ಕುರುಚಲು ಕಾಡಿನ ಮಡಿಲಲ್ಲಿ ಕಿತ್ತಳೆ ತುದಿ ಚಿಟ್ಟೆಗಳ ಪ್ರಣಯ
ಸುತ್ತಲೂ ಹರಡಿದ್ದ ಪೊದೆಗಳ ನಡುವೆ, ಒಂದು ಸಣ್ಣ ಕಡ್ಡಿಯ ಮೇಲೆ ನಿಶ್ಚಲವಾಗಿ ಕುಳಿತಿದ್ದವು ಆ ಜೋಡಿಗಳು. ಅವು ಸಾಧಾರಣ ಹಾರಾಡುವ ಕೀಟಗಳಲ್ಲ; ಪ್ರೇಮದ ಪರಾಕಾಷ್ಠೆಯಲ್ಲಿದ್ದ ಕಿತ್ತಳೆ-ತುದಿ ಚಿಟ್ಟೆಗಳು. ಅವುಗಳ ರೆಕ್ಕೆಗಳ ಮೇಲಿನ ಆ ಕಿತ್ತಳೆ ಬಣ್ಣದ ವಿನ್ಯಾಸ, ಬಿಳಿಯ ಬಣ್ಣದೊಂದಿಗೆ ಬೆರೆತು ಪ್ರಕೃತಿಯ ಕುಸುರಿ ಕೆಲಸದಂತೆ ಕಾಣುತ್ತಿತ್ತು
-
ಚಿತ್ರ, ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ
ಮಳೆಗಾಲ ನಿಧಾನವಾಗಿ ವಿದಾಯ ಹೇಳಿ, ಚಳಿಗಾಲದ ಮಂಜು ಮುಸುಕುವ ಮುಂಜಾವಿನ ಆ ದಿನಗಳು ಪ್ರಕೃತಿ ಆರಾಧಕರಿಗೆ ಹಬ್ಬದಂತೆ. ಕೊರಳಲ್ಲಿ ಮ್ಯಾಕ್ರೋ ಲೆನ್ಸ್ ಅಳವಡಿಸಿದ ಕ್ಯಾಮರಾ, ಮನದಲ್ಲಿ ಅದ್ಯಾವುದೋ ಅಪರೂಪದ ಕ್ಷಣವನ್ನು ಸೆರೆ ಹಿಡಿಯುವ ತವಕ. ಕಾಕೋಳದ ಕುರುಚಲು ಕಾಡಿನ ಆ ಗುಡ್ಡಗಾಡು ಪ್ರದೇಶದಲ್ಲಿ ಕಲ್ಲು-ಮುಳ್ಳುಗಳ ಹಾದಿಯನ್ನು ತುಳಿಯುತ್ತಾ ಸಾಗುತ್ತಿದ್ದಾಗ, ಪ್ರಕೃತಿ ನನಗಾಗಿ ಒಂದು ಸುಂದರ ದೃಶ್ಯವನ್ನು ಕಾಯ್ದಿರಿಸಿತ್ತು.
ಸುತ್ತಲೂ ಹರಡಿದ್ದ ಪೊದೆಗಳ ನಡುವೆ, ಒಂದು ಸಣ್ಣ ಕಡ್ಡಿಯ ಮೇಲೆ ನಿಶ್ಚಲವಾಗಿ ಕುಳಿತಿದ್ದವು ಆ ಜೋಡಿಗಳು. ಅವು ಸಾಧಾರಣ ಹಾರಾಡುವ ಕೀಟಗಳಲ್ಲ; ಪ್ರೇಮದ ಪರಾಕಾಷ್ಠೆಯಲ್ಲಿದ್ದ ಕಿತ್ತಳೆ-ತುದಿ ಚಿಟ್ಟೆಗಳು. ಅವುಗಳ ರೆಕ್ಕೆಗಳ ಮೇಲಿನ ಆ ಕಿತ್ತಳೆ ಬಣ್ಣದ ವಿನ್ಯಾಸ, ಬಿಳಿಯ ಬಣ್ಣದೊಂದಿಗೆ ಬೆರೆತು ಪ್ರಕೃತಿಯ ಕುಸುರಿ ಕೆಲಸದಂತೆ ಕಾಣುತ್ತಿತ್ತು. ಮತ್ತೊಂದು ಆಂಗಲ್‌ನಿಂದ ಪೋಟೋ ಕ್ಲಿಕ್ಕಿಸಬೇಕೆಂದು ಸಜ್ಜಾಗುವಷ್ಟರಲ್ಲಿ ಅದೊಂದು ಜಾದೂ ನಡೆದಂತಾಯಿತು!
