ಬಿಹಾರದಲ್ಲಿ ಎನ್‌ಡಿಎ ಕ್ಲೀನ್ ಸ್ವೀಪ್... ಮ್ಯಾಜಿಕ್ ಮಾಡಿದ ಆ 5 ಅಂಶಗಳಾವುವು?
ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಬಹುಮತದ ಗಡಿಯನ್ನು ದಾಟಿದೆ. ಈ ಮೂಲಕ ಜೆಡಿಯು ಮತ್ತು ಬಿಜೆಪಿ ರಾಜ್ಯದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮಹಾಘಟಬಂಧನ್ ಭಾರಿ ಅಂತರದಲ್ಲಿ ಹಿನ್ನಡೆ ಸಾಧಿಸಿರುವುದರಿಂದ ಇನ್ನು ಕೆಲವು ಗಂಟೆಗಳಲ್ಲಿ ಉತ್ತಮ ಆಡಳಿತ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಭರ್ಜರಿ ಯಶಸ್ಸಿನ ಸಂಭ್ರಮದಲ್ಲಿರುವ ಅವರ ಗೆಲುವಿಗೆ ಕಾರಣವಾಗಿದ್ದು ಈ ಐದು ಅಂಶಗಳು.
ನಿತೀಶ್ ಕುಮಾರ್ (ಸಂಗ್ರಹ ಚಿತ್ರ) -
ಬಿಹಾರ: ವಿಧಾನ ಸಭಾ ಚುನಾವಣಾ ಫಲಿತಾಂಶ (Bihar Assembly election results) ಘೋಷಣೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಆದರೆ ಈಗಾಗಲೇ ಭಾರಿ ಅಂತರದಲ್ಲಿ ಮುನ್ನಡೆ ಸಾಧಿಸಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA)ದ ಜೆಡಿಯು(JDU) ಸಂಭ್ರಮಾಚರಣೆಗೆ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಇನ್ನು ಕೆಲವು ಗಂಟೆಗಳಲ್ಲಿ ಉತ್ತಮ ಆಡಳಿತ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ( Chief Minister Nitish Kumar) ಹೇಳಿದ್ದಾರೆ. ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು ತಂದುಕೊಡಲು ಈ ಐದು ಅಂಶಗಳು ಪ್ರಮುಖ ಕಾರಣವಾಗಿವೆ.
ಉಚಿತ ವಿದ್ಯುತ್
ಎನ್‌ಡಿಎ ನೇತೃತ್ವದ ಸರ್ಕಾರವು ಬಿಹಾರದಲ್ಲಿ ಎಲ್ಲಾ ಗೃಹ ಬಳಕೆದಾರರಿಗೆ 125 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಿದೆ. ಇದು ಕೆಲವು ಹಳ್ಳಿಗಳ ಭವಿಷ್ಯವನ್ನೇ ಬದಲಾಯಿಸಿದೆ. ವಿದ್ಯುತ್ ಬಿಲ್ ಪಾವತಿಸಲು ಸರಿಯಾದ ವ್ಯವಸ್ಥೆಗಳಿಲ್ಲದೆ ಪರದಾಡುತ್ತಿದ್ದ ಹಳ್ಳಿಯ ಜನರಿಗೆ ಇದು ವರದಾನವಾಗಿದೆ.
ಇದನ್ನೂ ಓದಿ: Bihar Election Result 2025: ಬಿಹಾರದಲ್ಲಿ ಎನ್‌ಡಿಎ ಗೆಲುವು: ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್ ಏನು?
ಮಹಿಳೆಯರಿಗೆ 10,000 ರೂ. ಯೋಜನೆ
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ 1.3 ಕೋಟಿ ಮಹಿಳೆಯರಿಗೆ 10,000 ರೂ. ಗಳ ಯೋಜನೆ ಜಾರಿಗೆ ತಂದಿದ್ದರು. ಇದರಿಂದ ಮಹಿಳಾ ಮತದಾರರ ಬೆಂಬಲ ಅವರಿಗೆ ಸಿಕ್ಕಿದೆ.
