Kenya Plane Crash: ಕೀನ್ಯಾದಲ್ಲಿ ವಿಮಾನ ಅಪಘಾತ; 11 ಮಂದಿ ಸಾವು
ಕೀನ್ಯಾದ ಕರಾವಳಿ ಪ್ರದೇಶ ಕ್ವಾಲೆಯಲ್ಲಿ ಮಾಸಾಯಿ ಮಾರಾ ರಾಷ್ಟ್ರೀಯ ಅಭಯಾರಣ್ಯಕ್ಕೆ ತೆರಳುತ್ತಿದ್ದ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿದ್ದು, 11 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರೆಲ್ಲರೂ ವಿದೇಶಿ ಪ್ರವಾಸಿಗರು ಎಂದು ಮೂಲಗಳು ಮಾಹಿತಿ ನೀಡಿವೆ.
ಕೀನ್ಯಾದ ಕರಾವಳಿ ಪ್ರದೇಶ ಕ್ವಾಲೆಯಲ್ಲಿ ಅಪಘಾತಕ್ಕೀಡಾದ ಲಘು ವಿಮಾನ -
Ramesh B
Oct 28, 2025 4:34 PM
ನೈರೋಬಿ, ಅ. 28: ಮಂಗಳವಾರ (ಅಕ್ಟೋಬರ್ 28) ಬೆಳಗ್ಗೆ ಕೀನ್ಯಾದ ಕರಾವಳಿ ಪ್ರದೇಶ ಕ್ವಾಲೆಯಲ್ಲಿ ಮಾಸಾಯಿ ಮಾರಾ ರಾಷ್ಟ್ರೀಯ ಅಭಯಾರಣ್ಯಕ್ಕೆ (Maasai Mara National Reserve) ತೆರಳುತ್ತಿದ್ದ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿದ್ದು, 11 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ (Kenya Plane Crash). ಡಯಾನಿ ವಾಯುನೆಲೆಯಿಂದ ಸುಮಾರು 40 ಕಿಲೋ ಮೀಟರ್ ದೂರದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕ್ವಾಲೆ ಕೌಂಟಿ ಆಯುಕ್ತ ಸ್ಟೀಫನ್ ಒರಿಂಡೆ ಅಸೋಸಿಯೇಟೆಡ್ ಈ ಬಗ್ಗೆ ಮಾತನಾಡಿ, ಪ್ರಯಾಣಿಕರೆಲ್ಲರೂ ವಿದೇಶಿ ಪ್ರವಾಸಿಗರು ಎಂದು ತಿಳಿಸಿದ್ದಾರೆ.
ಮೃತರ ಪೈಕಿ 8 ಮಂದಿ ಹಂಗೇರಿ ಪ್ರಜೆಗಳು, ಇಬ್ಬರು ಜರ್ಮನ್ ಪ್ರಯಾಣಿಕರು ಮತ್ತು ಕೀನ್ಯಾದ ಕ್ಯಾಪ್ಟನ್ ಎಂದು ಗುರಿತಿಸಲಾಗಿದೆ. ಅಪಘಾತದ ಬಳಿಕ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅಪಘಾತಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಅಧಿಕಾರಿಗಳಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಕೆಟ್ಟ ಹವಾಮಾನದ ಕಾರಣದಿಂದ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.
ವಿಮಾನ ಅಪಘಾತದ ದೃಶ್ಯ:
Fatal plane crash Kwale. 12 pax on board. No survivors. Mombasa Air.
— ONJOLO KENYA🇰🇪 (@onjolo_kenya) October 28, 2025
Accident Notification, RRV203, 5YCCA, C208 Diani to Kichwa Tembo crashed in Kwale Simba area at 0530Z, POB 12. pic.twitter.com/0tN1HM4Bwr
ಸೆಸ್ನಾ ಕ್ಯಾರವಾನ್ ಮಾದರಿಯ ವಿಮಾನದಲ್ಲಿ ಒಟ್ಟು 11 ಮಂದಿ ಪ್ರಯಾಣಿಕರಿದ್ದರು. ಈ ಪೈಕಿ ಯಾರೂ ಬದುಕುಳಿದಿಲ್ಲ ಎಂದು ಕೀನ್ಯಾ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳ ನಂತರ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ಅಪಘಾತದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸುಟ್ಟುಹೋದ ವಿಮಾನದ ಅವಶೇಷ ಕಂಡು ಬಂದಿದೆ.
ಮೃತದೇಹಗಳೆಲ್ಲ ಸುಟ್ಟು ಕರಕಲಾಗಿದ್ದು, ಗುರುತೇ ಸಿಗದಂತಾಗಿದೆ ಎಂದು ವರದಿಯೊಂದು ತಿಳಿಸಿದೆ. ಅಪಘಾತಕ್ಕೀಡಾದ ವಿಮಾನಯಾನ ಸಂಸ್ಥೆಯಾದ ಮೊಂಬಾಸಾ ಏರ್ ಸಫಾರಿ ಸದ್ಯ ನಾಗರಿಕ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಂದಿಗೆ ಅಪಘಾತದ ಸ್ಥಳಕ್ಕ ಭೇಟಿ ನೀಡಿದೆ.
ಆಗಸ್ಟ್‌ನಲ್ಲಿ ವೈದ್ಯಕೀಯ ಎನ್‌ಜಿಒ ಅಮ್ರೆಫ್ ಸಂಸ್ಥೆಗೆ ಸೇರಿದ ಲಘು ವಿಮಾನವು ಕೀನ್ಯಾ ರಾಜಧಾನಿ ನೈರೋಬಿಯ ಹೊರವಲಯದಲ್ಲಿ ಪತನಗೊಂಡು 6 ಮಂದಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರು.