ಚಾನ್ಸ್ ಕೊಟ್ಟು ಬೆಳೆಸಿದವರನ್ನೇ ಮರೆತುಬಿಟ್ರಾ ಸಂಗೀತ ನಿರ್ದೇಶಕ ಅನಿರುದ್ಧ್? ಧನುಷ್ಗೆ ತಲುಪಿಲ್ಲ ಮದುವೆ ಇನ್ವಿಟೇಷನ್, ‘ಡಿ’ ಫ್ಯಾನ್ಸ್ ಕೆಂಡ!
ನಟ ಧನುಷ್ ಮತ್ತು ಅನಿರುದ್ಧ್ ನಡುವಿನ ಸ್ನೇಹದ ಬಿರುಕು ಈಗ ಕಾಲಿವುಡ್ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅನಿರುದ್ಧ್ ಹಂಚಿಕೊಂಡ ಪತ್ರದಲ್ಲಿ, ತಮಗೆ ಮೊದಲು ಅವಕಾಶ ನೀಡಿದ ಧನುಷ್ ಹೆಸರನ್ನೇ ಉಲ್ಲೇಖಿಸದಿರುವುದು ʻಡಿʼ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.
-
ಚಿತ್ರರಂಗದಲ್ಲಿ ಯಾರೇ ಆಗಲಿ ಎಷ್ಟೇ ಉತ್ತುಂಗಕ್ಕೆ ಏರಿದರೂ, ತಾವು ಮೊದಲ ಹೆಜ್ಜೆ ಇಡಲು ಕೈಹಿಡಿದವರನ್ನು ಎಂದಿಗೂ ಮರೆಯುವುದಿಲ್ಲ. ಆದರೆ, ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಮಾತ್ರ ತಮಗೆ ವೃತ್ತಿಜೀವನದಲ್ಲಿ ಮಹತ್ವದ ಅವಕಾಶ ನೀಡಿದ ನಟ ಧನುಷ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂಬ ಟೀಕೆಗಳು ಈಗ ಕಾಲಿವುಡ್ನಲ್ಲಿ ಸಂಚಲನ ಮೂಡಿಸಿವೆ.
15 ವರ್ಷಗಳ ಜರ್ನಿ ನೆನದ ಅನಿರುದ್ಧ್
ಸಂಗೀತ ನಿರ್ದೇಶಕರಾಗಿ 15 ವರ್ಷಗಳ ಪಯಣವನ್ನು ಪೂರೈಸಿದ ಹಿನ್ನೆಲೆಯಲ್ಲಿ ಅನಿರುದ್ಧ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸುದೀರ್ಘ ಪತ್ರವೊಂದು ಈ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ತಮ್ಮ ಮೊದಲ ಹಾಡು ಬಿಡುಗಡೆಯಾದ ದಿನದಿಂದ ಇಂದಿನವರೆಗಿನ ಸಂಗೀತ ಪಯಣವನ್ನು ನೆನಪಿಸಿಕೊಳ್ಳುತ್ತಾ ಅನಿರುದ್ಧ್ ಇತ್ತೀಚೆಗೆ ಭಾವನಾತ್ಮಕ ಬರಹವೊಂದನ್ನು ಹಂಚಿಕೊಂಡಿದ್ದರು. ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡಿರುವುದು, ಬೃಹತ್ ಸ್ಟೇಡಿಯಂ ಕಾನ್ಸರ್ಟ್ಗಳನ್ನು ಆಯ್ಕೆ ಮಾಡಿರುವುದು ಮತ್ತು ಈ ವರ್ಷದ ‘ಜೈಲರ್ 2’, ‘ಪ್ಯಾರಡೈಸ್’ನಂತಹ ಕೆಲಸ ಮಾಡಿರುವುದರ ಬಗ್ಗೆ ಅದರಲ್ಲಿ ಬಹಳ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.
ಧನುಷ್ ಹೆಸರು ನೆನಪು ಆಗಲಿಲ್ಲವೇ?
ದೇಶದ ಅಗ್ರ ನಿರ್ದೇಶಕರು, ಸ್ಟಾರ್ ನಟರು ಹಾಗೂ ನಿರ್ಮಾಪಕರೊಂದಿಗೆ ಕೆಲಸ ಮಾಡುವ ಅದೃಷ್ಟ ತಮಗೆ ಒಲಿದಿದೆ ಎಂದು ಆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಇಷ್ಟೊಂದು ದೊಡ್ಡ ಬರಹದಲ್ಲಿ ಎಲ್ಲಿಯೂ ಧನುಷ್ ಹೆಸರು ಕಾಣಿಸದಿರುವುದು ʻಡಿʼ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಹದಿನೈದು ವರ್ಷಗಳ ಹಿಂದೆ ಹೊರಜಗತ್ತಿಗೆ ಅನಿರುದ್ಧ್ ಯಾರೆಂದೇ ತಿಳಿಯದ ಸಮಯದಲ್ಲಿ, ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ‘3’ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಮೊದಲ ಅವಕಾಶ ನೀಡಿದ್ದು ನಟ ಧನುಷ್.
