ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mysuru Dasara 2025: ಸೆ. 22ರಂದು ಮೈಸೂರು ದಸರಾಗೆ ಚಾಲನೆ; ಈ ಬಾರಿ 11 ದಿನಗಳ ಕಾಲ ಉತ್ಸವ

CM Siddaramaiah: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ನಾಡಹಬ್ಬ ಮೈಸೂರು ದಸರಾ-2025 ಆಚರಣೆ ಕುರಿತು ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಜೃಂಭಣೆ ರಭಸದಲ್ಲಿ ದಸರಾದ ಚಾರಿತ್ರಿಕ‌ ಮಹತ್ವ ಮರೆಯಾಗಬಾರದು. ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ. ಜನರ, ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ಇರಲಿ ಎಂದು ಸೂಚನೆ ನೀಡಿದ್ದಾರೆ.

ಸೆ. 22ರಂದು ಮೈಸೂರು ದಸರಾಗೆ ಚಾಲನೆ; ಈ ಬಾರಿ 11 ದಿನ ಉತ್ಸವ

Profile Siddalinga Swamy Jun 28, 2025 2:24 PM

ಬೆಂಗಳೂರು: ವಿಜೃಂಭಣೆ ರಭಸದಲ್ಲಿ ದಸರಾದ ಚಾರಿತ್ರಿಕ‌ ಮಹತ್ವ ಮರೆಯಾಗಬಾರದು. ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ. ಜನರ, ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ಇರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)‌ ಸೂಚನೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ನಾಡಹಬ್ಬ ಮೈಸೂರು ದಸರಾ-2025 ಆಚರಣೆ (Mysuru Dasara 2025) ಕುರಿತು ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಸಾಧನೆಗಳು, ನಾವು ಪ್ರತೀ ಇಲಾಖೆಯಲ್ಲೂ ಜಾರಿ ಮಾಡಿರುವ ಜನಪರ ಕಾರ್ಯಕ್ರಮಗಳು ಜನರಿಗೆ ಸಮರ್ಪಕವಾಗಿ ಮನವರಿಕೆ ಆಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು. ಈ ಬಾರಿ ರಾಜ್ಯದಾದ್ಯಂತ ಮಳೆ ಬೆಳೆ ಉತ್ತಮವಾಗಿದ್ದು, ನದಿ, ಕೆರೆಗಳು ತುಂಬಿದ್ದು, ವೈಭವದಿಂದ ದಸರಾ ಆಚರಿಸಲಾಗುವುದು ಎಂದು ಹೇಳಿದರು.

ಸೆಪ್ಟಂಬರ್‌ 22ರಂದು ದಸರಾ ಹಬ್ಬಕ್ಕೆ ಚಾಲನೆ ದೊರೆಯಲಿದ್ದು, ಅಕ್ಟೋಬರ್‌ 2ರಂದು ವಿಜಯದಶಮಿ, ಜಂಬೂ ಸವಾರಿ ನಡೆಯಲಿದೆ. ದಸರಾ ಈ ಬಾರಿ 10 ದಿನಗಳ ಬದಲು 11 ದಿನಗಳ ಕಾಲ ನಡೆಯಲಿದೆ. ದಸರಾಕ್ಕೆ ತನ್ನದೇ ಆದ ಚಾರಿತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದ್ದು, ಇದಕ್ಕೆ ಪೂರಕವಾಗಿ ದಸರಾ ಆಚರಿಸಲಾಗುವುದು. ವಿಶ್ವ ವಿಖ್ಯಾತ ದಸರಾದ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸೂಚಿಸಿದರು.

ಕಳೆದ ವರ್ಷ ದಸರಾ ಆಚರಣೆಗೆ ಒಟ್ಟು ರೂ. 40 ಕೋಟಿ ಅನುದಾನ ಒದಗಿಸಲಾಗಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆಗೆ ಬೇಕಾದಷ್ಟು ಅನುದಾನವನ್ನು ಒದಗಿಸಲಾಗುವುದು. ಸರ್ಕಾರದ ಸಾಧನೆಗಳನ್ನು ಮತ್ತು ಇಲಾಖಾ ಕಾರ್ಯಕ್ರಮಗಳನ್ನು ಸರಿಯಾಗಿ ಪ್ರತಿಬಿಂಬಿಸುವಂತಹ ವಸ್ತು ಪ್ರದರ್ಶನ, ಸ್ತಬ್ಧಚಿತ್ರ ಪ್ರದರ್ಶನ ಆಯೋಜಿಸಬೇಕು. ಅಕ್ಟೋಬರ್‌ 2ರಂದು ವಿಜಯದಶಮಿ ಬಂದಿರುವ ಕಾರಣ ಸ್ತಬ್ಧ ಚಿತ್ರಗಳಲ್ಲಿ ಗಾಂಧೀಜಿ ವಿಚಾರಧಾರೆಗಳಿಗೆ ಸಹ ಅವಕಾಶ ಕಲ್ಪಿಸಬೇಕು. ಕಲ್ಯಾಣ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳ ಮಾಹಿತಿ ಒದಗಿಸಲು ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