ಚುನಾವಣಾ ಪ್ರಚಾರಕ್ಕೆ ಬಿಹಾರಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ತಮ್ಮ ಭಾಷಣದಲ್ಲಿ ಹೆಚ್ಚಿನ ಒತ್ತು ನೀಡಿದ್ದರು. ಇದರಿಂದ ಮತದಾನದ ವೇಳೆ ಮಹಿಳೆಯರಿಂದ ಗರಿಷ್ಠ ಸಂಖ್ಯೆಯಲ್ಲಿ ಅಂದರೆ ಶೇ. 71 ಕ್ಕಿಂತ ಮತದಾನವಾಗಿದೆ.
ಮುಖ್ಯಮಂತ್ರಿ ಮತ್ತು ಪ್ರಧಾನಿಯವರ ಸಂದೇಶಗಳು ಮತದಾರರು ವಿಶೇಷವಾಗಿ ಮಹಿಳಾ ಮತದಾರರನ್ನು ಸೆಳೆದಿದೆ. ಸರ್ಕಾರದ ಮೇಲಿನ ನಂಬಿಕೆಯನ್ನು ಉಳಿಸಲು ಈಗಾಗಲೇ ಅವರು 10,000 ರೂ. ಗಳನ್ನು ಜನರ ಬ್ಯಾಂಕ್ ಖಾತೆಗಳಿಗೆ ತಲುಪಿಸಿದ್ದಾರೆ. ಇದರಿಂದಾಗಿ ಮತದಾರರು ತೇಜಸ್ವಿ ಯಾದವ್ ಅವರ ತಿಂಗಳಿಗೆ 2,500 ರೂ. ಯೋಜನೆಯ ಮೇಲೆ ವಿಶ್ವಾಸವನ್ನು ಇರಿಸಲಿಲ್ಲ.
ವೃದ್ಧಾಪ್ಯ ಪಿಂಚಣಿ
ರಾಜ್ಯದಲ್ಲಿ ಸುಮಾರು 1.2 ಕೋಟಿ ಹಿರಿಯ ನಾಗರಿಕರಿಗೆ ನಿತೀಶ್ ಕುಮಾರ್ ಸರ್ಕಾರವು ವೃದ್ಧಾಪ್ಯ ಪಿಂಚಣಿಯನ್ನು 400 ರೂ.ಗಳಿಂದ 1,100 ರೂ. ಗಳಿಗೆ ಹೆಚ್ಚಿಸಿದೆ. ಇದು ನಿತೀಶ್ ಕುಮಾರ್ ಅವರ ವರ್ಚಸ್ಸನ್ನು ಹೆಚ್ಚಿಸಿತ್ತು. ಕೆಲವು ದಿನಗಳ ಹಿಂದೆ ಅವರು ಮಾನಸಿಕವಾಗಿ ದುರ್ಬಲರಾಗಿದ್ದರೆ ಎನ್ನುತ್ತಿದ್ದ ಜನರು ಅವರನ್ನು ಬುದ್ಧಿವಂತ, ಹಿರಿಯ ನಾಯಕ ಎಂದು ಬಣ್ಣಿಸಲು ಪ್ರಾರಂಭಿಸಿದರು. ಇದು ಕೂಡ ಮತದಾರರನ್ನು ಸೆಳೆಯುವಲ್ಲಿ ಎನ್‌ಡಿಎಗೆ ಬಹುದೊಡ್ಡ ಯಶಸ್ಸು ತಂದುಕೊಟ್ಟಿತು.
