ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ 10,000 ಕೋಟಿ ಅನುದಾನಕ್ಕೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ
ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿ 16000 ಕೋಟಿ ರೂ. ಮೊತ್ತದ 2 ಯೋಜನೆಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ನ. 20ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ರಸ್ತೆ ಸಂಪರ್ಕ ಅಭಿವೃದ್ಧಿ ಪಡಿಸಲಾಗುತ್ತಿದ್ದರೆ, ಮುಖ್ಯಮಂತ್ರಿಗಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ 6000 ಕೋಟಿ ರೂ. ವೆಚ್ಚದಲ್ಲಿ ಗ್ರಾಮಗಳ ಆಂತರಿಕ ರಸ್ತೆ ಮತ್ತು ಇತರ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಸರ್ಕಾರ ನಿರ್ಧರಿಸಿದೆ.
-
ಬೆಂಗಳೂರು: ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒಟ್ಟು 10,000 ಕೋಟಿ ಅನುದಾನ ಮೀಸಲಿಡಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸುಮಾರು 15,000 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು ಬಲಪಡಿಸಿ ಮೇಲ್ದರ್ಜೆಗೇರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಹಾಳಾಗಿರುವ ಡಾಂಬರು ರಸ್ತೆಗಳನ್ನು ಸದೃಢ ರಸ್ತೆಗಳಾಗಿ ಮೇಲ್ದರ್ಜೆಗೇರಿಸಲು 7,000 ಕೋಟಿ ರೂ. ವಿನಿಯೋಗ ಹಾಗೂ ಪ್ರಮುಖ ಗ್ರಾಮೀಣ ರಸ್ತೆಗಳ ಮರುಡಾಂಬರೀಕರಣ ಮತ್ತು ಅವುಗಳ ಬಾಳಿಕೆ ಅವಧಿಯನ್ನು ಹೆಚ್ಚಿಸಲು 3,000 ಕೋಟಿ ಮೀಸಲಿಡಲಾಗಿದೆ.
ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ಯೋಜನೆ ಅನ್ವಯವಾಗಲಿದ್ದು, ಈಗಾಗಲೇ ಜಿಲ್ಲಾವಾರು 7,775 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಜಿಲ್ಲಾವಾರು ಹಂಚಿಕೆಯಲ್ಲಿ ಬೆಳಗಾವಿಗೆ 650 ಕೋಟಿ, ತುಮಕೂರಿಗೆ 425 ಕೋಟಿ, ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳಿಗೆ ತಲಾ 350 ಕೋಟಿ ಅನುದಾನ ನೀಡಲಾಗಿದೆ. ವಿಶೇಷ ಅಗತ್ಯವಿರುವ ಪ್ರದೇಶಗಳಲ್ಲಿನ ಆದ್ಯತೆಯ ಕಾಮಗಾರಿಗಳಿಗಾಗಿ 2,225 ಕೋಟಿ ಮೀಸಲಿಡಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರದ ಹಿತಾಸಕ್ತಿಯ ರಕ್ಷಣೆ:
ಯಾವುದೇ ಕ್ಷೇತ್ರದ ಅನುದಾನದ ಪಾಲು ಅಥವಾ ರಸ್ತೆಯ ಉದ್ದವನ್ನು ಕಡಿತಗೊಳಿಸಲಾಗುವುದಿಲ್ಲ ಹಾಗೂ ಸ್ಥಳೀಯ ಶಾಸಕರ ಒಪ್ಪಿಗೆಯ ಮೇರೆಗೆ ಕಾಮಗಾರಿಗಳನ್ನು ಆಯ್ಕೆ ಮಾಡಲಾಗುವುದು. ಕಾನೂನುಬದ್ಧವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಲಾಗುವುದು. ಜನಸಂಖ್ಯೆ, ಕೃಷಿ ಚಟುವಟಿಕೆಗಳು, ಮಾರುಕಟ್ಟೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಸಾರಿಗೆ ಕೇಂದ್ರಗಳಿಗೆ ಸಂಪರ್ಕದ ಕಲ್ಪಿಸುವ ಆಧಾರದ ಮೇಲೆ ರಸ್ತೆಗಳ ಆಯ್ಕೆ ಮಾಡಲಾಗುತ್ತದೆ. ನ್ಯಾಯಾಲಯಗಳು, ಲೋಕಾಯುಕ್ತ ಮತ್ತು ಶಾಸಕಾಂಗ ಸಮಿತಿಗಳ ಮುಂದೆ ಬಾಕಿ ಇರುವ ರಸ್ತೆ ಹಾಗೂ ಸೇತುವೆ ಕಾಮಗಾರಿಗಳು ಸೇರಿದಂತೆ ದೀರ್ಘಕಾಲದಿಂದ ಬಾಕಿ ಇರುವ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
15 ತಿಂಗಳೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ
ಕೆಟಿಪಿಪಿ ಕಾಯ್ದೆಯಡಿ ಪಾರದರ್ಶಕವಾಗಿ ಟೆಂಡರ್ ಕರೆದು 15 ತಿಂಗಳೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪ್ರತಿಯೊಂದು ಕಾಮಗಾರಿಯಲ್ಲೂ ಮೂರು ವರ್ಷಗಳ ನಿರ್ವಹಣೆ ಅವಧಿ ಕಡ್ಡಾಯವಾಗಿದೆ. ಪ್ರತಿಯೊಂದು ಕಾಮಗಾರಿಯ ಮುನ್ನ ಮತ್ತು ನಂತರದ ಜಿಪಿಎಸ್ (GPS) ಟ್ಯಾಗ್ ಮಾಡಿದ ಫೋಟೋ ಮತ್ತು ವಿಡಿಯೋ ದಾಖಲೀಕರಣ ಹಾಗೂ ಪ್ರತಿ ರಸ್ತೆಗೆ ಮೂರು ಬಾರಿ ತಪಾಸಣೆ ನಡೆಸಬೇಕು. 5 ಕಿ.ಮೀ.ಗಿಂತ ಹೆಚ್ಚು ಉದ್ದವಿರುವ ಎಲ್ಲಾ ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಅಳವಡಿಕೆ ಮಾಡಲು ಸೂಚಿಸಲಾಗಿದೆ. ಯೋಜನೆಯ ಮೂಲಕ "ಪ್ರತಿ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಉತ್ತಮ ರಸ್ತೆ" ಎನ್ನುವುದು ಸಿಎಂ ಡಿ.ಕೆ. ಶಿವಕುಮಾರ್ ಅವರ ವಾಗ್ದಾನವಾಗಿದೆ.
ನ. 20ರಂದು 16000 ಕೋಟಿ ರೂ. ಮೊತ್ತದ 2 ಯೋಜನೆಗಳಿಗೆ ಸಿಎಂ ಚಾಲನೆ
ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿ 16000 ಕೋಟಿ ರೂ. ಮೊತ್ತದ 2 ಯೋಜನೆಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ನ. 20ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ರಸ್ತೆ ಸಂಪರ್ಕ ಅಭಿವೃದ್ಧಿ ಪಡಿಸಲಾಗುತ್ತಿದ್ದರೆ, ಮುಖ್ಯಮಂತ್ರಿಗಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ 6000 ಕೋಟಿ ರೂ. ವೆಚ್ಚದಲ್ಲಿ ಗ್ರಾಮಗಳ ಆಂತರಿಕ ರಸ್ತೆ ಮತ್ತು ಇತರ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಸರ್ಕಾರ ನಿರ್ಧರಿಸಿದೆ.