ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Waqf Bill: ವಕ್ಫ್‌ ಮಸೂದೆಗೆ ಜೆಡಿ(ಯು) ಬೆಂಬಲ; ನಿತೀಶ್ ಬಣಕ್ಕೆ ಗುಡ್‌ಬೈ ಹೇಳಿದ ಹಿರಿಯ ನಾಯಕರು

Waqf Bill: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸಲು ತಮ್ಮ ಪಕ್ಷ ಬೆಂಬಲ ನೀಡಿದ್ದನ್ನು ಖಂಡಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಸಂಯುಕ್ತ)ದ ಇಬ್ಬರು ಪ್ರಮುಖ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿರುವುದನ್ನು ಯೋಚಿಸಿ ನಾನು ನಿರಾಶನಾಗಿದ್ದೇನೆ” ಎಂದು ಹಿರಿಯ ಜೆಡಿ(ಯು) ನಾಯಕ ಮೊಹಮ್ಮದ್ ಖಾಸಿಂ ಅನ್ಸಾರಿ, ನಿತೀಶ್ ಕುಮಾರ್ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

ವಕ್ಫ್ ಮಸೂದೆಗೆ ಬೆಂಬಲ; ನಿತೀಶ್ ಬಣಕ್ಕೆ ಗುಡ್‌ಬೈ ಹೇಳಿದ ನಾಯಕರು

Profile Sushmitha Jain Apr 4, 2025 11:24 AM

ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ(Waqf Amendment Bill) ಅಂಗೀಕರಿಸಲು ತಮ್ಮ ಪಕ್ಷ ಬೆಂಬಲ ನೀಡಿದ್ದನ್ನು ಖಂಡಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Bihar Chief Minister Nitish Kumar) ನೇತೃತ್ವದ ಜನತಾದಳ(Janata Dal) (ಸಂಯುಕ್ತ)ದ ಇಬ್ಬರು ಪ್ರಮುಖ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. “ಇಷ್ಟ ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿರುವುದನ್ನು ಯೋಚಿಸಿ ನಾನು ನಿರಾಶನಾಗಿದ್ದೇನೆ” ಎಂದು ಹಿರಿಯ ಜೆಡಿ(ಯು) ನಾಯಕ ಮೊಹಮ್ಮದ್ ಖಾಸಿಂ ಅನ್ಸಾರಿ(Mohammed Qasim Ansari), ನಿತೀಶ್ ಕುಮಾರ್(Nitish Kumar) ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿಹೇಳಿದ್ದಾರೆ. ಜೆಡಿ(ಯು) ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥರಾಗಿರುವ ಮತ್ತೊಬ್ಬ ನಾಯಕ ಮೊಹಮ್ಮದ್ ಅಶ್ರಫ್ ಅನ್ಸಾರಿ(Mohammad Ashraf Ansari) ಕೂಡಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಭಾರತೀಯ ಮುಸ್ಲಿಮರು ನಿತೀಶ್‌ ಕುಮಾರ್‌ ಒಬ್ಬ ಜಾತ್ಯತೀತ ನಾಯಕ ಎಂಬ ಅಚಲವಾದ ನಂಬಿಕೆ ಹೊಂದಿದ್ದರು, ಆದರೆ ಈಗ ಆ ನಂಬಿಕೆ ಮುರಿದು ಬಿದ್ದಿದೆ ಎಂದು ಹೇಳಿದ್ದಾರೆ.

"ನಮ್ಮಂತಹ ಲಕ್ಷಾಂತರ ಭಾರತೀಯ ಮುಸ್ಲಿಮರು ಮತ್ತು ಕಾರ್ಮಿಕರಿಗೆ ಜೆಡಿ(ಯು) ನಿಲುವಿನಿಂದ ತೀವ್ರ ನೋವಾಗಿದೆ. ಪಕ್ಷದ ಮತ್ತೊಬ್ಬ ನಾಯಕ ಲಾಲನ್ ಸಿಂಗ್ ಲೋಕಸಭೆಯಲ್ಲಿ ಈ ಮಸೂದೆಯನ್ನು ಬೆಂಬಲಿಸಿ ಮಾಡಿದ ಭಾಷಣದಿಂದ ನಾವು ದುಃಖಿತರಾಗಿದ್ದೇವೆ. ಈ ಮಸೂದೆ ಎಲ್ಲಾ ರೀತಿಯಲ್ಲಿ ಭಾರತೀಯ ಮುಸ್ಲಿಮರಿಗೆ ವಿರುದ್ಧವಾಗಿದೆ. ಇದನ್ನು ಮುಕ್ತ ಮನಸ್ಸಿನಿಂದ ನೀವು ಬೆಂಬಲಿಸಿದ್ದನ್ನು ನಾವು ಖಂಡಿಸುತ್ತೇವೆ” ಎಂದು ಅಶ್ರಫ್ ಅನ್ಸಾರಿ ಹೇಳಿದ್ದಾರೆ.

