ ಮಾಡುವಾಗ ನದಿ ಸ್ವಚ್ಛಗೊಳಿಸುವ ನಮ್ಮ ಸಂಕಲ್ಪ ಇನ್ನಷ್ಟು ದೃಢವಾಗಿದೆ. ಲಭ್ಯವಿರುವ ಸಂಪನ್ಯೂಲಗಳನ್ನು ಬಳಸಿ ಆದ್ಯತೆಯ ಮೇರೆಗೆ ಯಮುನಾ ನದಿ ಸ್ವಚ್ಛಗೊಳಿಸುತ್ತೇವೆʼʼ ಎಂದು ರೇಖಾ ಗುಪ್ತಾ ತಿಳಿಸಿದರು.



ವೀರೇಂದ್ರ ಸಚ್‌ದೇವ್‌ ಅವರೂ ಯಮುನಾ ನದಿಯ ಶುಚಿತ್ವದ ಕನಸನ್ನು ಬಿಜೆಪಿ ನನಸಾಗಿಸಲಿದೆ ಎಂದು ಭರವಸೆ ನೀಡಿದರು. ʼʼತಾಯಿ ಯಮುನಾ ನಮ್ಮನ್ನು ಆಶೀರ್ವದಿಸಿದ್ದಾಳೆ. ದಿಲ್ಲಿ ಸರ್ಕಾರ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಲಿದೆʼʼ ಎಂದು ಹೇಳಿದರು.

ಯಾರಿಗೆ ಯಾವ ಖಾತೆ?

ರೇಖಾ ಗುಪ್ತಾ ಅವರು ಮುಖ್ಯಮಂತ್ರಿಯ ಜತೆಗೆ ಗೃಹ, ಹಣಕಾಸು, ವಿಜಿಲೆನ್ಸ್ ಮತ್ತು ಯೋಜನೆ ಖಾತೆಗಳನ್ನು ಸಹ ನಿರ್ವಹಿಸಲಿದ್ದಾರೆ. ಇನ್ನು ಉಪ ಮುಖ್ಯಮಂತ್ರಿ ಪರ್ವೇಶ್ ವರ್ಮಾ ಅವರಿಗೆ ಶಿಕ್ಷಣ, ಪಿಡಬ್ಲ್ಯುಡಿ ಮತ್ತು ಸಾರಿಗೆ ಖಾತೆಗಳನ್ನು ನೀಡಲಾಗಿದೆ. ಆರೋಗ್ಯ, ನಗರಾಭಿವೃದ್ಧಿ ಮತ್ತು ಕೈಗಾರಿಕೆಗಳ ಖಾತೆ ಮಂಜಿಂದರ್ ಸಿಂಗ್ ಸಿರ್ಸಾ ಪಾಲಾಗಿದೆ. ರವೀಂದರ್‌ ಕುಮಾರ್ ಇಂದ್ರಜ ಹೆಗಲಿಗೆ ಸಮಾಜ ಕಲ್ಯಾಣ, ಎಸ್‌ಸಿ/ಎಸ್‌ಟಿ ವ್ಯವಹಾರಗಳು ಮತ್ತು ಕಾರ್ಮಿಕ ಖಾತೆಯ ಜಾವಾಬ್ದಾರಿ ಬಿದ್ದಿದೆ. ಕಪಿಲ್ ಮಿಶ್ರಾ ನೀರು, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆಗಳನ್ನು ನಿರ್ವಹಿಸಲಿದ್ದಾರೆ. ಆಶಿಶ್ ಸೂದ್ ಕಂದಾಯ, ಪರಿಸರ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆಗಳನ್ನು ನೋಡಿಕೊಳ್ಳಲಿದ್ದಾರೆ. ಪಂಕಜ್ ಕುಮಾರ್ ಸಿಂಗ್ ಅವರಿಗೆ ಕಾನೂನು, ಶಾಸಕಾಂಗ ವ್ಯವಹಾರಗಳು ಮತ್ತು ವಸತಿ ಖಾತೆಗಳನ್ನು ಹಂಚಲಾಗಿದೆ.

ಈ ಸುದ್ದಿಯನ್ನೂ ಓದಿ: CM Rekha Gupta: ದಿಲ್ಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತ ಪ್ರಮಾಣ ವಚನ: ಬಿಜೆಪಿ ಕೊಟ್ಟ ಸಂದೇಶವೇನು?

ಯಮುನಾ ಆರತಿಗೂ ಮುನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ತಮ್ಮ ಸರ್ಕಾರವು ಮಹಿಳೆಯರಿಗೆ ಮಾಸಿಕ 2,500 ರೂ. ಆರ್ಥಿಕ ಸಹಾಯವನ್ನು ನೀಡಲಿದೆ ಎಂದು ರೇಖಾ ಗುಪ್ತಾ ತಿಳಿಸಿದರು. ಮೊದಲ ಕಂತನ್ನು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾ. 8ರೊಳಗೆ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಅವರು ಹೇಳಿದರು.