ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Readers Colony: ಕಾನೂನು ಕ್ರಮ ಅಗತ್ಯ

ವೀಲಿಂಗ್ ಮಾಡುವ ಸಾಕಷ್ಟು ಮಂದಿಯ ಬಳಿ ವಾಹನ ಚಾಲನಾ ಪರವಾನಗಿಯೂ ಇರುವುದಿಲ್ಲ. ವೀಲಿಂಗ್ ಕುರಿತಾಗಿ ಹೈಕೋರ್ಟ್ ಈಗಾಗಲೇ ಕಳವಳ ವ್ಯಕ್ತಪಡಿಸಿದ್ದು, ಇದು ಸದರಿ ಸಮಸ್ಯೆಯ ತೀವ್ರತೆ ಯನ್ನು ಒತ್ತಿ ಹೇಳುತ್ತದೆ. ಆದ್ದರಿಂದ, ವೀಲಿಂಗ್ ನಿಯಂತ್ರಣಕ್ಕೆ ಸರಕಾರವು ಕಠಿಣ ಕಾನೂನು ಜಾರಿ ಗೊಳಿಸಿ, ಜನರನ್ನು ಕಾಪಾಡುವತ್ತ ಗಮನ ಹರಿಸಬೇಕು.

ಓದುಗರ ಓಣಿ: ಕಾನೂನು ಕ್ರಮ ಅಗತ್ಯ

Profile Ashok Nayak May 19, 2025 12:52 PM

ರಾಜ್ಯದಲ್ಲಿನ ಮಿತಿಮೀರಿದ ಸಂಖ್ಯೆಯ ವಾಹನಗಳಿಂದ ನಿತ್ಯವೂ ಉಂಟಾಗುತ್ತಿರುವ ಮಾಲಿನ್ಯ ವನ್ನು ತಡೆಗಟ್ಟುವುದಕ್ಕೇ ನಮ್ಮಿಂದ ಇನ್ನೂ ಸಾಧ್ಯವಾಗುತ್ತಿಲ್ಲ, ಈ ಮಧ್ಯೆ ದ್ವಿಚಕ್ರ ವಾಹನಗಳನ್ನು ಬಳಸಿ ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ‘ರೀಲ್ಸ್’ ಮಾಡುವುದಕ್ಕಾಗಿ ವೀಲಿಂಗ್ ಮಾಡುವ ಶಾಲಾ ಮಕ್ಕಳ ಮತ್ತು ಯುವಕರ ಹುಚ್ಚಾಟವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಇಂಥವರು ಬೈಕುಗಳಿಗೆ ಹೆಚ್ಚುವರಿ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ಕರ್ಕಶ ಸದ್ದು ಮಾಡುವುದು ಕಾಣಬರುತ್ತದೆ. ಇಂಥ ಹುಚ್ಚಾಟಗಳಿಗೆ ಅಮಾಯಕರು ಬಲಿಯಾಗು ತ್ತಿದ್ದಾರೆ, ಅಪಘಾತಗಳಿಗೆ ಈಡಾಗುತ್ತಿದ್ದಾರೆ.

ವೀಲಿಂಗ್ ಮಾಡುವ ಸಾಕಷ್ಟು ಮಂದಿಯ ಬಳಿ ವಾಹನ ಚಾಲನಾ ಪರವಾನಗಿಯೂ ಇರುವುದಿಲ್ಲ. ವೀಲಿಂಗ್ ಕುರಿತಾಗಿ ಹೈಕೋರ್ಟ್ ಈಗಾಗಲೇ ಕಳವಳ ವ್ಯಕ್ತಪಡಿಸಿದ್ದು, ಇದು ಸದರಿ ಸಮಸ್ಯೆಯ ತೀವ್ರತೆಯನ್ನು ಒತ್ತಿಹೇಳುತ್ತದೆ. ಆದ್ದರಿಂದ, ವೀಲಿಂಗ್ ನಿಯಂತ್ರಣಕ್ಕೆ ಸರಕಾರವು ಕಠಿಣ ಕಾನೂನು ಜಾರಿಗೊಳಿಸಿ, ಜನರನ್ನು ಕಾಪಾಡುವತ್ತ ಗಮನ ಹರಿಸಬೇಕು.