ದಸರಾ ಸಂದರ್ಭದಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. 10ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ಸಂದರ್ಭ ಇದಾಗಿದೆ. ವಿದೇಶಿಗರೂ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಾರೆ. ಯಾವುದೇ ಕಾರಣಕ್ಕೂ ಅನಾಹುತ ಸಂಭವಿಸದಂತೆ ಎಲ್ಲಾ ಕಡೆ ಮುನ್ನೆಚ್ಚರಿಕೆ ವಹಿಸಬೇಕು. ಅರಮನೆ ಮುಂಭಾಗದಲ್ಲಿ ಆಸನದ ವ್ಯವಸ್ಥೆಯನ್ನು ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮಾಡಿ ಜನದಟ್ಟಣೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಿ. ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆ, ಕೆಆರ್‌ಎಸ್‌ಗೆ ಹೋಗುವ ರಸ್ತೆ ಸೇರಿದಂತೆ ಎಲ್ಲಾ ಪ್ರಮುಖ ರಸ್ತೆಗಳನ್ನು ದುರಸ್ತಿ ಮಾಡುವ ಕಾರ್ಯವನ್ನು ಈಗಲೇ ಆರಂಭಿಸಬೇಕು. ಜಾನಪದ ಕಲೆಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಬೇಕು. ಜಾನಪದ ಪ್ರದರ್ಶನದಲ್ಲಿ ಏಕತಾನತೆ ಇಲ್ಲದಂತೆ ನೋಡಿಕೊಳ್ಳಬೇಕು. ಕಳೆದ ಬಾರಿ ವಿದ್ಯುತ್‌ ದೀಪ ಅಲಂಕಾರವನ್ನು ವೈಭವದಿಂದ ಮಾಡಲಾಗಿತ್ತು. ಇದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಬಾರಿಯೂ ವಿದ್ಯುತ್‌ ದೀಪಾಲಂಕಾರವನ್ನು ಇನ್ನಷ್ಟು ಉತ್ತಮವಾಗಿ ಮಾಡಬೇಕು. ಎಲ್ಲಾ ಜಿಲ್ಲೆಗಳಿಂದ ಆಗಮಿಸುವ ಸ್ತಬ್ಧಚಿತ್ರಗಳು ವೈವಿಧ್ಯಮಯವಾಗಿರುವಂತೆ ನೋಡಿಕೊಳ್ಳಬೇಕು. ವಸ್ತು ಪ್ರದರ್ಶನದ ಮಳಿಗೆಗಳು ಉದ್ಘಾಟನೆ ಸಂದರ್ಭದಲ್ಲೇ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಂಡಿರಬೇಕು. ಯಾವುದೇ ಮಳಿಗೆಗಳು ಖಾಲಿಯಿರಬಾರದು ಎಂದು ಸೂಚಿಸಿದರು.

ಗೋಲ್ಡ್ ಕಾರ್ಡ್‌ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ವಿತರಿಸಬೇಕು. ಮೈಸೂರು ನಗರದ ಸೌಂದರ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ದಸರಾ ವೀಕ್ಷಿಸಲು ಆಗಮಿಸುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಶೌಚಾಲಯ, ವಾಹನ ಪಾರ್ಕಿಂಗ್‌ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಈ ಬಾರಿಯೂ ದೊಡ್ಡ ಪ್ರಮಾಣದಲ್ಲಿ ಡ್ರೋಣ್‌ ಶೋ ಆಯೋಜಿಸಲಾಗುವುದು. ದಸರಾ ಸಂದರ್ಭದಲ್ಲಿ ಅಧಿಕಾರಿಗಳು ಜನಸಾಮಾನ್ಯರಿಗೆ ದೊರೆಯುವುದಿಲ್ಲ ಎಂಬ ದೂರುಗಳಿದ್ದು, ಇದಕ್ಕೆ ಈ ಬಾರಿ ಅವಕಾಶ ನೀಡಬಾರದು. ಜನಸಾಮಾನ್ಯರ ಕೆಲಸ ಕಾರ್ಯಗಳು, ಅಭಿವೃದ್ದಿ ಕಾರ್ಯಗಳು ಯಾವುದೇ ಕಾರಣಕ್ಕೂ ಕುಂಠಿತವಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.

ಈ ಸುದ್ದಿಯನ್ನೂ ಓದಿ | SBI Recruitment 2025: ಬ್ಯಾಂಕ್‌ ಉದ್ಯೋಗ ಹುಡುಕುವವರಿಗೆ ಗುಡ್‌ನ್ಯೂಸ್‌; ಎಸ್‌ಬಿಐಯಲ್ಲಿ ಖಾಲಿ ಇದೆ 541 ಪ್ರೊಬೆಷನರಿ ಆಫೀಸರ್‌ ಹುದ್ದೆ

ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್‌, ಶಿವರಾಜ ತಂಗಡಗಿ, ಕೆ. ವೆಂಕಟೇಶ್, ಸುರೇಶ್‌ ಭೈರತಿ ಹಾಗೂ ಜಿ.ಟಿ. ದೇವೇಗೌಡ, ರಮೇಶ್‌ ಬಂಡಿಸಿದ್ದೇಗೌಡ, ಪುಟ್ಟರಂಗಶೆಟ್ಟಿ, ತನ್ವೀರ್‌ ಸೇಠ್‌, ಡಾ.ಯತೀಂದ್ರ ಎಸ್‌, ಡಾ.ಡಿ.ತಿಮ್ಮಯ್ಯ, ಅನಿಲ್‌ ಕುಮಾರ್, ಎ.ಆರ್.ಕೃಷ್ಣಮೂರ್ತಿ, ಮಧು ಜಿ ಮಾದೇಗೌಡ, ಕೆ.ಹರೀಶ್‌ ಗೌಡ, ದರ್ಶನ್‌ ಧ್ರುವನಾರಾಯಣ, ಡಾ.ಮಾನಸ, ಪುಷ್ಪಾ ಅಮರನಾಥ್, ಅಯೂಬ್‌ ಖಾನ್, ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಇತರರು ಉಪಸ್ಥಿತರಿದ್ದರು.