ಇದನ್ನೂ ಓದಿ: Narayan Yaji Column: ಪರತತ್ತ್ವದ ಸಾಕಾರ ಮೂರ್ತಿ ಮೃಣ್ಮಯಿ ಗಣೇಶ
ಕಣ್ಣೆದುರೇ ಇದ್ದ ಚಿಟ್ಟೆಗಳು ಮಾಯವಾಗಿ, ಕೇವಲ ಬರಿ ಕಡ್ಡಿ ಮಾತ್ರ ಉಳಿದಿತ್ತು. ಒಂದು ಕ್ಷಣ ಗಾಬರಿಯಾಗಿ ಸುತ್ತಲೂ ಕಣ್ಣಾಡಿಸಿದಾಗ, ಸ್ವಲ್ಪ ದೂರದಲ್ಲಿದ್ದ ಉತ್ರಾಣಿ(ಉತ್ತರಾಣಿ) ಗಿಡದ ಹೂಗೊಚ್ಚಲಿನ ಮೇಲೆ ಈ ಜೋಡಿಗಳು ಆಸೀನವಾಗಿದ್ದವು. ಪ್ರಕೃತಿಯ ಈ ಸಣ್ಣ ಚಿಟ್ಟೆಗಳ ಏಕಾಗ್ರತೆಗೆ ಮೆಚ್ಚುಗೆಯಾಯಿತು. ಅವುಗಳನ್ನು ಬೆನ್ನಟ್ಟಲು ನಾನು ಎದ್ದು ನಿಲ್ಲಲಿಲ್ಲ; ಬದಲಾಗಿ ನೆಲದ ಮೇಲೆಯೇ ತೆವಳುತ್ತಾ ಮುಂದುವರಿದೆ. ಮೈಗೆ ಹತ್ತುವ ಮಣ್ಣು, ಚುಚ್ಚುವ ಮುಳ್ಳುಗಳ ಅರಿವಿರಲಿಲ್ಲ. ಉತ್ರಾಣಿ ಹೂವಿನ ಆ ನೇರಳೆ-ಹಸಿರು ಬಣ್ಣದ ಹಿನ್ನೆಲೆಯಲ್ಲಿ, ಚಿಟ್ಟೆಗಳ ಬಿಳಿ ಮತ್ತು ಕಿತ್ತಳೆ ಬಣ್ಣದ ಸಂಗಮ ಅದ್ಭುತವಾಗಿ ಗೋಚರಿಸುತ್ತಿತ್ತು.
ತೆವಳಿಕೊಂಡು ಸಾಗಿ, ಸರಿಯಾದ ಚೌಕಟ್ಟನ್ನು ಹುಡುಕಿ ಆ ಕ್ಷಣಗಳನ್ನು ಸೆರೆಹಿಡಿದಾಗ ಆದ ತೃಪ್ತಿ ಅಪಾರ. ಅವುಗಳ ‘ಮಿಲನೋತ್ಸವ’ಕ್ಕೆ ಭಂಗ ಬರಬಾರದೆಂಬ ಕಾಳಜಿ ಒಂದೆಡೆಯಾದರೆ, ಆ ಕ್ಷಣವನ್ನು ಅಷ್ಟೇ ಅದ್ಭುತವಾಗಿ ಸೆರೆಹಿಡಿಯಬೇಕೆಂಬ ಹಂಬಲ ಇನ್ನೊಂದೆಡೆ. ಬೇರೆ ದಾರಿ ಯಿಲ್ಲದೆ, ಆ ಒರಟು ನೆಲದ ಮೇಲೆ ಅಂಗಾತ ಮಲಗಿ ಕ್ಯಾಮರಾದ ಕಣ್ಣಿನ ಮೂಲಕ ಅವುಗಳ ಪ್ರೇಮಲೋಕವನ್ನು ಇಣುಕಿದೆ.
ಕ್ಲಿಕ್... ಕ್ಲಿಕ್... ಶಟರ್ ಸದ್ದು ಕುರುಚಲು ಕಾಡಿನ ಗಾಳಿಯಲ್ಲಿ ಲೀನವಾಯಿತು. ಅವುಗಳ ಈ ಸುಂದರ ಕ್ರಿಯೆಗೆ ಇನ್ನು ಅಡ್ಡಿಪಡಿಸುವುದು ಸರಿಯಲ್ಲವೆಂದು ಭಾವಿಸಿ, ಮೆಲ್ಲನೆ ಎದ್ದು ಕ್ಯಾಮರಾ ಹಿಡಿದು ಮುಂದೆ ಸಾಗಿದೆ. ಹಸಿರು ಬಣ್ಣದ ಹಿನ್ನೆಲೆಯಲ್ಲಿ ನಡೆದ ಆ ಸಣ್ಣ ಜೀವಿಗಳ ಮಿಲನೋತ್ಸವ, ನನ್ನ ಕ್ಯಾಮರಾದಲ್ಲಿ ಮಾತ್ರವಲ್ಲದೆ ಮನಸ್ಸಿನಲ್ಲೂ ಅಚ್ಚಳಿಯದಂತೆ ಉಳಿಯಿತು.