ಪ್ರತಿಪಕ್ಷಗಳ ಟೀಕೆ
ಪ್ರತಿಪಕ್ಷಗಳು ನಿತೀಶ್ ಕುಮಾರ್ ಕಳೆದ ಎರಡು ದಶಕಗಳಲ್ಲಿ ಸಿಎಂ ಆಗಿದ್ದರೂ ಪರಿಣಾಮಕಾರಿಯಾಗಿ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಿಲ್ಲ ಎಂದು ಟೀಕಿಸಲು ಪ್ರಾರಂಭಿಸಿದರು. ಆದರೆ ನಿತೀಶ್ ಕುಮಾರ್ ಅವರು ಮಹಿಳೆಯರಿಗೆ ನೀಡಿದ 10,000 ರೂ. ನೆರವು, ಗೃಹ ಬಳಕೆಗೆ ಉಚಿತ ವಿದ್ಯುತ್ ಯೋಜನೆ ಮತ್ತು ವೃದ್ಧಾಪ್ಯ ಪಿಂಚಣಿ ಹೆಚ್ಚಳದ ನಡುವೆ ವಿರೋಧ ಪಕ್ಷಗಳು ಮತದಾರರನ್ನು ಆಕರ್ಷಿಸಲು ಸಾಧ್ಯವಾಗಲಿಲ್ಲ. ಈ ನಡುವೆ ನಿರುದ್ಯೋಗ, ವಲಸೆ ಸಮಸ್ಯೆಯನ್ನು ಇಟ್ಟುಕೊಂಡು ಹೊಸ ಪಕ್ಷ ಕಟ್ಟಿದ ಪ್ರಶಾಂತ್ ಕಿಶೋರ್ ಯುವಕರಲ್ಲಿ ಜನಪ್ರಿಯತೆಯನ್ನು ಗಳಿಸಿದರು.
ಕೆಲವು ತಿಂಗಳ ಹಿಂದೆ ಮಹಾಘಟಬಂಧನ್ ಚುನಾವಣಾ ಪ್ರಚಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಬಹು ದೊಡ್ಡ ಸಮಸ್ಯೆ ಎಂದು ಬಿಂಬಿಸುವ ಪ್ರಯತ್ನ ಮಾಡಿತು. ಇದು ಅವರು ಮಾಡಿದ ಬಹುದೊಡ್ಡ ತಪ್ಪಾಯಿತು. ಯಾಕೆಂದರೆ ಚುನಾವಣೆ ವೇಳೆ ಇದು ಪ್ರಸ್ತುತತೆಯನ್ನು ಕಳೆದುಕೊಂಡಿತು. ರಾಹುಲ್ ಗಾಂಧಿ ಅವರ ಮತ ಚೋರಿ ಆರೋಪವು ಕೂಡ ಮತದಾರರ ಮನವನ್ನು ಮುಟ್ಟಲಿಲ್ಲ. ಇನ್ನು ಪಾಟ್ನಾದ ಹೃದಯಭಾಗದಲ್ಲಿ ಕೈಗಾರಿಕೋದ್ಯಮಿ ಗೋಪಾಲ್ ಖೇಮ್ಕಾ ಅವರ ಕೊಲೆಗೆ ಎನ್‌ಡಿಎ ಸರ್ಕಾರವನ್ನು ಮಹಾಘಟಬಂಧನ್ ಟೀಕಿಸಲು ಪ್ರಾರಂಭಿಸಿತು.
ಇದನ್ನೂ ಓದಿ: Bihar Election Result 2025: ಎನ್‌ಡಿಎ ಭಾರೀ ಮುನ್ನಡೆ; JDU ಕಮಾಲ್, ನಿತೀಶ್ ಸಿಎಂ ಆಗೋದು ಫಿಕ್ಸ್!
ತಪ್ಪುಗಳನ್ನು ತಿದ್ದಿಕೊಂಡಿರುವ ನಿತೀಶ್ ಕುಮಾರ್
2020ರ ಚುನಾವಣೆ ಫಲಿತಾಂಶದಲ್ಲಾದ ವಿಫಲತೆಯನ್ನು ಗಮನಿಸಿ ಅದರ ಸುಧಾರಣೆಯತ್ತ ಕೆಲಸ ಮಾಡುವಲ್ಲಿ ನಿತೀಶ್ ಕುಮಾರ್ ಯಶಸ್ವಿಯಾಗಿದ್ದಾರೆ. 2005ರ ಅನಂತರ ಅವರ ಪಕ್ಷವು ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಕಳೆದ ಬಾರಿ ಅದು ಸ್ಪರ್ಧಿಸಿದ 115 ಸ್ಥಾನಗಳಲ್ಲಿ ಕೇವಲ 43 ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಸ್ಪರ್ಧಿಸಿದ 101 ಸ್ಥಾನಗಳಲ್ಲಿ ಜೆಡಿಯು ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.