ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ಸಿಎಂ ಡಿಕೆಶಿ; ಗೋದಾವರಿ-ಕಾವೇರಿ, ಬೇಡ್ತಿ-ವರದಾ ನದಿ ಜೋಡಣೆ ಸೇರಿ ಪ್ರಮುಖ ಯೋಜನೆಗಳ ಬಗ್ಗೆ ಚರ್ಚೆ
ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳಾದ ಟಿ.ಬಿ. ಜಯಚಂದ್ರ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಜಲಶಕ್ತಿ ಸಚಿವರನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಕರ್ನಾಟಕದ ಭವಿಷ್ಯ ಮತ್ತು ಜನರ ಕ್ಷೇಮಾಭಿವೃದ್ಧಿಗೆ ಅತ್ಯಂತ ಮುಖ್ಯವಾಗಿರುವ ಪ್ರಮುಖ ನೀರಾವರಿ ಹಾಗೂ ಕುಡಿಯುವ ನೀರು ಯೋಜನೆಗೆಳ ಕುರಿತು ಚರ್ಚಿಸಿದ್ದಾರೆ.
-
ನವದೆಹಲಿ: ಕರ್ನಾಟಕದ ಪ್ರಮುಖ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಬಾಕಿ ಇರುವ ಪ್ರಕ್ರಿಯೆಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ, ಶೀಘ್ರ ಇತ್ಯರ್ಥಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ (C. R. Patil) ಅವರಿಗೆ ಸಿಎಂ ಡಿ.ಕೆ.ಶಿವಕುಮಾರ್ (CM D.K. Shivakumar) ಮನವಿ ಪತ್ರ ಸಲ್ಲಿಸಿದ್ದಾರೆ.
ಇಂದು ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳಾದ ಟಿ.ಬಿ. ಜಯಚಂದ್ರ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ, ಕರ್ನಾಟಕದ ಭವಿಷ್ಯ ಮತ್ತು ಜನರ ಕ್ಷೇಮಾಭಿವೃದ್ಧಿಗೆ ಅತ್ಯಂತ ಮುಖ್ಯವಾಗಿರುವ ಪ್ರಮುಖ ನೀರಾವರಿ ಹಾಗೂ ಕುಡಿಯುವ ನೀರು ಯೋಜನೆಗೆಳ ಕುರಿತು ಚರ್ಚಿಸಿದ್ದಾರೆ.
ಮನವಿ ಪತ್ರದ ಪ್ರಮುಖ ಅಂಶಗಳು
- 16,745 ಕೋಟಿ ರೂ. ವೆಚ್ಚದ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯ ಮೌಲ್ಯಮಾಪನ ಹಾಗೂ ಅನುಮೋದನೆಯನ್ನು ತ್ವರಿತಗೊಳಿಸಬೇಕು.
- KWDT-II ತೀರ್ಪನ್ನು ಶೀಘ್ರದಲ್ಲೇ ಗೆಜೆಟ್‌ನಲ್ಲಿ ಪ್ರಕಟಿಸುವುದು, ಇದರಿಂದ ಕರ್ನಾಟಕವು ತನ್ನ ಹಂಚಿಕೆಯ ನೀರನ್ನು ಬಳಸಿಕೊಳ್ಳಲು ಮತ್ತು ನೀರಾವರಿ ಯೋಜನೆಗಳನ್ನು ಮುಂದುವರಿಸಲು ಅನುವು ಮಾಡಿಕೊಡಬೇಕು.
- 2023-24 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ, PMKSY ಅಡಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ನೆರವು ನೀಡಬೇಕು.
- ನೀರಾವರಿ ಅಭಿವೃದ್ಧಿ, ಪ್ರವಾಹ ನಿರ್ವಹಣೆ ಮತ್ತು ಬಲವಾದ ಜಲ ಮೂಲಸೌಕರ್ಯಗಳಿಗಾಗಿ PMKSY ಮತ್ತು FMBAP ಅಡಿಯಲ್ಲಿ ಕರ್ನಾಟಕ ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದನೆ ನೀಡುವುದು.
- ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಮ್ಮ ರಾಜ್ಯದ ನ್ಯಾಯಯುತ ಅವಶ್ಯಕತೆಗಳು ಮತ್ತು ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಗೋದಾವರಿ-ಕಾವೇರಿ ನದಿ ಜೋಡಣೆ ಮತ್ತು ಬೇಡ್ತಿ-ವರದ (ಹಿರೇವಡಟ್ಟಿ) ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ಸಮಾನ ಹಂಚಿಕೆ ದೊರೆಯುವುದನ್ನು ಖಚಿತಪಡಿಸಬೇಕು.
ನೀರಿನ ವಿಚಾರದಲ್ಲಿ ನಾವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯು ನಮ್ಮ ರೈತರ ಭದ್ರತೆಯನ್ನು ಬಲಪಡಿಸಬೇಕು, ಬರಪೀಡಿತ ಪ್ರದೇಶಗಳಿಗೆ ಬೆಂಬಲ ನೀಡಬೇಕು, ನಮ್ಮ ಜನರ ಕುಡಿಯುವ ನೀರಿನ ಬೇಡಿಕೆಗಳನ್ನು ಈಡೇರಿಸಬೇಕು. ನಮ್ಮ ರಾಜ್ಯದ ಪ್ರತಿಯೊಂದು ಕುಟುಂಬ, ಪ್ರತಿಯೊಬ್ಬ ರೈತ ಮತ್ತು ಪ್ರತಿಯೊಂದು ಪ್ರದೇಶವು ಹೆಚ್ಚಿನ ವಿಶ್ವಾಸ ಹಾಗೂ ಭದ್ರತೆಯೊಂದಿಗೆ ಮುಂದೆ ಸಾಗಲು ಈ ಪ್ರಯತ್ನಗಳಿಗೆ ಕೇಂದ್ರ ಸರ್ಕಾರವು ಬೆಂಬಲ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.