ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಕ್ವಾನ್ ಚಂಡಮಾರುತ: ಒಡಿಶಾದಲ್ಲಿ 3 ಲಕ್ಷ ಜನ ಸ್ಥಳಾಂತರ, ಸಿಎಂ ಮಾಝಿ ಮಧ್ಯರಾತ್ರಿ ಸಭೆ

Cyclone Akvan: ಗುರುವಾರವೇ ಒಡಿಶಾದಾದ್ಯಂತ ಸುಮಾರು 2 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ರಾಜೇಶ್ ಪಿ. ಪಾಟೀಲ್ ಪಿಟಿಐಗೆ ತಿಳಿಸಿದ್ದಾರೆ. ರಾಜ್ಯವು 2,523 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, 9,341 ಚಂಡಮಾರುತ ಆಶ್ರಯ ತಾಣಗಳನ್ನು ಸಿದ್ಧಪಡಿಸಿದೆ ಎಂದು ತಿಳಿಸಿದರು.

ಅಕ್ವಾನ್ ಚಂಡಮಾರುತ: ಒಡಿಶಾದಲ್ಲಿ 3 ಲಕ್ಷ ಜನ ಸ್ಥಳಾಂತರ

Cyclone Akvan -

Abhilash BC
Abhilash BC Nov 20, 2026 10:32 AM

ನವದೆಹಲಿ, ನ.20: 'ಅಕ್ವಾನ್' ಚಂಡಮಾರುತ(Cyclone Akvan)ವು ಕರಾವಳಿಯತ್ತ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಒಡಿಶಾ ಸಿದ್ಧತೆಗಳನ್ನು ತೀವ್ರಗೊಳಿಸಿದೆ. ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ, ನೂರಾರು ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಸಾವಿರಾರು ಆಶ್ರಯ ತಾಣಗಳನ್ನು ಸಿದ್ಧಪಡಿಸಲಾಗಿದೆ.

ಈ ಚಂಡಮಾರುತವು ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಪುರಿ ಮತ್ತು ಗೋಪಾಲ್‌ಪುರಗಳ ನಡುವೆ ತೀರವನ್ನು ಅಪ್ಪಳಿಸುವ ಸಾಧ್ಯತೆಯಿದೆ ಹಾಗೂ ಆಗ ಗಾಳಿಯ ವೇಗವು ಗಂಟೆಗೆ 90-100 ಕಿಲೋಮೀಟರ್‌ಗಳಷ್ಟಿರಬಹುದು ಎಂದು ಐಎಂಡಿ (IMD) ಮುನ್ಸೂಚನೆ ನೀಡಿದೆ. ಚಂಡಮಾರುತವು ಉತ್ತರ ದಿಕ್ಕಿನತ್ತ ಸಾಗಿದಂತೆ ದುರ್ಬಲಗೊಳ್ಳುವ ನಿರೀಕ್ಷೆಯಿದೆ.

ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರಪ್ರದೇಶದ ವಿಶಾಖಪಟ್ಟಣದ ಹಲವು ಭಾಗಗಳಲ್ಲಿ ದಟ್ಟ ಮೋಡಗಳು ಆವರಿಸಿಕೊಂಡಿವೆ. ಬೆಟ್ಟಗುಡ್ಡಗಳು ಮಂಜಿನ ಹೊದಿಕೆಯಿಂದ ಆವೃತವಾಗಿವೆ.



ಗುರುವಾರವೇ ಒಡಿಶಾದಾದ್ಯಂತ ಸುಮಾರು 2 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ರಾಜೇಶ್ ಪಿ. ಪಾಟೀಲ್ ಪಿಟಿಐಗೆ ತಿಳಿಸಿದ್ದಾರೆ. ರಾಜ್ಯವು 2,523 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, 9,341 ಚಂಡಮಾರುತ ಆಶ್ರಯ ತಾಣಗಳನ್ನು ಸಿದ್ಧಪಡಿಸಿದೆ ಎಂದು ತಿಳಿಸಿದರು.

ಕೇರಳದ ಜಟಾಯು ಅರ್ಥ್ ಸೆಂಟರ್‌ಗೆ ಪ್ರಧಾನಿ ಮೋದಿ ಭೇಟಿ? 'ರಾಮಾಯಣ' ಸಿನಿಮಾ ಬೆನ್ನಲ್ಲೇ ಮಹತ್ವದ ಬೆಳವಣಿಗೆ!