- ಸುರೇಂದ್ರ ಪೈ, ಭಟ್ಕಳ

ಇದು ಹೆಮ್ಮೆಯ ಸಂಗತಿ

ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ’ ಕನಸು ನನಸಾಗಿದೆ ಎಂಬುದಕ್ಕೆ ಇತ್ತೀಚೆಗಷ್ಟೇ ಮಹತ್ವದ ಸಾಕ್ಷಿ ಸಿಕ್ಕಿದೆ. ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯಲ್ಲಿ ಪರಾಕ್ರಮ ಮೆರೆದ ‘ಬ್ರಹ್ಮೋಸ್’ ಸೂಪರ್ ಸಾನಿಕ್ ಕ್ಷಿಪಣಿಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇದರ ಖರೀದಿಗೆ ವಿಶ್ವದ ಹಲವು ರಾಷ್ಟ್ರಗಳು ಮುಂದಾಗಿವೆ ಎಂಬುದು ನಿಜಕ್ಕೂ ಭಾರತದ ಪಾಲಿಗೆ ಹೆಮ್ಮೆಯ ಮತ್ತು ಗೌರವದ ಸಂಗತಿ. ಈಜಿಪ್ಟ್, ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ, ಚಿಲಿ, ಅರ್ಜೆಂಟೀನಾ, ಸಿಂಗಾಪುರ, ಸೌದಿ ಅರೇಬಿಯಾ, ಬ್ರೆಜಿಲ್, ಕತಾರ್ ಸೇರಿದಂತೆ 18 ರಾಷ್ಟ್ರಗಳು ಬ್ರಹ್ಮೋಸ್ ಖರೀದಿಗೆ ಬೇಡಿಕೆ ಸಲ್ಲಿಸಿರುವುದು, ಭಾರತವು ಹಿಂದೆಂದಿಗಿಂತಲೂ ಪ್ರಬಲವಾಗುತ್ತಿದೆ ಎಂಬುದರ ಸಂಕೇತವೂ ಹೌದು.

ಇದನ್ನೂ ಓದಿ: Bangalore News: ಭೂತಾನ್‌ನ ಬೋಧನಾ ಸಮುದಾಯಕ್ಕಾಗಿ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಸಬಲೀಕರಣ' ಇಮ್ಮರ್ಸಿವ್ ಕಾರ್ಯಕ್ರಮ ಪ್ರಾರಂಭ

ಇದು ಕೇವಲ ಪ್ರಾರಂಭವಷ್ಟೇ ಅಂದರೂ ತಪ್ಪಾಗಲಿಕ್ಕಿಲ್ಲ. ಭಾರತೀಯ ಸೇನಾಯೋಧರ ಕಾರ್ಯ ಕ್ಷಮತೆ, ದೇಶನಿಷ್ಠೆ ಇವುಗಳ ಪರಿಚಯ ಇಲ್ಲಿಯವರೆಗೆ ಸರಿಯಾಗಿ ಅನಾವರಣಗೊಂಡಿರಲಿಲ್ಲ. ಏನೋ ಒಂದು ರೀತಿಯ ಬಿಕ್ಕಟ್ಟು ಅವರನ್ನು ಕಟ್ಟಿಹಾಕಿತ್ತು. ಆದರೆ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯಿಂದಾಗಿ ನಮ್ಮ ಸೈನಿಕರ ಪರಿಣತಿ ಹಾಗೂ ಯುದ್ಧ ಪರಿಕರಗಳ ತಾಕತ್ತು ಒಂದಿಡೀ ವಿಶ್ವಕ್ಕೆ ಗೊತ್ತಾದಂತೆ ಆಯಿತು ಎನ್ನಲಡ್ಡಿಯಿಲ್ಲ.

