ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Readers Colony: ಗಣೇಶ ಮತ್ತು ಗೌರಿ

ಪಶು ಪ್ರಾಣಿ ಉರಗಗಳು ಇತ್ಯಾದಿಗಳ ಸಾಂಗತ್ಯದಲ್ಲಿ ನಿತ್ಯವೂ ಬಾಳುವ ಗಂಡ ಮತ್ತು ಇಬ್ಬರು ಮಕ್ಕಳನ್ನು ನೋಡಿಕೊಂಡು, ಹೊಂದಿಕೊಂಡು, ಅನುಸರಿಸಿಕೊಂಡು ಹೋಗುವ ಗೌರಿಯ ನಡೆ ನಿಜವಾಗಿಯೂ ಅಭಿನಂದನೀಯ ಹಾಗೂ ಸಾರ್ವಕಾಲಿಕ ಪೂಜ್ಯ. ಕಡೆಯದಾಗಿ ಗಂಡಸಿಗೇನು ಗೊತ್ತು ಗೌರಿ ದುಃಖ? ಅನ್ನುವ ಗಾದೆಯ ಮಾತನ್ನು ಪುಷ್ಟೀಕರಿಸುವಂತೆ ಲೇಖಕರ ಸಾಂದರ್ಭಿಕ ಶಬ್ದಾಲಂಕಾರ ಗಳೂ ಅಭಿನಂದನೀಯ.

Readers Colony: ಗಣೇಶ ಮತ್ತು ಗೌರಿ

-

Profile
Ashok Nayak Sep 14, 2026 5:49 PM

ಓದುಗರ ಓಣಿ

ಗೌರಿ ಗಣೇಶ ಚತುರ್ಥಿ ಎರಡೂ ಹಬ್ಬಗಳು ಒಂದೇ ದಿನದಂದು ಆಚರಿಸುತ್ತಿರುವ ವಿಶೇಷ ಹಿನ್ನೆಲೆಯಲ್ಲಿ ‘ತಿಳಿರು ತೋರಣ’ ಅಂಕಣದಲ್ಲಿ ಪ್ರಕಟವಾದ ಶ್ರೀವತ್ಸ ಜೋಶಿ ಅವರ ಮೇಲಿನ ವಿಡಂಬನಾತ್ಮಕ ಲೇಖನ ನಿಜಕ್ಕೂ, ಇಬ್ಬರು ಹೆಂಡಿರ ಮುದ್ದಿನ ಗಂಡನ ಸಿನಿಮಾ ಶೀರ್ಷಿಕೆಯನ್ನು ನೆನಪಿಸುತ್ತದೆ. ಒಂದರ್ಥದಲ್ಲಿ ಗೌರಿಯ ದುಃಖ ಯಾರಿಗೂ ಬೇಡ. ನವಿರಾದ ಹಾಸ್ಯದ ಲೇಪನದ ಜೊತೆ, ಹಲವಾರು ಸಾಂದರ್ಭಿಕ ಶ್ಲೋಕಗಳನ್ನು ಉಲ್ಲೇಖಿಸುವುದರೊಂದಿಗೆ, ಲೇಖನ ಮತ್ತಷ್ಟು ಮೆರುಗು ಪಡೆದಿದೆ.

ಪಶು ಪ್ರಾಣಿ ಉರಗಗಳು ಇತ್ಯಾದಿಗಳ ಸಾಂಗತ್ಯದಲ್ಲಿ ನಿತ್ಯವೂ ಬಾಳುವ ಗಂಡ ಮತ್ತು ಇಬ್ಬರು ಮಕ್ಕಳನ್ನು ನೋಡಿಕೊಂಡು, ಹೊಂದಿಕೊಂಡು, ಅನುಸರಿಸಿಕೊಂಡು ಹೋಗುವ ಗೌರಿಯ ನಡೆ ನಿಜವಾಗಿಯೂ ಅಭಿನಂದನೀಯ ಹಾಗೂ ಸಾರ್ವಕಾಲಿಕ ಪೂಜ್ಯ. ಕಡೆಯದಾಗಿ ಗಂಡಸಿಗೇನು ಗೊತ್ತು ಗೌರಿ ದುಃಖ? ಅನ್ನುವ ಗಾದೆಯ ಮಾತನ್ನು ಪುಷ್ಟೀಕರಿಸುವಂತೆ ಲೇಖಕರ ಸಾಂದರ್ಭಿಕ ಶಬ್ದಾಲಂಕಾರಗಳೂ ಅಭಿನಂದನೀಯ.