ಇನ್ನು ಪತ್ರದ ಮೂಲಕ ಮಸೂದೆ ಅಂಗೀಕರಿಸಿದ್ದನ್ನು ವಿರೋಧಿಸಿದ ಖಾಸಿಂ ಅನ್ಸಾರಿ, "ವಕ್ಫ್ ಮಸೂದೆ ಭಾರತೀಯ ಮುಸ್ಲಿಮರ ವಿರುದ್ಧವಾಗಿರುವ ಮಸೂದೆ. ನಾವು ಯಾವುದೇ ಸಂದರ್ಭದಲ್ಲೂ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಈ ಮಸೂದೆಯು ಸಂವಿಧಾನದ ಅನೇಕ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಈ ಮಸೂದೆಯ ಮೂಲಕ, ಭಾರತೀಯ ಮುಸ್ಲಿಮರನ್ನು ಅವಮಾನಿಸಲಾಗುತ್ತಿದೆ. ನೀವು (ನಿತೀಶ್‌ ಕುಮಾರ್) ಅಥವಾ ನಿಮ್ಮ ಪಕ್ಷವು‌ (ಜೆಡಿಯು) ಇದನ್ನು ಎಂದಿಗೂ ಅರಿಯುವುದಿಲ್ಲ” ಎಂದು ಬರೆದಿದ್ದಾರೆ.

Waqf Bill: ಐತಿಹಾಸಿಕ ಕ್ಷಣ... ವಕ್ಫ್‌ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ಪ್ರಧಾನಿ ಮೋದಿ ಹರ್ಷ

ಮಸೂದೆ ಬೆಂಬಲಿಸಿ ಜೆಡಿಯು ಹೇಳಿದ್ದೇನು?

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ ಕೇಂದ್ರ ಸಚಿವ ಮತ್ತು ಜೆಡಿಯು ನಾಯಕ ರಾಜೀವ್ ರಂಜನ್ (ಲಾಲನ್) ಸಿಂಗ್, ಕಾನೂನಲ್ಲಿ ಪಾರದರ್ಶಕತೆಯನ್ನು ತರಲು ಮತ್ತು ಮುಸ್ಲಿಂ ಸಮುದಾಯದ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ಈ ಮಸೂದೆಯನ್ನು ಮಂಡಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

“ಮಸೂದೆಯನ್ನು ಮುಸ್ಲಿಂ ವಿರೋಧಿ ಎಂದು ದೂಷಿಸುವ ವಾತಾವರಣವನ್ನು ಸೃಷ್ಟಿಸಲು ಆರಂಭದಿಂದಲೂ ಪ್ರಯತ್ನಗಳು ನಡೆದಿವೆ. ಈ ಮಸೂದೆ ಮುಸ್ಲಿಂ ಸಮುದಾಯದ ವಿರುದ್ಧವಾಗಿಲ್ಲ. ವಕ್ಫ್ ಎಂಬುದು ಮುಸ್ಲಿಮರ ಹಿತಾಸಕ್ತಿ ಕಾಪಾಡಲು ರಚಿಸಲಾದ ಒಂದು ರೀತಿಯ ಟ್ರಸ್ಟ್ ಆಗಿದ್ದು, ಇದು ಧಾರ್ಮಿಕ ಸಂಘಟನೆಯಲ್ಲ. ಟ್ರಸ್ಟ್‌ಗೆ ಎಲ್ಲಾ ವರ್ಗದ ಮುಸ್ಲಿಮರಿಗೆ ನ್ಯಾಯ ಒದಗಿಸುವ ಕರ್ತವ್ಯವಿದೆ, ಆದರೆ ಅದು ನಡೆಯುತ್ತಿಲ್ಲ" ಎಂದು ಲಾಲನ್‌ ಸಿಂಗ್‌ ಅವರು ಹೇಳಿದ್ದರು.