ಒಬ್ಬ ವನ್ಯಜೀವಿ ಛಾಯಾಗ್ರಾಹಕನಿಗೆ ಸಿಗುವ ದೊಡ್ಡ ಬಹುಮಾನವೆಂದರೆ ಪ್ರಕೃತಿಯ ಇಂತಹ ರಹಸ್ಯ ಕ್ಷಣಗಳು. ಕಲ್ಲು-ಮುಳ್ಳಿನ ಹಾದಿಯಲ್ಲಿದ್ದ ಆ ಸಾಹಸಮಯ ಪಯಣ, ಈ ಸುಂದರ ಚಿತ್ರಗಳ ಮೂಲಕ ಸಾರ್ಥಕವಾಯಿತು. ಇವನ್ನು ‘ಕಿತ್ತಳೆ ತುದಿ’ ಚಿಟ್ಟೆಗಳೆಂದು ಕರೆಯುತ್ತಾರೆ. ‘ಪ್ಲೇನ್ ಆರೆಂಜ್-ಟಿಪ್’ ಅಥವಾ ‘ಸಲ್ಪರ್ ಆರೆಂಜ್-ಟಿಪ್’ ಎಂದು ಇಂಗ್ಲೀಷ್‌ನಲ್ಲಿ ಕರೆದು, ವೈಜ್ಞಾನಿಕವಾಗಿ ಕ್ಯಾಲೊಟಿಸ್ ಅರೋರಾ (Colotis aurora) ಎಂದು ಹೆಸರಿಸಿ, ಸಂಧಿಪದಿ (Arthropoda)ಗಳ, ಕೀಟ ವರ್ಗದ, ಲೆಪಿಡೋಪ್ಟೆರಾ (Lepidoptera) ಗಣದ, ಬಿಳಿ-ಹಳದಿ ಚಿಟ್ಟೆಗಳ ಪೈಯರಿಡೇ (Pieridae) ಕುಟುಂಬಕ್ಕೆ ಸೇರಿಸಲಾಗಿದೆ.
ಇವು ಮಧ್ಯಮ ಗಾತ್ರದ ಚಿಟ್ಟೆಗಳು. ಇವುಗಳ ರೆಕ್ಕೆಗಳ ಅಗಲ ಸಾಮಾನ್ಯ ವಾಗಿ 35-40 ಮಿ.ಮೀ. ಇರುತ್ತದೆ. ಇವುಗಳ ದೇಹವು ಕಿರಿದಾಗಿದ್ದು, ಹಾರಾಟಕ್ಕೆ ಪೂರಕವಾದ ಹಗುರವಾದ ತೂಕವನ್ನು ಹೊಂದಿರುತ್ತವೆ. ಹೊಟ್ಟೆಯ ಭಾಗ ಉದ್ದವಾಗಿದೆ. ಸಂಯುಕ್ತ ಕಣ್ಣುಗಳಿದ್ದು ಇವು ಸಾವಿರಾರು ಸಣ್ಣ ಮಸೂರ ಗಳಿಂದ ಮಾಡಲ್ಪಟ್ಟಿವೆ. ಇವುಗಳಿಗೆ ಮನುಷ್ಯರಿಗಿಂತ ವೇಗವಾಗಿ ಚಲನೆಯನ್ನು ಗುರುತಿಸುವ ಸಾಮರ್ಥ್ಯವಿದೆ. ಅದಕ್ಕಾಗಿಯೇ ನೀವು ಹತ್ತಿರ ಹೋದಾಗ ಅವು ತಕ್ಷಣವೇ ಹಾರಿ ಹೋಗುತ್ತವೆ.