- ವಿ.ಆರ್. ಮುರಲೀಧರ್, ಬೆಂಗಳೂರು

ದಸರಾ ಚಿತ್ರೋತ್ಸವ

ಕಳೆದ ಹಲವಾರು ದಶಕಗಳಿಂದ, ಮೈಸೂರಿನಲ್ಲಿ ದಸರಾ ಚಲನಚಿತ್ರೋತ್ಸವವನ್ನು ಆಯೋಜಿಸಿ ಕೊಂಡು ಬರಲಾಗುತ್ತಿತ್ತು. ಈ ಬಾರಿ ಕೈಬಿಟ್ಟಿರುವುದು ಸರಿಯಲ್ಲ. ವಿಶ್ವ ವಿಖ್ಯಾತ ದಸರಾ ಮಹೋ ತ್ಸವದಲ್ಲಿ ಆಯೋಜಿಸಲಾಗುವ ದಸರಾ ಚಿತ್ರೋತ್ಸವದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾ ಷ್ಟ್ರೀಯ ಗುಣಮಟ್ಟದ ಚಿತ್ರಗಳ ಜೊತೆಗೆ ನಾಡಿನ ಐತಿಹಾಸಿಕ ಹಿರಿಮೆ ಸಾರುವಂತಹ ಚಿತ್ರಗಳು, ಅಪರೂಪದ ಕಲಾತ್ಮಕ ಚಿತ್ರಗಳು ಸೇರಿದಂತೆ, ಬಹು ಭಾಷೆಗಳ ವೈವಿಧ್ಯಮಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು.

ಇದನ್ನೂ ಓದಿ: Readers Colony: ಶಾಸ್ತ್ರೀಜಿ ನೆನಪಿನ ಯಾನ

ಪ್ರದರ್ಶನ ದರ ಕೂಡ ಕಡಿಮೆ ಇತ್ತು. ಇದು ಮೈಸೂರಿಗರಿಗೆ ಅಪರೂಪದ ಅವಕಾಶ ಆಗಿತ್ತು. ಇದನ್ನು ತಪ್ಪಿಸುವುದು ಮೈಸೂರಿನವರಿಗೆ ಅನ್ಯಾಯ ಮಾಡಿದಂತೆ. ರಾಜ್ಯ ಸರ್ಕಾರ ತಕ್ಷಣ ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡು, ಎಂದಿನಂತೆ ಚಿತ್ರೋತ್ಸವವನ್ನು ಏರ್ಪಡಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು.

- ಕೆ.ವಿ.ವಾಸು, ಮೈಸೂರು

ಹಲಸಿನ ಅವತಾರ

ಶಶಿಧರ ಹಾಲಾಡಿಯವರ ‘ಹಲಸಿನ ಮರದ ದಶಾವತಾರಗಳು’ ಲೇಖನ ಓದಿ ಖುಷಿಯಾಯಿತು. ಹಲಸು ಕರಾವಳಿಯ ಪಾಲಿಗೆ ಕೇವಲ ಹಣ್ಣಲ್ಲ, ವರ್ಷಪೂರ್ತಿ ಬದುಕಿನ ಸಂಗಾತಿ ಎಂಬುದನ್ನು ಅವರು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಈ ಬಗ್ಗೆ ನನ್ನ ಅನುಭವವನ್ನೂ ಸೇರಿಸಬಯಸುತ್ತೇನೆ. ನಮ್ಮಲ್ಲಿ ಹಲಸಿಗೆ ಹಲವು ರೂಪಗಳಿವೆ. ಉಪ್ಪಿನ ನೀರಿನಲ್ಲಿ ತೊಳೆಗಳನ್ನು ತಿಂಗಳುಗಟ್ಟಲೆ ಹಾಳಾ ಗದಂತೆ ಇಡುವುದೇ ಉಪ್ಪಡ್ ಪಚ್ಚಿರ್. ಇದನ್ನು ಮಳೆಗಾಲದಲ್ಲಿ ಪಲ್ಯಕ್ಕೆ ಬಳಸುತ್ತಾರೆ. ಹಲಸಿನ ಬೀಜವನ್ನು ಬೇಯಿಸಿ ಬಿಸಿಲಲ್ಲಿ ಒಣಗಿಸಿಟ್ಟದ್ದ ಸಾಂತಾಣಿ ಕುಟುಕುಟು ಎಂದು ತಿನ್ನಲು ಸೊಗಸು.