ಅಪಾಯಕ್ಕೊಳಗಾಗಬಹುದಾದ ಪ್ರದೇಶಗಳಲ್ಲಿ ಒಟ್ಟು 423 ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಇವುಗಳಲ್ಲಿ 60 'ಒಡಿಶಾ ಡಿಸಾಸ್ಟರ್ ರಾಪಿಡ್ ಆಕ್ಷನ್ ಫೋರ್ಸ್' (ODRAF) ತಂಡಗಳು, 14 'ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್' (NDRF) ತಂಡಗಳು ಮತ್ತು 131 ಅಗ್ನಿಶಾಮಕ ಹಾಗೂ ತುರ್ತು ಸೇವಾ ತಂಡಗಳು ಸೇರಿವೆ. ಅಲ್ಲದೆ, ಹೆಲಿಕಾಪ್ಟರ್‌ಗಳು, ನೌಕೆಗಳು ಮತ್ತು ಇತರ ಅಗತ್ಯ ಬೆಂಬಲ ವ್ಯವಸ್ಥೆಗಳನ್ನು ಸಿದ್ಧವಾಗಿರಿಸಿಕೊಳ್ಳುವಂತೆ ಕರಾವಳಿ ಕಾವಲು ಪಡೆಗೆ (Coast Guard) ಸೂಚಿಸಲಾಗಿದೆ.

ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು, ಚಂಡಮಾರುತವನ್ನು ಎದುರಿಸಲು ರಾಜ್ಯದ ಅಂತಿಮ ಸಿದ್ಧತೆಗಳ ಪರಿಶೀಲನೆಗಾಗಿ ಭುವನೇಶ್ವರದಲ್ಲಿರುವ ವಿಶೇಷ ಪರಿಹಾರ ಆಯುಕ್ತರ (SRC) ಕಚೇರಿಯಲ್ಲಿ ಮಧ್ಯರಾತ್ರಿ ತುರ್ತು ಸಭೆಯೊಂದನ್ನು ನಡೆಸಿದರು.



"ಚಂಡಮಾರುತಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಪರಿಶೀಲಿಸಿದೆ. ಭಾರತೀಯ ಹವಾಮಾನ ಇಲಾಖೆಯಿಂದ ಪಡೆದ ಮಾಹಿತಿಯ ಪ್ರಕಾರ, ಈ ಚಂಡಮಾರುತವು ಒಡಿಶಾ ಕರಾವಳಿಯಲ್ಲಿ ಭೂಸ್ಪರ್ಶ ಮಾಡುವ ನಿರೀಕ್ಷೆಯಿದೆ... ಈಗ ಪರಿಸ್ಥಿತಿಯು ಇನ್ನಷ್ಟು ಸ್ಪಷ್ಟಗೊಂಡಿದೆ. ಇದರ ಆಧಾರದ ಮೇಲೆ, ನಾವು 20 ಜಿಲ್ಲೆಗಳಲ್ಲಿ ನಮ್ಮ ಸಿದ್ಧತೆಗಳನ್ನು ಇನ್ನಷ್ಟು ತೀವ್ರಗೊಳಿಸಿದ್ದೇವೆ," ಎಂದು ಮಾಝಿ ತಿಳಿಸಿದರು.

ಮುನ್ನೆಚ್ಚರಿಕಾ ಕ್ರಮವಾಗಿ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಈಸ್ಟ್ ಕೋಸ್ಟ್ ರೈಲ್ವೆಯು 41 ರೈಲುಗಳನ್ನು ರದ್ದುಗೊಳಿಸಿದ್ದು, 29 ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಿದೆ. ಇತ್ತ, ಸೌತ್ ಈಸ್ಟರ್ನ್‌ ರೈಲ್ವೆಯು 28 ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಿದೆ. ಇವುಗಳಲ್ಲಿ ಬಹುಪಾಲು ಪುರಿಗೆ ಸಂಚರಿಸುವ ಅಥವಾ ಅಲ್ಲಿಂದ ಹೊರಡುವ ರೈಲುಗಳಾಗಿವೆ.

ಪ್ರವಾಸಿಗರು ಗೋಪಾಲ್‌ಪುರ, ಪುರಿ, ಸತಾಪದ ಮತ್ತು ಚಿಲಿಕಾಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ. ಹವಾಮಾನ ಮುನ್ಸೂಚನೆಯ ಅನ್ವಯ 'ರೆಡ್', 'ಆರೆಂಜ್' ಮತ್ತು 'ಯೆಲ್ಲೋ' ಅಲರ್ಟ್ ಘೋಷಿಸಲಾಗಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.

ಪುರಿಯ ಗುಂಡಿಚಾ ದೇವಾಲಯವು ನವೆಂಬರ್ 19 ರಿಂದ 21 ರವರೆಗೆ ಮುಚ್ಚಿರುತ್ತದೆ, ಆದರೆ ಜಗನ್ನಾಥ ದೇವಾಲಯವು ತೆರೆದಿರುತ್ತದೆ. ಭಿತರ್ಕನಿಕಾ ರಾಷ್ಟ್ರೀಯ ಉದ್ಯಾನವನವು ನವೆಂಬರ್ 21 ರವರೆಗೆ ಮತ್ತು ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನವು ನವೆಂಬರ್ 20 ಹಾಗೂ 21 ರಂದು ಮುಚ್ಚಿರುತ್ತವೆ.