- ಶಂಕರನಾರಾಯಣ ಭಟ್, ಮಾಡಗೇರಿ

ಪಾಕಿಸ್ತಾನಕ್ಕೆ ಪಾಠ

ಉಗ್ರರಿಗೆ ಕುಮ್ಮಕ್ಕು ನೀಡಿ ಪಹಲ್ಗಾಮ್ ಮಾರಣಹೋಮಕ್ಕೆ ಕಾರಣವಾದ ಪಾಕಿಸ್ತಾನಕ್ಕೆ ಭಾರತವು ಸರಿಯಾದ ಪಾಠವನ್ನೇ ಕಲಿಸಿದೆ. ತನ್ಮೂಲಕ, ಪಾ ಕಿಸ್ತಾನವು ನಮ್ಮ ವಿರುದ್ಧ ಇನ್ನೆಂದೂ ಇಂಥ
ದುಸ್ಸಾಹಸಕ್ಕೆ ಕೈಹಾಕದಂತೆ ಮಾಡಿದೆ. ಯಾವ ಜಾತಿಭೇದ, ಪ್ರಾಂತ್ಯಭೇದ ಇಲ್ಲದಂತೆ ದೇಶದ ಎಲ್ಲ ಜನರೂ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಕಾಂಗ್ರೆಸ್‌ನ ಕೆಲ ಶಾಸಕರು, ಸಚಿವರು ಈ ಕಾರ್ಯಾಚರಣೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ, ವಿಷಾದನೀಯ ಬೆಳವಣಿಗೆ. ಪಾಕಿಸ್ತಾನದ ಏಜೆಂಟರುಗಳ ರೀತಿಯಲ್ಲಿ ವರ್ತಿಸುತ್ತಿರುವ ಇವರುಗಳ ಮೇಲೆ ಪಕ್ಷವು ಕೂಡ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಇವರೆಲ್ಲಾ ಯಾರನ್ನು ಮೆಚ್ಚಿಸಲು ಹೀಗೆ ಹೇಳಿಕೆ ಕೊಡುತ್ತಿದ್ದಾರೋ ಆ ಭಗವಂತನೇ ಬಲ್ಲ.

