ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉದ್ಯಾನಗಳನ್ನು ಲಪಟಾಯಿಸಲು ರಾಜ್ಯ ಸರ್ಕಾರ ಸಂಚು: ಬಿ.ವೈ. ವಿಜಯೇಂದ್ರ

BY Vijayendra: ಗ್ಯಾರಂಟಿಗಳ ಹೆಸರಲ್ಲಿ ದಿವಾಳಿ ಎದ್ದಿರುವ ಸರ್ಕಾರ ರಸ್ತೆ, ಪಾರ್ಕಿಂಗ್ ಏರಿಯಾ, ಕೆರೆ, ಉದ್ಯಾನಗಳು ಹೀಗೆ ಎಲ್ಲವನ್ನೂ ಲೂಟಿಯ ಮಾರ್ಗವಾಗಿ ಬಳಸಿಕೊಳ್ಳುವ ಹಗಲು ದರೋಡೆಗೆ ಇಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಉದ್ಯಾನಗಳನ್ನು ಲಪಟಾಯಿಸಲು ರಾಜ್ಯ ಸರ್ಕಾರ ಸಂಚು: ಬಿ.ವೈ. ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಮತ್ತು ಸಿಎಂ ಡಿ.ಕೆ. ಶಿವಕುಮಾರ್‌ (ಸಂಗ್ರಹ ಚಿತ್ರ) -

Profile
Siddalinga Swamy Aug 22, 2026 6:32 PM

ಬೆಂಗಳೂರು, ಆ.22: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ (CM DK Shivakumar) ನೇತೃತ್ವದ ಭ್ರಷ್ಟ, ದುಷ್ಟ ರಿಯಲ್ ಎಸ್ಟೇಟ್ ಮಾಫಿಯಾ ಸರ್ಕಾರ ಇದೀಗ ನಾಗರಿಕ ಬಳಕೆಗೆ ಮೀಸಲಿಟ್ಟ ಉದ್ಯಾನಗಳ ಲೂಟಿಗೆ ಮುಂದಾಗಿರುವ ಆಘಾತಕಾರಿ ಬೆಳವಣಿಗೆ ನಡೆದಿರುವುದು ವರದಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ.

ಸರ್ಕಾರಿ ಉದ್ಯಾನಗಳ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ.5ರಷ್ಟು ಜಾಗವನ್ನು ಸಾರ್ವಜನಿಕ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ಕಾಯ್ದೆ-1975’ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಅನುಮೋದನೆ ನೀಡಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಗ್ಯಾರಂಟಿಗಳ ಹೆಸರಲ್ಲಿ ದಿವಾಳಿ ಎದ್ದಿರುವ ಸರ್ಕಾರ ರಸ್ತೆ, ಪಾರ್ಕಿಂಗ್ ಏರಿಯಾ, ಕೆರೆ, ಉದ್ಯಾನಗಳು ಹೀಗೆ ಎಲ್ಲವನ್ನೂ ಲೂಟಿಯ ಮಾರ್ಗವಾಗಿ ಬಳಸಿಕೊಳ್ಳುವ ಹಗಲು ದರೋಡೆಗೆ ಇಳಿದಿದೆ. ತೋಟಗಾರಿಕೆ ಇಲಾಖೆಯ ಸರ್ಕಾರಿ ಉದ್ಯಾನಗಳ ರಕ್ಷಣೆ ಕಾಯಿದೆ-1975ಕ್ಕೆ ತಿದ್ದುಪಡಿ ಮಾಡುವ ಮಸೂದೆಗೆ ಶುಕ್ರವಾರ ಡಿಕೆಶಿ ಸಂಪುಟ ಅನುಮೋದನೆ ನೀಡಿದ್ದು ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ಮಂಡನೆ ಮಾಡುವ ಸಿದ್ಧತೆ ನಡೆದಿದೆ ಎಂದು ಅವರು ದೂರಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ ಉದ್ಯಾನವನಗಳ ಒಟ್ಟು ವಿಸ್ತೀರ್ಣದ ಶೇ.5 ರಷ್ಟನ್ನು ಮಾರುವ, ವಿನಿಮಯ ಮಾಡುವ, ಉಡುಗೊರೆ ನೀಡುವ, ಅಡಮಾನ ಇಡುವ ಪ್ರಸ್ತಾವನೆಯನ್ನು ತಿದ್ದುಪಡಿ ಮಸೂದೆಯಲ್ಲಿ ಸೇರಿಸಲಾಗಿದೆ. ಅಂದರೆ ಪರಿಸರದ ರಕ್ಷಣೆಗೆ, ನಾಗರಿಕರ ಆರೋಗ್ಯ ಸಂರಕ್ಷಣೆಗೆ ಮತ್ತು ಇತ್ಯಾದಿ ಬಳಕೆಗೆ ತೋಟಗಾರಿಕೆ ಮೀಸಲಿಟ್ಟಿರುವ ಸರ್ಕಾರಿ ಉದ್ಯಾನಗಳ ಲಪಟಾಯಿಸಲು ಈ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿದೆ.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ಡಿಕೆ ಶಿವಕುಮಾರ್‌ ಉಪಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಮತ್ತು ರಾಜ್ಯದ ಕೆರೆಗಳ ಬಫರ್ ಜೋನನ್ನು ಕಡಿಮೆ ಮಾಡಿ ರಿಯಲ್ ಎಸ್ಟೇಟ್ ಹಿತಾಸಕ್ತಿ ಕಾಪಾಡಲು ಅತ್ಯಮೂಲ್ಯ ಜಲಮೂಲಗಳಾದ ಕೆರೆಗಳನ್ನು ಲೂಟಿ ಮಾಡಿದ್ದು ನೆನಪಿರಬಹುದು. ಲೂಟಿಯ ಹಿತಾಸಕ್ತಿಯ ಮುಂದೆ ಈ ಸರ್ಕಾರಕ್ಕೆ ನೆಲ, ಜಲ, ವಾಯು, ವಾತಾವರಣ ರಕ್ಷಣೆ ಯಾವುದೂ ಕೂಡ ಲೆಕ್ಕಕ್ಕೇ ಇಲ್ಲ ಎಂದು ಅವರು ಆರೋಪಿಸಿದ್ದಾರೆ.

ಉತ್ತರ ಕರ್ನಾಟಕ ಜನತೆಗೆ ಗುಡ್‌ನ್ಯೂಸ್‌: ದೆಹಲಿ-ಹುಬ್ಬಳ್ಳಿ, ದೆಹಲಿ-ಬೆಳಗಾವಿ ಮಧ್ಯೆ ಇನ್ನು ನಿತ್ಯವೂ ವಿಮಾನ ಸಂಚಾರ; ಪ್ರಲ್ಹಾದ್‌ ಜೋಶಿ ಮನವಿಗೆ ಇಂಡಿಗೋ ಏರ್‌ಲೈನ್ಸ್ ಸ್ಪಂದನೆ

ಪರಿಸರಕ್ಕೆ ಮತ್ತು ನಾಗರಿಕ ಕಲ್ಯಾಣಕ್ಕೆ ಮಾರಕವಾಗಿರುವ ಉದ್ದೇಶಿತ ಮಸೂದೆ ತಡೆಗೆ ಬಿಜೆಪಿ ಶತಪ್ರಯತ್ನ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.