ಆ ಚಿತ್ರದ ‘ವೈ ದಿಸ್ ಕೊಲವೆರಿ ಡಿ’ ಹಾಡು ವಿಶ್ವಾದ್ಯಂತ ಸಂಚಲನ ಸೃಷ್ಟಿಸಿ, ಅನಿರುದ್ಧ್ ಅವರನ್ನು ರಾತ್ರೋರಾತ್ರಿ ಸ್ಟಾರ್ ಆಗಿ ಮಾಡಿತ್ತು. ಆ ನಂತರವೂ ಇವರಿಬ್ಬರ ಕಾಂಬಿನೇಷನ್ನಲ್ಲಿ ‘ವೇಲೈ ಇಲ್ಲಾ ಪಟ್ಟಧಾರಿ’, ‘ಮಾರಿ’ಯಂತಹ ಸೂಪರ್ ಹಿಟ್ ಆಲ್ಬಮ್ಗಳು ಮೂಡಿಬಂದವು. ಹೀಗಿರುವಾಗ, ತಮ್ಮ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿದ ಧನುಷ್ ಅವರ ಹೆಸರನ್ನು 15 ವರ್ಷಗಳ ಸಕ್ಸಸ್ ನೋಟ್ನಲ್ಲಿ ಕನಿಷ್ಠ ನೆನೆಯದಿರುವುದಕ್ಕೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಮದುವೆಗೂ ಧನುಷ್ಗೆ ಆಹ್ವಾನ ಇರಲಿಲ್ಲವೇ?
ಮತ್ತೊಂದೆಡೆ, ನವೆಂಬರ್ 11ರಂದು ನಡೆದ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಅವರ ವಿವಾಹ ಸಮಾರಂಭಕ್ಕೂ ಧನುಷ್ ಅವರಿಗೆ ಆಹ್ವಾನ ಹೋಗಿರಲಿಲ್ಲ ಎಂಬ ವಿಚಾರವು ಈ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ವೈಯಕ್ತಿಕ ಮನಸ್ತಾಪಗಳಿಂದಾಗಿ ಮದುವೆಗೆ ಕರೆಯದಿದ್ದರೂ ಅರ್ಥಮಾಡಿಕೊಳ್ಳಬಹುದು, ಆದರೆ ವೃತ್ತಿಜೀವನ ನೀಡಿದ ವ್ಯಕ್ತಿಗೆ ಕನಿಷ್ಠ ಕೃತಜ್ಞತೆ ತೋರಿಸದಿರುವುದು ಸರಿಯಲ್ಲ ಎಂದು ಧನುಷ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅನಿರುದ್ಧ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಸಂಪೂರ್ಣ ಕ್ರೆಡಿಟ್ ಧನುಷ್ಗೆ ಸಲ್ಲಬೇಕು
ಈ ಹಿಂದೆ ಅನಿರುದ್ಧ್ ಅವರಿಗೆ ‘3’ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದರ ಬಗ್ಗೆ ಧನುಷ್ ಅವರ ಮಾಜಿ ಪತ್ನಿ, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಮಾತನಾಡಿದ್ದ ಹಳೆಯ ವಿಡಿಯೋವನ್ನು ಅಭಿಮಾನಿಗಳು ಮತ್ತೆ ವೈರಲ್ ಮಾಡುತ್ತಿದ್ದಾರೆ. ಆ ವಿಡಿಯೋದಲ್ಲಿ ಅನಿರುದ್ಧ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಂಪೂರ್ಣ ಕ್ರೆಡಿಟ್ ತಮ್ಮ ಮಾಜಿ ಪತಿ ಧನುಷ್ಗೆ ಸಲ್ಲಬೇಕು ಎಂದು ಐಶ್ವರ್ಯಾ ಹೇಳಿದ್ದರು.
ಅನಿರುದ್ಧ್ ಅವರಲ್ಲಿದ್ದ ಸಂಗೀತ ಪ್ರತಿಭೆಯನ್ನು ಮೊದಲು ಗುರುತಿಸಿದ್ದೇ ಧನುಷ್ ಎಂದು ಅವರು ತಿಳಿಸಿದ್ದರು. ಆರಂಭದಲ್ಲಿ ಅನಿರುದ್ಧ್ ಅವರ ಪೋಷಕರು ಪದವಿ ವ್ಯಾಸಂಗಕ್ಕಾಗಿ ಅವರನ್ನು ಸಿಂಗಾಪುರಕ್ಕೆ ಕಳುಹಿಸಲು ನಿರ್ಧರಿಸಿದ್ದರು. ಆದರೆ, ಅನಿರುದ್ಧ್ ಸಾಮರ್ಥ್ಯದ ಮೇಲೆ ನಂಬಿಕೆ ಇಡುವಂತೆ ಮತ್ತು ಸಿನಿಮಾ ರಂಗದಲ್ಲಿ ಮುಂದುವರಿಯಲು ಅನುಮತಿ ನೀಡುವಂತೆ ಪೋಷಕರ ಮನವೊಲಿಸಿದವರು ಧನುಷ್.
ಅನಿರುದ್ಧ್ ಹಂಚಿಕೊಂಡಿದ್ದ ಪೋಸ್ಟ್
#15YearsOfAnirudh 🫶 https://t.co/WamQsIWc7w
— Anirudh Ravichander (@anirudhofficial) November 16, 2026
ಅನಿರುದ್ಧ್ಗೆ ಕೀಬೋರ್ಡ್ ಕೊಡಿಸಿದ್ದರು ಮತ್ತು "ವೈ ದಿಸ್ ಕೊಲವೆರಿ ಡಿ" ನಂತಹ ವೈರಲ್ ಹಿಟ್ ಹಾಡನ್ನು ನೀಡಿದ '3' ಚಿತ್ರಕ್ಕೆ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ಆಯ್ಕೆ ಮಾಡುವಂತೆ ಐಶ್ವರ್ಯಾ ಅವರನ್ನು ಪ್ರೋತ್ಸಾಹಿಸಿದ್ದರು. ಚಿತ್ರರಂಗದ ಬಾಗಿಲು ತೆರೆದು ಅವಕಾಶ ಕಲ್ಪಿಸಿದ ಸಂಪೂರ್ಣ ಶ್ರೇಯಸ್ಸನ್ನು ಧನುಷ್ ಅವರಿಗೆ ನೀಡಿದ್ದ ಐಶ್ವರ್ಯಾ, ಅನಿರುದ್ಧ್ ಇಂದು ತಲುಪಿರುವ ಉನ್ನತ ಸ್ಥಾನಕ್ಕೆ ಅವರ ಸ್ವಂತ ಪರಿಶ್ರಮವೇ ಕಾರಣ ಎಂದು ಶ್ಲಾಘಿಸಿದ್ದರು.
ಐಶ್ವರ್ಯಾ ರಜನಿಕಾಂತ್ ಹಳೆಯ ವಿಡಿಯೋ ವೈರಲ್
#Anirudh పై మండిపడుతున్న #Dhanush ఫ్యాన్స్. మ్యూజిక్ కంపొజర్ గా 15 ఏళ్లు పూర్తి చేసుకున్న సందర్బంగా నిన్న ఒక నోట్ వదిలిన అనిరుధ్ .. అందులో ధనుష్ ప్రస్తావన లేకపోవటంతో ఫ్యాన్స్ నిరాశ.. #AnirudhKavyaWedding కు సైతం #Dhanush కు ఆహ్వనం అందలేదు సరే.. కానీ అతన్ని మ్యూజిక్ డైరక్టర్ గా గుర్తించి అవకాశం ఇచ్చిన ధనుష్ పేరును ఎలా మరిచారంటున్నారు. గతంలో #Rajinikanth కూతురు మాట్లాడిన వీడియోను షేర్ చేస్తున్నారు..!! #OM #kollywood #Controversy
— SZN (@Suzenbabu) November 17, 2026
ಸದ್ಯ ಈ ಹಳೆಯ ವಿಡಿಯೋ ಹರಿದಾಡುತ್ತಿರುವುದರಿಂದ ಅನಿರುದ್ಧ್ ವಿರುದ್ಧದ ಟೀಕೆಗಳು ಮತ್ತಷ್ಟು ಜೋರಾಗಿವೆ. ಒಂದು ಕಾಲದಲ್ಲಿ ಪ್ರಾಣಸ್ನೇಹಿತರಂತೆ ಇದ್ದ ಧನುಷ್ ಮತ್ತು ಅನಿರುದ್ಧ್ ನಡುವೆ ಬಿರುಕು ಇಷ್ಟರಮಟ್ಟಿಗೆ ಹೆಚ್ಚಾಗಿದೆಯೇ ಎಂದು ಕಾಲಿವುಡ್ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದಾಗ್ಯೂ, ತಮ್ಮ 15 ವರ್ಷಗಳ ಪಯಣದ ಪತ್ರದಲ್ಲಿ ಯಾರ ಹೆಸರನ್ನು ಬರೆಯಬೇಕು ಎಂಬುದು ಅನಿರುದ್ಧ್ ಅವರ ವೈಯಕ್ತಿಕ ಇಷ್ಟ ಎಂದು ಅನಿ ಪರ ಬ್ಯಾಟ್ ಬೀಸುತ್ತಿದ್ದಾರೆ.
ಆದರೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಬದುಕು ಕಟ್ಟಿಕೊಟ್ಟವರನ್ನು ಮರೆಯಬಾರದು ಎಂದು ಮತ್ತೆ ಕೆಲವರು ಕಿವಿಮಾತು ಹೇಳುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಅನಿರುದ್ಧ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.