ತೊಳೆ ತೆಗೆದ ಮೇಲೆ ಉಳಿ ಯುವ ದಪ್ಪ ಸಿಪ್ಪೆಗೆ ತುಳುವಿನಲ್ಲಿ ‘ರಚ್ಚೆ’ ಎನ್ನುತ್ತಾರೆ. ಇದನ್ನು ಭತ್ತದ ತೌಡಿನೊಂದಿಗೆ ಬೆರೆಸಿ ಬೇಯಿಸಿ ದನಕರುಗಳಿಗೆ ಮಾಡುವ ತಿನಿಸೇ ಮಡ್ಡಿ. ಇಂತಹ ನೆಲದ ಸೊಗಡಿನ ಲೇಖನಗಳಿಗೆ ಧನ್ಯವಾದಗಳು.

- ಆಮೇಯ್ ಚಂದ್ರಶೇಖರ್, ಬೆಂಗಳೂರು

ತನಿಖೆಗೆ ಜಾತಿ ಲೇಪ ಏಕೆ?

ಪ್ರತಿ ರಾಜಕಾರಣಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ನಾನು ಸಂವಿಧಾನದ ಆಶಯಕ್ಕೆ ವಿರೋಧವಾಗಿ ನಡೆದುಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡುತ್ತಾರೆ. ಹೀಗಿರುವಾಗ, ಕಾನೂನಿ ನಡಿಯಲ್ಲಿ ಅವರು ಕ್ರಮಕ್ಕೆ ಈಡಾದಾಗ ಅವರ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಸ್ವಜಾತಿ ಜನರು ಧರಣಿ ಪ್ರತಿಭಟನೆಗೆ ಮುಂದಾಗುವುದು, ಕಾನೂನಿಗೆ ಅಗೌರವ ತೋರುವುದು ತಪ್ಪು. ಯಾವುದೇ ವ್ಯಕ್ತಿ ಎಷ್ಟೇ ಪ್ರಬಲ ಜಾತಿಯವನಾಗಿರಲಿ ಅವರ ಮೇಲೆ ಆರೋಪಗಳು ಬಂದಾಗ ಕಾನೂನಿನ ಪ್ರಕಾರ ತನಿಖೆಗೆ ಒಳಪಡಲೇಬೇಕಾಗುತ್ತದೆ. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ನೀವು ಸಂಪಾದಿಸಿದ ಆಸ್ತಿ ದೇಶದಲ್ಲಿಯೇ ಇರಲಿ ಅಥವಾ ವಿದೇಶದಲ್ಲಿಯೇ ಇರಲಿ, ಕಾನೂನು ಬದ್ಧವಾಗಿದ್ದರೆ ತನಿಖೆಗೆ ಅಂಜುವುದ್ಯಾಕೆ? ಇದಕ್ಕೆ ಜಾತಿ ಲೇಪನ ಯಾಕೆ? ಈ ದೇಶದಲ್ಲಿ ಕಾಯ್ದೆ ಕಾನೂನಗಳು ಇರುವುದು ಬಡವರಿಗೆ ಮಾತ್ರವೇ?

- ವಿ.ಜಿ ಇನಾಮದಾರ, ಸಾರವಾಡ

ಗಣೇಶನ ಮೆರವಣಿಗೆ

ಮಸೀದಿಯ ಮುಂದೆ ಗಣೇಶನ ಮೆರವಣಿಗೆ ಹೋಗ ಬಾರದು, ಹೋದರೆ ಅವರ ಗ್ರಹಚಾರ ಬಿಡಿಸುತ್ತೇನೆಂದು ಟಿ.ನರಸೀಪುರದ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ತಮ್ಮ ದರ್ಪ ತೋರಿಸಿದ್ದಾರೆ. ಇದು ಅವರ ವೈಯಕ್ತಿಕ ಹೇಳಿಕೆಯೋ, ಅಥವಾ ಸರ್ಕಾರದ ಆದೇಶವೇನಾದರೂ ಇದೆಯೇ? ನಾವೇನು ಪ್ರಜಾಪ್ರ ಭುತ್ವದಲ್ಲಿ ಇದ್ದೇವಾ, ಅಥವಾ ಮಿಲ್ಟ್ರಿ ಆಡಳಿತದಲ್ಲಿ ಇದ್ದೇವಾ? ಸ್ವಾತಂತ್ರ್ಯ ಪೂರ್ವದಲ್ಲಿ ಜನ ಸಾಮಾನ್ಯರನ್ನು ಒಂದುಗೂಡಿಸಲು ಬಾಲಗಂಗಾಧರ ನಾಥ ತಿಲಕ್‌ರವರು ಆಚರಣೆಗೆ ತಂದ ಗಣೇಶೋತ್ಸವಗಳು ಇಂದು ಈ ಮಟ್ಟಕ್ಕೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಗಣೇಶೋತ್ಸವಗಳು ಮಸೀದಿ ಮುಂದೆ ಹೋದರೆ ಗಲಾಟೆಗಳು ಏಕೆ ಆಗಬೇಕು, ಗಲಾಟೆ ಮಾಡುವವರು ಯಾರು? ಹೀಗೆ ಗಲಾಟೆ ಆಗುವ ಸಾಧ್ಯತೆ ಇದ್ದರೆ ಅದಕ್ಕೆ ಸೂಕ್ತ ಬಂದೋಬ ವ್ಯವಸ್ಥೆ ಮಾಡುವ ಕೆಲಸ ಪೊಲೀಸ್ ಇಲಾಖೆಯದು. ಇವರು ತಮ್ಮ ಕರ್ತವ್ಯದಿಂದ ತಪ್ಪಿಸಿ ಕೊಳ್ಳಲು ಈಗಲೇ ಈ ರೀತಿಯ ಹೇಳಿಕೆ ನೀಡಿ, ಒಂದು ಧರ್ಮದ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡುತ್ತಿದ್ದಾರೆ.

