MS Dhoni: ಟಿ20ಯಲ್ಲಿ ವಿಶೇಷ ಮೈಲಿಗಲ್ಲು ನಿರ್ಮಿಸಲು ಧೋನಿ ಸಜ್ಜು
IPL 2025: ಐಪಿಎಲ್ 2025 ಮುಗಿಯುವ ಹೊತ್ತಿಗೆ ಧೋನಿಗೆ 44 ವರ್ಷ ವಯಸ್ಸಾಗುತ್ತದೆ. ಆದ್ದರಿಂದ ಧೋನಿಗೆ ಈ ಬಾರಿಯ ಐಪಿಎಲ್ ಕೊನೆಯ ಆವೃತ್ತಿ ಎನ್ನಲಾಗಿದೆ. ಆದರೆ ಧೋನಿ ಮಾತ್ರ ತಮ್ಮ ನಿವೃತ್ತಿಯ ವಿಚಾರವನ್ನು ತಳ್ಳಿ ಹಾಕುತ್ತಲೇ ಇದ್ದಾರೆ. ನಿವೃತ್ತಿ ನಿರ್ಧರಿಸುವುದು ನಾನಲ್ಲ, ನನ್ನ ದೇಹ ಎಂದು ಹೇಳುತ್ತಿದ್ದಾರೆ.



ಶುಕ್ರವಾರದ ಐಪಿಎಲ್ ಪಂದ್ಯದಲ್ಲಿ ಅಂಕಪಟ್ಟಿಯ ಕೊನೆಯ ಎರಡು ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ವಿಶೇಷ ಮೈಲಿಗಲ್ಲೊಂದನ್ನು ನಿರ್ಮಿಸಲಿದ್ದಾರೆ.

43 ವರ್ಷದ ಧೋನಿ ಅವರು ಇಂದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ 400 ಟಿ20 ಪಂದ್ಯಗಳನ್ನು ಪೂರ್ತಿಗೊಳಿಸಲಿದ್ದಾರೆ. ಈ ಮೂಲಕ ಈ ಸಾಧನೆಗೈದ ನಾಲ್ಕನೇ ಭಾರತೀಯ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ 456 ಪಂದ್ಯಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ. ದಿನೇಶ್ ಕಾರ್ತಿಕ್(412) ಮತ್ತು ವಿರಾಟ್ ಕೊಹ್ಲಿ(407) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಧೋನಿ ಭಾರತ ಪರ 98 ಟಿ20 ಪಂದ್ಯಗಳನ್ನು ಆಡಿ 126.13 ಸ್ಟ್ರೈಕ್ ರೇಟ್ನಲ್ಲಿ 1617 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲಿ 272 ಪಂದ್ಯಗಳಲ್ಲಿ ಆಡಿ 137.87 ಸ್ಟ್ರೈಕ್ ರೇಟ್ನಲ್ಲಿ 5377 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು ದೇಶೀಯ ಕ್ರಿಕೆಟ್ನಲ್ಲಿ ಜಾರ್ಖಂಡ್ ಪರ ಟಿ20 ಪಂದ್ಯಗಳನ್ನು ಮತ್ತು ಚಾಂಪಿಯನ್ಸ್ ಲೀಗ್ನಲ್ಲಿ ಸಿಎಸ್ಕೆ ಪರ 24 ಪಂದ್ಯಗಳನ್ನು ಆಡಿದ್ದಾರೆ.

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ತಂಡ ಪ್ಲೇ ಆಫ್ ಪ್ರವೇಶ ಪಡೆಯಬೇಕಿದ್ದರೆ ಇಂದಿನ ಪಂದ್ಯ ಸೇರು ಉಳಿದಿರುವ ಎಲ್ಲ ಪಂದ್ಯಗಳನ್ನು ಉತ್ತಮ ರನ್ ರೇಟ್ ಆಧಾರದಲ್ಲಿ ಗೆಲ್ಲಬೇಕು. ಜತೆಗೆ ತನಗಿಂತ ಮೇಲಿರುವ ತಂಡಗಳ ಸೋಲನ್ನು ಕೂಡ ಬಯಸಬೇಕು.
ಇದನ್ನೂ ಓದಿ IPL 2025: 7 ಪಂದ್ಯ ಸೋತ ರಾಜಸ್ಥಾನ್ ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

ತಂಡದ ಖಾಯಂ ನಾಯಕ ಋತುರಾಜ್ ಗಾಯಕ್ವಾಡ್ ಗಾಯದಿಂದ ಟೂರ್ನಿ ಮಧ್ಯೆ ಹೊರಬಿದ್ದ ಕಾರಣ ಅವರ ಅನುಪಸ್ಥಿತಿಯಲ್ಲಿ ಚೆನ್ನೈ ತಂಡವನ್ನು ಧೋನಿ ಮುನ್ನಡೆಸುತ್ತಿದ್ದಾರೆ. ಅತ್ಯುತ್ತಮ ಫಿನಿಷರ್ ಎಂಬ ಬಿರುದು ಹೊಂದಿರುವ ಧೋನಿ, ಈ ಬಾರಿಯ ಟೂರ್ನಿಯಲ್ಲಿ ಅತ್ಯಂತ ನಿಧಾನಗತಿಯ ಬ್ಯಾಟಿಂಗ್ ಮೂಲಕ ಸ್ವತಃ ಅಭಿಮಾನಿಗಳಿಂದಲೇ ಟೀಕೆ ಎದುರಿಸುತ್ತಿದ್ದಾರೆ.