Readers Colony: ಥ್ಯಾಂಕ್ಯೂ ವಾಟ್ಸಾಪ್!
ಒಂದು ಮೆಸೇಜ್ ಈ ಕಡೆಯಿಂದ ಫಾರ್ವರ್ಡ್ ಆದ್ರ, ‘ಧಡಕ್’ ಅಂತ ಇನ್ನೊಂದು ಫಾರ್ವರ್ಡ್ ಆ ಕಡೆಯಿಂದ ಬರ್ತದ! ಒಂಥರಾ ಲಗ್ನದಾಗ ಕೊಟ್ಟಂಥ ರವಿಕೆ ಖಣಾ ಇದ್ದಂಗ.. ಪ್ಯೂರ್‌ಲೀ ದಾಟಸ್ಲಿಕ್ಕೇ. ಮೆಸೇಜುಗಳ ಜಾವಕ-ಆವಕ ಸರಿಯಾಗಿ ಟ್ಯಾಲಿ ಆದ್ರ ಸಾಕು! ಯಾವುದೇ ಸಾರ್ವಜನಿಕ ಭೇಟಿ ಇಲ್ಲ, ಸಾಮೂಹಿಕ ಪ್ರಾರ್ಥನೆ ಇಲ್ಲ, ನಿಗದಿತ ಸಮಯ-ಸ್ಥಳ ಅನ್ನೋದೇ ಇಲ್ಲ, ನಿರ್ದಿಷ್ಟ ಉಡುಪೂ ಇಲ್ಲ, ಸೆಕ್ಯುಲರ್ ಹಿಂದೂಗಳು ನಾವು ಅದಕ್ಕ.
-
ಓದುಗರ ಓಣಿ
ಈ ವಾಟ್ಸಾಪ್ ಎಷ್ಟೊಂದು ಅನುಕೂಲ ಮಾಡಿಕೊಟ್ಟದ ನೋಡ್ರಿ. ಹಬ್ಬದ ದಿನಾ ಯಾರೂ ಯಾರ ಮನಿಗೂ ಹೋಗೋ ಅಗತ್ಯ ಇಲ್ಲ, ಯಾರನ್ನೂ ವೈಯಕ್ತಿಕವಾಗಿ ಭೇಟಿ ಆಗೋ ಪ್ರಶ್ನೆಯೇ ಇಲ್ಲ, ಮಾತನಾಡೋದು? ಅದೂ ಬ್ಯಾಡಾ!
ಮನ್ಯಾಗ ಸೋಫಾ ಮ್ಯಾಲೇ ಬಿದ್ದ್ಕೊಂಡು, ಸಾವಿರ ಜನರಿಗೆ ಬ್ಯಾರೆ ಕಡೆಯಿಂದ ಬಂದ ಹಬ್ಬದ ಶುಭಾಶಯ ಫಾರ್ವರ್ಡ್ ಮಾಡಿದ್ರ ಆತು. ಹಬ್ಬ ಆಚರಿಸಿದ ಅದಮ್ಯ ತೃಪ್ತಿ!
ಒಂದು ಮೆಸೇಜ್ ಈ ಕಡೆಯಿಂದ ಫಾರ್ವರ್ಡ್ ಆದ್ರ, ‘ಧಡಕ್’ ಅಂತ ಇನ್ನೊಂದು ಫಾರ್ವರ್ಡ್ ಆ ಕಡೆಯಿಂದ ಬರ್ತದ! ಒಂಥರಾ ಲಗ್ನದಾಗ ಕೊಟ್ಟಂಥ ರವಿಕೆ ಖಣಾ ಇದ್ದಂಗ.. ಪ್ಯೂರ್‌ಲೀ ದಾಟಸ್ಲಿಕ್ಕೇ. ಮೆಸೇಜುಗಳ ಜಾವಕ-ಆವಕ ಸರಿಯಾಗಿ ಟ್ಯಾಲಿ ಆದ್ರ ಸಾಕು! ಯಾವುದೇ ಸಾರ್ವಜನಿಕ ಭೇಟಿ ಇಲ್ಲ, ಸಾಮೂಹಿಕ ಪ್ರಾರ್ಥನೆ ಇಲ್ಲ, ನಿಗದಿತ ಸಮಯ-ಸ್ಥಳ ಅನ್ನೋದೇ ಇಲ್ಲ, ನಿರ್ದಿಷ್ಟ ಉಡುಪೂ ಇಲ್ಲ, ಸೆಕ್ಯುಲರ್ ಹಿಂದೂಗಳು ನಾವು ಅದಕ್ಕ. ಆಕಸ್ಮಾತ್ ದೇವಸ್ಥಾನಕ್ಕ ಹೋದ್ರ? (ಅದೇನು ಕಂಪಲ್ಸರಿ ಅಲ್ಲ!) ಅಲ್ಲಿ ಒಬ್ಬರಿಗೊಬ್ಬರು ಹ್ಯಾಪಿ ಯುಗಾದಿ, ಹ್ಯಾಪಿ ದೀಪಾವಳಿ, ಹ್ಯಾಪಿ ಸಂಕ್ರಾಂತಿ, ಹ್ಯಾಪಿ ಹ್ಯಾಪಿ ಹ್ಯಾಪಿಗಳ ಸುರಿಮಳೆ! ಅಬ್ಬಾ.. ಲಂಡನ್ನಿಗೇ ಹೋಗಿ ಬಂದ ಅನುಭವ!
ಇದನ್ನೂ ಓದಿ: WhatsApp Update: ಆಕ್ಟಿವ್ ಸಿಮ್ ಕಾರ್ಡ್ ಇಲ್ಲದೆ ಇನ್ನು ವಾಟ್ಸ್ಆ್ಯಪ್ ಬಳಕೆ ಅಸಾಧ್ಯ; ಏನಿದು ಹೊಸ ಕಾನೂನು?
ರಾಷ್ಟ್ರ ಚಿಂತನೆ? ಧರ್ಮ ಆಚರಣೆ? ಮಾತೃಭಾಷೆಯ ಅಭಿಮಾನ?...ಎಲ್ಲವೂ ಶೂನ್ಯ! ಇಲ್ಲಿಗೆ ಸನಾತನ ಧರ್ಮದ ಹೊಸ ವರ್ಷದ ಆಚರಣೆ ಸಂಪನ್ನ! ಇನ್ನೇನು ತಡರಾತ್ರಿ ತನಕ ಬಂದ ಫಾರ್ವರ್ಡ್‌ಗಳನ್ನು ಡಿಲೀಟ್ ಮಾಡೋ ಮಹಾಯಜ್ಞ, ಮಾಡಿ ಮಲಕ್ಕೊಳ್ಳೋದು. ಮರುದಿವಸ ಮುಂಜಾನೆ ಮತ್ತ ದೋಸ್ತರ ಜೋಡಿ ವಾಟ್ಸಾಪ್ ಮೆಸೇಜ್ ಓದಿ ದೇಶ-ಧರ್ಮದ ಚರ್ಚೆ. ‘ಲೊಚ್ ಲೊಚ್’ ಅಂತ ಚಿಂತನೆ.
ಇರಾನ್-ಇಸ್ರೇಲ್ ಯುದ್ಧದ ಭೀತಿ. ಆಹಾ ಏನ ಕಾಳಜಿ. ಎಷ್ಟೊಂದು ದೇಶ ಜಾಗರಣ!!ಅಷ್ಟರಾಗ ದುರದೃಷ್ಟವಶಾತ್ ಯಾರದೋ ನಿಧನ ವಾರ್ತೆ ಅಂತ ಬಂತು ಅಂದ್ರ... ಸುರು ಆಗ್ತದ ‘ಆರ್‌ಐಪಿ... ‘ಆರ್ ಐಪಿ...’ ಅಂತ ಹೇಳಲಿಕ್ಕೆ ನಾ ಮೊದಲು ನೀ ಮೊದಲು ಅಂತ ಪೈಪೋಟಿ!
- ಶರದ್ ದೇಶಪಾಂಡೆ, ಹುಬ್ಬಳ್ಳಿ
ದಾರುಣತೆಯ ಅನಾವರಣ
ವಿಶ್ವೇಶ್ವರ ಭಟ್ಟರು ‘ನೂರೆಂಟು ವಿಶ್ವ’ ಅಂಕಣದಲ್ಲಿ (ಮಾ.19) ಬರೆದ ಇರಾನಿನ ನಾಗರಿಕತೆಯ ಕುರಿತಾದ ಲೇಖನವು ‘ಇತಿಹಾಸದ ಕನ್ನಡಿ’ಯಂತೆ ಭಾಸವಾಯಿತು. ‘ಸಾವಿರ ವರ್ಷಗಳ ನಾಗರಿಕತೆಗೆ 50 ವರ್ಷಗಳ ಸಂಕೋಲೆ’ ಎನ್ನುವ ಸಾಲು ಇಡೀ ಇರಾನಿನ ಇಂದಿನ ದಾರುಣ ಪರಿಸ್ಥಿತಿಯನ್ನು ಹಿಡಿದಿಟ್ಟಿದೆ. ಒಂದು ಕಾಲದ ಜ್ಞಾನದ ಹರಿವಿನ ನಾಡು, ಇಂದು ಕೇವಲ ಸಿದ್ಧಾಂತಗಳ ಸೆರೆಮನೆಯಾಗಿ ಮಾರ್ಪಟ್ಟಿರುವುದು ಇತಿಹಾಸದ ವ್ಯಂಗ್ಯ. ಮಹಾನ್ ಸಾಮ್ರಾಟರ ನಾಡಿನಲ್ಲಿ ಇವತ್ತು ಸ್ವಾತಂತ್ರ್ಯದ ಉಸಿರಿಗಾಗಿ ನಡೆಯುತ್ತಿರುವ ಹೋರಾಟಗಳು ಲೇಖನದ ಆಶಯಕ್ಕೆ ಪುಷ್ಟಿ ನೀಡುತ್ತವೆ. ಪ್ರಚಲಿತ ವಿದ್ಯಮಾನಗಳನ್ನು ಐತಿಹಾಸಿಕ ಹಿನ್ನೆಲೆಯೊಂದಿಗೆ ವಿವರಿಸಿದ ಭಟ್ಟರಿಗೆ ಅಭಿನಂದನೆಗಳು.
- ಬಾಲಚಂದ್ರ ಹೆಗಡೆ, ಬೆಂಗಳೂರು