ಮುಸ್ಲಿಂ ಸಮುದಾಯದವರು ಮೊಹರಂ ಹಬ್ಬ ಮತ್ತು ಈದ್ ಮಿಲಾದ್ ಆಚರಣೆಯಲ್ಲಿ ಹಿಂದೂ ದೇವಸ್ಥಾನಗಳ ಮುಂದೆಯೇ ಮೆರವಣಿಗೆ ಹೋಗುತ್ತಾರೆ. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಎಲ್ಲಿಯಾ ದರೂ ಗಲಾಟೆಗಳು ಆಗಿವೆಯಾ? ಸಾರ್ವಜನಿಕ ರಸ್ತೆಗಳು ಜನರ ಆಸ್ತಿ, ಎಲ್ಲ ಜಾತಿ- ಧರ್ಮಗಳಿಗೂ ಸೇರಿದ್ದು. ಮಸೀದಿ ಮುಂದೆ ಹೋಗಬಾರದು, ಚರ್ಚ್ ಮುಂದೆ ಹೋಗಬಾರದು ಎಂದೆಲ್ಲ ಆದೇಶಿಸುವಂತಿಲ್ಲ.

- ಬೂಕನಕೆರೆ ವಿಜೇಂದ್ರ, ಮೈಸೂರು

ಬೇಕಿದೆ ಸಮತೋಲನ

ಕಳೆದ ಎರಡು ದಶಕಗಳಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಸೀಟುಗಳ ಸಂಖ್ಯೆ ಗಣನೀಯ ವಾಗಿ ಹೆಚ್ಚಿದೆ. ಆದರೆ ಅದಕ್ಕೆ ಅನುಗುಣವಾಗಿ ಉದ್ಯೋಗಾವಕಾಶಗಳು ಹೆಚ್ಚಾಗಿಲ್ಲ. ವರದಿಯ ಪ್ರಕಾರ ಈ ವರ್ಷ 24 ಸಾವಿರಕ್ಕೂ ಅಧಿಕ ಸೀಟುಗಳು ಖಾಲಿ ಉಳಿದಿವೆ. ಅಗತ್ಯಕ್ಕಿಂತ ಹೆಚ್ಚು ಪದವೀಧರರು ಹೊರಬಂದಾಗ ನಿರುದ್ಯೋಗವೂ ಹೆಚ್ಚುತ್ತದೆ. ಆದ್ದರಿಂದ ಮುಂದಿನ ಕೆಲವು ವರ್ಷಗಳ ಕಾಲ ಹೊಸ ಇಂಜಿನಿಯರಿಂಗ್ ಕಾಲೇಜುಗಳಿಗೆ ಅನುಮತಿ ನೀಡುವುದನ್ನು ನಿಯಂತ್ರಿಸ ಬೇಕು. ಉದ್ಯೋಗ ಬೇಡಿಕೆ ಕಡಿಮೆ ಇರುವ ವಿಭಾಗಗಳ ಸೀಟುಗಳನ್ನು ಹಂತ ಹಂತವಾಗಿ ಕಡಿತ ಗೊಳಿಸಬೇಕು. ಜೊತೆಗೆ ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ಸೈಬರ್ ಭದ್ರತೆ, ರೋಬೋಟಿಕ್ಸ್ ಮುಂತಾದ ಭವಿಷ್ಯದ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಬೇಕು. ಸೀಟುಗಳ ಸಂಖ್ಯೆ ಮತ್ತು ಉದ್ಯೋಗಾ ವಕಾಶಗಳ ನಡುವೆ ವೈಜ್ಞಾನಿಕ ಸಮತೋಲನ ಕಾಪಾಡಬೇಕು.

- ಜಿ.ನಾಗೇಂದ್ರ ಕಾವೂರು, ಸಂಡೂರ