Bihar Elections 2025: ಎಲ್ಲ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಕ್ಫ್ ಕಾಯ್ದೆಗೆ ತಡೆ...; ಮಹಾಘಟಬಂಧನ್ ಪ್ರಣಾಳಿಕೆಯಲ್ಲಿ ಏನೇನಿದೆ?
ಬಿಹಾರ ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿದ್ದಂತೆ ಮಹಾಘಟಬಂಧನ್ ಬಿಹಾರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದನ್ನು ಮುಖ್ಯಮಂತ್ರಿ ಅಭ್ಯರ್ಥಿ, ರಾಷ್ಟ್ರೀಯ ಜನತಾ ದಳದ ತೇಜಸ್ವಿ ಯಾದವ್ 'ತೇಜಸ್ವಿ ಪ್ರಾಣ ಪತ್ರ' ಎಂದು ಕರೆದಿದ್ದಾರೆ. ಇದರಲ್ಲಿ ವಕ್ಫ್ ಕಾಯ್ದೆಯನ್ನು ತಡೆಹಿಡಿಯುವ ಭರವಸೆ ನೀಡಿದ್ದಾರೆ.
-
ವಿದ್ಯಾ ಇರ್ವತ್ತೂರು
Oct 28, 2025 8:13 PM
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ (Bihar Elections 2025) ಕಣ ರಂಗೇರುತ್ತಿದ್ದಂತೆ ಮಹಾಘಟಬಂಧನ್ (Mahaghatbandhan Bihar) ಮೈತ್ರಿಕೂಟವು ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿವೆ. ರಾಜ್ಯದ ಎಲ್ಲ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಕ್ಫ್ ಕಾಯ್ದೆಗೆ ತಡೆ ಸೇರಿದಂತೆ ವಿವಿಧ ಭರವಸೆಯನ್ನು ಒಳಗೊಂಡಿರುವ ಪ್ರಣಾಳಿಕೆಯನ್ನು (manifesto) ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ರಾಷ್ಟ್ರೀಯ ಜನತಾ ದಳದ (Rashtriya Janata Dal) ತೇಜಸ್ವಿ ಯಾದವ್ (Tejashwi Yadav) ಮತ್ತು ಕೈ ನಾಯಕ ಪವನ್ ಖೇರಾ ಸೇರಿ ಮಹಾಘಟಬಂಧನ್ ನಾಯಕರು ಬಿಡುಗಡೆಗೊಳಿಸಿದರು.
ಪ್ರಣಾಳಿಕೆಯ ಮೊದಲ ಅಂಶವೇ ಅಧಿಕಾರಕ್ಕೆ ಬಂದ 20 ದಿನಗಳಲ್ಲಿ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿದೆ. ಜೀವಿಕಾ ದೀದಿಗೆ ಸರ್ಕಾರಿ ನೌಕರರಾಗಿ ಶಾಶ್ವತ ಸ್ಥಾನಮಾನ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಮಹಾಘಟಬಂಧನ್ ಮೈತ್ರಿಕೂಟದ ಪ್ರಣಾಳಿಕೆ ರಿಲೀಸ್:
#WATCH | Patna, Bihar | Mahagathbandhan releases its manifesto titled 'Bihar Ka Tejashwi Pran' for the upcoming #BiharElection2025. pic.twitter.com/WvQS6MWTXZ
— ANI (@ANI) October 28, 2025
ಎಲ್ಲ ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವುದು, ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ತರುವುದು ಕೂಡ ಪ್ರಣಾಳಿಕೆ ಒಳಗೊಂಡಿದೆ. ಇನ್ನು ಎಲ್ಲ ಅಲ್ಪಸಂಖ್ಯಾತ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಒತ್ತು ನೀಡುವ ಪ್ರಣಾಳಿಕೆಯು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ತಡೆ ಹಿಡಿಯುವುದಾಗಿ ಭರವಸೆ ನೀಡಿದೆ. ವಕ್ಫ್ ಆಸ್ತಿಗಳ ನಿರ್ವಹಣೆಯನ್ನು ಪಾರದರ್ಶಕಗೊಳಿಸಲಾಗುವುದು. ಈ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗುವಂತೆ ಮಾಡಲಾಗುವುದು ಎಂದು ಕೂಡ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಬೋಧ್ ಗಯಾದಲ್ಲಿರುವ ಬೌದ್ಧ ದೇವಾಲಯಗಳ ನಿರ್ವಹಣೆಯನ್ನು ಬೌದ್ಧ ಸಮುದಾಯಕ್ಕೆ ಹಸ್ತಾಂತರಿಸಲಾಗುವುದು, ಮೈ ಬೆಹಿಂ ಮಾನ್ ಯೋಜನೆಯಡಿ ಬಿಹಾರದ ಮಹಿಳೆಯರು ಡಿಸೆಂಬರ್ 1ರಿಂದ ತಿಂಗಳಿಗೆ 2,500 ರೂ. ಮತ್ತು ಮುಂದಿನ ಐದು ವರ್ಷಗಳವರೆಗೆ ವರ್ಷಕ್ಕೆ 30,000 ರೂ.ಗಳ ಆರ್ಥಿಕ ಸಹಾಯವನ್ನು ಪಡೆಯುತ್ತಾರೆ ಎಂದು ಕೂಡ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಇದು ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ಭರವಸೆ ನೀಡಿರುವ ಪ್ರಣಾಳಿಕೆ ಕುರಿತು ಮಾತನಾಡಿದ ತೇಜಸ್ವಿ ಯಾದವ್, ''ನಾವು ಬಿಹಾರದಲ್ಲಿ ಸರ್ಕಾರ ರಚಿಸುವುದು ಮಾತ್ರವಲ್ಲ ಹೊಸ ರಾಜ್ಯವನ್ನೂ ನಿರ್ಮಿಸಬೇಕಾಗಿದೆ. ಮಹಾಘಟಬಂಧನ್ ಮೈತ್ರಿಕೂಟವು ಬಿಹಾರಕ್ಕಾಗಿ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದೆʼʼ ಎಂದು ಹೇಳಿದರು.
ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ಪವನ್ ಖೇರಾ, ʼʼಮಹಾಘಟಬಂಧನ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದು, ಇದೀಗ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆʼʼ ಎಂದು ತಿಳಿಸಿದರು.
ʼʼಬಿಹಾರದ ಬಗ್ಗೆ ಯಾರು ಗಂಭೀರರಾಗಿದ್ದಾರೆ, ಬಿಹಾರಕ್ಕಾಗಿ ನಾವು ಏನು ಮಾಡಬೇಕು, ಬಿಹಾರವನ್ನು ಮತ್ತೆ ಹಳಿಗೆ ತರುವುದು ಹೇಗೆ? ಸೇರಿದಂತೆ ಹಲವು ಭರವಸೆಗಳನ್ನು ಒಳಗೊಂಡಿರುವ ಪ್ರಣಾಳಿಕೆಯು ಬಿಹಾರ ರಾಜ್ಯದ 'ಪ್ರಾಣ ಪತ್ರ'ವಾಗಿದೆʼʼ ಎಂದರು.
ವಿಕಾಸಶೀಲ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮತ್ತು ಮಹಾಘಟಬಂಧನದ ಉಪಮುಖ್ಯಮಂತ್ರಿ ಅಭ್ಯರ್ಥಿ ಮುಖೇಶ್ ಸಹಾನಿ ಮಾತನಾಡಿ, ʼʼನಾವು ಹೊಸ ಬಿಹಾರಕ್ಕಾಗಿ ಸಂಕಲ್ಪ ಪತ್ರವನ್ನು ಮಾಡಿದ್ದೇವೆ. ಎಲ್ಲ ಸಾರ್ವಜನಿಕರ ಆಕಾಂಕ್ಷೆಗಳನ್ನು ಈಡೇರಿಸುತ್ತೇವೆʼʼ ಎಂದು ತಿಳಿಸಿದರು.
ಇದನ್ನೂ ಓದಿ: Baba Vanga’s prediction: ಮುಂದಿನ ವರ್ಷ ಚಿನ್ನ ಖರೀದಿ ಮಾಡಬಹುದೇ? ಬಾಬಾ ವಂಗಾ ಭವಿಷ್ಯವೇನು?
ಸಾರ್ವಜನಿಕರು ಮಹಾಘಟಬಂಧನಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದ ಅವರು, ಚುನಾವಣೆ ಹತ್ತಿರದಲ್ಲಿದ್ದರು ಇನ್ನೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡದ ಎನ್‌ಡಿಎ ವಿರುದ್ಧ ವಾಗ್ದಾಳಿ ನಡೆಸಿದರು.