- ಬೂಕನಕೆರೆ ವಿಜೇಂದ್ರ, ಮೈಸೂರು

ಶ್ರಮಜೀವಿ ಜಪಾನಿಗರು

ಸಂಪಾದಕರ ಸದ್ಯಶೋಧನೆ ವಿಭಾಗದಲ್ಲಿ (ಮೇ 14) ಕೆಲಸದ ವಿಷಯದಲ್ಲಿ ಜಪಾನಿಯರಿಗೆ ಇರುವ ಬದ್ಧತೆಯ ಕುರಿತು ಓದಿ ಒಂದು ಕಡೆ ಸಂತೋಷವಾದರೆ, ಮತ್ತೊಂದು ಕಡೆ ಖೇದವಾಯಿತು. ಜಪಾನಿಯರು ಮೂಲತಃ ಶ್ರಮಜೀವಿಗಳು, ಮೈಗಳ್ಳರಲ್ಲ ಹಾಗೂ ದಿನದಲ್ಲಿ 18 ಗಂಟೆ ದುಡಿಯ ಬೇಕೆಂದರೆ ತುಟಿಪಿಟಿಕ್ ಅನ್ನದೆ ದುಡಿಯುತ್ತಾರೆ ಎಂಬ ಮಾಹಿತಿಯನ್ನು ಓದಿ ನಮ್ಮ ದೇಶದ ಸ್ಥಿತಿಯ ಬಗ್ಗೆ ಆಲೋಚಿಸುವಂತಾಯಿತು. ನಮ್ಮ ದೇಶದಲ್ಲಿ ಉದ್ಯಮಿಯೊಬ್ಬರು ವಾರಕ್ಕೆ 70-80 ಗಂಟೆ ದುಡಿಯುವಂತೆ ಕರೆನೀಡಿದ್ದಕ್ಕೇ ಸಾಕಷ್ಟು ವಿರೋಧ ವ್ಯಕ್ತವಾಯಿತು, ಇನ್ನು ದಿನಕ್ಕೆ 18 ಗಂಟೆ ದುಡಿಯುವುದು ದೂರದ ಮಾತು. ಎಲ್ಲೋ ಕೆಲವೇ ಕೆಲವರು ಅದನ್ನು ಪಾಲಿಸುತ್ತಿರ ಬಹುದೇನೋ! ಜಪಾನಿನಲ್ಲಿರುವಂಥ ಶ್ರಮಜೀವಿ ಗಳು ನಮ್ಮಲ್ಲೂ ಇರುತ್ತಿದ್ದರೆ ನಮ್ಮ ದೇಶ ಹೇಗಿರುತ್ತಿತ್ತೋ? ಅಂದಹಾಗೆ, ಕಾರ್ಲ್‌ಮಾರ್ಕ್ಸ್ ಸಿದ್ಧಾಂತ ಹೊಂದಿದ ಕಾರ್ಮಿಕ ಸಂಘಟನೆಗಳು ಜಪಾನ್ ನಲ್ಲಿಲ್ಲವೇ ಅಥವಾ ಅಲ್ಲಿಯ ನೌಕರ ವರ್ಗಕ್ಕೆ ಅಂಥ ಸಂಘಟನೆಗೆ ಸೇರುವ ಮನಸ್ಥಿತಿ ಯಿಲ್ಲವೇ? ಎಂಬುದು ಇಲ್ಲಿ ಕಾಡುವ ಪ್ರಶ್ನೆ.

- ದಾವಣಗೆರೆ ಮುಕುಂದ, ಬೆಂಗಳೂರು

ಬೇಂದ್ರೆ ಸಂಗೀತ

ವಿರಾಮ ಪುರವಣಿಯಲ್ಲಿ (ಮೇ ೧೮) ಪ್ರಕಟವಾದ, ಎನ್.ಎಸ್.ಶ್ರೀಧರ ಮೂರ್ತಿಯವರ ‘ಬೇಂದ್ರೆ ಸಂಗೀತ’ ಕುರಿತಾದ ವಿಶ್ಲೇಷಣೆಯು ಪ್ರಬುದ್ಧವೂ ಪಾಂಡಿತ್ಯ ಭರಿತವೂ ಆಗಿತ್ತು. ಸಾಹಿತ್ಯ-ಸಂಗೀತ-ಅಧ್ಯಾತ್ಮದ ಅಭಿರುಚಿಯುಳ್ಳವರಿಗೆ ಮಾತ್ರವಲ್ಲದೆ ಸಾಮಾನ್ಯ ಓದುಗರನ್ನೂ ಸೆಳೆಯುವಂತೆ ಮೂಡಿಬಂದ ಈ ಲೇಖನ ಬೇಂದ್ರೆಯವರ ಬಹುಮುಖ ಪ್ರತಿಭೆಯನ್ನು ಮತ್ತಷ್ಟು ಅರಿಯುವುದಕ್ಕೆ ಪ್ರೇರಣೆ ನೀಡಿದೆ ಎನ್ನಬೇಕು. ಜತೆಗೆ ಇದು ಸಂಗೀತದ ಬಗ್ಗೆ ಒಲವುಳ್ಳವರಿಗೆ ಸಂಗ್ರಹಯೋಗ್ಯ ಬರಹವೂ ಆಗಿದೆ. ಇಂಥ ಲೇಖನಗಳು ಪತ್ರಿಕೆಯಲ್ಲಿ ಹೆಚ್ಚೆಚ್ಚು ಮೂಡಿಬರಲಿ.