ಇವುಗಳಿಗೆ ನಾವು ಕಾಣದ ಅಲ್ಟ್ರಾವೈಲೆಟ್ ಕಿರಣಗಳನ್ನು ನೋಡುವ ಶಕ್ತಿಯೂ ಇದೆ. ತಲೆಯ ಮುಂಭಾಗದಲ್ಲಿರುವ ಎರಡು ಉದ್ದನೆಯ ಕಡ್ಡಿಯಂತಹ ರಚನೆಗಳೇ ಇವುಗಳ ಗ್ರಹಣಾಂಗಗಳು. ಇವುಗಳ ತುದಿಯು ಸ್ವಲ್ಪ ದಪ್ಪವಾಗಿದ್ದು, ಇದು ಈ ಕುಟುಂಬದ ಚಿಟ್ಟೆಗಳ ವೈಶಿಷ್ಟ್ಯ. ಇವು ಗಾಳಿಯಲ್ಲಿರುವ ವಾಸನಗಂಧವನ್ನು ಮತ್ತು ತೇವಾಂಶವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ.
ಮಿಲನದ ಸಮಯದಲ್ಲಿ ಸಂಗಾತಿಯನ್ನು ಪತ್ತೆ ಹಚ್ಚಲು ಇವುಗಳ ಪಾತ್ರ ಬಹಳ ದೊಡ್ಡದು. ರೆಕ್ಕೆಗಳ ಮೇಲ್ಭಾಗವು ಬಿಳಿಯಾಗಿದ್ದು, ಮುಂಭಾಗದ ರೆಕ್ಕೆಯ ತುದಿ ಕಿತ್ತಳೆ ಬಣ್ಣದಿಂದ ಕೂಡಿರು ತ್ತದೆ. ಅದರ ಮೇಲೆ ಕಪ್ಪು ಬಣ್ಣದ ಸಣ್ಣ ಮಚ್ಚೆ ಇದೆ. ರೆಕ್ಕೆಯ ಕೆಳಭಾಗವು ಬಿಳಿ ಬಣ್ಣದ ಮೇಲೆ ಹಳದಿ ಅಥವಾ ಕಂದು ಬಣ್ಣದ ಮಚ್ಚೆಗಳಿವೆ. ಇದು ಕಲ್ಲು ಅಥವಾ ಒಣಗಿದ ಎಲೆಗಳ ಮೇಲೆ ಕುಳಿತಾಗ ಅವು ಪರಿಸರದೊಂದಿಗೆ ಒಂದಾಗಲು ಸಹಾಯ ಮಾಡುತ್ತದೆ. ರೆಕ್ಕೆಯ ತುದಿಯಲ್ಲಿರುವ ಕಿತ್ತಳೆ ಬಣ್ಣವು ಶತ್ರುಗಳಿಗೆ (ಹಕ್ಕಿಗಳಿಗೆ) ಒಂದು ಎಚ್ಚರಿಕೆಯ ಸಂಕೇತವೂ ಹೌದು.
ತಲೆ ಮತ್ತು ಎದೆಯ ಭಾಗದಲ್ಲಿ ಸಣ್ಣ ಸಣ್ಣ ಬಿಳಿ ಅಥವಾ ಬೂದು ಬಣ್ಣದ ಕೂದಲುಗಳಿರುವು ದನ್ನು ಇವು ಅವುಗಳ ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಅವುಗಳ ಮುಖದ ಹತ್ತಿರ ಸುರುಳಿ ಸುತ್ತಿದ ಅಥವಾ ಸಣ್ಣ ದಾರದಂತಹ ಅಂಗವೇ ಅವುಗಳ ಸೊಂಡಿಲು. ಹೂವಿನಿಂದ ಜೇನು ಹೀರುವಾಗ ಇದನ್ನು ಉದ್ದವಾಗಿ ಚಾಚುತ್ತವೆ, ಉಳಿದ ಸಮಯದಲ್ಲಿ ಸುರುಳಿ ಸುತ್ತಿಟ್ಟುಕೊಳ್ಳುತ್ತವೆ. ಮಿಲನ ಕ್ರಿಯೆ ಮುಗಿದ ನಂತರ, ಹೆಣ್ಣು ಚಿಟ್ಟೆಯು ಮೊಟ್ಟೆಗಳನ್ನು ಇಡಲು ಸೂಕ್ತವಾದ ‘ಅತಿಥೇಯ ಸಸ್ಯ’ವಾದ ಶಿಗಡಿ ಗಿಡ (Cadaba fruticosa) ವನ್ನು ಹುಡುಕಿಕೊಂಡು ಹೋಗುತ್ತದೆ. ಇವು ತಮ್ಮ ಮರಿಗಳಿಗೆ ಆಹಾರವಾಗಬಲ್ಲ ಗಿಡಗಳ ಮೇಲೆ ಮಾತ್ರ ಮೊಟ್ಟೆ ಇಡುತ್ತವೆ