- ಮಹೇಶ್ ಹೊಸಮನಿ, ಬೆಂಗಳೂರು

ಅಧಿಕಾರಿಗಳ ಭ್ರಷ್ಟತೆ

ಲೋಕಾಯುಕ್ತ ಪೊಲೀಸರು ರಾಜ್ಯದ ಏಳು ಮಂದಿ ಭ್ರಷ್ಟ ಅಧಿಕಾರಿಗಳ ನೆಲೆಗಳ ಮೇಲೆ ದಾಳಿ ಮಾಡಿ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿರುವ ಸುದ್ದಿ ವರದಿ ಯಾಗಿದೆ. ಈ ಭ್ರಷ್ಟರಲ್ಲಿ ಬಹುತೇಕರು ಆಯಕಟ್ಟಿನ ಸ್ಥಳಗಳನ್ನು ಅಮರಿಕೊಳ್ಳಲು ಪ್ರಭಾವಿ ರಾಜಕಾರಣಿಗಳಿಂದ ಶಿಫಾರಸು ಮಾಡಿಸಿ, ಪೋಸ್ಟ್ ಮಾಡಿಸಿಕೊಂಡಿರುತ್ತಾರೆ. ಭಯವೇ ಇಲ್ಲದೆ ವಾಮಮಾರ್ಗದಿಂದ ಕೋಟಿಗಟ್ಟಲೆ ಹಣ ಸಂಪಾದಿಸಿದ ಇಂಥ ಭ್ರಷ್ಟ ಅಧಿಕಾರಿಗಳಿಗೆ, ‘ನಮಗೆ ಏನೇ ತೊಂದರೆಯಾದರೂ ರಾಜಕಾರಣಿಗಳ ಕೃಪೆಯಿಂದ ಬಿಡಿಸಿಕೊಳ್ಳಬಹುದು’ ಎಂಬ ಧಾರ್ಷ್ಟ್ಯ ವಿರಬಹುದು. ಆದ್ದರಿಂದ ರಾಜಕಾರಣಿಗಳು ಈಗಲಾದರೂ ಇಂಥ ಗೋಮುಖ ವ್ಯಾಘ್ರಗಳ ವಿಷಯದಲ್ಲಿ ಎಚ್ಚರಿಕೆಯಿಂದಿರುವುದು ಒಳಿತು.

ದೊಡ್ಡ ಮಟ್ಟದಲ್ಲಿನ ಭ್ರಷ್ಟತೆ ಶ್ರೀಸಾಮಾನ್ಯರ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ; ಆದರೆ ಕೆಳಹಂತದ ಆಡಳಿತದಲ್ಲಿನ ಭ್ರಷ್ಟಾಚಾರದಿಂದಾಗಿ ಜನರು ಬಸವಳಿದಿದ್ದಾರೆ. ಆದ್ದರಿಂದ ಲೋಕಾ ಯುಕ್ತದವರು ಭ್ರಷ್ಟ ತಿಮಿಂಗಿಲಗಳನ್ನು ಹಿಡಿಯುವುದರ ಜತೆಜತೆಗೆ, ಆಸ್ಪತ್ರೆಗಳು, ಗ್ರಾಮ ಪಂಚಾ ಯತಿ ಕಚೇರಿಗಳು, ಹೀಗೆ ಜನರ ನೇರಸಂಪರ್ಕ ಇರುವ ನೆಲೆಗಳಲ್ಲಿ ಠಿಕಾಣಿ ಹೂಡಿರುವ ಭ್ರಷ್ಟ ಅಧಿಕಾರಿಗಳನ್ನೂ ಬಲಿ ಹಾಕಬೇಕು.

- ಸತ್ಯಬೋಧ, ಬೆಂಗಳೂರು